Site icon Vistara News

Ayodhya Deepotsav: ಅಯೋಧ್ಯೆಯಲ್ಲಿ ಬೆಳಗಿದ 22 ಲಕ್ಷ ದೀಪಗಳು; ಮತ್ತೆ ಗಿನ್ನಿಸ್‌ ದಾಖಲೆ

Ayodhya Deepotsav

Uttar Pradesh Breaks Guinnes World Record With 22 Lakh Diyas During Grand Ayodhya Deepotsav

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಈ ಬಾರಿಯೂ ದೀಪಾವಳಿ ಹಿನ್ನೆಲೆಯಲ್ಲಿ ಅಯೋಧ್ಯೆ ದೀಪೋತ್ಸವವು (Ayodhya Deepotsav) ಅದ್ಧೂರಿಯಾಗಿ ನಡೆದಿದೆ. ಸರಯೂ ನದಿಯ ತೀರ ಸೇರಿ ಅಯೋಧ್ಯೆಯ 51 ಘಾಟ್‌ಗಳಲ್ಲಿ ಸುಮಾರು 22.23 ಲಕ್ಷ ದೀಪಗಳನ್ನು ಬೆಳಗಿಸಲಾಗಿದ್ದು, ದೀಪೋತ್ಸವವು ಮತ್ತೆ ಗಿನ್ನಿಸ್‌ ವಿಶ್ವ ದಾಖಲೆ (Guinness World Record) ಬರೆದಿದೆ. ಜಗತ್ತಿನ ಯಾವ ಭಾಗದಲ್ಲಿಯೂ ಇಷ್ಟೊಂದು ದೀಪಗಳನ್ನು ಬೆಳಗದ ಕಾರಣ ಅಯೋಧ್ಯೆ ದೀಪೋತ್ಸವವು ಗಿನ್ನಿಸ್‌ ದಾಖಲೆ ಬರೆದಿದೆ.

2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡುವುದರಿಂದ ಈ ಬಾರಿಯ ದೀಪೋತ್ಸವವು ಮತ್ತಷ್ಟು ಅದ್ಧೂರಿಯಾಗಿ ನೆರವೇರಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದೀಪ ಬೆಳಗುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಇದಾದ ಬಳಿಕ ಏಕಕಾಲಕ್ಕೆ 22 ಲಕ್ಷಕ್ಕೂ ಅಧಿಕ ಹಣತೆಗಳಲ್ಲಿ ದೀಪಗಳನ್ನು ಬೆಳಗಲಾಯಿತು. ಹಾಗೆಯೇ, ಇಡೀ ನಗರದ ತುಂಬ ಮೂಡಿದ ಲೇಸರ್‌ ಕಿರಣಗಳ ಚಿತ್ತಾರವು ಅಯೋಧ್ಯೆಗೆ ಹೊಸ ರಂಗು ನೀಡಿತು.

ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ ಕಾರಣ ದೀಪೋತ್ಸವದ ವೇಳೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಸಾವಿರಾರು ಪೊಲೀಸರ ನಿಯೋಜನೆ, ಪ್ರತಿಯೊಬ್ಬರ ತಪಾಸಣೆ ಸೇರಿ ಹಲವು ರೀತಿಯಲ್ಲಿ ಭದ್ರತೆ ಒದಗಿಸಲಾಗಿತ್ತು. ಸುಮಾರು 25 ಸಾವಿರ ಸ್ವಯಂಸೇವಕರು ದೀಪ ಬೆಳಗಿಸುವ ಕಾರ್ಯದಲ್ಲಿ ತೊಡಗಿದ್ದರು. ಇದೇ ವೇಳೆ ಉತ್ತರ ಪ್ರದೇಶ ಸರ್ಕಾರಕ್ಕೆ ಗಿನ್ನಿಸ್‌ ದಾಖಲೆಯ ಪ್ರಮಾಣಪತ್ರವನ್ನೂ ನೀಡಲಾಯಿತು.

ಗಿನ್ನಿಸ್‌ ದಾಖಲೆ ಪ್ರಮಾಣಪತ್ರ ಸ್ವೀಕಾರ.

ಕಳೆದ ವರ್ಷವೂ ಗಿನ್ನಿಸ್‌ ದಾಖಲೆ

2022ರ ದೀಪಾವಳಿ ವೇಳೆ ಅಯೋಧ್ಯೆಯ ಸರಯೂ ನದಿ ತೀರದಲ್ಲಿ 17 ಲಕ್ಷ ದೀಪಗಳನ್ನು ಬೆಳಗಿದ ಹಿನ್ನೆಲೆಯಲ್ಲಿ ಅಯೋಧ್ಯೆಯ ದೀಪೋತ್ಸವವು ಗಿನ್ನಿಸ್ ದಾಖಲೆಗೆ ಭಾಜನವಾಗಿತ್ತು. ದೀಪೋತ್ಸವದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಗಿನ್ನಿಸ್ ದಾಖಲೆಯ ಪ್ರಮಾಣಪತ್ರ ನೀಡಿದ್ದರು.

ಇದನ್ನೂ ಓದಿ: Ayodhya Ram Mandir: ಜನವರಿಯಲ್ಲಿ ಅಯೋಧ್ಯೆಗೆ ಭೇಟಿ ನೀಡ್ತೀರಾ? ಐಷಾರಾಮಿ ʼಟೆಂಟ್‌ ಸಿಟಿʼ ನಿಮಗಾಗಿಯೇ ಇದೆ!

ಯೋಗಿ ಆದಿತ್ಯನಾಥ್‌ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಅದರಲ್ಲೂ ದೀಪೋತ್ಸವಕ್ಕೆ ಹೊಸ ಮೆರುಗು ಬಂದಿದೆ. 2017ರಲ್ಲಿ ಅಯೋಧ್ಯೆಯಲ್ಲಿ 1.71 ಲಕ್ಷ ದೀಪ ಬೆಳಗಿಸಲಾಗಿತ್ತು. ಹಾಗೆಯೇ, 2018ರಲ್ಲಿ 3.01 ಲಕ್ಷ, 2019ರಲ್ಲಿ 4.04 ಲಕ್ಷ, 2020ರಲ್ಲಿ 6.06 ಲಕ್ಷ ಹಾಗೂ 2021ರಲ್ಲಿ 9.41 ಲಕ್ಷ ದೀಪ ಬೆಳಗಿಸಲಾಗಿತ್ತು. 2022ರಲ್ಲಿ 15.76 ಲಕ್ಷ ದೀಪಗಳು ಬೆಳಗಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version