Site icon Vistara News

Uttarkashi Tunnel Rescue: ಕುಸಿದ ಸುರಂಗದೊಳಗೆ ಕಳೆದ ಆ 17 ದಿನಗಳು!

uttarkashi tunnel rescue labours

ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿಯಲ್ಲಿ ಕುಸಿದ (Uttarkashi Tunnel Rescue) ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಹಾಕಿಕೊಂಡ 41 ಕಾರ್ಮಿಕರು ಮುಂದಿನ 17 ದಿನಗಳ ಕಾಲ ಉಸಿರುಗಟ್ಟಿಸುವ, ಬೆಳಕಿಲ್ಲದ ಆ ಭೂಗರ್ಭದಲ್ಲಿ ಹೇಗೆ ದಿನ ಕಳೆದರು? ಕ್ಷಣಕ್ಷಣದ ಡಿಟೇಲ್ಸ್‌ ಇಲ್ಲಿದೆ.

ನವೆಂಬರ್ 11ರಂದು ರಾತ್ರಿ 8 ಗಂಟೆಗೆ ಈ ಕಾರ್ಮಿಕರು ನೈಟ್‌ಶಿಫ್ಟ್‌ಗಾಗಿ ಸುರಂಗ ಪ್ರವೇಶಿಸಿದ್ದರು. ರಾತ್ರಿಯಿಡೀ ಕೆಲಸ ಮಾಡಿ, ಮರುದಿನ ಬೆಳಿಗ್ಗೆ ಹೊರಬಿದ್ದು, ದೀಪಾವಳಿ ಹಬ್ಬ ಅಚರಿಸೋಣ ಎಂಬುದು ಅವರ ಇರಾದೆಯಾಗಿತ್ತು. ಆದರೆ ಮರುದಿನ ಬೆಳಿಗ್ಗೆ 5.30ರ ಹೊತ್ತಿಗೆ ಸುತ್ತಲಿನ ಭೂಮಿ ಒಮ್ಮೆಗೇ ನಡುಗಿತು. ಹಿಮಾಲಯ ಪರ್ವತ ತನ್ನ ಅನಿರೀಕ್ಷಿತ ಗುಣವನ್ನು ತೋರಿಸಿತು. ಸ್ವಲ್ಪ ಸಮಯದವರೆಗೆ ಕಾರ್ಮಿಕರಿಗೆ ಯಾವ ಅಪಾಯದ ಅರಿವೂ ಆಗಲಿಲ್ಲ. ಆದರೆ ಮುಂದಿನ ಅರ್ಧ ಘಂಟೆಯವರೆಗೆ ಅವರು ನಡೆದುಬಂದ ದಾರಿಗೆ ಮೇಲಿನಿಂದ ಗುಡ್ಡದ ಶಿಲಾಖಂಡರಾಶಿ ಕುಸಿಯುತ್ತಾ ಹೋಯಿತು.

ತಾವು ಸಿಕ್ಕಿಬಿದ್ದೆವು ಎಂಬುದು ಕಾರ್ಮಿಕರಿಗೆ ಗೊತ್ತಾಗಿಹೋಯಿತು. ಅವರು ಹೊರಹೋಗುವ ದಾರಿ ಸಂಪೂರ್ಣ ಬಂದ್‌ ಆಯಿತು. ಅವರು ಮೊದಲಿಗೆ ಅವಶೇಷ ಕೆರೆದು ತೆಗೆಯಲು ಪ್ರಯತ್ನಿಸಿದರು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಕಾರ್ಮಿಕರು ಕೆಲಸ ನಿಲ್ಲಿಸಿ ಕುಳಿತರು. ಒಳಗಿದ್ದ ಕಾರ್ಮಿಕರ ನಾಯಕ ಬಿಸ್ವೇಶ್ವರ್ ನಾಯಕ್ ಅವರು ಬೆಳಿಗ್ಗೆ 8 ಗಂಟೆಗೆ ಮೊಬೈಲ್ ಫೋನ್ ನೋಡಿದರು. “ಆ ಹೊತ್ತಿಗೆ, ನಾವು ಸಿಕ್ಕಿಬಿದ್ದಿದ್ದೇವೆ ಎಂದು ನಮಗೆ ತಿಳಿದಿತ್ತು. ನಮಗೆ ಭಯವಾಯಿತು, ಹೆಂಡತಿ ಮಕ್ಕಳ ನೆನಪಾಯಿತುʼʼ ಎಂದು ನಾಯಕ್ ಹೇಳುತ್ತಾರೆ.

ಮುಂದಿನ 17 ದಿನಗಳು!

ತಾವು ಅಲ್ಲೇ ಅದೇ ಪರಿಸ್ಥಿತಿಯಲ್ಲಿ ಮುಂದಿನ 17 ದಿನಗಳವರೆಗೆ ಇರಬೇಕಾಗಬಹುದು ಎಂಬ ಯಾವ ಕಲ್ಪನೆಯೂ ಆ ಕಾರ್ಮಿಕರಿಗೆ ಇರಲಿಲ್ಲ. ಆದರೆ ಅಷ್ಟೂ ದಿನ ಆ ಸುರಂಗವೇ ಅವರ ಮನೆಯಾಯಿತು. ವರು ಭರವಸೆ ಹೊಂದಿದ್ದರು, ಭರವಸೆ ಕಳೆದುಕೊಂಡರು, ಮತ್ತೆ ಗಳಿಸಿದರು; ರಕ್ಷಣಾ ಕಾರ್ಯಾಚರಣೆಗಳು ವಿಫಲವಾದಾಗ ಆತಂಕ ಅನುಭವಿಸಿದರು. ಎಲ್ಲವನ್ನೂ ಜೊತೆಗೇ ಅನುಭವಿಸಿದರು. ಇರುವ ಕನಿಷ್ಠವನ್ನು ಬಳಸಿಕೊಂಡು ಬದುಕಲು ಸೃಜನಶೀಲ ಮಾರ್ಗಗಳನ್ನು ಕಂಡುಕೊಂಡರು.

ಒಡಿಶಾದ 40 ವರ್ಷದ ನಾಯಕ್, ನಾಲ್ಕೂವರೆ ವರ್ಷಗಳಿಂದ ಪರ್ವತಗಳಲ್ಲಿ ಸುರಂಗ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ 12ರ ಬೆಳಿಗ್ಗೆ 5.30ಕ್ಕೆ ಭೂಕುಸಿತದ ಶಬ್ದಗಳು ಮೊದಲು ಪ್ರಾರಂಭವಾದಾಗ, ಅದು ಗಂಭೀರವಾಗಿರಲಿಕ್ಕಿಲ್ಲ ಎಂದು ಮೊದಲು ನಂಬಿದ್ದರು. ಉತ್ತರಾಖಂಡದಲ್ಲಿ ನಾಲ್ಕು ವರ್ಷಗಳಲ್ಲಿ ಕನಿಷ್ಠ ನಾಲ್ಕು ಭೂಕಂಪಗಳು ಸಂಭವಿಸಿವೆ. ಈ ರೀತಿಯ ಘಟನೆ ಸಂಭವಿಸಿರಲಿಲ್ಲ. ಬಂಡೆಗಳು ಬೀಳುತ್ತಲೇ ಇದ್ದವು. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಅವಶೇಷಗಳು 70 ಮೀಟರ್‌ಗಳಷ್ಟು ದಪ್ಪವಾಗಿದ್ದವು.

ನಾಯಕ್‌ ಕೂಡಲೇ ಕಾರ್ಮಿಕರ ತಲೆ ಎಣಿಕೆ ಮಾಡಿದರು. ಒಳಗೆ 41 ಮಂದಿ ಇದ್ದರು. ಬಂಡೆಗಳು ಬೀಳುವುದನ್ನು ನಿಲ್ಲಿಸಿದ್ದವು. ಎಲ್ಲ ಸ್ತಬ್ಧವಾಗಿತ್ತು. ಭಯಾನಕ ಶಾಂತಿ ಆವರಿಸಿತ್ತು. ಜೊತೆಗೆ ಅವರ ಮೊಬೈಲ್ ಫೋನ್‌ಗಳಿದ್ದವು. ಆದರೆ ಸುರಂಗದೊಳಗೆ ಯಾವುದೇ ನೆಟ್‌ವರ್ಕ್ ಇರಲಿಲ್ಲ. ಅವರ ವಾಕಿ-ಟಾಕಿ ಹ್ಯಾಂಡ್‌ಸೆಟ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಮೊದಲ ನಾಲ್ಕು ಗಂಟೆಗಳು ಭಯಾನಕವಾಗಿದ್ದವು.

ಹೊರಜಗತ್ತಿಗೆ ಸಂದೇಶ

ಅವರು ಮಾಡಬೇಕಾಗಿದ್ದ ಮೊದಲ ಕೆಲಸವೆಂದರೆ ತಾವು ಜೀವಂತವಾಗಿದ್ದೇವೆ ಎಂದು ಹೊರಜಗತ್ತಿಗೆ ತಿಳಿಸುವುದು. ಈ ಸುರಂಗ ರಚನೆ ಮಾಡುತ್ತಾ ಎರಡು ಪೈಪ್‌ಗಳನ್ನು ಜೋಡಿಸಲಾಗಿತ್ತು. 3 ಮತ್ತು 4 ಇಂಚು ವ್ಯಾಸದ ಪೈಪ್‌ಗಳು. ಅವು ಯಂತ್ರಗಳನ್ನು ತಂಪಾಗಿಸಲು ಹೊರಗಿನಿಂದ ನೀರನ್ನು ಸಾಗಿಸಲು ಮತ್ತು ಬಂಡೆಯಿಂದ ನಿರ್ಮಾಣ ಸ್ಥಳಕ್ಕೆ ಹರಿಯುವ ನೀರನ್ನು ಹೊರಹಾಕಲು ಬಳಸಲಾಗುತ್ತಿತ್ತು. ಅವುಗಳ ಮೂಲಕ, ಅವರದೇ ಆದ ಒಂದು ರೀತಿಯ ಮೋರ್ಸ್ ಕೋಡ್‌ನಲ್ಲಿ, ಪ್ರತಿ ಐದು ನಿಮಿಷಗಳಿಗೊಮ್ಮೆ ಪೈಪ್‌ನಲ್ಲಿ ನೀರನ್ನು ನಿರ್ಬಂಧಿಸುತ್ತಾ, ತಾವು ತೊಂದರೆಯಲ್ಲಿದ್ದೇವೆ ಎಂಬ ಸಂದೇಶವನ್ನು ಹೊರಗಿದ್ದ ಇಂಜಿನಿಯರ್‌ಗಳಿಗೆ ಕಳಿಸಿದರು.

ಒಳಗೆ ವಿದ್ಯುತ್ ಮತ್ತು ಬೆಳಕು ಇತ್ತು. ಆದರೆ ಆಮ್ಲಜನಕ ಬೇಗನೆ ಖಾಲಿಯಾಗಬಹುದು ಎಂಬ ಭಯವಿತ್ತು. ಕೆಲವು ಗಂಟೆಗಳ ನಂತರ ಇಂಜಿನಿಯರ್‌ಗಳು ಇವರ ಸಂದೇಶವನ್ನು ಗಮನಿಸಿದರು ಮತ್ತು ಅವರು ಕೂಡ ಪೈಪ್‌ಗಳನ್ನು ಬಳಸಿ ಒಳಗಿದ್ದವರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಹೊರಗಿದ್ದ ರಕ್ಷಕರಿಂದ ʼನೀವು ಓಕೇನಾ?ʼ ಎಂಬ ಪ್ರಶ್ನೆ. “ಓಕೆʼ ಎಂಬ ಉತ್ತರ ಒಳಗಿನಿಂದ. ಈಗ ಪರಸ್ಪರ ಸಂದೇಶ ಕಳಿಸಬಹುದು ಎಂಬುದೇ ದೊಡ್ಡ ಭರವಸೆಯಾಗಿತ್ತು.

ಆಹಾರ, ಆಮ್ಲಜನಕ

ಮೊದಲ ಕೆಲವು ದಿನಗಳು 4 ಇಂಚಿನ ಪೈಪೇ ಅವರ ಜೀವಸೆಲೆಯಾಯಿತು. ಮೊದಲ ಎರಡು ದಿನಗಳಲ್ಲಿ, ಪ್ಯಾಕೆಟ್‌ಗಳ ಮೂಲಕ ಆಮ್ಲಜನಕ ಮತ್ತು ಒಣ ಆಹಾರವನ್ನು ಪೈಪ್‌ನಲ್ಲಿ ಕಳಿಸಲಾಯಿತು. ಪಫ್ಡ್ ರೈಸ್, ಗೋಡಂಬಿ, ಒಣದ್ರಾಕ್ಷಿ ಕಳಿಸಲಾಯಿತು. ಆದರೆ ಎರಡು ದಿನ ಅದನ್ನು ಯಾರೂ ಸೇವಿಸಲಿಲ್ಲ. ಎಲ್ಲರೂ ಚಿಂತೆಯಿಂದ ಅಸ್ವಸ್ಥರಾಗಿದ್ದರು. ಮೂರನೇ ದಿನ, ತುಂಬಾ ಹಸಿದ ಬಳಿಕ ಎಲ್ಲರೂ ತಿನ್ನಲು ಪ್ರಾರಂಭಿಸಿದರು. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವೆಲ್ಲವೂ ಪಫ್ಡ್‌ ರೈಸ್.‌

ಆಮ್ಲಜನಕ ಮುಖ್ಯವಾಗಿತ್ತು. ಮೊದಲ ಒಂದೂವರೆ ದಿನ ಉಸಿರಾಟದ ತೊಂದರೆ ಇರಲಿಲ್ಲ. ಸುರಂಗದ 2 ಕಿಮೀ ತ್ರಿಜ್ಯವು ಗಾಳಿಯನ್ನು ಒದಗಿಸಿತು. ಬಳಿಕ ಅದೂ ಹಳತಾಗಲು ಪ್ರಾರಂಭಿಸಿತು. ಕೆಲವರು ಉಸಿರಾಟದ ತೊಂದರೆ ಎದುರಿಸಲು ಪ್ರಾರಂಭಿಸಿದರು. ಹದಿನೆಂಟು ಗಂಟೆಗಳ ನಂತರ, ಹೊರಗಿನಿಂದ ಸಣ್ಣ ಪೈಪ್‌ಲೈನ್ ಮೂಲಕ ಆಮ್ಲಜನಕವನ್ನು ಪಂಪ್ ಮಾಡಲು ಪ್ರಾರಂಭಿಸಿದರು. ಅದು ಜೀವಚೈತನ್ಯ ತುಂಬಿತು. ವಾಕರಿಕೆ ಮತ್ತು ಅಜೀರ್ಣದಂತಹ ಕೆಲವು ಸಮಸ್ಯೆ ಕೆಲವರಿಗೆ ಕಂಡುಬಂದವು. ಅದೃಷ್ಟವಶಾತ್‌ ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಕಾಡಲಿಲ್ಲ. “ಪ್ರತಿದಿನ ಒಂದೇ ರೀತಿಯ ಆಹಾರವನ್ನು ತಿನ್ನಲು ಸಾಧ್ಯವಿಲ್ಲ. ನಾವು ತಿನ್ನದೆ ಉಳಿಸಿದ ಒಣ ಹಣ್ಣುಗಳ ಪ್ಯಾಕೆಟ್‌ಗಳು ಒಳಗೆ ಹಾಗೇ ಇವೆ” ಎಂದು ಬಿಹಾರದ ಅರಾದಿಂದ ಬಂದ 34 ವರ್ಷದ ಸಬಾ ಅಹ್ಮದ್ ಹೇಳುತ್ತಾರೆ.

ಮೊದಲ ಕೆಲವು ದಿನಗಳವರೆಗೆ ಮೊಬೈಲ್ ಫೋನ್ ಚಾರ್ಜರ್‌ಗಳು ಇರಲಿಲ್ಲ. ಮನರಂಜನೆಗೆ ಏನೂ ಇರಲಿಲ್ಲ. ಅವರು ಮಕ್ಕಳಾಟಗಳನ್ನು ಆಡಿದರು. ರಾಜಾ, ರಾಣಿ, ಚೋರ್, ಸಿಪಾಹಿ; ಕಾಗದದ ಚೀಟಿಗಳಲ್ಲಿ ಆಡುವ ಆಟಗಳು ಇತ್ಯಾದಿ. ಸಮಯವನ್ನು ತಿಳಿಯಲು ಮಾತ್ರ ಫೋನ್‌ಗಳನ್ನು ಆನ್ ಮಾಡುತ್ತಿದ್ದರು.

9ನೇ ದಿನ ಒಂದು ಪ್ರಗತಿ ಕಂಡುಬಂತು. ಶಿಲಾಖಂಡರಾಶಿಗಳ ಮಧ್ಯದಿಂದ ಆರು ಇಂಚಿನ ಪೈಪ್‌ಲೈನ್ ಹೊರಹೊಮ್ಮಲು ಪ್ರಾರಂಭಿಸಿತು. ಇದು ಮನುಷ್ಯನನ್ನು ಸಾಗಿಸಲು ಸಾಕಾಗುವಂತಿರಲಿಲ್ಲ. ಆದರೆ ಬೇಯಿಸಿದ ಆಹಾರ, ನೀರು, ಮೊಬೈಲ್ ಫೋನ್ ಚಾರ್ಜರ್‌ಗಳು ಮತ್ತು ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ವಿನಿಮಯ ಮಾಡಲು ಸಾಕಾಗುವಂತಿತ್ತು. ಕಾರ್ಮಿಕರು ಬದುಕಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ಅಲ್ಲಿಗೆ ತಲುಪಿದ ಕ್ಯಾಮೆರಾ ಜಗತ್ತಿಗೆ ತಿಳಿಸಿತು. ಕಾರ್ಮಿಕರಿಗೆ ಹೊಸ ಭರವಸೆ ನೀಡಿತು.

41 ಕಾರ್ಮಿಕರಲ್ಲಿ 51 ವರ್ಷದ ಗುಲಾಬ್ ಸಿಂಗ್ ನೇಗಿ ಮತ್ತು 34 ವರ್ಷದ ಸಾಬಾ ಅಹ್ಮದ್ ಎಂಬ ಇಬ್ಬರು ಫೋರ್‌ಮನ್‌ಗಳಿದ್ದರು. ಅವರು ದಿನಚರಿ ಪಟ್ಟಿ ಮಾಡುವ ಜವಾಬ್ದಾರಿ ವಹಿಸಿಕೊಂಡರು. “ಪ್ರತಿದಿನ ಬೆಳಿಗ್ಗೆ ನಾವು ಎಚ್ಚರಗೊಂಡ ಬಳಿಕ 2 ಕಿಮೀ ವಿಸ್ತಾರದಲ್ಲಿ ವಾಕ್ ಮಾಡಿದೆವು. ಪ್ರತಿಯೊಬ್ಬರಿಗೂ ಯೋಗ ಮಾಡುವಂತೆ ಪ್ರೇರೇಪಿಸಿದೆವು. ನಂತರ ಉಪಹಾರ ಸೇವನೆ. ಆರಂಭದಲ್ಲಿ ಅನ್ನ ಮತ್ತು ಡ್ರೈ ಫ್ರೂಟ್ಸ್ ಮಾತ್ರ. ಆರು ಇಂಚಿನ ಪೈಪ್ ಹಾಕಿದ ನಂತರ ಖಿಚಡಿ, ಬ್ರೆಡ್, ಮೊಟ್ಟೆ, ಜಾಮ್ ಮತ್ತು ಹಣ್ಣುಗಳು ಸಿಕ್ಕಿದವು. ನಮಗೆ ಬೇಕಾದುದನ್ನು ನಾವು ಸಂವಹನ ಮಾಡಿದ ನಂತರ ಅಂತಿಮವಾಗಿ ಫೋನ್ ಚಾರ್ಜರ್‌ಗಳನ್ನು ಕಳುಹಿಸಲಾಯಿತು. ನಂತರ ಕಾರ್ಮಿಕರು ತಮ್ಮ ಫೋನ್‌ನಲ್ಲಿ ಆಡತೊಡಗಿದರು. ಉದಾಹರಣೆಗೆ, ನಾನು ನನ್ನ ಫೋನ್‌ನಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳನ್ನು ನೋಡಿದ್ದೇನೆ” ಎಂದು ಸಾಬಾ ಅಹ್ಮದ್ ಹೇಳಿದರು.

ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದ ಸುರಂಗವು ಬಿಸಿಯಾಗಿಯೂ ಇರಲಿಲ್ಲ, ಅಥವಾ ತೀರಾ ತಂಪಾಗಿಯೂ ಇರಲಿಲ್ಲ. ಆದರೆ ನೀರಿನ ಸಮಸ್ಯೆ ಇದ್ದೇ ಇತ್ತು. ಸುರಂಗದ ಒಳಗೆ, ನೀರು ಬಂಡೆಗಳಿಂದ ಕೆಳಕ್ಕೆ ಇಳಿಯುತ್ತದೆ. ಮೊದಲ ಒಂಬತ್ತು ದಿನಗಳು, ಆರು ಇಂಚಿನ ಪೈಪ್ ಅನ್ನು ಕಳಿಸುವವರೆಗೆ ಅವರೆಲ್ಲಾ ಆ ಜಿನುಗುವ ನೀರನ್ನೇ ಸೇವಿಸಿದರು.

ಸ್ನಾನ, ಟಾಯ್ಲೆಟ್‌ ಹೀಗಿತ್ತು!

ಆರಂಭಿಕ ದಿನಗಳಲ್ಲಿ ನೀರಿನ ಕೊರತೆಯಿಂದಾಗಿ ಮಲಬದ್ಧತೆ ಕಾಡಿತು. ಯಾರೂ ನವೆಂಬರ್ 11ರ ನಂತರ ಸ್ನಾನ ಮಾಡಿರಲಿಲ್ಲ. ಬಂಡೆಗಳಿಂದ ಬೀಳುವ ನೀರಿನಲ್ಲಿ ರಾಸಾಯನಿಕಗಳಿರುತ್ತವೆ. ಏಕೆಂದರೆ ಸುರಂಗ ನಿರ್ಮಾಣದ ಸಮಯದಲ್ಲಿ ಶಾಟ್‌ಕ್ರೀಟ್ ವಿಧಾನವನ್ನು ಬಳಸಲಾಗುತ್ತದೆ. ಹೀಗಾಗಿ ಆ ನೀರು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಆತಂಕವಿತ್ತು.

ಇನ್ನೊಂದು ಸಮಸ್ಯೆಯೆಂದರೆ ಟಾಯ್ಲೆಟ್‌ನದು. ಇದಕ್ಕಾಗಿ ಕಾರ್ಮಿಕರು ಸುರಂಗದ ಇನ್ನೊಂದು ತುದಿಯಲ್ಲಿ ಬಾರ್ಕೋಟ್ ಬದಿಯಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಿದರು. ಒಳಗಿನ 2 ಕಿಮೀ ವಿಸ್ತಾರದ ಒಂದು ಮೂಲೆಯಲ್ಲಿ, ಅವರ ಬಳಿಯಿದ್ದ ಪೊಕ್ಲೇನ್ ಯಂತ್ರದ ಮೂಲಕ 50ರಿಂದ 60 ಹೊಂಡಗಳನ್ನು ಅಗೆದು, ಅದನ್ನು ಮಲವಿಸರ್ಜನೆಗೆ ಬಳಸಿದರು. ನಂತರ ಹೊಂಡಗಳನ್ನು ಮಣ್ಣಿನಿಂದ ಮುಚ್ಚಿದರು.

ಮಲಗಲು ಕಾರ್ಮಿಕರು ಬೆಡ್‌ಶೀಟ್‌ಗಳು ಮತ್ತು ಹೊದಿಕೆಗಳಾಗಿ ಜಿಯೋಟೆಕ್ಸ್ಟೈಲ್ ಶೀಟ್‌ಗಳನ್ನು ಬಳಸಿದರು. ಇವು ಪಾಲಿಯೆಸ್ಟರ್‌ನಿಂದ ಮಾಡಲ್ಪಟ್ಟಿವೆ. ಇವು ಮಣ್ಣನ್ನು ಬೇರ್ಪಡಿಸಲು, ಫಿಲ್ಟರ್ ಮಾಡಲು, ಬಲಪಡಿಸಲು ಬಳಸಲಾಗುತ್ತದೆ. ಆದರೆ ಆಗಾಗ್ಗೆ ನಿದ್ರೆಗೆ ತೊಂದರೆಯಾಗುತ್ತಿತ್ತು. “ಸಾವು ನಿಮ್ಮ ಮುಂದೆಯೇ ಇದ್ದಾಗ ಯಾರೂ ನೆಮ್ಮದಿಯಾಗಿ ಮಲಗಲು ಅಥವಾ ತಿನ್ನಲು ಸಾಧ್ಯವಿಲ್ಲ. 4 ಅಥವಾ 5 ಗಂಟೆ ಮಲಗುತ್ತಿದ್ದರು. ನಂತರ ಎಚ್ಚರವಾಗುತ್ತಿತ್ತು. ಬೆಳಗ್ಗೆ 8ರ ಹೊತ್ತಿಗೆ, ಪೈಪ್‌ನ ಇನ್ನೊಂದು ತುದಿಯಿಂದ ರಕ್ಷಕಕರು ಇವರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಿದ್ದರು. ರಾತ್ರಿ 10ರಿಂದ 11 ಗಂಟೆಯ ನಡುವೆ, ಮಲಗುವ ಮೊದಲು, ಎಲ್ಲರೂ ಒಟ್ಟಾಗಿ ಪ್ರಾರ್ಥಿಸಲು ಸೇರುತ್ತಿದ್ದರು.

ಎಚ್ಚರವಾಗಿದ್ದಾಗ, 6 ಇಂಚಿನ ಪೈಪ್ ಹಾಕಿದ ನಂತರ, ಬೇಸರವನ್ನು ದೂರವಿರಿಸಲು ಅವರು ತಮ್ಮ ಫೋನ್‌ಗಳಲ್ಲಿ ಚಲನಚಿತ್ರಗಳನ್ನು ವೀಕ್ಷಿಸಿದರು. ಎರಡು ವಾರಗಳಲ್ಲಿ BSNL ಲ್ಯಾಂಡ್‌ಲೈನ್ ಾನ್ನು ಕಳುಹಿಸಲಾಯಿತು. ಎಲ್ಲರೂ ಅವರವರ ಕುಟುಂಬದೊಂದಿಗೆ ಮಾತನಾಡಿದರು.

ಇದನ್ನೂ ಓದಿ: ಸುರಂಗ ಕಾರ್ಯಾಚರಣೆಯ ಹೀರೋ, ರ‍್ಯಾಟ್‌ ಹೋಲ್ ಮೈನರ್‌ ಮುನ್ನಾ ಖುರೇಷಿ ಯಾರು?

ಗ್ರೇಟ್‌ ಎಸ್ಕೇಪ್‌

ಎಂಡೋಸ್ಕೋಪಿಕ್ ಕ್ಯಾಮೆರಾ ಅಥವಾ BSNL ಲ್ಯಾಂಡ್‌ಲೈನ್‌ಗೆ ಲಗತ್ತಿಸಲಾದ ಮೈಕ್ರೊಫೋನ್‌ನಲ್ಲಿ ಈವರಿಗೆ ಪ್ರೋತ್ಸಾಹ ಹರಿದುಬರುತ್ತಿತ್ತು. 41 ಕಾರ್ಮಿಕರು ತಮ್ಮ ಕುಟುಂಬಗಳು, ಸಹೋದ್ಯೋಗಿಗಳು, ವೈದ್ಯರು, ಮನೋವೈದ್ಯರು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರೊಂದಿಗೆ ಮಾತನಾಡಿದರು.

ಪ್ರತಿದಿನ, ರಕ್ಷಕರು ಎಷ್ಟು ದೂರ ಬಂದಿದ್ದಾರೆಂದು ಅವರಿಗೆ ತಿಳಿಸಲಾಯಿತು. ಶೀಘ್ರದಲ್ಲೇ ಹೊರಬರುತ್ತೀರಿ ಎಂಬ ಭರವಸೆ ನೀಡಲಾಯಿತು. ನವೆಂಬರ್ 28 ಮಧ್ಯಾಹ್ನದ ಹೊತ್ತಿಗೆ, ಮೈಕ್ರೊಫೋನ್‌ನ ಇನ್ನೊಂದು ತುದಿಯಲ್ಲಿರುವ ಧ್ವನಿಯು, ರಕ್ಷಕರು 55 ಮೀಟರ್ ಶಿಲಾಖಂಡರಾಶಿಗಳನ್ನು ಕೊರೆದು ತೆಗೆದಿದ್ದಾರೆ ಎಂದರು. ಆದರೆ ಕಾರ್ಮಿಕರತ್ತ ಪೈಪ್ ಬಂದಿರಲಿಲ್ಲ. ಒಳಗಿದ್ದವರು ಗಾಬರಿಗೊಂಡರು. ಪೈಪ್ ಬೇರೆ ದಿಕ್ಕಿನಲ್ಲಿ ಹೋಗಿರಬಹುದು ಎಂದು ಭಾವಿಸಿದರು. ಇನ್ನೂ 5 ಮೀಟರ್ ಮುಂದೆ ತಳ್ಳುವಂತೆ ಮನವಿ ಮಾಡಿದರು.

ಮಧ್ಯಾಹ್ನ 1.30ಕ್ಕೆ ಕಾರ್ಮಿಕರು ಉಸಿರು ಬಿಗಿಹಿಡಿದು ನೋಡುತ್ತಿದ್ದಂತೆಯೇ ಅವಶೇಷಗಳು ಉದುರಲಾರಂಭಿಸಿದವು. ಐದೂವರೆ ಗಂಟೆಗಳ ನಂತರ ಇವರನ್ನು ಸ್ಥಳಾಂತರಿಸುವ ಪೈಪ್ ಅನ್ನು ನೋಡಿದರು. ಕುಸಿದ ಸುರಂಗದ ಸುತ್ತಲೂ “ಭಾರತ್ ಮಾತಾ ಕಿ ಜೈ” ಘೋಷಣೆ ಪ್ರತಿಧ್ವನಿಸಿತು. ರಾತ್ರಿ 9 ಗಂಟೆಯ ಹೊತ್ತಿಗೆ, ಕೆಲವರು ತಾತ್ಕಾಲಿಕ ಟ್ರಾಲಿಗಳಲ್ಲಿ, ಮತ್ತು ಕೆಲವರು ತೆವಳುತ್ತ ಹೊರಹೊಮ್ಮಿದರು. ಪರ್ವತದಿಂದ ಘಾಸಿಗೊಂಡಿದ್ದ ಅವರು ತಮ್ಮ ದಿಟ್ಟತನದ ಕಥೆಯನ್ನು ಹೇಳಲು ಬದುಕುಳಿದಿದ್ದರು.

ಇದನ್ನೂ ಓದಿ: ಸುರಂಗ ಕಾರ್ಯಾಚರಣೆ; ತಪ್ಪಿದ್ದು ಎಲ್ಲಿ, ಯಶಸ್ವಿಯಾದದ್ದು ಹೇಗೆ? ಕ್ಷಣಕ್ಷಣದ ಡೀಟೇಲ್ಸ್

Exit mobile version