ನವದೆಹಲಿ: ಪಕ್ಷ ಬಿಡುವ ಕುರಿತು ಚರ್ಚೆಗೆ ಮುಕ್ತಾಯ ಹಾಡಲು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ವಸತಿ ಸಚಿವ ವಿ. ಸೋಮಣ್ಣ (V. Somanna) ಇದ್ದಕ್ಕಿದ್ದಂತೆ ನವದೆಹಲಿಗೆ ತೆರಳಿದ್ದಾರೆ. ಇಲ್ಲಿ ವಿವಿಧ ಮುಖಂಡರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗೆ ಮಾಧ್ಯಮಗಳ ವಿರುದ್ಧ ಸಚಿವ ಸೋಮಣ್ಣ ಸಿಡಿಮಿಡಿಗೊಂಡಿದ್ದಾರೆ.
ಬಿಜೆಪಿ ತೊರೆಯುವ ಕುರಿತು ಮಾದ್ಯಮಗಳ ಪ್ರಶ್ನೆಗೆ ಗರಂ ಆದ ವಿ. ಸೋಮಣ್ಣ, ನಾನು ಬಿಜೆಪಿ ಬಿಡ್ತಿನಿ ಅಂತ ಯಾರ‍್ರಿ ಹೇಳಿದ್ದು? ನೀವೆ ಮಾದ್ಯಮದವರೆ ಸೃಷ್ಟಿ ಮಾಡ್ತಿರಾ, ನೀವೆ ಹೇಳ್ತಿರ. ನಾನು ಏನು ಹೇಳಬೇಕು ಎಲ್ಲಾ ನಿನ್ನೆಯೆ ಹೇಳಿದ್ದೇನೆ. ನಾನು ಇವತ್ತು ದೆಹಲಿಗೆ ಬಂದಿರೋದು ಇಲಾಖೆಯ ಕೆಲಸದ ಹಿನ್ನಲೆ. ಪ್ರಲ್ಹಾದ್ ಜೋಶಿಯವರನ್ನು ಭೇಟಿ ಮಾಡಿ ಮಾತನಾಡಲು ಬಂದಿದ್ದೇನೆ ಎಂದರು.
ವಿಜಯೇಂದ್ರ ಬಗೆಗಿನ ಪ್ರಶ್ನೆಗೂ ಸಿಡಿಮಿಡಿಗೊಂಡ ಸೋಮಣ್ಣ, ನನ್ನ ವಯಸ್ಸಿಗೆ ತಕ್ಕಂತೆ ಪ್ರಶ್ನೆ ಕೇಳ್ರಿ ಅಂತ ಗರಂ ಆದರು. ವಿಜಯೇಂದ್ರ ವಯಸ್ಸು ಎಷ್ಟು ನಂದು ಎಷ್ಟು? ನಂಗೆ ಅವರಿಗೆ ಯಾಕೆ ಹೋಲಿಕೆ ಮಾಡ್ತೀರಿ? ಅವರಿಗೆ ನನ್ನ ಬಗ್ಗೆ ಏನು ಅನಿಸಿಕೆ ಇದೆಯೋ ಗೊತ್ತಿಲ್ಲ. ಅವರು ನಮ್ಮ ಮಾಜಿ ಸಿಎಂ ಯಡಿಯೂರಪ್ಪನವರ ಮಗ. ನನ್ನ ಮಗ ಮತ್ತು ವಿಜಯೇಂದ್ರ ಮಧ್ಯೆ ಏನಾಗಿದೆಯೋ ಗೊತ್ತಿಲ್ಲ. ಏನು ಗೊಂದಲ ಇದೆಯೋ ಅದನ್ನ ಅವರ ಬಳಿ ಕೇಳಿ. ನನ್ನ ಬಳಿ ಏಕೆ ಕೇಳುತ್ತೀರಿ?
ಏನೇ ಸಮಸ್ಯೆ ಆಗಿದ್ರೆ ಕ್ರಮ ಕೈಗೊಳ್ಳಿ ಅಂತ ಈಗಾಗಲೇ ಹೇಳಿದ್ದೀನಿ. ಯಡಿಯೂರಪ್ಪ ಮತ್ತು ನಮ್ಮ ಕುಟುಂಬದ ಮಧ್ಯೆ ಬಿಕ್ಕಟ್ಟು ವಿಚಾರರನ್ನುವುದೆಲ್ಲ ನಂಗೆ ಗೊತ್ತಿಲ್ಲ. 45 ವರ್ಷದಿಂದ ಜನಸೇವೆ ಮಾಡಿದ್ದೇನೆ. ನನಗೆ ವ್ಯಾಮೋಹ ಇಲ್ಲ. ಮಾಧ್ಯಮದವರು ಅಭಿವೃದ್ಧಿ ಬಗ್ಗೆ ಗಮನ ಕೊಡಿ. ದಿನಾ ಸೋಮಣ್ಣ, ಯಡಿಯೂರಪ್ಪ ಅಂತ ಸಮಯ ಹಾಳು ಮಾಡಬೇಡಿ. ನನ್ನಿಂದ ಬಿಜೆಪಿಗೆ ಅಪಚಾರ ಆಗಲ್ಲ. ಸಿದ್ದಗಂಗಾ ಮಠಕ್ಕೂ ನಂಗೂ ಯಾವುದೇ ಮನಸ್ತಾಪ ಇಲ್ಲ. ಅಲ್ಲಿನ ಕಾರ್ಯಕ್ರಮಕ್ಕೆ ಹೋಗದೆ ಇದ್ದದ್ದು ನನ್ನ ವೈಯಕ್ತಿಕ ತೀರ್ಮಾನ. ನನಗೆ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಜೀವನವನ್ನೇ ಅದರ ಜತೆ ಬೆರೆತು ಹೋಗಿದೆ.
ವೀರಶೈವ ಧರ್ಮಕ್ಕೆ ಶತಮಾನಗಳ ಇತಿಹಾಸವಿದೆ. ಇನ್ನೊಬ್ಬರ ಬಗ್ಗೆ ದ್ವೇಷ ಮಾಡಬೇಡಿ ಎನ್ನವುದು ನಾನು ಕಲಿತುಕೊಂಡ ಧರ್ಮ. ಯಡಿಯೂರಪ್ಪನವರ ಬಗ್ಗೆ ನನಗೆ ಸಿಟ್ಟಿಲ್ಲ. ಅವರು ಕರೆದರೆ ಹೋಗುವೆ, ಇವತ್ತಿನವರೆಗೆ ಅವರು ಕರೆದಿಲ್ಲ. ನನ್ನದು ಯಡಿಯೂರಪ್ಪ ನವರದ್ದು ತಂದೆ ಮಗ ಸಂಬಂಧ. ನಾನು ಸತ್ಯ ಮಾತಡ್ತೇನೆ. ಒಮ್ಮೊಮ್ಮೆ ಅದು ಕಹಿ ಆಗುತ್ತೆ, ಏನು ಮಾಡಲಿ ಹೇಳಿ? ಯಡಿಯೂರಪ್ಪನವರ ಬಗ್ಗೆ ದ್ವೇಷ ಮಾಡಿ ನಂಗೆ ಏನು ಲಾಭ? ಅವರ ಬಗ್ಗೆ ವಿನಾಕಾರಣ ಮಾತಾಡೋದು ಅಪ್ರಸ್ತುತ. ದಯವಿಟ್ಟು ನನ್ನ ಬಿಟ್ಟು ಬಿಡ್ರಪ್ಪ ಎಂದರು.
ಹೈಕಮಾಂಡ್ ನಾಯಕರ ಭೇಟಿ ಮಾಡ್ತಿರಾ ಎಂಬ ಪ್ರಶ್ನೆಗೆ, ಏನೂ ಉತ್ತರ ನೀಡದೆ ಮೌನವಾಗಿ ತೆರಳಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಲಿದ್ದು, ಸಂಜೆ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ ಎನ್ನಲಾಗಿದೆ.