Site icon Vistara News

Vande Bharat Express: ಮತ್ತೆ ಸುದ್ದಿಯಾದ ವಂದೇ ಭಾರತ್‌ ರೈಲು; ಮಾಂಸಾಹಾರ ಸರ್ವ್‌ ಮಾಡಿದ ಸಿಬ್ಬಂದಿಗೆ ಕಪಾಳಮೋಕ್ಷ

Vande Bharat Express

ನವದೆಹಲಿ: ವಂದೇ ಭಾರತ್‌ ರೈಲು(Vande Bharat Express) ಶುರುವಾದ ನಂತರ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇದೆ. ಕೆಲವೊಮ್ಮೆ ರೈಲಿನ ಮೇಲೆ ಕಲ್ಲೆಸೆತ, ಇನ್ನು ಕೆಲವೊಮ್ಮೆ ರೈಲಿನಲ್ಲಿ ಸಿಗುವ ಕಳಪೆ ಊಟ ಹೀಗೆ ಸದಾ ಯಾವುದಾದರೂ ವಿವಾದಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಹಿರಿಯ ಪ್ರಯಾಣಿಕರೊಬ್ಬರು (Elderly Passenger), ತಾವು ಕೇಳಿದ ಸಸ್ಯಾಹಾರದ (Vegetarian) ಬದಲಿಗೆ ಮಾಂಸಾಹಾರವನ್ನು (Non-Vegetarian Meal) ನೀಡಿದ್ದಾನೆಂದು ಆಹಾರ ವಿತರಕ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಘಟನೆ ವಿವರ:

ಹೌರಾದಿಂದ ರಾಂಚಿಗೆ (Ranchi) ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಜುಲೈ 26 ರಂದು ನಡೆದ ಈ ಘಟನೆಯನ್ನು ಸಹ-ಪ್ರಯಾಣಿಕ ಕುನಾಲ್ ವರ್ಮಾ ಅವರು ವಿಡಿಯೋ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಊಟದ ಪ್ಯಾಕೆಟ್‌ನಲ್ಲಿನ ಲೇಬಲ್ ಅನ್ನು ಗಮನಿಸದ ಹಿರಿಯ ವ್ಯಕ್ತಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದಾರೆ. ತಿಂದ ನಂತರ ಮಾಂಸಾಹಾರವೆಂದು ಗೊತ್ತಾಗಿದ್ದು, ಇದರಿಂದ ಕುಪಿತಗೊಂಡ ಅವರು ಆಹಾರ ವಿತರಿಸಿದ ಸಿಬ್ಬಂದಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಇದು ಇತರ ಪ್ರಯಾಣಿಕರಿಗೆ ಹಿಡಿಸಲಿಲ್ಲ, ಮಧ್ಯಪ್ರವೇಶಿಸಿದ ಪ್ರಯಾಣಿಕರು ಹಿರಿಯ ಪ್ರಯಾಣಿಕ ಆಹಾರ ವಿತರಕ ಸಿಬ್ಬಂದಿಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿರಿಯ ಪ್ರಯಾಣಿಕನ ವರ್ತನೆಗೆ ಅಸಮಾಧಾನಗೊಂಡಿರುವ ಸಹ ಪ್ರಯಾಣಿಕರು ಆತನ ವಿರುದ್ಧ ಹರಿಹಾಯ್ದಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ನೀವು ಏಕೆ ಅವರಿಗೆ ಹೊಡೆಯತ್ತಿದ್ದೀರಿ? ನಿಮ್ಮ ವಯಸ್ಸನ್ನು ನೋಡಿ. ವಯಸ್ಸಿಗೆ ತಕ್ಕಂತೆ ವರ್ತಿಸಿ ಎಂದು ಹೇಳಿದ್ದಾರೆ ಈ ವೇಳೆ ಆಹಾರ ವಿತರಿಸಿದ ಸಿಬ್ಬಂದಿ ಪದೇ ಪದೇ ಕ್ಷಮೆಯಾಚಿಸುವುದನ್ನು ಕಾಣಬಹುದು. ಇತರ ಪ್ರಯಾಣಿಕರು ಹಿರಿಯ ವ್ಯಕ್ತಿಯನ್ನು ಕ್ಷಮೆಯಾಚಿಸಿ ಎಂದು ಹೇಳುತ್ತಾರೆ.

ಇನ್ನು ಘಟನೆಯ ಬಗ್ಗೆ ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾಶ್ ಚರಣ್ ಪ್ರತಿಕ್ರಿಯಿಸಿದ್ದು, ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅದನ್ನು ಬಗೆಹರಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ವೃದ್ಧನ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Exit mobile version