Site icon Vistara News

Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

Vande Bharat Metro

Vande Bharat Metro

ನವದೆಹಲಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು-ಇದು ಸದ್ಯ ಭಾರತದಲ್ಲಿ ಸಂಪರ್ಕ ಕ್ರಾಂತಿಯನ್ನೇ ಉಂಟು ಮಾಡಿದೆ. ಆರಂಭವಾಗಿ ಕೆಲವೇ ದಿನಗಳಲ್ಲಿ ಜನ ಮನ ಗೆದ್ದಿದೆ. ಇದೇ ಯಶಸ್ಸಿನಿಂದ ಸ್ಫೂರ್ತಿ ಪಡೆದು ವಂದೇ ಭಾರತ್‌ ಮೆಟ್ರೋ (Vande Bharat Metro) ಸಿದ್ಧಪಡಿಸಲಾಗುತ್ತಿದ್ದು, ಜುಲೈ ವೇಳೆಗೆ ಪರೀಕ್ಷಾರ್ಥ ಓಡಾಟ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪಂಜಾಬ್‌ನ ಕಪುರ್ಥಾಲಾ (Punjab’s Kapurthala)ದ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ಮೆಟ್ರೋದ ಬೋಗಿಗಳನ್ನು ನಿರ್ಮಿಸಲಾಗುತ್ತದೆ. ಸದ್ಯ ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗಮನ ಸೆಳೆಯುತ್ತಿದೆ (Viral Video).

ಮೊದಲ ಹಂತದಲ್ಲಿ 50 ವಂದೇ ಭಾರತ್ ಮೆಟ್ರೋ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತದೆ ಮತ್ತು ಕ್ರಮೇಣ ಸಂಖ್ಯೆಯನ್ನು 400ಕ್ಕೆ ಏರಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ. ಭಾರತದಲ್ಲೇ ನಿರ್ಮಾಣವಾಗುತ್ತಿರುವ ಮೆಟ್ರೋ ರೈಲು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಇದು ದೊಡ್ಡ ನಗರಗಳಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲು ಸಹಾಯ ಮಾಡಲಿದೆ. ಅಲ್ಲದ ಮಹಾನಗರಗಳ ಅಕ್ಕಪಕ್ಕದ ನಗರಗಳಿಗೂ ಮೆಟ್ರೋ ಸೇವೆ ವಿಸ್ತರಿಸುವ ಯೋಜನೆಗೆ ಇದು ಉತ್ತೇಜನ ನೀಡಲಿದೆ.

ವಂದೇ ಭಾರತ್ ಮೆಟ್ರೋ 100 ಕಿ.ಮೀ.ನಿಂದ 250 ಕಿ.ಮೀ.ವರೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಇದು 12 ಬೋಗಿಗಳನ್ನು ಹೊಂದಿದೆ. ಬೇಕಾದರೆ 16 ಬೋಗಿಗಳವರೆಗೆ ವಿಸ್ತರಿಸಬಹುದು ಎಂದು ಅವರು ಹೇಳಿದ್ದಾರೆ.

ಇರಲಿದೆ ಹಲವು ವೈಶಿಷ್ಟ್ಯ

ವಂದೇ ಭಾರತ್‌ ಮೆಟ್ರೋ ಅಸ್ತಿತ್ವದಲ್ಲಿರುವ ಹಳಿಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಲಕ್ನೋ-ಕಾನ್ಪುರ, ಆಗ್ರಾ-ಮಥುರಾ ಮತ್ತು ತಿರುಪತಿ-ಚೆನ್ನೈನಂತಹ ಮಾರ್ಗಗಳಲ್ಲಿ ಸಂಚರಿಸಲಿದೆ. ಇದು ವಿಶಾಲವಾದ ಒಳಾಂಗಣ ಮತ್ತು ದೊಡ್ಡ ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದೆ. ಜತೆಗೆ ಪ್ರಸ್ತುತ ಚಾಲನೆಯಲ್ಲಿರುವ ಮೆಟ್ರೋ ರೈಲುಗಳಲ್ಲಿ ಲಭ್ಯವಿಲ್ಲದ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.‌ ಅಧಿಕಾರಿಗಳು ಈ ವರ್ಷವೇ ರೈಲು ಓಡಾಟ ಆರಂಭಿಸಲು ಸಾಧ್ಯವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಪ್ರಾರಂಭವಾದಾಗಿನಿಂದ ಭಾರತದ ಸೆಮಿ-ಹೈಸ್ಪೀಡ್ ರೈಲು ಪ್ರಯಾಣದಲ್ಲಿ ಹಲವು ಸುಧಾರಣೆ ಕಂಡು ಬಂದಿದೆ. ಸದ್ಯ ವಂದೇ ಭಾರತ್‌ ಮೆಟ್ರೋ ಕೂಡ ಈ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎನ್ನುವ ನಿರೀಕ್ಷೆ ಇದೆ.

ಇದನ್ನೂ ಓದಿ: PM Narendra Modi: ಬೆಂಗಳೂರು- ಕಲಬುರಗಿ, ಮೈಸೂರು- ಚೆನ್ನೈ ಸೇರಿ 10 ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಲು ಪ್ರಧಾನಿ ಸೂಚನೆ

ರೈಲು ಪ್ರಯಾಣದಲ್ಲಿನ ಸುರಕ್ಷತೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2014ರಿಂದ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಸುರಕ್ಷತೆಗೆ ಸಂಬಂಧಿಸಿದ ಕೆಲಸಗಳಿಗಾಗಿ ಮೀಸಲಾದ ನಿಧಿಯನ್ನು ರಚಿಸುವುದು, ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕುವುದು, ಹಳಿಗಳ ನವೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು ಮತ್ತು ಸುರಕ್ಷಿತ ಪ್ರಯಾಣಿಕರ ಬೋಗಿಗಳ ಟ್ರ್ಯಾಕ್ ರೋಲ್ ಔಟ್ ಅನ್ನು ಹೆಚ್ಚಿನ ವೇಗದಲ್ಲಿ ಆಧುನೀಕರಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.

Exit mobile version