Site icon Vistara News

ನಿಮ್ಮ ಒನ್‌ಲೈನರ್‌ಗಳೇ ವಿನ್‌ ಲೈನರ್‌ಗಳು, ಉಪರಾಷ್ಟ್ರಪತಿ ನಾಯ್ಡುಗೆ ಭಾವುಕ ವಿದಾಯ ಕೋರಿದ ರಾಜ್ಯಸಭೆ

modi11

ನವದೆಹಲಿ: ಐದು ವರ್ಷಗಳೆ ಕಾಲ ಉಪರಾಷ್ಟ್ರಪತಿಯಾಗಿ ರಾಷ್ಟ್ರವನ್ನು ಮುನ್ನಡೆಸಿದ ವೆಂಕಯ್ಯ ನಾಯ್ಡು ಅವರಿಗೆ ಸೋಮವಾರ ರಾಜ್ಯಸಭೆಯಲ್ಲಿ ಭಾವುಕ ಬೀಳ್ಕೊಡುಗೆಯ ಕ್ಷಣ. ಪ್ರಧಾನಿ ನರೇಂದ್ರ ಮೋದಿ, ಮೇಲ್ಮನೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ವೆಂಕಯ್ಯ ನಾಯ್ಡು ಅವರ ಶಕ್ತಿ ಮತ್ತು ಪ್ರೀತಿಯನ್ನು ನೆನಪು ಮಾಡಿಕೊಂಡರು. ಒಮ್ಮೆ ಭಾವುಕತೆ, ಇನ್ನೊಮ್ಮೆ ತಿಳಿಹಾಸ್ಯದ ಮೂಲಕ ಮಾತುಗಳ ಮುತ್ತು ಕಟ್ಟಿ ನಿರ್ಗಮಿಸುತ್ತಿರುವ ಉಪರಾಷ್ಟ್ರಪತಿಗಳಿಗೆ ಗೌರವ ನೀಡಲಾಯಿತು.

ಇವತ್ತು ನಾವು ರಾಜ್ಯಸಭೆ ಅಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕಾರ ಮುಕ್ತಾಯವಾಗುತ್ತಿರುವ ಕ್ಷಣದಲ್ಲಿ ಧನ್ಯವಾದ ಹೇಳಲು ಸೇರಿದ್ದೇವೆ. ಸದನಕ್ಕೆ ಇದೊಂದು ಭಾವನಾತ್ಮಕ ಕ್ಷಣ. ಸದನದಲ್ಲಿ ಹಲವು ಐತಿಹಾಸಿಕ ಕ್ಷಣಗಳು ಅವರ ಗೌರವಪೂರ್ವಕ ಉಪಸ್ಥಿತಿಯಲ್ಲಿ ಸಂಭವಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ʻʻನಾನು ರಾಜಕೀಯದಿಂದ ನಿವೃತ್ತನಾಗಿದ್ದೇನೆ ಅಷ್ಟೆ. ಸಾರ್ವಜನಿಕ ಬದುಕಿನಿಂದ ಅಲ್ಲ ಅಂತ ನೀವೇ ಹಲವು ಬಾರಿ ಹೇಳಿಕೊಂಡಿದ್ದೀರಿ. ಹೀಗಾಗಿ ಈ ಸದನದಲ್ಲಿನ ನಿಮ್ಮ ಜವಾಬ್ದಾರಿ ಮಾತ್ರ ಮುಗಿದಿದೆ. ನನ್ನಂತೆ ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳು ಮತ್ತು ಜನರು ನಿಮ್ಮ ಅನುಭವಗಳ ಲಾಭಗಳನ್ನು ಪಡೆಯುತ್ತಲೇ ಇರುತ್ತಾರೆʼʼ ಎಂದು ಹೇಳಿದರು ಮೋದಿ.

ʻʻನೀವು ಹೇಳುವ ಒನ್‌ ಲೈನರ್‌ಗಳು ವಿಟ್‌ ಲೈನರ್‌ಗಳು(ಹಾಸ್ಯೋಕ್ತಿಗಳು). ಆದರೆ, ಅವುಗಳು ವಿನ್‌ ಲೈನರ್‌ಗಳು (ಮನಗೆಲ್ಲುವ ಮಾತುಗಳು) ಕೂಡಾ. ನಿಮ್ಮ ಪ್ರತಿ ಮಾತನ್ನೂ ಎಲ್ಲರೂ ಕೇಳಿದ್ದಾರೆ, ಆದ್ಯವಾಗಿ ನೋಡಿದ್ದಾರೆ. ಗೌರವಿಸಿದ್ದಾರೆ, ಯಾರೊಬ್ಬರೂ ಅದಕ್ಕೆ ಪ್ರತಿ ನುಡಿದಿಲ್ಲʼʼ ಎಂದು ಮೋದಿ ನೆನಪಿಸಿಕೊಂಡರು.

ಉಳಿದ ಕೆಲಸ ಮುಂದುವರಿಸುತ್ತೇವೆ
ʻʻಎಲ್ಲ ಪ್ರಮುಖ ರಾಜ್ಯಗಳಲ್ಲಿ ಮೇಲ್ಮನೆ ಇರಬೇಕು. ಈ ಬಗ್ಗೆ ಒಂದು ರಾಷ್ಟ್ರೀಯ ನೀತಿ ಇರಬೇಕು ಎಂದು ಪ್ರತಿಪಾದಿಸಿದವರು ನೀವು. ಮಹಿಳಾ ಮೀಸಲಾತಿ ಸೇರಿದಂತೆ ಇತರ ವಿಚಾರಗಳ ಬಗ್ಗೆ ಸಹಮತದ ಅಗತ್ಯವನ್ನು ಒತ್ತಿ ಹೇಳಿದ್ದೀರಿ. ಸರಕಾರ ನಿಮ್ಮ ಕಲ್ಪನೆಯಲ್ಲಿರುವ ಉಳಿದ ಕೆಲಸಗಳನ್ನು ಮುಂದುವರಿಸುತ್ತದೆ ಎಂದು ಭಾವಿಸುತ್ತೇನೆʼʼ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಭಿನ್ನಮತವಿದ್ದರೂ ಹೇಳೋ ಸಮಯವಲ್ಲ
ʻʻನಾವಿಬ್ಬರೂ ಬೇರೆ ಬೇರೆ ಸಿದ್ದಾಂತಗಳಿಗೆ ಸೇರಿದವರಾಗಿರಬಹುದು. ನಿಮ್ಮ ಬಗ್ಗೆ ನನಗೆ ಕೆಲವು ದೂರುಗಳು ಇರಬಹುದು. ಅದರ ಬಗ್ಗೆ ಮಾತನಾಡುವ ಹೊತ್ತು ಇದಲ್ಲ. ನೀವು ಅತ್ಯಂತ ಕಷ್ಟಕರವಾದ ಮತ್ತು ಒತ್ತಡದ ಸಮಯದಲ್ಲಿ ಪಾತ್ರವನ್ನು ನಿಭಾಯಿಸಿದ್ದೀರಿ. ಅದಕ್ಕಾಗಿ ಧನ್ಯವಾದ ಎಂದು ಖರ್ಗೆ ಹೇಳಿದರು.

Exit mobile version