Site icon Vistara News

video viral | ಈ ಮಕ್ಕಳು ಶಾಲೆಗೆ ಹೋಗಬೇಕು ಎಂದರೆ ಅಪ್ಪ-ಅಮ್ಮ ಹೆಗಲಲ್ಲಿ ಹೊತ್ತು ನದಿ ದಾಟಿಸಬೇಕು

kids school

ನಾಸಿಕ್:‌ ರಾಜ್ಯಗಳನ್ನು ಅಥವಾ ದೇಶಗಳನ್ನು ಬೆಸೆಯುವ ಹೆದ್ದಾರಿ, ಸುರಂಗ ಅಥವಾ ಸೇತುವೆಗಳ ಬಗ್ಗೆ ನಾವಿಂದು ಮಾತಾಡುವ ಕಾಲದಲ್ಲಿದ್ದೇವೆ. ಆದರೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಈ ಊರಿನ ಜನ ನದಿಯನ್ನೂ ದಾಟಲಾರದೆ, ಮಳೆಗಾಲದಲ್ಲಿ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುವ ಅವಸ್ಥೆಯಲ್ಲಿ ತಲತಲಾಂತರದಿಂದ ಬದುಕಿದ್ದಾರೆ.

ಇಲ್ಲಿನ ಪೇಠ್‌ ತಾಲೂಕಿನ ಸುಖಿ ನದಿಯ ದಂಡೆಯ ಮೇಲಿನ ಈ ಸಣ್ಣ ಊರಿನ ಜನಗಳ ಬವಣೆ ಈವರೆಗೆ ಯಾವ ಜನನಾಯಕರನ್ನೂ ಕಾಡಿದ್ದಿಲ್ಲ. ಮಳೆಗಾಲದಲ್ಲಿ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುವುದು ಹಾಗಿರಲಿ, ಉಳಿದ ದಿನಗಳಲ್ಲೂ ಊರಿನಿಂದ ಹೊರಗೆ ಬರಬೇಕೆಂದರೆ ಆಳವಾದ ಸುಖಿ ನದಿಯನ್ನು ಈಜಿಯೇ ದಾಟಬೇಕು, ಹೊರತೂ ಬೇರೆ ದಾರಿಯಿಲ್ಲ.

ಊರಿನ ಮಕ್ಕಳು ಶಾಲೆಗೆ ಹೋಗುವಾಗಲಂತೂ ಇನ್ನಿಲ್ಲದ ಫಜೀತಿ. ಒಂದೋ ಅವರ ಹಿರಿಯರು ಬೆನ್ನ ಮೇಲೋ ಅಥವಾ ಹೆಗಲಿಗೋ ಏರಿಸಿಕೊಂಡು ಮಕ್ಕಳನ್ನು ವರ್ಷವಿಡೀ ನದಿ ದಾಟಿಸಬೇಕು ಅಥವಾ ದೊಡ್ಡ ಕಡಾಯಿಯಂಥ ಪಾತ್ರಗಳ ನೆರವು ಪಡೆಯಬೇಕು. ನದಿಯ ಸಾಮಾನ್ಯ ಹರಿವಿನಲ್ಲಿಯೇ ಈ ಅವಸ್ಥೆಯಾದರೆ, ಮಳೆಗಾಲದಲ್ಲಿ ನದಿ ತುಂಬಿದರಂತೂ ಕೇಳುವುದೇ ಬೇಡ. ನದಿಯಿಂದ ನೀರು ಬಿಟ್ಟರಂತೂ ಸುತ್ತೆಲ್ಲಾ ಪೂರಾ ಪ್ರವಾಹ. ತಿಂಗಳುಗಟ್ಟಲೆ ಗ್ರಾಮದಿಂದ ಹೊರಗೆ ಬರುವುದು ದುಸ್ತರ. ಮಕ್ಕಳ ಶಾಲೆ, ಪಾಠ-ಪ್ರವಚನಗಳೂ ಹೊಳೆಯಲ್ಲಿ ಹೋಮ ಮಾಡಿದಂತಾಗುತ್ತವೆ.

ಇತ್ತೀಚೆಗೆ ವೈರಲ್‌ ಆದ ವಿಡಿಯೊ ಒಂದರಲ್ಲಿ ಇಲ್ಲಿನ ಜನರ, ಮಕ್ಕಳ ಬವಣೆಯ ದರ್ಶನವಾಗಿದೆ. ಯುನಿಫಾರ್ಮ್‌ ಧರಿಸಿಕೊಂಡು, ಬೆನ್ನಲ್ಲಿ ಬ್ಯಾಗ್‌ ಹಾಕಿಕೊಂಡಿರುವ ಮಕ್ಕಳನ್ನು ಅವರ ಹೆತ್ತವರು ತಮ್ಮ ಹೆಗಲಲ್ಲಿ ಕೂರಿಸಿಕೊಂಡು ನದಿ ದಾಟಿಸುವ ದೃಶ್ಯಗಳಿವೆ.

ʻನದಿ ಆಳವಿದೆ. ಆದರೆ ಮಕ್ಕಳು ಶಾಲೆಗೂ ಹೋಗಬೇಕಲ್ಲ. ಹಾಗಾಗಿ ಇಂಥ ಮಾರ್ಗಗಳನ್ನು ಅನುಸರಿಸುವುದು ಅನಿವಾರ್ಯ. ನಮಗೊಂದು ಸೇತುವೆ ಕಲ್ಪಿಸಿಕೊಡಿ ಎಂದು ಬಹಳಷ್ಟು ಬಾರಿ ಮನವಿ ಮಾಡಿದ್ದೇವೆʼ ಎನ್ನುತ್ತಾರೆ ಸ್ಥಳೀಯರು. ಈ ಅವಸ್ಥೆಯಿಂದಾಗಿ ಕೆಲವು ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವ ಸಾಹಸಕ್ಕೇ ಮುಂದಾಗುತ್ತಿಲ್ಲ.

ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲೂ ಎಷ್ಟೋ ವರ್ಷಗಳಿಂದ ಜನನಾಯಕರು ನೀಡುತ್ತಿರುವುದು ಒಂದೇ ಭರವಸೆ- ಸೇತುವೆ ಕಲ್ಪಿಸಿಕೊಡುತ್ತೇವೆ. ಸಂಸದರು, ಶಾಸಕರಿಂದ ಹಿಡಿದು ಪಂಚಾಯತ್‌ ಸದಸ್ಯರವರೆಗೆ ಇದನ್ನೇ ಹೇಳುತ್ತಾ ಬಂದಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ತಮ್ಮನ್ನು ಮರೆಯುತ್ತಾರೆ ಎಂಬುದು ಗ್ರಾಮಸ್ಥರ ಅಳಲು.

ಇದನ್ನೂ ಓದಿ| Viral Video | ಗೋವಿಗೆ ಅಮ್ಮ ಎಂದು ಸುಮ್ಮನೆ ಹೇಳೋಲ್ಲ; ಈ ದೃಶ್ಯಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ

Exit mobile version