Site icon Vistara News

video viral: ಇದೇ ತರ ಹೊಟ್ಟೆ ಬೆಳೆದ್ರೆ ಏನಾಗ್ತದೆ ನೋಡು.. ಮಮತಾ ಬ್ಯಾನರ್ಜಿ ಹೀಗೂ ಜೋಕ್‌ ಮಾಡ್ತಾರಾ?

ಮಮತಾ ಬ್ಯಾನರ್ಜಿ

ಕೋಲ್ಕೊತಾ: ಮಮತಾ ಬ್ಯಾನರ್ಜಿ ಎಂಬ ಹೆಸರು ಕೇಳಿದ ಕೂಡಲೇ ಬುಸುಗುಟ್ಟುವ ಹಾವು ನೆನಪಾಗುತ್ತದೆ. ಸಾರ್ವಜನಿಕ ಸಭೆಗಳಲ್ಲಿ ಅವರು ತೋರಿಸುವ ದರ್ಪ, ಸದಾ ಗಂಟಿಕ್ಕಿಕೊಂಡಿರುವ ಮುಖ, ದುಡು ದುಡು ನಡಿಗೆ ಅವರ ಬಗ್ಗೆ ಬೇರೆಯೇ ಆದ ಕಲ್ಪನೆ ಮೂಡಿಸುತ್ತದೆ. ಆದರೆ, ಅವರು ಜೋಕ್‌ ಮಾಡಬಲ್ಲರು, ಕಾರ್ಯಕರ್ತರ ಜತೆ ಖುಷಿಯಾಗಿ ಮಾತಾಡಬಲ್ಲರು, ಅವರ ಯೋಗ ಕ್ಷೇಮವನ್ನು ಪ್ರೀತಿಯಿಂದ ವಿಚಾರಿಸಿಕೊಳ್ಳಬಲ್ಲರು ಅನ್ನುವ ಸಂಗತಿ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇದೀಗ ವೈರಲ್‌ ಆಗಿರುವ ಒಂದು ವಿಡಿಯೊ (video viral) ಮಮತಾ ಅವರ ಇನ್ನೊಂದು ಮುಖವನ್ನು ಪರಿಚಯಿಸಿದೆ. ಮೋದಿ ಎಂದಾಗ ಗುಡುಗುವ ಈ ಹೆಣ್ಮಗಳು ಕಾರ್ಯಕರ್ತರ ಜತೆ ಪಕ್ಕಾ ಮನೆ ಮಗಳ ಹಾಗೂ ಇರ್ತಾರೆ ಅನ್ನೋದಕ್ಕೆ ಇದು ಒಂದು ಪುರಾವೆ. ಪಶ್ಚಿಮ ಬಂಗಾಳದ ಜನ ಅವರನ್ನು ಯಾಕಿಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೂ ಇದನ್ನೊಂದು ರೂಪಕವಾಗಿ ಪರಿಗಣಿಸಬಹುದು.

ಇತ್ತೀಚೆಗೆ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ಜತೆ ಮಮತಾ ಬ್ಯಾನರ್ಜಿ ನಡೆಸಿದ ಮೀಟಿಂಗ್‌ನ ಒಂದು ದೃಶ್ಯ ಇದು. ಸುಮಾರು 60 ವರ್ಷದ ಕಾರ್ಯಕರ್ತರೊಬ್ಬರು ಮಾತನಾಡಲು ಎದ್ದು ನಿಂತಾಗ ಅವರ ದೊಡ್ಡ ಹೊಟ್ಟೆಯನ್ನು ನೋಡಿ ಮಮತಾ ಆಡುವ ಮಾತು, ಕೇಳುವ ಪ್ರಶ್ನೆಗಳು ಬಹಳ ಇಂಟ್ರೆಸ್ಟಿಂಗ್‌ ಆಗಿವೆ. ಮುನ್ಸಿಪಾಲಿಟಿ ಸದಸ್ಯರಾಗಿರುವ ಈ ವ್ಯಕ್ತಿ 125 ಕೆಜಿ ಇದ್ದಾರಂತೆ.

ಕಾರ್ಯಕರ್ತರು ಏನೋ ಮಾತನಾಡಲು ಹೊರಟಾಗ ಮಧ್ಯದಲ್ಲೇ ತಡೆದು ನಿಲ್ಲಿಸಿದ ಮಮತಾ ಬ್ಯಾನರ್ಜಿ, ʻʻನಿಮ್ಮ ಹೊಟ್ಟೆ ಬೆಳೆಯುತ್ತಿರುವ ರೀತಿ ನೋಡಿದ್ರೆ ನೀವು ಯಾವುದೇ ಟೈಮಲ್ಲಿ ಬಿದ್ದೋಗ್ಬೋದು ಅನಿಸ್ತದೆ, ಏನೂ ಹುಷಾರಿಲ್ವಾ ನಿಮ್ಗೆ?ʼ ಅಂತ ಪ್ರಶ್ನಿಸುತ್ತಾರೆ.

ಇದನ್ನು ಸ್ಪೋರ್ಟಿವ್‌ ಆಗಿ ಸ್ವೀಕರಿಸುವ ಕಾರ್ಯಕರ್ತ ʻನಂಗೆ ಶುಗರೂ ಇಲ್ಲ, ಬಿಪಿಯೂ ಇಲ್ಲʼ ಅಂತಾರೆ. ಮುಂದೆ ಸ್ವಲ್ಪ ಹೊತ್ತು ತಾನು ಹೇಗೆಲ್ಲ ವರ್ಕೌಟ್‌ ಮಾಡ್ತಾ ಇದ್ದೇನೆ ಎನ್ನುವುದನ್ನು ವಿವರಿಸುತ್ತಾರೆ. ಆದರೆ, ಮಮತಾ ಬ್ಯಾನರ್ಜಿ ಅಷ್ಟಕ್ಕೆ ಬಿಡುವುದೇ ಇಲ್ಲ!

ಕಾರ್ಯಕರ್ತರ ಮಾತನ್ನು ಆಸಕ್ತಿಯಿಂದ ಆಲಿಸುವ ಮಮತಾ, ʻʻಏನೋ ಸಮಸ್ಯೆ ಇದೆ ಅನಿಸ್ತದೆ ನಂಗೆ. ಅದಲ್ಲವಾದರೆ ನಿಮಗೆ ಅಷ್ಟು ದೊಡ್ಡ ಮಧ್ಯಪ್ರದೇಶ ಇರೋಕೆ ಹೇಗೆ ಸಾಧ್ಯʼ ಅಂತಾರೆ. ಹೊಟ್ಟೆಯ ಭಾಗ ದೊಡ್ಡದಾಗಿದೆ ಎಂದು ಹೇಳಲು ರಾಜ್ಯದ ಹೆಸರು ಬಳಸಿ ಪನ್‌ ಮಾಡುತ್ತಾರೆ. ಮಾತ್ರವಲ್ಲ ಪಾಟೀ ಸವಾಲು ಮುಂದುವರಿಯುತ್ತದೆ!

ಅವರ ಮಾತುಕತೆ ಹೀಗೆ ಮುಂದುವರಿಯುತ್ತದೆ.

ಮಮತಾ: ವಾಕ್‌ ಮಾಡ್ತೀರಾ?
ಕಾರ್ಯಕರ್ತ: ಪ್ರತಿ ದಿನ
ಮಮತಾ: ತುಂಬ ತಿನ್ತೀರೇನೋ?
ಕಾರ್ಯಕರ್ತ: ಬೆಳಗ್ಗೆ ಪಕೋಡ ತಿಂದೆ.. ಅದೊಂದು ನಂಗೆ ಅಭ್ಯಾಸ
ಮಮತಾ: ದಿನವೂ ಪಕೋಡ ತಿನ್ನೋದು ಯಾಕೆ ನೀವು? ಹೀಗೆ ಮಾಡಿದ್ರೆ ಯಾವತ್ತೂ ತೂಕ ಕಡಿಮೆ ಆಗಲ್ಲ ನೋಡಿ. (ಆಗೋದೇ ಇಲ್ಲ ಅನ್ನೋ ತರ ತಲೆಯನ್ನು ಆಡಿಸುತ್ತಾ)
ಕಾರ್ಯಕರ್ತ: ಆದರೆ, ನಾನು ಪ್ರತಿ ದಿನ ಮೂರು ಗಂಟೆ ವ್ಯಾಯಾಮ ಮಾಡ್ತೇನೆ ಮೇಡಂ
ಮಮತಾ: ಹೌದಾ, ಹಾಗಿದ್ದರೆ ಏನು ವ್ಯಾಯಾಮ.. ಮಾಡಿ ನೋಡೋಣ.
ಕಾರ್ಯಕರ್ತ: ನಾನು ಪ್ರತಿ ದಿನ 1000 ಕಪಾಲಭಾತಿ ಮಾಡ್ತೀನಿ.
ಮಮತಾ: ಇದು ಸಾಧ್ಯವೇ ಇಲ್ಲ.. ಸಾಧ್ಯವೇ ಇಲ್ಲ. ನೀವು ನಂಗೆ 1000 ಕಪಾಲ ಭಾತಿ ಮಾಡಿ ತೋರಿಸಿದ್ರೆ ಈ ಕೂಡಲೇ ನಿಮಗೆ 10000 ರೂಪಾಯಿ ಕೊಡ್ತೀನಿ. ಸಾಧ್ಯವೇ ಇಲ್ಲ. ನನ್ನ ಪ್ರಕಾರ ನಿಮಗೆ ಉಚ್ಛಾಸ, ನಿಶ್ವಾಸ ಮಾಡೋದು ಹೇಗಂತಾನೇ ಗೊತ್ತಿಲ್ಲ.

ಹೀಗೆ ಸಾಗಿತ್ತು ಪಾಟೀಸವಾಲು. ಒಟ್ಟಾರೆ ಮಾತುಕತೆ ಸಭೆಯಲ್ಲಿ ವಿದ್ಯುತ್ಸಂಚಾರ ಮೂಡಿಸಿತ್ತು.

ಇದನ್ನೂ ಓದಿ| ಕೇಸರಿ ಪಡೆ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿ: ಬಿಜೆಪಿಯೇತರ ಸಿಎಂಗಳಿಗೆ ದೀದಿ ಪತ್ರ

Exit mobile version