ಬಿಹಾರ: ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರನ್ನು ಹತ್ಯೆ ಮಾಡಿದ ಕೆಲವೇ ದಿನಗಳಲ್ಲಿ ಬಿಹಾರದಲ್ಲೂ (Bihar) ರಾಜಕೀಯ ಪ್ರೇರಿತ ಹಿಂಸಾಚಾರ ನಡೆದಿದೆ. ವಿಕಾಸಶೀಲ ಇನ್ಸಾನ್ ಪಕ್ಷದ (VHP) ಮುಖ್ಯಸ್ಥ ಮುಕೇಶ್ ಸಹಾನಿ (Mukesh Sahani) ಅವರ ತಂದೆ ಜಿತನ್ ಸಹಾನಿ (Jitan Sahani) ಅವರನ್ನು ಮನೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ದರ್ಭಾಂಗದಲ್ಲಿರುವ ಜಿತನ್ ಸಹಾನಿ ಅವರ ಮನೆಗೆ ಸೋಮವಾರ (ಜುಲೈ 15) ರಾತ್ರಿ ನುಗ್ಗಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮುಕೇಶ್ ಸಹಾನಿ ಅವರು ವಿಐಪಿ ಪಕ್ಷದ ಮುಖ್ಯಸ್ಥರಾಗಿದ್ದು, ಮಲ್ಲಾಹ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರು ಇದಕ್ಕೂ ಮೊದಲು ಬಿಹಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಖಾತೆ ಸಚಿವರಾಗಿದ್ದರು. ಮಲ್ಲಾಹ್ ಸಮುದಾಯದವರ ಬೆಂಬಲವು ಮುಕೇಶ್ ಸಹಾನಿ ಅವರಿಗಿದೆ. ಇದೇ ರಾಜಕೀಯ ಕಾರಣದಿಂದಾಗಿ ಮುಕೇಶ್ ಸಹಾನಿ ಅವರ ತಂದೆಯನ್ನು ಮನೆಯಲ್ಲಿಯೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜಿತನ್ ಸಹಾನಿ ಅವರು ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ
Bihar | Vikassheel Insaan Party (VIP) chief Mukesh Sahani's father was killed at his residence in Darbhanga last night; Probe underway, say local police.
— ANI (@ANI) July 16, 2024
ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಚೆನ್ನೈನ ಪೆರಂಬೂರ್‌ನಲ್ಲಿರುವ ಸದಯಪ್ಪನ್ ಸ್ಟ್ರೀಟ್‌ನಲ್ಲಿರುವ ಅವರ ನಿವಾಸದ ಬಳಿ ಜುಲೈ 5ರಂದು ಸಂಜೆ 7.30ರ ವೇಳೆಗೆ ಸುಮಾರು 6 ಜನರ ಗ್ಯಾಂಗ್ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆರ್ಮ್‌ಸ್ಟ್ರಾಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಉಪಯೋಗ ಆಗಲಿಲ್ಲ. ದಾಳಿಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿತ್ತು.
ತಮಿಳುನಾಡು ಬಿಎಸ್‌ಪಿ ಘಟಕದ ಅಧ್ಯಕ್ಷರಾಗಿದ್ದ ಆರ್ಮ್‌ಸ್ಟ್ರಾಂಗ್ ಅವರು ಇದಕ್ಕೂ ಮೊದಲು ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಕೌನ್ಸಿಲರ್ ಆಗಿದ್ದರು. ಚುನಾವಣಾ ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಳ್ಳದ ಆರ್ಮ್‌ಸ್ಟ್ರಾಂಗ್ ಅವರು ರಾಜ್ಯದಲ್ಲಿ ದಲಿತರ ಪರ ಚಿಂತಕ, ಅಂಬೇಡ್ಕರ್‌ವಾದಿ ಎಂಬುದಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದರು. ಹಾಗಾಗಿ, ಆರ್ಮ್‌ಸ್ಟ್ರಾಂಗ್ ಅವರು ರಾಜಕೀಯದಲ್ಲಿ ಹೆಚ್ಚಿನ ಶತ್ರುಗಳನ್ನು ಹೊಂದಿರಲಿಲ್ಲ. ಪ್ರಕರಣದ ಕುರಿತು ಈಗಲೂ ತನಿಖೆ ನಡೆಯುತ್ತಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ: Arvind Kejriwal: “ಜೈಲಿನಲ್ಲಿ ಕೇಜ್ರಿವಾಲ್ ಹತ್ಯೆಗೆ ಸಂಚು”- ಸಂಚಲನ ಮೂಡಿಸ್ತಿದೆ ಆಪ್ ಆರೋಪ