Site icon Vistara News

Viral News: ಗ್ವಾಲಿಯರ್‌ನ ಮನೆಗೆ ಬಂತು 3419 ಕೋಟಿ ರೂ. ಕರೆಂಟ್‌ ಬಿಲ್‌, ಶಾಕ್‌ಗೆ ಒಳಗಾದ ವ್ಯಕ್ತಿ ಆಸ್ಪತ್ರೆಗೆ!

power bill

ಗ್ವಾಲಿಯರ್‌: ಮಧ್ಯಪ್ರದೇಶದ ಗ್ವಾಲಿಯರ್‌ನ ಒಂದು ಮನೆಗೆ ೩೪೧೯ ಕೋಟಿ ರೂ. ಬಿಲ್‌ ಬಂದಿದೆ. ಇದನ್ನು ನೋಡಿ ಆ ಮನೆಯ ಹಿರಿಯರೊಬ್ಬರಿಗೆ ನಿಜಕ್ಕೂ ಶಾಕ್‌ ಆಗಿದೆ. ಹೃದಯಾಘಾತಕ್ಕೆ ಒಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದಿದೆ. ಆಗಲೇಬೇಕು ಅಲ್ವಾ? ತಿಂಗಳಿಗೆ ೧೦೦೦-೧೨೦೦ ರೂ. ಬಿಲ್‌ ಬರ್ತಾ ಇದ್ದ ಮನೆಗೆ ಒಮ್ಮೆಗೇ ೩೪೧೯ ಕೋಟಿ ರೂ. ಬಿಲ್‌ ಬಂದಿದೆ ಎಂದರೆ ಏನಾಗಬೇಡಾ? ಮನೆಯವರು ಕೂಡಾ ಏನಿದು ಅಂತ ಚೆಕ್‌ ಮಾಡಿಸಿದ್ದಾರೆ. ಆಗ ಇಲ್ಲ ಬಿಲ್‌ ಸರಿಯಾಗಿದೆ ಎಂಬ ಉತ್ತರವೇ ಬಂದಿದೆ!

ಮಧ್ಯ ಪ್ರದೇಶ ಸರಕಾರಕ್ಕೆ ಸೇರಿದ ಮಧ್ಯ ಪ್ರದೇಶ ಕ್ಷೇತ್ರ ವಿದ್ಯುತ್‌ ವಿತರಣ ಕಂಪನಿಯಿಂದ ಶಾಕ್‌ ನೀಡುವ ಈ ಬಿಲ್‌ ಪಡೆದವರು ಗ್ವಾಲಿಯರ್‌ ನಿವಾಸಿ ಪ್ರಿಯಾಂಕಾ ಗುಪ್ತಾ. ಶಿವವಿಹಾರ ಕಾಲೊನಿಯಲ್ಲಿ ವಾಸಿಸುತ್ತಿರುವ ಇವರ ಮನೆಗೆ ಬಂದ ಬಿಲ್‌ನ್ನು ಮೊದಲು ನೋಡಿದ್ದು ಪ್ರಿಯಾಂಕಾ ಅವರ ಮಾವ. ಅವರಿಗೆ ಏನಪ್ಪಾ ಇದು ಅನಿಸಿದ್ದಷ್ಟೇ ಅಲ್ಲ ಸಣ್ಣಗೆ ಹೃದಯಾಘಾತವೂ ಆಯಿತು. ಬರೀ ಗೃಹ ಬಳಕೆಗೆ ಇಷ್ಟೊಂದು ದೊಡ್ಡ ಬಿಲ್ಲೇ ಎಂದು ಅವರು ಅಲ್ಲೇ ಕುಸಿದರು. ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಪ್ರಿಯಾಂಕಾ ಗುಪ್ತಾ ಅವರ ಪತಿ ಸಂಜೀವ್‌ ಕಂಕಾಣೆ ಹೇಳಿದ್ದಾರೆ.

ಇದುವೇ ಕೋಟಿ ಬಿಲ್‌!

ಇದೇ ಜುಲೈ ತಿಂಗಳ ೨೦ನೇ ತಾರೀಖಿನಂದು ನೀಡಲಾದ ಈ ಬಿಲ್‌ನಲ್ಲಿ ೩,೪೧೯ ಕೋಟಿ ರೂ. ಹಣವನ್ನು ಪಾವತಿಸಲು ಸೂಚಿಸಲಾಗಿದೆ. ಅಂದಹಾಗೆ, ೨೦೨೨-೨೩ನೇ ಸಾಲಿನ ಇಡೀ ಗ್ವಾಲಿಯರ್‌ ನಗರದ ಅಂದಾಜು ಅಯವ್ಯಯ ಮೊತ್ತ ೧,೩೮೮ ಕೋಟಿ ರೂ.ಗಳು! ಅದೂ ಅಲ್ಲದೆ ಒಂದು ವಾರದೊಳಗೆ ಕಟ್ಟಲೇಬೇಕು ಎಂಬ ಸೂಚನೆ ಬೇರೆ. ಕಂಕಾಣೆ ಅವರು ಕೂಡಲೇ ಪೋರ್ಟಲ್‌ನಲ್ಲಿ ಚೆಕ್‌ ಮಾಡಿದರು. ಅಲ್ಲೂ ಅಷ್ಟೇ ಬಿಲ್‌ ಎಂಟ್ರಿ ಆಗಿತ್ತು.

ಆಗ ಕಂಕಾಣೆ ಅವರು ಮೊದಲು ತಂದೆಯನ್ನು ಆಸ್ಪತ್ರೆಗೆ ಸೇರಿಸಿದರೆ ಬಳಿಕ ಕೂಡಲೇ ವಿದ್ಯುತ್‌ ಕಂಪನಿಗೆ ಲಗ್ಗೆ ಇಟ್ಟರು. ಅಲ್ಲಿ ಹೋಗಿ ನೋಡಿದಾಗ ಇದು ಎಂಟ್ರಿ ಮಾಡಿದಾಗ ಮಾಡಿರುವ ತಪ್ಪು. ಸಂಬಂಧಿತ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳ್ಳಲಾಗುವುದು ಎಂದು ತಿಳಿಸಲಾಯಿತು.

ಹಾಗಿದ್ದರೆ ಆಗಿದ್ದೇನು?
೩೪೧೯ ಕೋಟಿ ರೂ.ಯ ಬಿಲ್‌ ಜನರೇಟ್‌ ಆಗಿದ್ದು ನಿಜ. ಪರಿಶೀಲಿಸಿದಾಗಲೂ ಅಷ್ಟೇ ಬಂದಿದೆ. ಹಾಗಿದ್ದರೆ ತಪ್ಪಾಗಿದ್ದು ಎಲ್ಲಿ? ತಪ್ಪಾಗಿದ್ದು ಎಲ್ಲಿ ಎಂದರೆ, ಬಿಲ್‌ ಎಂಟ್ರಿ ಮಾಡುವ ವ್ಯಕ್ತಿ ಸಾಫ್ಟ್‌ ವೇರ್‌ನಲ್ಲಿ ಬಳಸಿದ ಯುನಿಟ್‌ಗಳ ಸಂಖ್ಯೆ ಹಾಕುವ ಬದಲು ಗ್ರಾಹಕ ಸಂಖ್ಯೆಯನ್ನೇ ನಮೂದಿಸಿಬಿಟ್ಟಿದ್ದ! ಕೊನೆಗೆ ಮೀಟರ್‌ ಚೆಕ್‌ ಮಾಡಿ ಹೊಸದಾಗಿ ಎಂಟ್ರಿ ಮಾಡಿದಾಗ ಬಿಲ್‌ ಕೇವಲ ೧೩೦೦ ರೂ. ಎಂದು ತಿಳಿದುಬಂತು.

ಆದರೆ, ಅಷ್ಟು ಹೊತ್ತಿಗೆ ಈ ಸುದ್ದಿ ವಿದ್ಯುತ್‌ ಪ್ರಸರಣ ನಿಗಮದ ಜನರಲ್‌ ಮ್ಯಾನೇಜರ್‌ ನಿತಿನ್‌ ಮಾಂಗ್ಲಿಕ್‌ ಅವರಿಗೆ ತಲುಪಿದೆ. ಕೊನೆಗೆ ರಾಜ್ಯದ ಇಂಧನ ಸಚಿವರಾಗಿರುವ ಪ್ರದ್ಯುಮ್ನ ಸಿಂಗ್‌ ಅವರು ಕೂಡಾ ಮಧ್ಯಪ್ರವೇಶಿಸಿದರು. ಆಗಿರು ಪ್ರಮಾದಕ್ಕೆ ಕ್ಷಮೆ ಯಾಚಿಸಿದರು. ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದನ್ನೂ ಓದಿ| Viral Video: ಕಬಡ್ಡಿ ಆಡುತ್ತಿದ್ದಾಗಲೇ ಹೋಯ್ತು ಆಟಗಾರನ ಜೀವ; ಮನ ಕಲಕುವ ದೃಶ್ಯ ಇದು

Exit mobile version