ಪಾಟ್ನಾ: ಮಾತೃಭಾಷೆ ವರ್ಸಸ್ ಇಂಗ್ಲಿಷ್ ಸಮರ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಇದೀಗ ಇಂಗ್ಲಿಷ್‌ನಲ್ಲಿ ಮಾತನಾಡಿದ ರೈತನೊಬ್ಬನಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ತರಾಟೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ ಕೂಡ.
ಇದನ್ನೂ ಓದಿ: Nitish Kumar | ಹೆಂಗಸರು ಅಶಿಕ್ಷಿತರು, ಗಂಡಸರು ಸುಮ್ಮನಿರಲ್ಲ, ಹೀಗಾದ್ರೆ ಜನಸಂಖ್ಯೆ ನಿಯಂತ್ರಣ ಆಗಲ್ಲ ಎಂದ ನಿತೀಶ್ ಕುಮಾರ್!
ಇತ್ತೀಚೆಗೆ ಪಾಟ್ನಾ ಬಾಪು ಸಭಾಗರ್ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ನಾಲ್ಕನೇ ಕೃಷಿ ಮಾರ್ಗಸೂಚಿ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಲಖಿಸರಾಯ್ ಮೂಲದ ರೈತ ಅಮಿತ್ ಕುಮಾರ್ ಸರ್ಕಾರದ ಕೃಷಿ ಯೋಜನೆಗಳಿಂದ ಪಡೆದ ಲಾಭದ ಬಗ್ಗೆ ಮಾತನಾಡುತ್ತಿದ್ದರು. ಸಿಎಂ ಅವರನ್ನು ಹೊಗಳುತ್ತಲೇ ಭಾಷಣ ಆರಂಭಿಸಿದ ಅವರು ತಾವೊಬ್ಬ ಎಂಬಿಎ ಪದವೀಧರರಾಗಿದ್ದು, ಪುಣೆಯಲ್ಲಿ ಸಿಕ್ಕಿದ್ದ ಕೆಲಸವನ್ನು ಬಿಟ್ಟು ತಮ್ಮ ತವರು ಜಿಲ್ಲೆಯಲ್ಲಿ ಅಣಬೆ ಕೃಷಿ ಮಾಡುತ್ತಿರುವ ಬಗ್ಗೆ ವಿವರಿಸಿದ್ದಾರೆ. ಅದಕ್ಕೆ ಧೈರ್ಯ ತುಂಬುವ ವಾತಾವರಣವನ್ನು ಸೃಷ್ಟಿಸಿದ್ದಕ್ಕಾಗಿ ಸಿಎಂ ಅವರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.
ಅಮಿತ್ ಮಾತನಾಡುವಾಗ ಹೆಚ್ಚಾಗಿ ಇಂಗ್ಲಿಷ್ ಪದಗಳನ್ನು ಬಳಸಿದ್ದಾರೆ. ಇದರಿಂದಾಗಿ ಅಸಮಾಧಾನಗೊಂಡ ಸಿಎಂ ನಿತೀಶ್ ಕುಮಾರ್, “ಇದೇನು ಇಂಗ್ಲೆಂಡ್ ದೇಶವೇ? ಇಲ್ಲೇಕೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಿದ್ದೀರಿ? ನೀವು ಬಿಹಾರದಲ್ಲಿದ್ದೀರಿ. ಸಾಮಾನ್ಯ ಜನರ ವೃತ್ತಿಯಾದ ಕೃಷಿಯನ್ನು ಅಭ್ಯಾಸ ಮಾಡುತ್ತಿದ್ದೀರಿ” ಎಂದು ಅಮಿತ್ ಅವರಿಗೆ ನೆನಪಿಸಿದ್ದಾರೆ.
ಹಾಗೆಯೇ ಕೊರೊನಾ ಲಾಕ್‌ಡೌನ್‌ಗಳ ಸಮಯದಲ್ಲಿ ಸ್ಮಾರ್ಟ್‌ಫೋನ್ ಚಟವು ಅನೇಕ ಜನರು ತಮ್ಮ ಸ್ವಂತ ಭಾಷೆಗಳನ್ನು ಮರೆತುಬಿಡಲು ಕಾರಣವಾಯಿತು ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: Tejashwi Yadav: ನಟಿ ಜತೆ ಬ್ಯಾಡ್ಮಿಂಟನ್ ಆಡಿ ಕ್ರೀಡೆಯ ಮಹತ್ವ ಸಾರಿದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್
ಇದಾದ ನಂತರ ಮಾತು ಮುಂದುವರಿಸಿದ ಅಮಿತ್, “government schemes” ಎಂದು ಇಂಗ್ಲಿಷ್ ಅಲ್ಲಿ ನುಡಿದಿದ್ದಾರೆ. ತಕ್ಷಣ ಅವರ ಮಾತನ್ನು ತಡೆಹಿಡಿದ ನಿತೀಶ್, “ಇದು ಏನು? ನಿಮಗೆ ಸರ್ಕಾರಿ ಯೋಜನೆ ಎಂದು ಹೇಳಲು ಆಗುವುದಿಲ್ಲವೇ? ನಾನು ತರಬೇತಿಯಿಂದ ಇಂಜಿನಿಯರ್ ಆಗಿದ್ದೇನೆ. ಹಾಗೆಯೇ ನನ್ನ ಬೋಧನಾ ಮಾಧ್ಯಮ ಕೂಡ ಇಂಗ್ಲಿಷ್ ಆಗಿತ್ತು. ಆ ಭಾಷೆಯನ್ನು ಶೈಕ್ಷಣಿಕ ಅನ್ವೇಷಣೆಗಳಿಗೆ ಬಳಸುವುದು ಬೇರೆ ವಿಷಯ. ನೀವು ದಿನನಿತ್ಯದ ಬಳಕೆಗೇ ಬಳಸಿಕೊಂಡರೆ ಹೇಗೆ?” ಎಂದು ಕೇಳಿದ್ದಾರೆ. ಈ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ.