Site icon Vistara News

Viral Video: ಜೊತೆಗಿದ್ದ ಬೆಂಬಲಿಗನನ್ನೇ ವೇದಿಕೆಯಿಂದ ತಳ್ಳಿದ ಲಾಲೂ ಪುತ್ರ; ಎಲ್ಲೆಡೆ ಭಾರೀ ಖಂಡನೆ

Viral Video

ನವದೆಹಲಿ: ರಾಷ್ಟ್ರೀಯ ಜನತಾ ದಳ(RJD) ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌(Lalu Prasad Yadav) ಪುತ್ರ ತೇಜ್‌ ಪ್ರತಾಪ್‌ ಯಾದವ್‌(Tej Pratap Yadav) ಮತ್ತೆ ವಿವಾದಕ್ಕೀಡಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ(Lok Sabha Election 2024)ಪಾಟಲೀಪುರದಿಂದ ಕಣಕ್ಕಿಳಿಸಿರುವ ಸಹೋದರಿ ಮೀಸಾ ಭಾರತಿ ಪರ ಪ್ರಚಾರಕ್ಕೆಂದು ಆಗಮಿಸಿದ್ದ ತೇಜ್‌ ಪ್ರತಾಪ್‌ ಯಾದವ್‌ ಜೊತೆಗಿದ್ದ ಬೆಂಬಲಿಗನನ್ನು ವೇದಿಕೆಯಿಂದ ತಳ್ಳುವ ಮೂಲಕ ದರ್ಪ ಮೆರೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಹಲವರಿಂದ ಖಂಡನೆ ವ್ಯಕ್ತವಾಗಿದೆ.

ವಿಡಿಯೋದಲ್ಲಿ ಏನಿದೆ?

ಇಂದು ನಾಮಪತ್ರ ಸಲ್ಲಿಸಿದ್ದ ಮೀಸಾ ತಮ್ಮ ಸಹೋದರ ತೇಜ್‌ ಪ್ರತಾಪ್‌ ಜೊತೆಗೆ ವೇದಿಕೆಗೆ ಆಗಮಿಸಿದ್ದರು. ಈ ವೇಳೆ ಹಸಿರು ಕ್ಯಾಪ್‌ ಧರಿಸಿದ ಅನೇಕ ಕಾರ್ಯಕರ್ತರು ಅವರನ್ನು ಸುತ್ತುವರಿದರು. ಆಗ ಕೋಪಗೊಂಡ ತೇಜ್‌ ಪ್ರತಾಪ್‌ ಯಾದವ್‌, ತನ್ನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯನ್ನು ತಳ್ಳಿ ಬೀಳಿಸಿದ್ದಾರೆ. ತಕ್ಷಣ ಅಲ್ಲಿದ್ದ ಜನ ಆತನನ್ನು ವೇದಿಕೆಯಿಂದ ಕರೆದೊಯ್ದಿದ್ದಾರೆ. ಪಕ್ಕದಲ್ಲೇ ಇದ್ದ ಮೀಸಾ , ತೇಜ್‌ ಪ್ರತಾಪ್‌ನನ್ನು ಸಮಾಧಾನಪಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ತೇಜ್‌ ಪ್ರತಾಪ್‌ ವರ್ತನೆಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಪ್ರೀತಿ ಗಾಂಧಿ, ತೇಜ್‌ ಪ್ರತಾಪ್‌ ಯಾವುದಕ್ಕೂ ಅರ್ಹನಲ್ಲ. ಸ್ವಪಕ್ಷ ಕಾರ್ಯಕರ್ತನ ಮೇಲೆಯೇ ಬಹಳ ಕ್ರೂರವಾಗಿ ಹಲ್ಲೆ ಮಾಡುತ್ತಾರೆ. ಇದು ಮಾತು ಮತ್ತು ಕೃತಿಗಿರುವ ವ್ಯತ್ಯಾಸ ಎಂದು ಕಿಡಿ ಕಾರಿದ್ದಾರೆ.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದ್ದು, ತೆನಾಲಿ ಮತಗಟ್ಟೆಯಲ್ಲಿ ಮತ ಚಾಲಾಯಿಸಲೆಂದು ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಅಭ್ಯರ್ಥಿ, ತೆನಾಲಿ ಕ್ಷೇತ್ರದ ಶಾಸಕ ಅನ್ನಬತುನಿ ಶಿವಕುಮಾರ್ ಎಂಬುವವರು ಕಪಾಳಮೋಕ್ಷ ಮಾಡಿದ್ದಾರೆ. ಶಾಸಕ ಶಿವಕುಮಾರ್ ಇಂದು ಮತದಾನಕ್ಕೆಂದು ಮತಗಟ್ಟೆಗೆ ಆಗಮಿಸಿದ್ದರು. ಈ ವೇಳೆ ನೂರಾರು ಜನ ಸಾಲಿನಲ್ಲಿ ನಿಂತಿದ್ದರೂ ಅದನು ಲೆಕ್ಕಿಸದೇ ಸಾಲು ತಪ್ಪಿಸಿ ನೇರವಾಗಿ ಮತಗಟ್ಟೆಯೊಳಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಇದನ್ನು ಕಂಡ ಮತದಾರನೊಬ್ಬ ಶಾಸಕರ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಲಿನಲ್ಲೇ ನಿಂತು ಮತ ಚಲಾಯಿಸುವಂತೆ ಆತ ಒತ್ತಾಯಿಸಿದ್ದ. ಇದರಿಂದ ಆಕ್ರೋಶಗೊಂಡ ಶಾಸಕ ಶಿವಕುಮಾರ್ ನೋಡ ನೋಡುತ್ತಲೇ ಪ್ರಶ್ನಿಸಿದ ಮತದಾರನ ಕಪಾಳಕ್ಕೆ ಹೊಡೆದಿದ್ದಾರೆ.

ಇದನ್ನೂ ಓದಿ:Viral Video: ವಂದೇ ಭಾರತ್ ರೈಲಿನಡಿ ಸಿಲುಕಿದರೂ ಹಸು ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆ?

ಏಟು ಬೀಳುತ್ತಿದ್ದಂತೆ ಮತದಾರನೂ ತಿರುಗಿ ಶಾಸಕನ ಕಪಾಳಕ್ಕೆ ಹೊಡೆದಿದ್ದಾನೆ. ಇದರ ಬೆನ್ನಲ್ಲೇ ಶಿವಕುಮಾರ್ ಜೊತೆಗಿದ್ದ ಆತನ ಬೆಂಬಲಿಗರು ಹಿಂದೆ ಮುಂದೆ ನೋಡದೆ ಮತದಾರನ ಮೇಲೆ ಮುಗಿಬಿದ್ದು ಸಾಮೂಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮತದಾರನನ್ನು ಹೊರಗೆ ಎಳೆದೊಯ್ದಿದ್ದಾರೆ. ಈ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ನಿಯಂತ್ರಿಸಿದ್ದಾರೆ. ಸ್ಥಳದಲ್ಲಿ ಕೆಲಹೊತ್ತು ಭಾರೀ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

Exit mobile version