ನವದೆಹಲಿ: ಗಾಳಿ, ಮಳೆ, ಚಳಿ, ಬಿಸಿಲು, ಹಗಲು, ರಾತ್ರಿ ಎನ್ನದೆ ಜೊಮ್ಯಾಟೊ, ಸ್ವಿಗ್ಗಿಯಂತಹ ಕಂಪನಿಯ ಏಜೆಂಟ್‌ಗಳಾಗಿ ಕೆಲಸ ಮಾಡುವ ಡೆಲಿವರಿ ಬಾಯ್‌ಗಳು ಫುಡ್ ಡೆಲಿವರಿ ಮಾಡುತ್ತಾರೆ. ಇನ್ನು ಬೆಂಗಳೂರು ಸೇರಿ ದೇಶದ ಯಾವುದೇ ಮಹಾ ನಗರಗಳಲ್ಲಿ ಫುಡ್ ಡೆಲಿವರಿ ಮಾಡಲು ಟ್ರಾಫಿಕ್ ಕೂಡ ಭಾರಿ ಕಿರಿಕಿರಿ ಮಾಡುತ್ತದೆ. ಇನ್ನು, ಅಡ್ರೆಸ್ ಹೇಳುವಲ್ಲಿ ಆಗುವ ಗೊಂದಲ, ಗ್ರಾಹಕರು ನಾಲ್ಕನೇ ಫ್ಲೋರ್‌ನಲ್ಲಿದ್ದರೆ, ಅವರ ಮನೆಬಾಗಿಲಿಗೇ ತೆಗೆದುಕೊಂಡು ಹೋಗಿ ಕೊಡುವ ಪದ್ಧತಿಯು ಡೆಲಿವರಿ ಬಾಯ್‌ಗಳನ್ನು ಸುಸ್ತು ಮಾಡುತ್ತದೆ. ಇಂತಹ ಸುಸ್ತು, ಕಿರಿಕಿರಿಯಿಂದ ಮುಕ್ತಿ ಹೊಂದಲು ಜೊಮ್ಯಾಟೊ ಡೆಲಿವರಿ ಬಾಯ್ ಒಬ್ಬರು (Drone Delivery) ಡ್ರೋನ್ ಅಭಿವೃದ್ಧಿಪಡಿಸಿದ್ದಾರೆ. ಡ್ರೋನ್ ಮೂಲಕವೇ ಗ್ರಾಹಕರ ಮನೆ ಬಾಗಿಲಿಗೆ ಫುಡ್ ಡೆಲಿವರಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹೌದು, ಸೋಹನ್ ರೈ ಎಂಬ ಜೊಮ್ಯಾಟೊ ಡೆಲಿವರಿ ಬಾಯ್ ಇಂತಹ ಚಮತ್ಕಾರ ಮಾಡಿದ್ದಾರೆ ಗೆಳೆಯನ ಸಹಾಯದಿಂದ ಡ್ರೋನ್ ಅಭಿವೃದ್ಧಿಪಡಿಸಿದ ಸೋಹನ್ ರೈ, ಅದಕ್ಕೆ ಪಿಜ್ಜಾ ಅಳವಡಿಸಿ, ಆರ್ಡರ್ ಮಾಡಿದವರ ಮನೆ ಬಾಗಿಲಿಗೆ ಡ್ರೋನ್ ಮೂಲಕ ಡೆಲಿವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾವಿಗೇಷನ್, ಕಂಪ್ಯೂಟರ್, ಮೊಬೈಲ್ ಹಾಗೂ ಡ್ರೋನ್ ತಂತ್ರಜ್ಞಾನದಿಂದ ಸುಲಭವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಫುಡ್ ಡೆಲಿವರಿ ಮಾಡಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಡ್ರೋನ್ ಡೆಲಿವರಿ ವಿಡಿಯೊ
“ನಾವು ಡ್ರೋನ್ ಡೆಲಿವರಿ ಬಗ್ಗೆ ತುಂಬ ದಿನದಿಂದ ಕೇಳುತ್ತಿದ್ದೇವೆ. ಆದರೆ, ಭಾರತದಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಬಹುದು ಎಂಬುದನ್ನು ನಾನು ಮನಗಂಡಿದ್ದೇನೆ. ಹಲವು ಬಾರಿ ವಿಫಲವಾದರೂ ನಾನು ಡ್ರೋನ್ ನಿರ್ಮಿಸಿ, ಅದರಿಂದ ಪಿಜ್ಜಾ ಡೆಲಿವರಿ ಮಾಡಿದ್ದೇನೆ. ಡ್ರೋನ್ ತಂತ್ರಜ್ಞಾನದ ಮೂಲಕ ಇದನ್ನು ಸಾಧಿಸಿದ್ದೇನೆ. ಹಾಗಾಗಿ, ಇನ್ನುಮುಂದೆ ಭಾರತದಲ್ಲಿ ಡ್ರೋನ್ ಡೆಲಿವರಿ ಕನಸಲ್ಲ. ಪ್ರಾಯೋಗಿಕ ಯಶಸ್ಸು ಸಿಕ್ಕಿದ್ದು, ದೇಶದಲ್ಲಿ ಕೆಲವೇ ದಿನಗಳಲ್ಲಿ ಡ್ರೋನ್‌ಗಳ ಮೂಲಕ ಫುಡ್ ಡೆಲಿವರಿ ಆಗಲಿದೆ” ಎಂದು ಇನ್‌ಸ್ಟಾಗ್ರಾಂನಲ್ಲಿ ಸೋಹನ್ ರೈ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Drone Operation: ಅರಣ್ಯ ಪ್ರದೇಶಕ್ಕೆ ಬೆಂಕಿ; ತಡೆಗಟ್ಟಲು ಡ್ರೋಣ್ ಕಾರ್ಯಾಚರಣೆ
ಸೋಹನ್ ರೈ ಇನ್‌ಸ್ಟಾಗ್ರಾಂನಲ್ಲಿ ಡ್ರೋನ್ ಡೆಲಿವರಿಯ ಪ್ರಾಯೋಗಿಕ ವಿಡಿಯೊ ಅಪ್‌ಲೋಡ್ ಮಾಡಿದ್ದಾರೆ. ಡ್ರೋನ್ ಅಭಿವೃದ್ಧಿ, ಡ್ರೋನ್ ಹಾರಾಟ ಮಾಡುವಲ್ಲಿ ವಿಫಲ, ಮತ್ತೆ ಪ್ರಯತ್ನ, ಹಲವು ಪ್ರಯತ್ನದ ಬಳಿಕ ಯಶಸ್ವಿಯಾಗಿ ಪಿಜ್ಜಾ ಡೆಲಿವರಿ ಮಾಡಿದ ವಿಡಿಯೊವನ್ನು ಸುಮಾರು 11 ಲಕ್ಷ ಜನ ವೀಕ್ಷಿಸಿದ್ದಾರೆ. ಯುವಕನ ಪರಿಶ್ರಮ, ಜಾಣ್ಮೆಯನ್ನು ಜನ ಕೊಂಡಾಡಿದ್ದಾರೆ.