Site icon Vistara News

ವಿಸ್ತಾರ ಸಂಪಾದಕೀಯ: ಪಾಕಿಸ್ತಾನವು ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಲಿ

Pakistan Hindus Protest

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹಲ್ಲೆ, ಶೋಷಣೆ, ಅತ್ಯಾಚಾರ, ಬಲವಂತದ ಮತಾಂತರ, ಹತ್ಯೆಗಳು ನಿತ್ಯ ನಿರಂತರವಾಗಿವೆ. ಈ ದೌರ್ಜನ್ಯದ ಸರಮಾಲೆಗೆ ಮತ್ತೊಂದು ಸಾಕ್ಷ್ಯ ದೊರೆತಿದೆ. ಸಂಘಟಿತ ಅಪರಾಧ ಎಸಗುವ ತಂಡವೊಂದು ಆಧುನಿಕ ಶಸ್ತ್ರಾಸ್ತ್ರಗಳ ಮೂಲಕ ಹಿಂದೂಗಳ ದೇಗುಲವನ್ನು ಧ್ವಂಸ ಮಾಡಿದ ಬೆನ್ನಲ್ಲೇ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಹಿಂದೂಗಳನ್ನು ಅಪಹರಿಸಿ, ಒತ್ತೆಯಾಳುಗಳನ್ನಾಗಿಸಿಕೊಂಡಿದೆ. ಪಾಕಿಸ್ತಾನದ ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನು ಜತೆಯಾಗಲು ಗಡಿ ದಾಟಿ ಭಾರತಕ್ಕೆ ಬಂದಿದ್ದಾಳೆ. ಇದಕ್ಕೆ ಪ್ರತಿಯಾಗಿ ಪಾಕ್ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದೆ ಎಂಬ ವರದಿಗಳಿವೆ. ಈ ತರಹದ ಪ್ರತೀಕಾರವು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಯಾವುದೇ ತಾರತಮ್ಯ ಮಾಡದೇ ಪಾಕಿಸ್ತಾನ ಸರ್ಕಾರವು ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು(Vistra Editorial).

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಇಂದು, ನಿನ್ನೆಯದಲ್ಲ. ನಿರಂತರವಾಗಿ ನಡೆದುಕೊಂಡು ಬಂದಿದೆ. ಹಿಂದೂಗಳು ಹೆಚ್ಚಿರುವ ಸಿಂಧ್​ ಪ್ರಾಂತ್ಯವೊಂದರಲ್ಲೇ ವರ್ಷಕ್ಕೆ ಸಾವಿರ ಹಿಂದು ಹೆಣ್ಣುಮಕ್ಕಳು ಲೈಂಗಿಕ ಗುಲಾಮಗಿರಿ ಕೂಪಕ್ಕೆ ಬೀಳುತ್ತಿದ್ದಾರೆ. ಬಲವಂತ ಮತಾಂತರವಂತೂ ವಿಪರೀತವಾಗಿದೆ. ಹಾಗಿದ್ದೂ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಸರ್ಕಾರ ಮುಂದಾಗುತ್ತಿಲ್ಲ ಎಂಬುದು ದುರದೃಷ್ಟಕರ.

1947ರಲ್ಲಿ ಭಾರತವು ವಿಭಜನೆಯಾಗಿ ಪಾಕಿಸ್ತಾನವು ಹೊಸ ರಾಷ್ಟ್ರವಾಗಿ ಉದಯವಾಯಿತು. ಆಗ, ಅವರ ಅವರ ಇಷ್ಟಕ್ಕೆ ಅನುಗುಣವಾಗಿ ಜನರು ಪಾಕಿಸ್ತಾನ, ಇಲ್ಲವೇ ಭಾರತವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಹಾಗಾಗಿ, ಜಗತ್ತು ಕಂಡು ಅತಿ ದೊಡ್ಡ ವಲಸೆ ಹಾಗೂ ಅದರ ಜತೆಗೇ ಹಿಂಸಾಚಾರವು ಇತಿಹಾಸದಲ್ಲಿ ದಾಖಲಾಗಿದೆ. ಆದರೆ, ಕಾಲ ಉರುಳಿದಂತೆ ಪಾಕಿಸ್ತಾನದಲ್ಲೇ ಉಳಿದ ಹಿಂದುಗಳ ಸಂಖ್ಯೆ ದಯನೀಯವಾಗಿ ಕುಸಿಯುತ್ತಾ ಬಂತು. 1941ರ ಜನಗಣತಿ ಪ್ರಕಾರ ಪಶ್ಚಿಮ ಪಾಕಿಸ್ತಾನ(ಇಂದಿನ ಪಾಕಿಸ್ತಾನ)ದಲ್ಲಿ ಶೇ.14ರಷ್ಟು ಹಾಗೂ ಪೂರ್ವ ಪಾಕಿಸ್ತಾನ(ಇಂದಿನ ಬಾಂಗ್ಲಾದೇಶ)ದಲ್ಲಿ ಶೇ.28ರಷ್ಟು ಹಿಂದುಗಳಿದ್ದರು. 1947ರಲ್ಲಿ ದೇಶ ವಿಭಜನೆಯಾದ ಬಳಿಕ 47 ಲಕ್ಷ ಹಿಂದೂ ಮತ್ತು ಸಿಖ್ಖರು ಭಾರತಕ್ಕೆ ವಲಸೆ ಬಂದರು. ಸದ್ಯ ಪಾಕಿಸ್ತಾನ ಒಟ್ಟು ಜನಸಂಖ್ಯೆಯಲ್ಲಿ ಹಿಂದುಗಳ ಪ್ರಮಾಣ ಕೇವಲ ಶೇ. 2.14 ರಷ್ಟಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳಿದ್ದಾರೆ. ಆದರೆ, ದುರದೃಷ್ಟವಷಾತ್ ಅಲ್ಪಸಂಖ್ಯಾತರಾಗಿರುವ ಅಲ್ಲಿನ ಹಿಂದೂಗಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆ ಎಗ್ಗಿಲ್ಲದೇ ನಡೆಯುತ್ತಿದೆ. ಅದನ್ನು ತಡೆಯುವ ಗಂಭೀರ ಪ್ರಯತ್ನಗಳನ್ನು ಪಾಕಿಸ್ತಾನ ಸರ್ಕಾರವಾಗಲೀ, ಪ್ರಾಂತೀಯ ಸರ್ಕಾರಗಳಾಗಲೀ ಮಾಡುತ್ತಿಲ್ಲ ಎಂಬುದು ದುರಂತದ ವಾಸ್ತವ.

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸದಾ ಬೊಬ್ಬಿರಿಯುವ ಪಾಕಿಸ್ತಾನವು, ತನ್ನ ನೆಲದಲ್ಲಿರುವ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡುವುದೇ ಇಲ್ಲ. ಸ್ವಾತಂತ್ರ್ಯದ ಬಳಿಕ, ಪಾಕಿಸ್ತಾನದಲ್ಲಿ ನಿರಂತವಾಗಿ ಹಿಂದುಗಳನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಹದಿಹರೆಯ ಹೆಣ್ಣುಮಕ್ಕಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಕೊಂಡು, ಇಸ್ಲಾಂಗೆ ಮತಾಂತರ ಮಾಡುವ ಸುದ್ದಿಗಳಿಗೇನೂ ಬರವಿಲ್ಲ. ಇಷ್ಟಾಗಿಯೂ, ಪಾಕಿಸ್ತಾನ ಸರ್ಕಾರ ಮಾತ್ರ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಭಯ ಹುಟ್ಟಿಸುವಂತಿದೆ. ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮುದಾಯವೂ ಜಾಣ ಮೌನ ವಹಿಸುವುದು ಅಕ್ಷಮ್ಯ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಮುಳುಗಿದ ದೆಹಲಿ, ಆಪ್-ಬಿಜೆಪಿ ಪಕ್ಷಗಳು ರಾಜಕೀಯ ಕಿತ್ತಾಟದಿಂದ ಮೇಲೇಳಲಿ

ಯಾವುದೇ ದೇಶ ಇರಲಿ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಒಪ್ಪಿಕೊಳ್ಳಬಾರದು. ಇದಕ್ಕೆ ಪಾಕಿಸ್ತಾನ ಕೂಡ ಹೊರತಲ್ಲ. ಇಸ್ಲಾಮಿಕ್ ರಾಷ್ಟ್ರ ಎಂದ ಮಾತ್ರಕ್ಕೆ ಇಸ್ಲಾಂ ಅನ್ನು ಒಪ್ಪಿಕೊಂಡವರಿಗೆ ಮಾತ್ರವೇ ಬದುಕುವ ಹಕ್ಕಿದೆ ಎಂಬಂತೆ ವರ್ತಿಸುವುದು ಮಾನವತೆಯ ವಿರುದ್ಧದ ನಡೆಯಾಗುತ್ತದೆ. ಹಾಗಾಗಿ, ಪಾಕಿಸ್ತಾನ ಸರ್ಕಾರವು, ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕಠಿಣ ಕಾನೂನು ಜಾರಿಗೆ ತಂದು, ಅಂತಾರಾಷ್ಟ್ರೀಯ ಸಮುದಾಯದ ಎದುರು, ಮಾನವ ಹಕ್ಕುಗಳೆಡೆಗೆ ತನಗಿರುವ ಬದ್ಧತೆಯನ್ನು ಪ್ರದರ್ಶಿಸಬೇಕು.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version