ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಹಲ್ಲೆ, ಶೋಷಣೆ, ಅತ್ಯಾಚಾರ, ಬಲವಂತದ ಮತಾಂತರ, ಹತ್ಯೆಗಳು ನಿತ್ಯ ನಿರಂತರವಾಗಿವೆ. ಈ ದೌರ್ಜನ್ಯದ ಸರಮಾಲೆಗೆ ಮತ್ತೊಂದು ಸಾಕ್ಷ್ಯ ದೊರೆತಿದ್ದು, ಸಿಂಧ್ ಪ್ರಾಂತ್ಯದ ಶಿಂಜೋರೋ ಪಟ್ಟಣದಲ್ಲಿ 40 ವರ್ಷದ ಹಿಂದು ಮಹಿಳೆ ದಿಯಾ ಭೀಲ್ ಎಂಬಾಕೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿ, ಭೀಕರವಾಗಿ ಕೊಲೆ ಮಾಡಲಾಗಿದೆ. ಆಕೆಯ ಮೃತದೇಹವು, ತಲೆ ಮತ್ತು ಸ್ತನಗಳನ್ನು ಕತ್ತರಿಸಿದ, ಚರ್ಮವನ್ನು ಸುಲಿದ ರೀತಿಯಲ್ಲಿ ಪತ್ತೆಯಾಗಿದೆ. ಇದೊಂದು ಅಮಾನವೀಯ ಕೃತ್ಯ. ಯಾವುದೇ ನಾಗರಿಕ ಸಮಾಜವು ತಲೆತಗ್ಗಿಸುವ ವಿಚಾರವಿದು. ಹಿಂದುಗಳು ಹೆಚ್ಚಿರುವ ಸಿಂಧ್ ಪ್ರಾಂತ್ಯವೊಂದರಲ್ಲೇ ವರ್ಷಕ್ಕೆ ಸಾವಿರ ಹಿಂದು ಹೆಣ್ಣುಮಕ್ಕಳು ಲೈಂಗಿಕ ಗುಲಾಮಗಿರಿ ಕೂಪಕ್ಕೆ ಬೀಳುತ್ತಿದ್ದಾರೆ. ಬಲವಂತ ಮತಾಂತರವಂತೂ ವಿಪರೀತವಾಗಿದೆ. ಹಾಗಿದ್ದೂ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಸರ್ಕಾರ ಮುಂದಾಗುತ್ತಿಲ್ಲ.
1947ರಲ್ಲಿ ಭಾರತವು ವಿಭಜನೆಯಾಗಿ ಪಾಕಿಸ್ತಾನವು ಹೊಸ ರಾಷ್ಟ್ರವಾಗಿ ಉದಯವಾಯಿತು. ಆಗ, ಅವರ ಅವರ ಇಷ್ಟಕ್ಕೆ ಅನುಗುಣವಾಗಿ ಜನರು ಪಾಕಿಸ್ತಾನ, ಇಲ್ಲವೇ ಭಾರತವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಹಾಗಾಗಿ, ಜಗತ್ತು ಕಂಡು ಅತಿ ದೊಡ್ಡ ವಲಸೆ ಹಾಗೂ ಅದರ ಜತೆಗೇ ಹಿಂಸಾಚಾರವು ಇತಿಹಾಸದಲ್ಲಿ ದಾಖಲಾಗಿದೆ. ಆದರೆ, ಕಾಲ ಉರುಳಿದಂತೆ ಪಾಕಿಸ್ತಾನದಲ್ಲೇ ಉಳಿದ ಹಿಂದುಗಳ ಸಂಖ್ಯೆ ದಯನೀಯವಾಗಿ ಕುಸಿಯುತ್ತಾ ಬಂತು. 1941ರ ಜನಗಣತಿ ಪ್ರಕಾರ ಪಶ್ಚಿಮ ಪಾಕಿಸ್ತಾನ(ಇಂದಿನ ಪಾಕಿಸ್ತಾನ)ದಲ್ಲಿ ಶೇ.14ರಷ್ಟು ಹಾಗೂ ಪೂರ್ವ ಪಾಕಿಸ್ತಾನ(ಇಂದಿನ ಬಾಂಗ್ಲಾದೇಶ)ದಲ್ಲಿ ಶೇ.28ರಷ್ಟು ಹಿಂದುಗಳಿದ್ದರು. 1947ರಲ್ಲಿ ದೇಶ ವಿಭಜನೆಯಾದ ಬಳಿಕ 47 ಲಕ್ಷ ಹಿಂದು ಮತ್ತು ಸಿಖ್ಖರು ಭಾರತಕ್ಕೆ ವಲಸೆ ಬಂದರು. ಸದ್ಯ ಪಾಕಿಸ್ತಾನ ಒಟ್ಟು ಜನಸಂಖ್ಯೆಯಲ್ಲಿ ಹಿಂದುಗಳ ಪ್ರಮಾಣ ಶೇ.2.14 ರಷ್ಟಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳಿದ್ದಾರೆ. ಆದರೆ, ದುರದೃಷ್ಟವಷಾತ್ ಅಲ್ಪಸಂಖ್ಯಾತರಾಗಿರುವ ಅಲ್ಲಿನ ಹಿಂದುಗಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆ ಎಗ್ಗಿಲ್ಲದೇ ನಡೆಯುತ್ತಿದೆ. ಅದನ್ನು ತಡೆಯುವ ಗಂಭೀರ ಪ್ರಯತ್ನಗಳನ್ನು ಪಾಕಿಸ್ತಾನ ಸರ್ಕಾರವಾಗಲೀ, ಪ್ರಾಂತೀಯ ಸರ್ಕಾರಗಳಾಗಲೀ ಮಾಡುತ್ತಿಲ್ಲ ಎಂಬುದು ದುರಂತದ ವಾಸ್ತವ.
ಮಾನವ ಹಕ್ಕು ಸಂಘಟನೆಗಳ ಲೆಕ್ಕಾಚಾರದ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿವರ್ಷ ಸುಮಾರು 1 ಸಾವಿರ ಹಿಂದೂ ಯುವತಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ. ಕಳೆದ ಅಕ್ಟೋಬರ್ ನಲ್ಲಿ ಕೇವಲ 15 ದಿನಗಳ ಅಂತರದಲ್ಲಿ ನಾಲ್ವರು ಹಿಂದೂ ಬಾಲಕಿಯರನ್ನು ಹಾಡಹಗಲೇ ಅಪಹರಿಸಲಾಗಿತ್ತು. ಪೂಜಾ ಎಂಬ 16 ವರ್ಷದ ಬಾಲಕಿ ಅಪಹರಣಕಾರರ ವಿರುದ್ಧ ತಿರುಗಿ ಬಿದ್ದಾಗ ಆಕೆಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸದಾ ಬೊಬ್ಬಿರಿಯುವ ಪಾಕಿಸ್ತಾನವು, ತನ್ನ ನೆಲದಲ್ಲಿರುವ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡುವುದೇ ಇಲ್ಲ. ಸ್ವಾತಂತ್ರ್ಯದ ಬಳಿಕ, ಪಾಕಿಸ್ತಾನದಲ್ಲಿ ನಿರಂತವಾಗಿ ಹಿಂದುಗಳನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದವರ ಕುಟುಂಬಗಳ ಹೆಣ್ಣು ಮಕ್ಕಳ ಮೇಲೆ ಬಲಾತ್ಕಾರ, ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ. ಹದಿಹರೆಯ ಹೆಣ್ಣುಮಕ್ಕಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಕೊಂಡು, ಇಸ್ಲಾಂಗೆ ಮತಾಂತರ ಮಾಡುವ ಸುದ್ದಿಗಳಿಗೇನೂ ಬರವಿಲ್ಲ. ಇಷ್ಟಾಗಿಯೂ, ಪಾಕಿಸ್ತಾನ ಸರ್ಕಾರ ಮಾತ್ರ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಭಯ ಹುಟ್ಟಿಸುವಂತಿದೆ. ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮುದಾಯವೂ ಜಾಣ ಮೌನ ವಹಿಸುವುದು ಅಕ್ಷಮ್ಯ.
ದಿಯಾ ಭೀಲ್ ಮಹಿಳೆಯ ಕೊಲೆ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯವು ತಕ್ಕ ಉತ್ತರವನ್ನೇ ನೀಡಿದೆ. ಪಾಕಿಸ್ತಾನದಲ್ಲಿರುವ ಹಿಂದುಗಳ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಗಂಭೀರ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದೆ. ತಾಕೀತು ರೂಪದಲ್ಲಿ ಸಚಿವಾಲಯ ವಕ್ತಾರರು ಆಡಿರುವ ಮಾತುಗಳು ಈ ಸಂದರ್ಭಕ್ಕೆ ತಕ್ಕಂತೆ ಇವೆ. ನೆರೆಯ ರಾಷ್ಟ್ರದಲ್ಲಿ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯ ಖಂಡಿಸುವ ತಾಕತ್ತು ಭಾರತಕ್ಕೆ ಬಂದಿದೆ.
ಯಾವುದೇ ದೇಶ ಇರಲಿ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಒಪ್ಪಿಕೊಳ್ಳಬಾರದು. ಇದಕ್ಕೆ ಪಾಕಿಸ್ತಾನ ಕೂಡ ಹೊರತಲ್ಲ. ಇಸ್ಲಾಮಿಕ್ ರಾಷ್ಟ್ರ ಎಂದ ಮಾತ್ರಕ್ಕೆ ಇಸ್ಲಾಂ ಅನ್ನು ಒಪ್ಪಿಕೊಂಡವರಿಗೆ ಮಾತ್ರವೇ ಬದುಕುವ ಹಕ್ಕಿದೆ ಎಂಬಂತೆ ವರ್ತಿಸುವುದು ಮಾನವತೆಯ ವಿರುದ್ಧದ ನಡೆಯಾಗುತ್ತದೆ. ಹಾಗಾಗಿ, ಪಾಕಿಸ್ತಾನ ಸರ್ಕಾರವು, ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕಠಿಣ ಕಾನೂನು ಜಾರಿಗೆ ತಂದು, ಅಂತಾರಾಷ್ಟ್ರೀಯ ಸಮುದಾಯದ ಎದುರು, ಮಾನವ ಹಕ್ಕುಗಳೆಡೆಗೆ ತನಗಿರುವ ಬದ್ಧತೆಯನ್ನು ಪ್ರದರ್ಶಿಸಬೇಕು.
ಇದನ್ನೂ ಓದಿ | ವಿಸ್ತಾರ ವಿಶೇಷ ಸಂಪಾದಕೀಯ | ಜೀವನೋತ್ಸಾಹಿ, ಸ್ಫೂರ್ತಿಯ ಸೆಲೆಯಾಗಿದ್ದ ಹೀರಾ ಬೆನ್