Site icon Vistara News

ವಿಸ್ತಾರ ಸಂಪಾದಕೀಯ: ಜಿ20 ಶೃಂಗ, ಸಾರೋಣ ಭಾರತದ ಉತ್ತುಂಗ

G20 Summit 2023

ಳೆದ ವರ್ಷ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾರತವು 2023ರ ಸಾಲಿನ ಜಿ20 ಶೃಂಗಸಭೆ ಅಧ್ಯಕ್ಷೀಯ ಹೊಣೆಗಾರಿಕೆಯನ್ನು ವಹಿಸಿಕೊಂಡಿತು. ಈಗ ಹೊಣೆಗಾರಿಕೆ ವಾಸ್ತವಾಗುವ ಕ್ಷಣಗಳು ಎದುರಾಗಿದ್ದು, 2023ರ ಸೆಪ್ಟೆಂಬರ್ 9ರಿಂದ 11ರವರೆಗೆ ರಾಷ್ಟ್ರ ರಾಜಧಾನಿಯ ದಿಲ್ಲಿಯಲ್ಲಿ ಜಿ20 ಶೃಂಗಸಭೆಗೆ ಭರದ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ಭಾರತ ಈ ಶೃಂಗವನ್ನು ಆಯೋಜಿಸುತ್ತಿದ್ದು, ಐತಿಹಾಸಿಕ ಮಹತ್ವ ಗಳಿಸಿದೆ. ಒಂದು ವರ್ಷದ ಈ ಅವಧಿಯಲ್ಲಿ ಈ ಶೃಂಗದ ಭಾಗವಾಗಿ ನಾನಾ ಸಭೆಗಳನ್ನು ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ನಾನಾ ಸಭೆಗಳನ್ನು ನಡೆಸಿ, ಭಾರತ ಸೈ ಎನಿಸಿಕೊಂಡಿದೆ. ಈಗ ಅಂತಿಮ ಚರಣಕ್ಕೆ ಕಾಲಿಟ್ಟಿದ್ದೇವೆ(Vistara Editorial).

ಜಿ20 ಅಥವಾ ಗ್ರೂಪ್‌ ಆಫ್‌ ಟ್ವೆಂಟಿ ಎನ್ನುವುದು ವಿಶ್ವದ ಪ್ರಮುಖ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಅಂತಾರಾಷ್ಟ್ರೀಯ ಒಕ್ಕೂಟ. ಇದರಲ್ಲಿ ಭಾರತ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಬ್ರೆಜಿಲ್‌, ಕೆನಡಾ, ಚೀನಾ, ಫ್ರಾನ್ಸ್‌, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್‌, ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್‌, ಅಮೆರಿಕ ಮತ್ತು ಐರೋಪ್ಯ ಒಕ್ಕೂಟವಿದೆ. ಅಂದರೆ 19 ದೇಶಗಳು ಮತ್ತು ಐರೋಪ್ಯ ಒಕ್ಕೂಟವಿದೆ. ಭಾರತ ಇದರಲ್ಲಿ 1999ರಿಂದಲೇ ಸದಸ್ಯತ್ವವನ್ನು ಪಡಿದುಕೊಂಡಿದೆ.

‘ಏಕ ಭೂಮಿ, ಏಕ ಕುಟುಂಬ ಮತ್ತು ಏಕ ಭವಿಷ್ಯ’ ವಿಚಾರದೊಂದಿಗೆ ಜಿ20 ಶೃಂಗವನ್ನು ಆಯೋಜಿಸುತ್ತಿದೆ. ಭಾರತದ ಈ ವಿಚಾರಗಳು ಈ ವಿಶ್ವದ ಕಲ್ಯಾಣಕ್ಕೆ ಮಾರ್ಗವನ್ನು ರೂಪಿಸಲಿವೆ. ಇದೊಂದು ಐತಿಹಾಸಿಕ ಸಂಗತಿಯಾಗಿದ್ದು, ವಸುದೈವ ಕುಟುಂಬಕಂ ಎಂಬುದು ನಮ್ಮ ಸಂಸ್ಕೃತಿಯಾಗಿದೆ. ಜಿ20 ಶೃಂಗ ಲೋಗೊದಲ್ಲಿರುವ ಕಮಲವು ಸಂಸ್ಕೃತಿ, ಪರಂಪರೆ ಮತ್ತು ಭಾರತದ ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಇದೊಂದು ವಿಶ್ವದೆದುರು ತೆರೆದಿಡುವ ಭಾರತೀಯ ಕಾರ್ಯಕ್ರಮವಾಗಿದೆ. ನಮ್ಮ ಹೆಮ್ಮೆಯ ಅತಿಥಿ ದೇವೋಭವ ಸಂಸ್ಕೃತಿಯನ್ನು ಪರಿಚಯಿಸಲು ಅವಕಾಶವನ್ನು ಒದಗಿಸಿದೆ. ನಮ್ಮ ಎಲ್ಲ ರಾಜ್ಯಗಳು ತಮ್ಮದೇ ಪರಂಪರೆ, ವಿಶೇಷತೆಗಳು, ವಿಶಿಷ್ಟತೆಗಳನ್ನು, ಸಂಸ್ಕೃತಿಯನ್ನು ಹೊಂದಿವೆ. ಇದೆನ್ನೆಲ್ಲ ತೋರ್ಪಡಿಸುವಲ್ಲಿ ಭಾರತವು ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದೆ.

ಜಿ20 ಒಕ್ಕೂಟದಲ್ಲಿ ವಿಶ್ವದ ಮೂರನೇ ಎರಡರಷ್ಟು ಜನಸಂಖ್ಯೆಯನ್ನು ಹೊಂದಿರುವ ದೇಶಗಳು ಕೈ ಜೋಡಿಸುತ್ತಿವೆ. ವಿಶ್ವ ವ್ಯಾಪಾರದ ನಾಲ್ಕನೇ ಮೂರರಷ್ಟು ಹಾಗೂ ಜಿಡಿಪಿಯಲ್ಲಿ ವಿಶ್ವದ ಶೇ.85ರಷ್ಟು ಪ್ರಾತಿನಿಧ್ಯವಿದೆ. ಇಂಥ ಅತಿ ದೊಡ್ಡ ಸಮೂಹದ ಸಾರಥ್ಯವನ್ನು ಭಾರತ ವಹಿಸಿಕೊಂಡು ಈಗ ಮುಖ್ಯ ಘಟ್ಟಕ್ಕೆ ಬಂದು ತಲುಪಿರುವುದು ಭಾರತದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತೀಯ ಚದುರಂಗ ಕಣಕ್ಕೆ ರಂಗು ತುಂಬಿದ ಪ್ರಜ್ಞಾನಂದ

ಈ ಹಿಂದೆಯೂ ಭಾರತವು ಹಲವು ಅಂತಾರಾಷ್ಟ್ರೀಯ ಸಮಾವೇಶಗಳು, ಶೃಂಗಸಭೆಗಳಿಗೆ ವೇದಿಕೆಯನ್ನು ಒದಗಿಸಿದೆ. ಆದರೆ, ಈ ಬಾರಿಯ ಅವಕಾಶವು ವಿಭಿನ್ನವಾಗಿದೆ. ಭಾರತದ ಕೀರ್ತಿ ಪತಾಕೆ ಜಗದಗಲಕ್ಕೂ ಹರಡುತ್ತಿರುವ ಸಂದರ್ಭದಲ್ಲಿ ಒದಗಿರುವ ಅವಕಾಶವು ಭಾರತವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ರೂಪಿಸಿರುವ ವಿದೇಶಾಂಗ ನೀತಿಯ ಫಲವಾಗಿ ಇಂದು ಭಾರತವು ನಾಯಕತ್ವದ ಸ್ಥಾನಕ್ಕೆ ಬಂದು ನಿಂತಿದೆ. ದೇಶದ ಟಾಪ್ 5 ಶ್ರೀಮಂತ ರಾಷ್ಟ್ರವಾಗಿ ಹೊರ ಹೊಮ್ಮಿರುವ ಭಾರತವನ್ನು ಇಡೀ ಜಗತ್ತೇ ಬೆರಗುಗಣ್ಣಿನಿಂದ ನೋಡುತ್ತಿದೆ. ಹಾಗಾಗಿ, ಅಂತಾರಾಷ್ಟ್ರೀಯವಾಗಿ ಭಾರತವು ಹೇಗೆ ತನ್ನ ಶಕ್ತಿ, ಸಾಮರ್ಥ್ಯವನ್ನು ಮತ್ತು ವಿಶ್ವ ಸಹೋದರತ್ವವನ್ನು ಸಾರುತ್ತದೆ ಎಂಬುದಕ್ಕೆ ಇದೊಂದು ಅವಕಾಶವಾಗಿ ಒಲಿದಿದೆ. ನಮ್ಮ ನಡುವಿನ ರಾಜಕೀಯ ಭಿನ್ನಾಭಿಪ್ರಾಯ ಮತ್ತು ವೈಚಾರಿಕ-ಸೈದ್ಧಾಂತಿಕ ಭಿನ್ನ ನಿಲುವುಗಳನ್ನು ಬದಿಗಿಟ್ಟು, ಜಗತ್ತಿನ ಮುಂದೆ ನಮ್ಮ ವೈವಿಧ್ಯ ರಾಷ್ಟ್ರದ ಹೆಮ್ಮೆಯನ್ನು ಸಾಬೀತುಪಡಿಸೋಣ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version