ತಮ್ಮನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಬೇಕು ಎಂದು ಮಹಾರಾಷ್ಟ್ರದ ಹಲವು ಗ್ರಾಮಗಳು ನಿರ್ಣಯ ತೆಗೆದುಕೊಂಡಿವೆ. ಇದೊಂದು ಕುತೂಹಲಕಾರಿ ಬೆಳವಣಿಗೆ. ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ 10 ಗ್ರಾಮ ಪಂಚಾಯಿತಿಗಳು ತಮ್ಮ ಗ್ರಾಮಗಳನ್ನು ಕರ್ನಾಟಕದ ಜತೆ ವಿಲೀನಗೊಳಿಸಬೇಕು ಎಂಬುದಾಗಿ ಕೆಲ ದಿನಗಳ ಹಿಂದಷ್ಟೇ ನಿರ್ಣಯ ತೆಗೆದುಕೊಂಡಿವೆ. ಜತೆಗೆ, ಸಾಂಗ್ಲಿ ಜಿಲ್ಲೆಯ ಜಾಟ್, ಸೋಲಾಪುರ ಜಿಲ್ಲೆಯ ಅಕ್ಕಲಕೋಟೆ, ಲಾತೂರ್ ಜಿಲ್ಲೆಯ 10 ಗ್ರಾಮಗಳು ಕೂಡ ಕರ್ನಾಟಕದ ಜತೆ ವಿಲೀನಗೊಳಿಸಬೇಕು ಎಂದು ಪಟ್ಟು ಹಿಡಿದಿವೆ. ಇದು ಮಹಾರಾಷ್ಟ್ರ ಸರ್ಕಾರಕ್ಕೆ ಭಾರಿ ಮುಜುಗರದ ಸಂಗತಿ ಹಾಗೂ ಮುಖಭಂಗ. ಬೆಳಗಾವಿ ಗಡಿ ವಿಚಾರದಲ್ಲಿ ಆಗಾಗ ಮೂಗು ತೂರಿಸುವ, ಹುರುಳಿಲ್ಲದ ವಾದ ಮಾಡುವ, ಬೆಳಗಾವಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವ ಮಹಾರಾಷ್ಟ್ರ ಸರ್ಕಾರಕ್ಕೂ ಅಲ್ಲಿನ ರಾಜಕೀಯ ಮುಖಂಡರಿಗೂ ಇದು ನುಂಗಲಾರದ ತುತ್ತು.
ಈ ಗ್ರಾಮಗಳು ಕರ್ನಾಟಕದ ಜತೆ ತಮ್ಮನ್ನು ವಿಲೀನಗೊಳಿಸಬೇಕು ಎಂದು ಯಾಕೆ ನಿರ್ಣಯಿಸಿದವು ಎಂಬುದನ್ನು ನೋಡೋಣ. ಇಲ್ಲಿ ಮರಾಠಿ ಮಾತನಾಡುವವರ ಜತೆಗೆ ಕನ್ನಡ ಮಾತನಾಡುವವರ ಸಂಖ್ಯೆಯೂ ಜಾಸ್ತಿ ಇದೆ. ಹಾಗೆಯೇ, ಕರ್ನಾಟಕದ ಆಚಾರ-ವಿಚಾರಗಳನ್ನು ಅವರು ಪಾಲಿಸುತ್ತಾರೆ. ಕನ್ನಡ ಮಾತನಾಡುವವರ ಸಂಖ್ಯೆ ಜಾಸ್ತಿ ಇರುವ ಕಡೆ ಮಹಾರಾಷ್ಟ್ರ ಸರ್ಕಾರವು ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಇಂತಹ ಪ್ರದೇಶಗಳ ಅಭಿವೃದ್ಧಿಗೆ ಆಸಕ್ತಿ ತೋರಿಸುತ್ತಿಲ್ಲ. ಕಾಗಲ್ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ, ಕನಿಷ್ಠ ಕುಡಿಯುವ ನೀರಿನ ಪೂರೈಕೆಯನ್ನೂ ಸರ್ಕಾರ ಮಾಡುತ್ತಿಲ್ಲ. ಸರಿಯಾದ ರಸ್ತೆ ಸಂಪರ್ಕ ನೀಡಿಲ್ಲ. ಸರ್ಕಾರದ ಹಲವು ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಹೀಗೆ ಮೂಲಸೌಕರ್ಯಗಳಲ್ಲಿ ವಂಚನೆ ಮಾಡುವ ಸರ್ಕಾರದ ಜೊತೆ ಈ ಗ್ರಾಮಸ್ಥರಿಗೆ ಸಹಾನುಭೂತಿ ಏಕಿರಬೇಕು? ಹಾಗಾಗಿ, ಈ ಭಾಗಗಳ ಜನರು ಕರ್ನಾಟಕದ ಜತೆ ತಮ್ಮ ಗ್ರಾಮಗಳು ವಿಲೀನಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಅಂದರೆ ಯಾವುದೇ ಸರ್ಕಾರದ ಜತೆಗೆ ಅಲ್ಲಿನ ಪ್ರಜೆಗಳು ತಾದಾತ್ಮ್ಯ ಹೊಂದಿರಬೇಕಾದರೆ, ಭಾಷೆಯೂ ಸೇರಿದ ಭಾವನಾತ್ಮಕ ಬೆಸುಗೆ ಇರಬೇಕು. ಎರಡನೆಯದಾಗಿ, ಮೂಲಸೌಕರ್ಯಗಳನ್ನು ಸರಿಯಾಗಿ ಒದಗಿಸಬೇಕು. ರಸ್ತೆ, ಕುಡಿಯುವ ನೀರು, ಪ್ರಾಥಮಿಕ ಶಿಕ್ಷಣ ಹಾಗೂ ಆರೋಗ್ಯ ಸೇವೆ- ಇವು ಮುಖ್ಯವಾದುವು. ದೇಶದಲ್ಲಿ ಆದಾಯ ತೆರಿಗೆ ಪಾವತಿಸುವಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಇದರ ಜಿಎಸ್‌ಡಿಪಿ 32 ಲಕ್ಷ ಕೋಟಿ. ಆದರೆ ಇದರ ಹೆಚ್ಚಿನ ಆದಾಯದ ಮೂಲವೂ ಮುಂಬಯಿಯಂಥ ಮಹಾನಗರ; ಹಾಗೂ ವೆಚ್ಚವೂ ಅಲ್ಲಿಗೇ ಹೆಚ್ಚಾಗಿ ಹೋಗುತ್ತದೆ. ಕರ್ನಾಟಕದವರೂ ಉದ್ಯೋಗ ಹುಡುಕುತ್ತಾ ಅಲ್ಲಿಗೆ ಹೋಗುವುದೂ ನಿಜ. ಆದರೆ ಗಡಿಯಂಚಿನ ತಾಲೂಕುಗಳು ಹಾಗೂ ಊರುಗಳ ವಿಚಾರ ಬಂದಾಗ ಈ ಶ್ರೀಮಂತಿಕೆಯನ್ನು ನಾವು ಕಾಣಲಾರೆವು. ಈ ಊರುಗಳ ಮೇಲೆ ವೆಚ್ಚ ಮಾಡುವ ಇಚ್ಛಾಶಕ್ತಿಯನ್ನು ಅಲ್ಲಿನ ಸರ್ಕಾರ ತೋರುತ್ತಿಲ್ಲ. ಹೀಗಾಗಿ ಇಲ್ಲಿನವರಿಗೆ ಕರ್ನಾಟಕವೇ ಲೇಸು ಎಂದು ಕಾಣಿಸಿದೆ. ಅದನ್ನು ಅವರು ವ್ಯಕ್ತಪಡಿಸಿದ್ದಾರೆ.
ಇಂಥ ಗ್ರಾಮಗಳಿಗೆ ಸೂಕ್ತ ಮೂಲವ್ಯವಸ್ಥೆಯನ್ನು ಒದಗಿಸುವುದು, ಅಲ್ಲಿನವರ ಮನ ಗೆಲ್ಲುವುದು, ಈ ಹಾದಿಯನ್ನು ಹಿಡಿಯುವ ಬದಲು ಅಲ್ಲಿನ ಮುಖಂಡರು ಆಕ್ರಮಣಕಾರಿ ಭಾಷೆ, ಸ್ವರೂಪವನ್ನು ತಮ್ಮ ರಾಜಕೀಯಕ್ಕೆ ತೊಡಿಸುತ್ತಾರೆ. ಕರ್ನಾಟಕದ ಮುಖ್ಯಮಂತ್ರಿ ಗಡಿಯೂರುಗಳಿಗೆ ಬರಬಾರದು ಎನ್ನುತ್ತಾರೆ. ಬೆಳಗಾವಿಯಂಥ ಅಪ್ಪಟ ಕನ್ನಡನಾಡಿನಲ್ಲಿ ಸ್ಥಳೀಯ ಸಂಸ್ಥೆಗಳನ್ನು ತಮ್ಮ ಹಿಡಿತದಲ್ಲಿ ತೆಗೆದುಕೊಳ್ಳಲು ಹವಣಿಸುತ್ತಾರೆ. ಕರ್ನಾಟಕದ ಹಲವು ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಿವೆ, ಬೆಳಗಾವಿಯೂ ನಮ್ಮದೇ ಎಂದು ಎಂಎನ್‌ಎಸ್ ಪುಂಡರು ಬೆಳಗಾವಿಯಲ್ಲಿ ಆಗಾಗ ಗಲಾಟೆ ಮಾಡುತ್ತಾರೆ. ಮಹಾರಾಷ್ಟ್ರ ಸರ್ಕಾರವೂ ಇವರಿಗೆ ಪೋಷಣೆ ನೀಡುತ್ತದೆ. ಪ್ರಕರಣ ನ್ಯಾಯಾಲಯದಲ್ಲಿದ್ದರೂ ಉಪಟಳ ಮಾಡುತ್ತದೆ. ಆದರೀಗ, ಅವರದ್ದೇ ರಾಜ್ಯದಲ್ಲಿರುವ ಗ್ರಾಮಗಳು ಕರ್ನಾಟಕಕ್ಕೆ ಸೇರಲು ಬಯಸುತ್ತಿರುವುದರಿಂದಲಾದರೂ ಅವರು ಪಾಠ ಕಲಿಯಬಹುದೇ? ಆ ಗ್ರಾಮಗಳು ನಿರ್ಣಯ ತೆಗೆದುಕೊಂಡಿವೆ ಎಂದ ಮಾತ್ರಕ್ಕೆ ನಾಳೆಯೇ ಕರ್ನಾಟಕಕ್ಕೆ ಸೇರಿಬಿಡುತ್ತವೆ ಎನ್ನಲಾಗದು. ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿ ರಾಜ್ಯಗಳ ಗಡಿ ನಿರ್ಣಯ ಆದ ಬಳಿಕ, ಯಾವುದೇ ಗಡಿ ಚಳವಳಿಯೂ ಯಶಸ್ವಿಯಾಗಿಲ್ಲ. ಹಾಗೆ ಆಗುವುದಾದರೆ ಬಹುಸಂಖ್ಯಾತ ಕನ್ನಡಿಗರು ಇರುವ ಕಾಸರಗೋಡು ಎಂದೋ ಕರ್ನಾಟಕ ಸೇರಬೇಕಿತ್ತು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ; ಪರಿಹಾರ ಕಾರ್ಯಾಚರಣೆ ಚುರುಕುಗೊಳ್ಳಲಿ
ಕರ್ನಾಟಕ ಇದರಿಂದ ಏನು ಪಾಠ ಕಲಿಯಬಹುದು ಎಂದರೆ, ನಮ್ಮ ಗಡಿಯಂಚಿನ ತಾಲೂಕು- ಊರುಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು. ನಮ್ಮ ರಾಯಚೂರು, ಕೋಲಾರ, ಬೀದರ್ ಮುಂತಾದ ಪ್ರಾಂತ್ಯಗಳ ತಾಲೂಕುಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಇವುಗಳ ಕಡೆಗೆ ಸೂಕ್ತ ಗಮನ ಹರಿಸಬೇಕಿದೆ. ಮೂಲಸೌಕರ್ಯಗಳನ್ನು ಒದಗಿಸುವುದು, ರಾಜಕೀಯ ಪ್ರಾತಿನಿಧ್ಯ ನೀಡುವುದರ ಮೂಲಕ ನಮ್ಮ ನೆಲೆ- ಬೆಲೆಗಳನ್ನು ಅಲ್ಲಿ ಗಟ್ಟಿಗೊಳಿಸಬೇಕಿದೆ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.