ಕೇಂದ್ರ ಸರ್ಕಾರದ (Central Government) ಮಧ್ಯಂತರ ಬಜೆಟ್ (Budget 2024) ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಸಲದ ಬಜೆಟ್ ಮಧ್ಯಂತರದ್ದಾಗಿದೆ. ಹೀಗಾಗಿ ಯಾವುದೇ ದೊಡ್ಡ ಯೋಜನೆಗಳನ್ನು ಸಚಿವರು ಘೋಷಿಸಿಲ್ಲ. ಆರ್ಥಿಕ ಸಮೀಕ್ಷೆಯನ್ನೂ ಈ ಸಲ ಮಂಡಿಸಿಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದು ಮತ್ತೆ ಪೂರ್ಣ ಬಜೆಟ್ ಮಂಡಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳ ಅವಧಿಗಾಗಿ ಮಂಡಿಸಲಾಗಿರುವ ಈ ಬಜೆಟ್ ಅದಕ್ಕೆ ತಕ್ಕಂತೆ ಚುಟುಕಾಗಿದೆ; ಆದರೆ ಮುಖ್ಯ ಅಂಶಗಳನ್ನು ಒಳಗೊಂಡಿದೆ. ಆದರೆ ಗಮನಿಸಬಹುದಾದ ಸಂಗತಿಯೆಂದರೆ ಕಾರ್ಪೊರೇಟ್‌ಗಳನ್ನು ಹಾಗೂ ಮತದಾರರನ್ನು ಓಲೈಸುವ ಇದರಲ್ಲಿ ಇಲ್ಲ; ಹಾಗೆಯೇ ಪುಕ್ಕಟೆ ಯೋಜನೆಗಳೂ ಇಲ್ಲ. ಆದರೆ ಜನಸಾಮಾನ್ಯರಿಗೆ ಮುಖ್ಯವಾದ, ಉಪಯೋಗಕಾರಿಯಾದ ಹಲವಾರು ಅಂಶಗಳಿವೆ(Vistara Editorial).
ಇದು ದೇಶದ ಬಡವರು, ಮಹಿಳೆಯರು, ಯುವಕರು ಹಾಗೂ ರೈತರ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ ಎಂದು ಪ್ರಧಾನಿ ಮೋದಿಯವರು ಹೇಳಿರುವುದು ನಿಜ. ವಿಕಸಿತ ಭಾರತ ಕಲ್ಪನೆಗೆ ಪ್ರಮುಖವಾಗಿರುವ ರೈತರು, ಮಹಿಳೆಯರು, ಯುವಕರು ಹಾಗೂ ಬಡವರ ಏಳಿಗೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ನಾವೀನ್ಯತೆ ಹಾಗೂ ಸಂಶೋಧನೆಗೆ ಒಂದು ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ಯುವಕರಿಗೆ ಹೊಸ ಉದ್ಯೋಗಗಳು ಸಿಗುವ ನಿರೀಕ್ಷೆ. ಬಡವರು ಹಾಗೂ ಮಧ್ಯಮ ವರ್ಗದವರ ಏಳಿಗೆಗೆ ಕೇಂದ್ರ ಸರ್ಕಾರವು ಇದುವರೆಗೆ 4 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಇನ್ನೂ ಐದು ಕೋಟಿ ಮನೆಗಳನ್ನು ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದೆ. ಬಡವರಿಗೆ ಸ್ವಂತ ಮನೆ ಹೊಂದುವುದು ಜೀವಮಾನದ ಕನಸು. ಒಂದು ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನೆಲ್‌ಗಳನ್ನು ಉಚಿತವಾಗಿ ಅಳವಡಿಸಿ, ಇದರಿಂದ ಜನ ಮಾಸಿಕವಾಗಿ 300 ಯುನಿಟ್‌ಗಳವರೆಗೆ ವಿದ್ಯುತ್ ಉತ್ಪಾದನೆ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ. ಇದು ಸ್ವಂತ ಬಳಕೆಯ ಜೊತೆಗೆ ಉತ್ಪಾದಿಸಿದ ವಿದ್ಯುತ್ ಅನ್ನು ಸರ್ಕಾರಕ್ಕೇ ಮಾರಾಟ ಮಾಡುವ ಮೂಲಕ ವಾರ್ಷಿಕ ಸುಮಾರು 15 ಸಾವಿರ ರೂ. ಗಳಿಸುವ ಅವಕಾಶವೂ ಇದೆ. ಇಂಧನ ಸ್ವಾವಲಂಬನೆ ಇದರಿಂದ ಸಾಧ್ಯ.
ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಬಡವರಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಆರೋಗ್ಯ ಭದ್ರತೆ ಒದಗಿಸಲಾಗಿದೆ. ಈ ಯೋಜನೆಯನ್ನು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೂ ವಿಸ್ತರಿಸಲಾಗಿದೆ. ಬಡ ವರ್ಗದವರು ಆರೋಗ್ಯ ವಿಮೆಯಿಂದ ವಂಚಿತರಾಗಿದ್ದು, ಆರೋಗ್ಯ ಸಂಕಷ್ಟದ ಸಮಯದಲ್ಲಿ ದೊಡ್ಡ ತೊಂದರೆ ಅನುಭವಿಸುತ್ತಾರೆ. ಈ ತೊಂದರೆಯ ನಿವಾರಣೆಗೆ ಆಯುಷ್ಮಾನ್ ಭಾರತ್ ನೆರವಾಗಲಿದೆ. 9ರಿಂದ 14 ವರ್ಷ ವಯಸ್ಸಿನ ಹುಡುಗಿಯರಿಗೆ ಗರ್ಭಕಂಠದ ಕ್ಯಾನ್ಸರ್‌ಗೆ ಉಚಿತ ಲಸಿಕೆ ನೀಡಲು ಮುಂದಾಗಿರುವುದು ತುಂಬಾ ಒಳ್ಳೆಯ ಉಪಕ್ರಮ. ಎಲ್ಲಾ ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ ಹಾಗೂ ಸಕ್ಷಮ ಅಂಗನವಾಡಿ ಮತ್ತು ಪೋಷನ್ 2.0 ಕಾರ್ಯಕ್ರಮ ಸುಧಾರಣೆ ಮೂಲಕ ಮಕ್ಕಳಲ್ಲಿ ಪೌಷ್ಟಿಕತೆಯ ವೃದ್ಧಿಗೆ ಮುಂದಾಗಿದೆ.
ಉದ್ಯೋಗಿಗಳು ಹಾಗೂ ಉದ್ಯಮಿ ವರ್ಗ ಮೊದಲಾಗಿ ಬಜೆಟ್‌ನಲ್ಲಿ ಗಮನಿಸುವುದು ಆದಾಯ ಕರಗಳಲ್ಲಿ ವ್ಯತ್ಯಾಸ ಮಾಡಿದ್ದಾರೆಯೇ ಎಂಬುದನ್ನು. ಆದರೆ ವಿತ್ತ ಸಚಿವರು ಈ ಬಾರಿ ನೇರ ಮತ್ತು ಪರೋಕ್ಷ ತೆರಿಗೆಗಳ ದರಗಳನ್ನು ಬದಲಾಯಿಸಿಲ್ಲ. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ ಸ್ವರೂಪವೂ ಬದಲಾಗಿಲ್ಲ. ಚುನಾವಣೆಯ ಹೊತ್ತಿನಲ್ಲಿ ತೆರಿಗೆಯ ಜೇನುಗೂಡಿಗೆ ಕೈಹಾಕುವುದು ಬೇಡ ಎಂದು ಸರ್ಕಾರ ಭಾವಿಸಿರಬಹುದು. ಇದು ಜಾಣತನದ ನಿರ್ಧಾರವಂತೂ ಹೌದು. ಆದರೆ ತೆರಿಗೆ ಸ್ಲಾಬ್ ಇಳಿಕೆಗೆ ಬೇಡಿಕೆಯಿದೆ. ಇದನ್ನು ಮುಂದಿನ ಬಜೆಟ್‌ನಲ್ಲಿ ನಿರೀಕ್ಷಿಸಬಹುದು. ಸರ್ಕಾರವು ಮುಂದಿನ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಗುರಿಯನ್ನು GDPಯ 5.1 ಪ್ರತಿಶತಕ್ಕೆ ಇಳಿಸಿದೆ. 2026ರಲ್ಲಿ ಅದನ್ನು 4.5 ಪ್ರತಿಶತಕ್ಕೆ ಇಳಿಸಲು ಯೋಜಿಸಿದೆ. ಸಾಲದ ಹೊರೆ ಇಳಿಸುವುದು ಯಾವತ್ತಿಗೂ ಉತ್ತಮ.
ಹಳೆಯ ವಿವಾದಿತ ನೇರ ತೆರಿಗೆ ಬಾಕಿಗಳ ನೋಟೀಸ್ ಹಿಂಪಡೆಯಲು ನಿರ್ಧಾರ ಮಾಡಿರುವುದು, ಲಕ್ಷದ್ವೀಪ ಸೇರಿದಂತೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಗಳಿಗೆ ಬಡ್ಡಿ ರಹಿತ ಸಾಲ, ಅಭಿವೃದ್ಧಿಗೆ ಹಣಕಾಸು ನೀಡಲು ಮುಂದಾಗಿರುವುದು, 40,000 ಸಾಮಾನ್ಯ ರೈಲು ಬೋಗಿಗಳನ್ನು ಅತಿ ವೇಗದ ವಂದೇ ಭಾರತ್ ಆಗಿ ಪರಿವರ್ತಿಸಲು ಹೊರಟಿರುವುದು, ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸಿ ವೆಚ್ಚವನ್ನು ಕಡಿಮೆ ಮಾಡಲು ಪ್ರಧಾನ ಮಂತ್ರಿ ಗತಿ ಶಕ್ತಿ ಅಡಿಯಲ್ಲಿ ಮೂರು ಪ್ರಮುಖ ಆರ್ಥಿಕ ರೈಲ್ವೇ ಕಾರಿಡಾರ್ ನಿರ್ಮಿಸಲು ಯೋಜಿಸಿರುವುದು, ಜಲಕೃಷಿಯನ್ನು ಉತ್ತೇಜಿಸಲು ಬ್ಲೂ ಎಕಾನಮಿ 2.0 ಅನ್ನು ಪ್ರಾರಂಭಿಸಲು ನಿರ್ಧರಿಸಿರುವುದು ಇವೆಲ್ಲ ಉತ್ತಮ ಕ್ರಮಗಳಾಗಿವೆ. ಕಳೆದ 10 ವರ್ಷಗಳಲ್ಲಿ ಸರ್ಕಾರ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ ಎಂದು ಹೇಳಿಕೊಂಡಿದೆ. ಬಡತನ ನಿರ್ಮೂಲನೆಗೆ ಈ ಬಜೆಟ್ ಕೂಡ ಸಹಕಾರಿಯಾಗಲಿ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಜ್ಞಾನವಾಪಿ ಮಸೀದಿ ತಗಾದೆಗೆ ಅಂತಿಮ ತೆರೆ ಯಾವಾಗ?