ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ, ಕಡಲ ತೀರದಲ್ಲಿ ತೆಗೆಸಿಕೊಂಡ ಚೆಂದದ ಫೋಟೊಗಳನ್ನು ಅಪ್‌ಲೋಡ್ ಮಾಡಿದ ಬಳಿಕ ಲಕ್ಷದ್ವೀಪದ ಪ್ರವಾಸಿ ತಾಣಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ಯಾರು ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದೀರೋ, ನಿಮ್ಮ ಪಟ್ಟಿಯಲ್ಲಿ ಮೊದಲು ಲಕ್ಷದ್ವೀಪ ಕೂಡ ಇರಲಿ ಎಂದಿ ಮೋದಿ ಹೇಳಿದ್ದರು. ಇದನ್ನು ತಮ್ಮ ಪ್ರವಾಸೋದ್ಯಮಕ್ಕೆ ಧಕ್ಕೆ ಎಂದು ಭಾವಿಸಿದ್ದ ಮಾಲ್ದೀವ್ಸ್‌ನ ಕೆಲ ಸಚಿವರು ಅಪಹಾಸ್ಯದ, ಅಗೌರವದ ಹೇಳಿಕೆ ನೀಡಿದ್ದರು. ಮಾಲ್ಡೀವ್ಸ್‌ನ ಈ ಉದ್ಧಟತನದ ವರ್ತನೆ ತೋರಿದ ಬಳಿಕ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ಸಿಕ್ಕಿದೆ. ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿ (Minicoy Islands) ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನಿನ್ನೆ ಇಸ್ರೇಲ್ ಕೂಡ, ಲಕ್ಷದ್ವೀಪದಲ್ಲಿ ಉಪ್ಪು ನೀರಿನಿಂದ ಉಪ್ಪಿನಂಶವನ್ನು ತೆಗೆದು ಕುಡಿಯುವ ಸಿಹಿನೀರನ್ನು ಸೃಷ್ಟಿಸುವ ನಿರ್ಲವಣೀಕರಣ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಘೋಷಿಸಿದೆ. ಲಕ್ಷದ್ವೀಪಕ್ಕೆ (Lakshadweep) ತೆರಳುವವರಿಗೆ ಈಸ್ ಮೈ ಟ್ರಿಪ್ (EaseMyTrip) ಆಫರ್ ನೀಡುವುದಾಗಿ ಘೋಷಿಸಿದೆ. ಹಲವು ಗಣ್ಯರು ಕೂಡ ಲಕ್ಷದ್ವೀಪದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಬಗ್ಗೆ ಮಾತನಾಡಿದ್ದಾರೆ.
“ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿ ಎರಡು ಉದ್ದೇಶಗಳಿಗಾಗಿ ಕೇಂದ್ರ ಸರ್ಕಾರ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಚಿಂತನೆ ನಡೆಸಿದೆ. ಜನರು ಪ್ರವಾಸಕ್ಕೆ ತೆರಳಲು ಹಾಗೂ ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಕೂಡ ಇಲ್ಲಿಂದ ಹಾರಾಟ ನಡೆಸುವ, ಲ್ಯಾಂಡ್ ಆಗುವ ಉದ್ದೇಶದಿಂದ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಚಿಂತನೆ ನಡೆದಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರವು ಏರ್‌ಫೀಲ್ಡ್ ಮಾತ್ರ ನಿರ್ಮಿಸುವ ಪ್ರಸ್ತಾಪ ಹೊಂದಿತ್ತು. ಆದರೀಗ, ಸಾರ್ವಜನಿಕರಿಗೂ ಅನುಕೂಲವಾಗುವ ದಿಸೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾಪ ಹೊಂದಿದೆ” ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಲಕ್ಷದ್ವೀಪದಲ್ಲಿ ನೋಡಬೇಕಾದ ತಾಣಗಳು ಹಲವಾರಿವೆ. ತಿಳಿ ನೀಲಿ ಸಮುದ್ರದ ಮಿನಿಕಾಯ್ ದ್ವೀಪದ ಬೋಟಿಂಗ್, ದೇಶ ವಿದೇಶಗಳ ಸಾವಿರಾರು ಪಕ್ಷಿಗಳಿಗೆ ಗೂಡಾಗಿರುವ ಪಿಟ್ಟಿ ಪಕ್ಷಿಧಾಮ, ಸ್ಕೂಬಾ ಡೈವಿಂಗ್ ಮಾಡುವವರಿಗೆ ಅನುಕೂಲವಾದ ಅಮಿನಿ ಬೀಚ್, ವಿಹಾರ ಮಾಡಬಹುದಾದ ಅಗಟ್ಟಿ ದ್ವೀಪ, ಕವರತ್ತಿ ದ್ವೀಪ, ಮರೀನ್ ಮ್ಯೂಸಿಯಂ, ಅಡ್ವೆಂಚರ್ ಗೇಮ್‌ಗಳಿಗೆ ಅನುಕೂಲವಾದ ಸಮುದ್ರ ತೀರಗಳು ಇವೆಲ್ಲವೂ ಲಕ್ಷದ್ವೀಪದ ಆಕರ್ಷಣೆಗಳು. ಮಾಲ್ದೀವ್ಸ್‌ಗೆ ಲಕ್ಷದ್ವೀಪ ಯಾವುದರಲ್ಲೂ ಕಡಿಮೆಯಿಲ್ಲ.
ಲಕ್ಷದ್ವೀಪ ಮಾತ್ರವಲ್ಲ. ಭಾರತದ ತೀರಾ ಸನಿಹದಲ್ಲೂ ನಮ್ಮದೇ ಆದ ಹಲವು ಪುಟ್ಟಪುಟ್ಟ ದ್ವೀಪಗಳು ಕೂಡ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿವೆ. ಉದಾಹರಣೆಗೆ ನಮ್ಮದೇ ಮಲ್ಪೆಯ ಸೈಂಟ್ ಮೇರೀಸ್ ದ್ವೀಪ. ಬಸಾಲ್ಟ್-ರಯೋಡೇಸೈಟು ವರ್ಗದ ಷಡ್ಭುಜಾಕೃತಿಯ ಶಿಲೆಗಳಿಂದ ಕೂಡಿರುವ ಈ ದ್ವೀಪ ಅತೀ ವಿಶಿಷ್ಟ. ಹವಳದ ಬಂಡೆಗಳನ್ನು ಹೊಂದಿರುವ ನೇತ್ರಾಣಿ ದ್ವೀಪ ಕೂಡ ಅತ್ಯಂತ ಮನೋಹರ. ಇಲ್ಲಿಗೆಲ್ಲಾ ಸುಲಭ ಸಾರಿಗೆ ವ್ಯವಸ್ಥೆ ಮಾಡಿದರೆ, ಕುತೂಹಲದಿಂದ ಆಗಮಿಸುವ ಪ್ರವಾಸಿಗರಿಗೆ ನೋಡಲು ಸರಿಯಾದ ಮೂಲಸೌಕರ್ಯಗಳನ್ನು ಒದಗಿಸಿದರೆ ಇವು ಅತ್ಯಂತ ಶ್ರೀಮಂತವಾದ ಪ್ರವಾಸೀ ತಾಣಗಳಾಗಬಲ್ಲವು. ಸದ್ಯ ಇವುಗಳಿಗೆ ತೆರಳಲು ಸಾಮಾನ್ಯರು ಕಷ್ಟಪಡಬೇಕಿದೆ. ಹಾಗೆಯೇ ಅಂಡಮಾನ್ ನಿಕೋಬಾರ್ ದ್ವೀಪಗಳು, ದಿಯು- ದಮನ್ ದ್ವೀಪಗಳು ಕೂಡ ಸೊಗಸಾಗಿವೆ. ಇವೆರಡೂ ಕೇಂದ್ರಾಡಳಿತ ಪ್ರದೇಶಗಳ ತಿಳಿ ನೀಲಿ ಸಮುದ್ರ ತೀರಗಳು, ಬ್ರಿಟಿಷ್- ಪೋರ್ಚುಗೀಸ್ ಕಾಲದ ವಸಾಹತು ಸ್ಮಾರಕಗಳು, ಸಾಗರ ಸಾಹಸ ಕ್ರೀಡೆಗಳಿಗೆ ಅವಕಾಶ ಇವೆಲ್ಲವೂ ಯಾವುದೇ ವಿದೇಶಿ ದ್ವೀಪದೇಶಗಳಿಗೆ ಕಡಿಮೆಯಿಲ್ಲ.
ಇದನ್ನೂ ಓದಿ: ಮೋದಿ ಭೇಟಿ, ವಿವಾದ ಬಳಿಕ ಲಕ್ಷದ್ವೀಪಕ್ಕೆ ಶುಕ್ರದೆಸೆ; ಶೀಘ್ರವೇ ಹೊಸ ಏರ್‌ಪೋರ್ಟ್ ನಿರ್ಮಾಣ
ಹಾಗೇ ಲಕ್ಷದ್ವೀಪ ಕೂಡ. ಇಲ್ಲಿಗೆ ಅತ್ಯಂತ ವಿರಳವಾದ ವಿಮಾನ ಸೌಕರ್ಯವಿದೆ. ಇಲ್ಲಿಯ ಮೂಲಸೌಕರ್ಯವೂ ಉತ್ತಮ ಮಟ್ಟದಲ್ಲಿಲ್ಲ. ಉಳಿದುಕೊಳ್ಳಲು ವಸತಿ ವ್ಯವಸ್ಥೆಯೂ ಸಾಕಷ್ಟಿಲ್ಲ. ಎಷ್ಟೋ ಕಾಲದಿಂದ ಇಲ್ಲಿಂದ ಕಾಂಗ್ರೆಸ್ ಸಂಸದರು ಆರಿಸಿ ಬರುತ್ತಿದ್ದಾರೆ. ಆದರೆ ಒಳ್ಳೆಯ ರಸ್ತೆಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಆಗಿಲ್ಲ. ಲಕ್ಷದ್ವೀಪದ ಸೌಂದರ್ಯ, ಅಲ್ಲಿಗೆ ತೆರಳಬಹುದಾದ ಸಾಧ್ಯತೆ, ಉಳಿದುಕೊಳ್ಳುವ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ನಮ್ಮ ಜನರಲ್ಲೇ ಅಜ್ಞಾನವಿದೆ. ಇನ್ನು ಹೊರಗಿನವರಲ್ಲಿ ಇವುಗಳ ಬಗ್ಗೆ ಪ್ರಚಾರ ಮಾಡುವ ಕಾರ್ಯವಂತೂ ನಮ್ಮಲ್ಲಿ ಏನೇನೂ ನಡೆದೇ ಇಲ್ಲ. ಹಂಪಿ ಯುನೆಸ್ಕೋ ಪಟ್ಟಿಯಲ್ಲಿ ಜಾಗ ಪಡೆದ ಬಳಿಕ ಇಲ್ಲಿಗೆ ಬರುವ ಪ್ರವಾಸಿಗರು ಹೆಚ್ಚಾದರು. ಅಂದರೆ ಜಾಗತಿಕವಾಗಿ ತಮ್ಮ ತಾಣದ ಸೌಂದರ್ಯವನ್ನು ಜಾಹೀರು ಮಾಡುವ ಅಭಿಯಾನ ದೊಡ್ಡ ಪ್ರಮಾಣದಲ್ಲಿ ಆದರೆ ಪ್ರವಾಸಿಗರು ತಾನಾಗಿ ಹರಿದುಬರುತ್ತಾರೆ. ಹಾಗೆಯೇ ಮಾಲ್ದೀವ್ಸ್ ಎಂದು ಮಾರುಹೋಗುವ ಮುನ್ನ ನಮ್ಮದೇ ದೇಶದ ತಾಣಗಳು ಅನ್ವೇಷಿಸುವ ಕುತೂಹಲ ಕೂಡ ನಮ್ಮಲ್ಲಿ ಮೂಡಬೇಕಾದುದು ಮುಖ್ಯ. ದೇಶದ ಪ್ರವಾಸಿ ತಾಣಗಳ ಅಭಿವೃದ್ಧಿಯಿಂದ ಅಲ್ಲಿನ ಜನರಿಗೂ ಲಾಭ, ಸರ್ಕಾರಿ ಖಜಾನೆಗೂ ಲಾಭವಾಗಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ