Site icon Vistara News

ವಿಸ್ತಾರ ಸಂಪಾದಕೀಯ: ಶೇ.7.3 ಜಿಡಿಪಿ ನಿರೀಕ್ಷೆ, ಈಡೇರುತ್ತಿದೆ ಭಾರತದ ಪ್ರಗತಿಯ ಆಕಾಂಕ್ಷೆ

Vistara editorial, Expectation of 7.3 percent GDP in current financial Year

ಮಾರ್ಚ್‌ಗೆ ಮುಕ್ತಾಯವಾಗಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ(current fiscal year) ಭಾರತದ ಆರ್ಥಿಕತೆಯು ಶೇ.7.3ರಷ್ಟು ಬೆಳವಣಿಗೆ ಕಾಣಲಿದೆ(GDP Growth) ಎಂದು ಕೇಂದ್ರ ಸರ್ಕಾರವು ಅಂದಾಜಿಸಿದೆ(Indian Government). ಜಾಗತಿಕ ಪ್ರಮುಖ ರಾಷ್ಟ್ರಗಳ ಪೈಕಿ ಭಾರತದ ಈ ಅಂದಾಜು ಅತಿ ಹೆಚ್ಚು. ಉತ್ಪಾದನಾ ವಲಯದ ಮೇಲೆ ಸರ್ಕಾರ ಸಾಕಷ್ಟು ವೆಚ್ಚ ಮಾಡುತ್ತಿದೆ. ಅದರ ಪರಿಣಾಮವೇ ಅಭಿವೃದ್ಧಿ ದರ ಏರಿಕೆಯಾಗಲಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ಅಭಿಪ್ರಾಯಪಟ್ಟಿರುವುದು ಸರಿಯಾಗಿಯೇ ಇದೆ. ಉತ್ಪಾದನೆ ಮತ್ತು ಗಣಿಗಾರಿಕೆ ವಲಯವೂ ಸೇರಿದಂತೆ ಎಲ್ಲ ವಲಯಗಳ ಮೇಲೂ ಸರ್ಕಾರವು ನಿರ್ದಿಷ್ಟ ಕಾರ್ಯಸೂಚಿಯೊಂದಿಗೆ ಮುನ್ನಡೆಯುತ್ತಿರುವುದೇ ವಿಷಮ ಸ್ಥಿತಿಯಲ್ಲೂ ದೇಶದ ಆರ್ಥಿಕಾಭಿವೃದ್ಧಿ ಏರುಗತಿಯಲ್ಲಿ ಸಾಗುತ್ತಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಶ್ಲಾಘಿಸೋಣ(Vistara editorial).

ಕಳೆದ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಅಭಿವೃದ್ಧಿ ದರವನ್ನು ಶೇ.6.5ರಿಂದ ಅಂದಾಜಿನಿಂದ ಶೇ.7ಕ್ಕೆ ಹೆಚ್ಚಿಸಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಈಗ ತನ್ನ ಅಂದಾಜು ಬೆಳವಣಿಗೆ ದರವನ್ನು ಪ್ರಕಟಿಸಿದೆ. ಜಿಡಿಪಿಯ ಸುಮಾರು 17 ಪ್ರತಿಶತದಷ್ಟು ಪಾಲನ್ನು ಹೊಂದಿರುವ ಉತ್ಪಾದನಾ ವಲಯವು 2023-24 ರಲ್ಲಿ ವರ್ಷದಿಂದ ವರ್ಷಕ್ಕೆ 6.5 ಶೇಕಡಾ ವಿಸ್ತರಿಸಲಿದೆ. ವರ್ಷದ ಹಿಂದಿನ 1.3 ಪ್ರತಿಶತಕ್ಕೆ ಹೋಲಿಸಿದರೆ, ನಿರ್ಮಾಣ ಉತ್ಪಾದನೆಯು ಶೇಕಡಾ 10.7 ರಷ್ಟು ಬೆಳೆಯುತ್ತಿದೆ. ಹಿಂದಿನ ವರ್ಷಕ್ಕಿಂತ 10 ಪ್ರತಿಶತದಷ್ಟು ಹೆಚ್ಚು ಎನ್ನುತ್ತಿದೆ ರಾಷ್ಟ್ರೀಯ ಸಾಂಖ್ಯಿಕ ಕಚೇರಿ. ಆದರೆ, ಚಿಂತೆಗೀಡು ಮಾಡುವ ವಿಷಯವೂ ಇದೆ. ದೇಶದ ಒಟ್ಟು ಜಿಡಿಪಿಗೆ ಶೇ.15ರಷ್ಟು ಕಾಣಿಕೆ ನೀಡುವ ಕೃಷಿ ವಲಯವು ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅದರ ಅಭಿವೃದ್ಧಿ ದರವು 1.8 ಪ್ರತಿಶತದಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಈ ದರವು ಶೇ.4ರಷ್ಟಿತ್ತು ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ.

ಭಾರತವು 2030ರ ವೇಳೆಗೆ ವಿಶ್ವದಲ್ಲೇ ಮೂರನೇ ಬೃಹತ್‌ ಆರ್ಥಿಕತೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟಲಿಜೆನ್ಸ್‌ ತಿಂಗಳ ಹಿಂದೆ ತನ್ನ ವರದಿಯಲ್ಲಿ ತಿಳಿಸಿತ್ತು. ಭಾರತದ ಆರ್ಥಿಕತೆಯು ಜಪಾನ್‌ ಆರ್ಥಿಕತೆಯನ್ನೇ ಮೀರಿಸಿ ಮೂರನೇ ಸ್ಥಾನಕ್ಕೇರಲಿದೆ. ಸದ್ಯ ಜಪಾನ್‌ ಆರ್ಥಿಕತೆಯ ಮೌಲ್ಯವು 4.2 ಲಕ್ಷ ಕೋಟಿ ಡಾಲರ್‌ ಇದ್ದರೆ, ಭಾರತದ ಆರ್ಥಿಕತೆಯ ಮೊತ್ತ 3.5 ಲಕ್ಷ ಕೋಟಿ ಡಾಲರ್‌. ಆದರೆ, 2030ರ ವೇಳೆಗೆ ಭಾರತದ ಆರ್ಥಿಕತೆ ಮೌಲ್ಯವು 7.30 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಗಲಿದೆ. ಆ ಮೂಲಕ ಜಪಾನ್‌ ಆರ್ಥಿಕತೆಯನ್ನೇ ಹಿಂದಿಕ್ಕಿ ಭಾರತವು ಜಗತ್ತಿನೇ ಮೂರನೇ ಬೃಹತ್‌ ವಿತ್ತೀಯ ರಾಷ್ಟ್ರವಾಗಲಿದೆ ಎಂಬುದು ವರದಿಯ ಸಾರಾಂಶವಾಗಿತ್ತು. ಭಾರತದ ನಿರಂತರ ಬೆಳವಣಿಗೆಯಲ್ಲಿನ ವಿಶ್ರಾಂತ ರಹಿತ ಪಯಣದ ಪರಿಣಾಮವೇ ಇಂಥದೊಂದು ಯಶಸ್ಸು ಕಾಣಲು ಸಾಧ್ಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಂತೂ, ಎರಡು ವರ್ಷಗಳಿಂದ ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆ ಗುರಿಯ ಕುರಿತು ಹೇಳುತ್ತಲೇ ಬಂದಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಕೂಡ ಮಾಡುತ್ತಿದ್ದಾರೆ.

ಕೊರೊನಾ ತಂದೊಡ್ಡಿದ ಸವಾಲಿನ ಮಧ್ಯೆಯೂ 2023ರಲ್ಲಿ ಭಾರತದ ಆರ್ಥಿಕತೆಯು ಗಣನೀಯವಾಗಿ ಸುಧಾರಣೆಯತ್ತ ಸಾಗುತ್ತಿದೆ. ಭಾರತ ಸರ್ಕಾರ ಕೈಗೊಂಡ ಹಲವು ಆರ್ಥಿಕ ನೀತಿಗಳು ಈ ಬೆಳವಣಿಗೆಗೆ ಕಾರಣವಾಗಿದೆ. 2014ರಲ್ಲಿ ಭಾರತವು ಜಗತ್ತಿನಲ್ಲಿ 10ನೇ ಬೃಹತ್‌ ಆರ್ಥಿಕತೆ ಹೊಂದಿದ ರಾಷ್ಟ್ರ ಎನಿಸಿತ್ತು. ಈಗ ಜಗತ್ತಿನೇ ಐದನೇ ಬಲಿಷ್ಠ ಆರ್ಥಿಕತೆಯ ರಾಷ್ಟ್ರವಾಗಿದೆ. ಬ್ರಿಟನ್‌ ಹಾಗೂ ಫ್ರಾನ್ಸ್‌ ಆರ್ಥಿಕತೆಯನ್ನೂ ಭಾರತ ಹಿಂದಿಕ್ಕಿದೆ. ಜರ್ಮನಿ ಕೂಡ ನಮ್ಮೊಂದಿಗೆ ಜಿದ್ದಾಜಿದ್ದಿಗೆ ಬಿದ್ದಿದೆ ಎಂಬುದನ್ನು ಮರೆಯಬಾರದು.

ಮತ್ತೊಂದೆಡೆ, ದೇಶದ ಮಾರುಕಟ್ಟೆ ಕೂಡ ಆತ್ಮವಿಶ್ವಾಸಭರಿತವಾಗಿ ಮುನ್ನುಗ್ಗುತ್ತಿದೆ. ಒಂದು ದೇಶದ ಮಾರುಕಟ್ಟೆಯಲ್ಲಿ ಈ ಪ್ರಮಾಣದ ಬೆಳವಣಿಗೆಯಾಗುವುದು, ಜಿಡಿಪಿ ನಿರಂತರವಾಗಿ ಪ್ರಗತಿ ತೋರಿಸುವುದು ಯಾವಾಗ ಎಂದರೆ, ಆ ದೇಶದ ಮಾರುಕಟ್ಟೆಯಲ್ಲಿ ಒಳಗಿನ ಹಾಗೂ ಹೊರಗಿನ ಹೂಡಿಕೆದಾರರ ವಿಶ್ವಾಸ ಹೆಚ್ಚಿದಾಗ. ಅಂದರೆ ಇಲ್ಲಿ ಒಳ್ಳೆಯ ಹೂಡಿಕೆ ಮಾಡಬಹುದು, ಸುರಕ್ಷಿತ ವಾತಾವರಣವಿದೆ, ಇಲ್ಲಿ ಪ್ರಗತಿಯ ಸಾಧ್ಯತೆಯಿದೆ ಎಂದು ತೋರಿದಾಗ ಮಾತ್ರ ಅಂಥಲ್ಲಿ ಹಣ ಹೂಡಲಾಗುತ್ತದೆ. ಇಂತಹ ಆತ್ಮವಿಶ್ವಾಸದ ಪರಿಣಾಮವಾಗಿಯೇ ದೇಶದ ಜಿಡಿಪಿ ಏರಿಕೆಯಾಗಿದೆ ಹಾಗೂ ಈಕ್ವಿಟಿ ಮಾರುಕಟ್ಟೆ ಉತ್ತುಂಗ ಮುಟ್ಟಿದೆ.

ಚೀನಾದಂಥ ಹಿತಶತ್ರು, ಪಾಕ್‌ನಂಥ ವೈರಿಗಳು ಅಕ್ಕಪಕ್ಕದಲ್ಲಿದ್ದಾಗಲೂ ಎದೆಗುಂದದೆ ನಾವು ವಿಶ್ವದ ದೊಡ್ಡ ದೇಶಗಳನ್ನು ಮಿತ್ರರನ್ನಾಗಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳನ್ನು ನಮ್ಮ ದೇಶದ ಮಾರುಕಟ್ಟೆಗೆ ಬೇಕಾದಂತೆ ಕುಣಿಸುತ್ತಿದ್ದೇವೆ. ನಮ್ಮ ಜನಸಂಖ್ಯಾ ಬಂಡವಾಳ, ದುಡಿಯುವ ವರ್ಗ ನಮ್ಮ ಮಾರುಕಟ್ಟೆಗೆ ಪೂರಕವಾಗಿದೆ. ಇಲ್ಲಿನ ಪ್ರತಿಭೆಗಳು ಯುಎಸ್‌, ಯುಕೆಯ ಆರ್ಥಿಕತೆಗಳನ್ನು ಕಟ್ಟುತ್ತಿವೆ. ಜಿಡಿಪಿ ಏರಿಕೆಯ ಪರಿಣಾಮವು, ಪ್ರಧಾನಿಯವರು ಹೇಳಿದಂತೆ ನಮ್ಮ ಜನತೆಯ ಬಡತನದ ತ್ವರಿತ ನಿರ್ಮೂಲನೆ ಮತ್ತು ಬದುಕಿನ ಸ್ಥಿತಿಗತಿ ಸುಧಾರಣೆಗೂ ಮೂಲವಾಗಬೇಕು. ಆಗ ಜಿಡಿಪಿ ಬೆಳವಣಿಗೆಗೆ ಹೆಚ್ಚಿನ ಅರ್ಥ ಬರುತ್ತದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಅತಿಥಿ ಉಪನ್ಯಾಸಕರ ಅಳಲು ಆಲಿಸಿ

Exit mobile version