ಕೆಂಪು ಸಮುದ್ರದಲ್ಲಿ (Red Sea) 22 ಭಾರತೀಯರಿದ್ದ ಮರ್ಲಿನ್ ಲುವಾಂಡ ಎಂಬ ಬ್ರಿಟನ್ ಆಯಿಲ್ ಟ್ಯಾಂಕರ್ (Oil Tanker) ಮೇಲೆ ಹೌತಿ ಉಗ್ರರು ದಾಳಿ ನಡೆಸಿದ್ದಾರೆ. ಹೌತಿ ಉಗ್ರರ ದಾಳಿಯಿಂದಾಗಿ ಹಡಗು ಹೊತ್ತಿ ಉರಿದಿದ್ದು, ಭಾರತೀಯರ ರಕ್ಷಣೆಗಾಗಿ ದೇಶದ ನೌಕಾಪಡೆಯು ಹರಸಾಹಸ ಪಡುತ್ತಿದೆ. ಗಾಜಾದ ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಪ್ರತಿದಾಳಿ ನಡೆಸಿದ ಬಳಿಕ ಕೆಂಪು ಸಮುದ್ರದಲ್ಲಿ ಇರಾಕ್ ಬೆಂಬಲಿತ ಹೌತಿ ಉಗ್ರರ (Houthis) ಉಪಟಳ ಹೆಚ್ಚಾಗಿದೆ. ವಾಣಿಜ್ಯ ಹಡಗುಗಳನ್ನು ದಾಳಿ ಮಾಡುವ ಮೂಲಕ ವ್ಯಾಪಾರ ವಹಿವಾಟಿಗೆ ಪೆಟ್ಟು ನೀಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ, ತೈಲ ಆಮದು ನೆಚ್ಚಿಕೊಂಡಿರುವ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ತೊಂದರೆಗೆ ಸಿಲುಕಲಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯ ಜಗತ್ತಿನ ಮುಂದಿದೆ.
ಜನವರಿ 26ರಂದು ಹೌತಿ ಉಗ್ರರು ಬ್ರಿಟನ್‌ನ ತೈಲ ಟ್ಯಾಂಕರ್ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಇದರ ಕುರಿತು ಭಾರತೀಯ ನೌಕಾಪಡೆಯು ಮಾಹಿತಿ ನೀಡಿದೆ. ಭಾರತೀಯರ ರಕ್ಷಣೆಗಾಗಿ ಕ್ಷಿಪಣಿ ನಿರೋಧಕ ಐಎನ್‌ಎಸ್ ವಿಶಾಖಪಟ್ಟಣಂ ನೌಕೆಯನ್ನು ನಿಯೋಜನೆ ಮಾಡಲಾಗಿದೆ. ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಉಪಟಳ ಜಾಸ್ತಿಯಾದ ಹಿನ್ನೆಲೆಯಲ್ಲಿ ಯೆಮೆನ್‌ನಲ್ಲಿರುವ ಹೌತಿ ಉಗ್ರರ ಕ್ಷಿಪಣಿ ಮೇಲೆ ಅಮೆರಿಕ ದಾಳಿ ನಡೆಸಿ, ಕ್ಷಿಪಣಿಯನ್ನು ಧ್ವಂಸಗೊಳಿಸಿದೆ. ಕಳೆದ ಎರಡ್ಮೂರು ವಾರದಲ್ಲಿ ನಿರಂತರವಾಗಿ ಹಡಗುಗಳ ಮೇಲೆ ದಾಳಿ ನಡೆಯುತ್ತಿರುವುದು, ಭಾರೀ ಸಮಸ್ಯೆಯನ್ನು ಸೃಷ್ಟಿಸಿದೆ.
ಯೆಮೆನ್‌ನ ‘ಅನ್ಸಾರ್ ಅಲ್ಲಾ’ ಎಂಬ ಅಧಿಕೃತ ಹೆಸರು ಹೊಂದಿರುವ ಹೌತಿ ಮೂಮೆಂಟ್, ತನ್ನ ಭಯೋತ್ಪಾದನಾ ಕೃತ್ಯಗಳಿಂದಾಗಿ ಉಗ್ರ ಸಂಘಟನೆಯಾಗಿ ಬದಲಾಗಿದೆ. ಅನ್ಸಾರ್ ಅಲ್ಲಾ ಎಂದರೆ ದೇವರ ಬೆಂಬಲಿಗರು ಎಂದರ್ಥ. ಶಿಯಾ ಇಸ್ಲಾಮ್‌ವಾದಿಗಳ ನೇತೃತ್ವ ಇರುವ ಹೌತಿ ತನ್ನ ಹಿಂಸಾತ್ಮಕ ಚಟುವಟಿಕೆಗಳಿಂದಾಗಿ ಅಂತಾರಾಷ್ಟ್ರೀಯ ಶಾಂತಿಗೆ ಬೆದರಿಕೆಯೊಡ್ಡಿದೆ. ವಿಶೇಷವಾಗಿ ಅಮೆರಿಕ, ಇಸ್ರೇಲ್ ಮತ್ತು ಸೌದಿ ಅರೆಬಿಯಾ ವಿರುದ್ಧ ಮಾತ್ರವೇ ಹೌತಿ ಉಗ್ರರು ಈಗ ಕತ್ತಿ ಮಸೆಯುತ್ತಿಲ್ಲ. ಕೆಂಪು ಸಮುದ್ರ ಬಳಸುವ ಎಲ್ಲ ರಾಷ್ಟ್ರಗಳಿಗೂ ಬೆದರಿಕೆ ತಪ್ಪಿದ್ದಲ್ಲ. ಎಲ್ಲ ದೇಶಗಳು ಒಟ್ಟಾಗಿ ಈ ಉಗ್ರರ ಹುಟ್ಟಡಗಿಸಬೇಕಿದೆ.
ಪ್ರಾದೇಶಿಕ ಶಾಂತಿ ಮತ್ತು ಸುಗಮ ವ್ಯಾಪಾರ ವಹಿವಾಟಿಗಾಗಿ ಹೌತಿ ಉಗ್ರರನ್ನು ಮಟ್ಟ ಹಾಕುವ ಅನಿವಾರ್ಯತೆ ಈ ಹಿಂದೆಂದಿಗಿಂತಲೂ ಈಗ ಹೆಚ್ಚಲು ಅನೇಕ ಕಾರಣಗಳಿವೆ. ಹೌತಿ ಬಂಡುಕೋರರಿಂದಾಗಿ ಕೆಂಪು ಸಮುದ್ರದಲ್ಲಿ ತಲೆದೋರುತ್ತಿರುವ ನಿರಂತರ ಸಂಘರ್ಷಗಳು ವಿಶ್ವಾದ್ಯಂತ ಪೂರೈಕೆ ಸರಪಳಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ವರ್ಲ್ಡ್ ಎಕನಾಮಿಕ್ ಫೋರಮ್ ಅಧ್ಯಕ್ಷರಾದ ಬೋರ್ಜ್ ಬ್ರೆಂಡೆ ಅವರ ಪ್ರಕಾರ, ಈ ಪರಿಸ್ಥಿತಿಯು ಭಾರತದಂತಹ ತೈಲ ಆಮದುಗಳನ್ನು ಅವಲಂಬಿಸಿರುವ ರಾಷ್ಟ್ರಗಳಿಗೆ ತೈಲ ಬೆಲೆಯಲ್ಲಿ $10-20 (₹820- ₹1640) ಏರಿಕೆಗೆ ಕಾರಣವಾಗುತ್ತದೆ. ಈ ಹೆಚ್ಚಳವು ಭಾರತೀಯ ಆರ್ಥಿಕತೆಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದಿದ್ದಾರೆ. ಇದು ಕೇವಲ ಭಾರತದ ಪರಿಸ್ಥಿತಿ ಅಲ್ಲ. ಬಹುಶಃ ಬಹುತೇಕ ರಾಷ್ಟ್ರಗಳ ಹೌತಿ ಉಗ್ರರ ಉಪಟಳದ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಕೆಂಪು ಸಮುದ್ರದಲ್ಲಿನ ಹಡಗುಗಳ ಮೇಲಿನ ದಾಳಿಯು ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ವ್ಯಾಪಾರದ ಕ್ರಮವನ್ನು ಅಸ್ತವ್ಯಸ್ತಗೊಳಿಸಿದೆ. ಹಡಗುಗಳು ಸುರಕ್ಷಿತ ಮಾರ್ಗಕ್ಕಾಗಿ ದಕ್ಷಿಣ ಆಫ್ರಿಕಾದ ಸುತ್ತಲೂ ಸುತ್ತಿ ಬರುವುದರಿಂದ ಸಾಗಣೆ ಸಮಯ 10- 15 ದಿನಗಳು ಹೆಚ್ಚಾಗುತ್ತಿದೆ. ವ್ಯಾಪಾರ ವಿಸ್ತರಣೆಯು ಕಳೆದ ವರ್ಷ 3.4 ಶೇಕಡಾದಿಂದ 0.8 ಶೇಕಡಾಕ್ಕೆ ಇಳಿದಿದೆ. ಹಾಗೆಯೇ, ಉಗ್ರರಿಗೆ ಹೆದರಿ ಕೆಂಪು ಸಮುದ್ರ ದಾರಿಯಿಂದ ದೂರ ಸರಿಯಲು ಸಾಧ್ಯವಿಲ್ಲ. ವಾರಗಟ್ಟಲೆ ಸೂಯೆಜ್ ಕಾಲುವೆಯನ್ನು ಮುಚ್ಚುವುದು ಸಹ ಜಾಗತಿಕ ಪೂರೈಕೆ ಸರಪಳಿಯ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ತೈಲ ಬೆಲೆಗಳ ಮೇಲೆ ಮತ್ತು ದೊಡ್ಡ ತೈಲ-ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.
ಇನ್ನು ಪ್ರಾದೇಶಿಕ ಶಾಂತಿ ಸ್ಥಾಪನೆಯ ಹಿನ್ನೆಲೆಯಲ್ಲೂ ಇರಾಕ್ ಬೆಂಬಲಿತ ಹೌತಿಯನ್ನು ಬೇರು ಸಮೇತ ಕಿತ್ತು ಹಾಕುವುದು ಅನಿವಾರ್ಯವಾಗಿದೆ. ಮಧ್ಯ ಪ್ರಾಚ್ಯದ ಬಹುತೇಕ ರಾಷ್ಟ್ರಗಳು ರಾಜಕೀಯ ಅಸ್ಥಿರತೆಯನ್ನು ಪೋಷಿಕೊಂಡು ಬಂದಿವೆ. ಪರಿಣಾಮ ಹೌತಿಯಂಥ ಸಂಘಟನೆಗಳು ಉಗ್ರ ಕೃತ್ಯಗಳನ್ನು ನಡೆಸುವುದು ಸಲೀಸಾಗಿದೆ. ಇದು ಕೇವಲ ಮಧ್ಯ ಪ್ರಾಚ್ಯ ರಾಷ್ಟ್ರಗಳ ಸಮಸ್ಯೆ ಎಂದು ಜಗತ್ತು ಸುಮ್ಮನಿದ್ದರೆ ಮುಂದೊಂದು ದಿನ ಈ ಭಯೋತ್ಪಾದನಾ ಕೃತ್ಯಗಳು ಎಲ್ಲ ದೇಶಗಳ ಬಾಗಿಲುಗಳಲ್ಲೇ ನಡೆಯಬಹುದು. ಹಾಗಾಗಿ, ಹೌತಿ ಉಗ್ರರ ಸಮಸ್ಯೆಯನ್ನು ಕೇವಲ ಪ್ರಾದೇಶಿಕವಾಗಿ ನೋಡದೆ, ಸಮಗ್ರವಾಗಿ ಪರಿಗಣಿಸಬೇಕು ಮತ್ತು ವಿಶ್ವಶಾಂತಿಗಾಗಿ ಹೌತಿ ಮಾತ್ರವಲ್ಲದೇ ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಎಲ್ಲ ಉಗ್ರ ಸಂಘಟನೆಗಳನ್ನು ಮಟ್ಟ ಹಾಕುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯವು ತಕ್ಷಣ ಕಾರ್ಯಪ್ರವೃತ್ತರಾಗುವುದು ಅತ್ಯಗತ್ಯ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ವಿಪಕ್ಷ ಮೈತ್ರಿಕೂಟ ಚೂರು, ಅಧಿಕಾರದಾಟ ಜೋರು!