ಈ ಸಲದ ಲೋಕಸಭೆ ಚುನಾವಣೆ (Lok Sabha Election 2024) ಘೋಷಣೆಯಾದಾಗಿನಿಂದ ಈವರೆಗೆ ಚುನಾವಣಾ ಆಯೋಗದ ಅಧಿಕಾರಿಗಳು ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಹಣವನ್ನು ಜಪ್ತಿ ಮಾಡಿದ್ದಾರೆ. ಚುನಾವಣಾ ಆಯೋಗದ (Election Commission) ಅಧಿಕಾರಿಗಳು ಇದುವರೆಗೆ ದಾಖಲೆ ಇಲ್ಲದೆ 4,650 ಕೋಟಿ ರೂ. ಜಪ್ತಿ ಮಾಡಿರುವ ಕುರಿತು ಆಯೋಗ ಮಾಹಿತಿ ನೀಡಿದೆ. “ಇದು ದೇಶದ ಲೋಕಸಭೆ ಚುನಾವಣೆಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತದ ಹಣದ ದಾಖಲೆ. ಅದರಲ್ಲೂ, ಮಾರ್ಚ್ 1ರಿಂದ ಇದುವರೆಗೆ ಅಧಿಕಾರಿಗಳು ನಿತ್ಯ ಸರಾಸರಿ 100 ಕೋಟಿ ರೂ. ಜಪ್ತಿ ಮಾಡಿದಂತಾಗಿದೆ” ಎಂದು ಆಯೋಗ ಹೇಳಿದೆ.
2019ರಲ್ಲಿ ಚುನಾವಣೆ ಆಯೋಗವು ಹೀಗೆ ದಾಖಲೆಯಿಲ್ಲದ 3,475 ಕೋಟಿ ರೂ. ವಶಪಡಿಸಿಕೊಂಡಿತ್ತು. ನಗದು, ಉಚಿತ ಕೊಡುಗೆಗಳು, ಉಪಕರಣಗಳು, ಡ್ರಗ್ಸ್, ಚಿನ್ನಾಭರಣ ಸೇರಿ ಇಷ್ಟೊಂದು ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 1,279 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದರೆ, ಈ ಬಾರಿ 2,068 ಕೋಟಿ ರೂ. ಮೌಲ್ಯದ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಇರಾನ್ - ಇಸ್ರೇಲ್ ಯುದ್ಧ ತಪ್ಪಿಸಲೇಬೇಕಿದೆ
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುವುದು, ಆಯೋಗದ ಅಧಿಕಾರಿಗಳು ಕೋಟ್ಯಂತರ ರೂ. ವಶಪಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ಚುನಾವಣಾ ಸುಧಾರಣೆ, ಮತದಾರರ ಸಾಕ್ಷರತೆ ಹೆಚ್ಚಿದಂತೆ ಈ ಪ್ರಮಾಣ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು; ಅದು ಹುಸಿಯಾಗಿದೆ. ಹೆಚ್ಚಿನ ಕಡೆ ಹಾಕಲಾದ ಚೆಕ್‌ಪೋಸ್ಟ್‌ಗಳು, ಮಾಹಿತಿದಾರರು ಹಾಗೂ ಅಧಿಕಾರಿಗಳ ಹದ್ದಿನ ಕಣ್ಣಿನಿಂದಾಗಿ ಹಲವು ಪ್ರಕರಣಗಳು ಸಿಕ್ಕಿಬಿದ್ದಿವೆ. ಆದರೂ ಸಿಗದೇ ತಪ್ಪಿಸಿಕೊಳ್ಳುತ್ತಿರುವುದು ಇದರ ಹತ್ತು ಪಟ್ಟು, ನೂರು ಪಟ್ಟು ಇರಬಹುದು. ಚುನಾವಣೆಗೆ ನಿಲ್ಲುವ ಒಬ್ಬ ಅಭ್ಯರ್ಥಿ ಪ್ರಚಾರಕ್ಕೆ ಎಷ್ಟು ಹಣ ವೆಚ್ಚ ಮಾಡಬಹುದು? ಇದಕ್ಕೆ ಮಿತಿಯನ್ನೂ ಚುನಾವಣಾ ಆಯೋಗವೇ ವಿಧಿಸಿದೆ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿ 95 ಲಕ್ಷ ರೂ., ವಿಧಾನಸಭೆ ಚುನಾವಣೆ ಅಭ್ಯರ್ಥಿ 40 ಲಕ್ಷ ರೂ. ವೆಚ್ಚ ಮಾಡಬಹುದು. ಇದು ಚುನಾವಣಾ ಅಭ್ಯರ್ಥಿ ಸಾರ್ವಜನಿಕ ಸಭೆಗಳು, ರ್ಯಾಲಿಗಳು, ಜಾಹೀರಾತುಗಳು, ಪೋಸ್ಟರ್‌ಗಳು, ಬ್ಯಾನರ್‌ಗಳು, ವಾಹನಗಳು ಮತ್ತು ಜಾಹೀರಾತುಗಳ ಮೇಲಿನ ವೆಚ್ಚಗಳನ್ನಲ್ಲೆ ಒಳಗೊಂಡು ಮಾಡಬಹುದಾದ ಖರ್ಚು.
ಪ್ರಜಾಪ್ರತಿನಿಧಿ ಕಾಯ್ದೆ (RPA)- 1951ರ ಸೆಕ್ಷನ್ 77ರ ಅಡಿಯಲ್ಲಿ, ಪ್ರತಿಯೊಬ್ಬ ಅಭ್ಯರ್ಥಿಯೂ ತಾವು ನಾಮನಿರ್ದೇಶನಗೊಂಡ ದಿನಾಂಕ ಮತ್ತು ಫಲಿತಾಂಶದ ಘೋಷಣೆಯ ದಿನಾಂಕದ ನಡುವೆ ಮಾಡಿದ ಎಲ್ಲಾ ವೆಚ್ಚಗಳ ಸರಿಯಾದ ಲೆಕ್ಕ ಇಟ್ಟುಕೊಂಡು, ಚುನಾವಣೆ ಮುಗಿದ 30 ದಿನಗಳ ಒಳಗೆ ಇದರ ವಿವರವನ್ನು ಆಯೋಗಕ್ಕೆ ಸಲ್ಲಿಸಬೇಕು. ತಪ್ಪಾಗಿ ವಿವರ ನೀಡಿದರೆ ಅಥವಾ ಮಿತಿ ಮೀರಿ ಖರ್ಚು ಮಾಡಿದರೆ RPA 1951ರ ಸೆಕ್ಷನ್ 10A ಅಡಿಯಲ್ಲಿ ಮೂರು ವರ್ಷಗಳವರೆಗೆ ಅಭ್ಯರ್ಥಿಯನ್ನು ಆಯೋಗ ಅನರ್ಹಗೊಳಿಸಬಹುದಾಗಿದೆ.
ಆದರೆ ಎಂದಾದರೂ ಈ ಮಿತಿ ಪಾಲನೆಯಾದದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾದದ್ದು ಇದೆಯೇ? ಇಲ್ಲವೇ ಇಲ್ಲ ಎನ್ನಬಹುದು. ಅಭ್ಯರ್ಥಿಗಳೇನೋ ಖರ್ಚುವೆಚ್ಚದ ವಿವರಗಳನ್ನು ಕೊಡುತ್ತಾರೆ. ಪ್ರಾಮಾಣಿಕವಾಗಿ ನೀಡುವವರು ಬೆರಳೆಣಿಕೆಯಷ್ಟು ಇರಬಹುದು. ಲೆಕ್ಕ ನೀಡದ ವೆಚ್ಚವೇ ಬಹಳ. ಶಿಕ್ಷೆ ನೀಡಬಹುದಾದ ಆಯೋಗ ಆ ಬಗ್ಗೆ ಕ್ರಮ ತೆಗೆದುಕೊಂಡ ದಾಖಲೆಯಿಲ್ಲ. ಇಲ್ಲಿ ಇನ್ನೂ ಒಂದು ದೋಷವಿದೆ. ರಾಜಕೀಯ ಪಕ್ಷಗಳು ಮಾಡಬಹುದಾದ ಖರ್ಚಿಗೆ ಯಾವುದೇ ಮಿತಿಯಿಲ್ಲ. ಇದನ್ನು ಪಕ್ಷದ ಅಭ್ಯರ್ಥಿಗಳು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಮುಗಿದ 90 ದಿನಗಳ ಒಳಗೆ ಚುನಾವಣಾ ವೆಚ್ಚದ ಹೇಳಿಕೆಯನ್ನು ಆಯೋಗಕ್ಕೆ ಸಲ್ಲಿಸಬೇಕು. ಇದನ್ನು ಪರಿಶೀಲಿಸಬಹುದಾದ ಯಾವುದೇ ವಿಧಾನವಿಲ್ಲ. ಹೀಗಾಗಿ ವೆಚ್ಚಗಳು ಕಾನೂನು ಕ್ರಮದಡಿ ಬಾರದೆ ತೂರಿಹೋಗುತ್ತಿವೆ. ಇದುವರೆಗೂ ಚುನಾವಣಾ ಬಾಂಡ್‌ಗಳ ವ್ಯವಸ್ಥೆಯಿತ್ತು. ಇದೀಗ ಅದನ್ನೂ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಇದರಲ್ಲಿರುವ ಅನಾಮಿಕತೆಯ ಸೌಲಭ್ಯವೇ ಅದಕ್ಕೆ ಮುಳುವಾಗಿದೆ. ರದ್ದುಪಡಿಸಿದ ನ್ಯಾಯಾಲಯ ಅದಕ್ಕೆ ಪರ್ಯಾಯವನ್ನು ಸೂಚಿಸಿಲ್ಲ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ರಾಮೇಶ್ವರಂ ಕೆಫೆ ಬಾಂಬರ್‌ಗಳನ್ನು ಸೆರೆ ಹಿಡಿದ ಎನ್‌ಐಎ ಸಾಹಸ ಶ್ಲಾಘನೀಯ
ಇದು ಹೀಗೇ ಮುಂದುವರಿದರೆ ಚುನಾವಣೆ ವ್ಯವಸ್ಥೆಯೇ ನೆಲಕಚ್ಚಲಿದೆ. ಚುನಾವಣೆ ಎಂದರೇ ಹಣ ಹಂಚಿಕೆ, ಅಕ್ರಮ ಎಂಬ ಚಿತ್ರಣ ಕಾಯಂ ಆಗಲಿದೆ. ಚುನಾವಣೆ ಅಕ್ರಮಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಈಗಿನ ಚುನಾವಣೆ ನಡೆಯುವ ರೀತಿ ನೋಡಿದರೆ, ಹಣವಂತರು ಮಾತ್ರವೇ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಆಮಿಷ ಮುಕ್ತ ಮತ್ತು ಅಕ್ರಮ ಮುಕ್ತ ಚುನಾವಣೆ ನಡೆಸಲು ಕಾಯಿದೆ ಕಾನೂನು ರೂಪಿಸಿದರೆ ಸಾಲದು. ಇದರ ಕಠಿಣ ಅನುಷ್ಠಾನವೂ ಮುಖ್ಯ.
ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದಭಾವ ಮಾಡದೆ ಚುನಾವಣೆ ಆಯೋಗವು ನಿಷ್ಪಕ್ಷಪಾತವಾಗಿ ಇಂಥ ಅಕ್ರಮಗಳಿಗೆ ತಡೆ ಹಾಕಬೇಕು. ಮತದಾರರು ಕೂಡ ಈ ವಿಷಯದಲ್ಲಿ ಜಾಗೃತರಾಗಬೇಕು. ಜನ ಜಾಗೃತರಾಗದೆ ಕಾನೂನು ಎಷ್ಟೇ ಬಿಗಿಗೊಳಿಸಿದರೂ ಪರಿಣಾಮವಾಗದು. ಐನೂರು, ಸಾವಿರ ರೂಪಾಯಿಗೆ ಮತಗಳನ್ನು ಮಾರಿಕೊಂಡರೆ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಮತದಾರರು ಕಳೆದುಕೊಳ್ಳುತ್ತಾರೆ. ಹಣ, ಹೆಂಡ ಹಂಚಿ ಗೆದ್ದುಬರುವ ಅಭ್ಯರ್ಥಿ, ಚುನಾವಣಾ ವೆಚ್ಚವನ್ನು ಸರಿದೂಗಿಸಲು ಭ್ರಷ್ಟಾಚಾರಕ್ಕೆ ಇಳಿಯುತ್ತಾನೆ. ಅಂತಿಮವಾಗಿ ಅದರ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ.