ಇಂಡಿಯಾ ಮೈತ್ರಿಕೂಟ (INDIA Bloc) ಎಂಬ ಹೆಸರಿನಿಂದ ಒಗ್ಗೂಡಲು ಉದ್ದೇಶಿಸಿದ್ದ ವಿಪಕ್ಷಗಳೆಲ್ಲ ಒಂದೊಂದಾಗಿ ದೂರ ಸರಿಯುತ್ತಿವೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವಂತೆ ಇವರ ಒಗ್ಗಟ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಿದವರಗೆಲ್ಲಾ ನಿರಾಸೆಯಾಗಿದೆ. ʼಎಲ್ಲರೂ ಒಂದಾಗಿ ಬಿಜೆಪಿಯನ್ನು, ಅದು ಮಾಡುತ್ತಿರುವ ಕೋಮುವಾದಿ ರಾಜಕೀಯವನ್ನು ವಿರೋಧಿಸೋಣʼ ಎಂಬುದು ಇವರೆಲ್ಲರ ಒಕ್ಕೊರಲಿನ ನಿರ್ಧಾರವಾಗಿತ್ತು. ಆದರೆ ಚುನಾವಣೆಗೆ ಇನ್ನೆರಡು ತಿಂಗಳು ಇರುವಾಗ ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಮುಖ ತಿರುಗಿಸಿದ್ದಾರೆ. ಮುಖ್ಯವಾಗಿ ಕಾಂಗ್ರೆಸ್ ಜೊತೆಗೆ ಸಮಾನ ವೇದಿಕೆ ಹಂಚಿಕೊಳ್ಳಲಾಗದ ಸ್ವಾಭಿಮಾನ, ಸೀಟು ಹಂಚಿಕೆಯಲ್ಲಿ ಅನ್ಯಾಯಕ್ಕೊಳಗಾಗುವ ಭಾವನೆ, ಮೈತ್ರಿಯಿಂದ ಸ್ವತಂತ್ರ ನೆಲೆ ಕಳೆದುಕೊಳ್ಳುವ ಆತಂಕ, ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬಂದರೆ ಮತ್ತೆ ಐದು ವರ್ಷ ವಿಪಕ್ಷವಾಗಿಯೇ ಇರಬೇಕಾದೀತು ಎಂಬ ಭಯ ಎಲ್ಲವೂ ಇವರಲ್ಲಿ ಸೇರಿದಂತಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿಯವರು ತಾವು ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕಟುವಾಗಿ ಮುಖ ತಿರುಗಿಸಿದ್ದಾರೆ. ಮಾತುಕತೆಗೆ ಬಂದಾಗಲೂ ಬಂಗಾಳದಲ್ಲಿ ಕೇವಲ ಎರಡು ಸೀಟು ಕೊಡುವುದಾಗಿ ಹೇಳಿ ಕಾಂಗ್ರೆಸ್‌ಗೆ ಮುಖಭಂಗ ಮಾಡಿದ್ದರು. ಪಂಜಾಬ್‌ನಲ್ಲೂ ಕಾಂಗ್ರೆಸ್‌ಗೆ ಇದೇ ʼಸ್ವಾಗತʼವೇ ದೊರೆತಿದೆ. ಅಲ್ಲಿನ ಮುಖ್ಯಮಂತ್ರಿ ಭಗವಂತ ಮಾನ್ ಅವರು, ಕಾಂಗ್ರೆಸ್‌ಗೆ ʼನೀವಿಲ್ಲಿಂದ ದಯಮಾಡಿಸಿʼ ಎಂದು ಹೇಳಿದ್ದಾರೆ. ದಿಲ್ಲಿಯಲ್ಲಂತೂ ಆಪ್ ಸ್ವತಂತ್ರವಾಗಿ ಸ್ಪರ್ಧಿಸುವುದು ಖಚಿತ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಪಂಜಾಬ್‌ನಲ್ಲಿ ಆಪ್‌ಗೆ ಇರುವ ಭದ್ರ ಹಿಡಿತವೇ ಇದಕ್ಕೆ ಕಾರಣ. ಈ ಅಧಿಕಾರದ ನೆಲೆಯಲ್ಲಿ ಪಾಲು ಮಾಡಿಕೊಳ್ಳಲು ಅವುಗಳಿಗೆ ಇಷ್ಟವಿಲ್ಲ.
ಹೊಸ ಬೆಳವಣಿಗೆ ಎಂದರೆ ಬಿಹಾರದಲ್ಲಿ ಮಹಾಘಟಬಂಧನ್‌ನ ಭಾಗವಾಗಿದ್ದ ನಿತೀಶ್ ಕುಮಾರ್ ಅವರು ಅಲ್ಲಿಂದ ಮೈತ್ರಿ ಮುರಿದುಕೊಂಡು ಎನ್‌ಡಿಎಯತ್ತ ಕುಡಿಗಣ್ಣಿನ ನೋಟ ಬೀರುತ್ತಿರುವುದು. ನಿತೀಶ್ ಕುಮಾರ್ ಅವರಿಗೆ ʼರಾಷ್ಟ್ರ ರಾಜಕೀಯದ ಭವಿಷ್ಯಕಾರʼ ಎಂಬ ಅಡ್ಡಹೆಸರಿದೆ. ಗಾಳಿ ಯಾವ ಕಡೆಗೆ ಬೀಸುತ್ತಿದೆ ಎಂಬುದನ್ನು ಬಲು ಬೇಗನೆ ಅರ್ಥ ಮಾಡಿಕೊಂಡು ಆ ಕಡೆಗೆ ಜಿಗಿಯಬಲ್ಲ ಚತುರರಾದ ಅವರು ಮುತ್ಸದ್ದಿಯೂ ಹೌದು. ಒಂದು ವೇಳೆ ಇಂಡಿಯಾ ಬ್ಲಾಕ್ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇದ್ದಿದ್ದರೆ ಖಂಡಿತವಾಗಿಯೂ ಅವರು ಪ್ರಧಾನಿ ಅಭ್ಯರ್ಥಿಯೇ ಆಗುವ ಅರ್ಹತೆ ಹೊಂದಿದವರು. ಇಂಡಿಯಾ ಬ್ಲಾಕ್‌ನಿಂದ ಅವರ ನಿರ್ಗಮನ ಹಾಗೂ ಎನ್‌ಡಿಎಗೆ ಆಗಮನ ಲೋಕಸಭೆ ಚುನಾವಣೆಯ ದಿಕ್ಸೂಚಿಯೇ ಹೌದು. ಪ್ರಬಲ ಪಕ್ಷವಾದ ಜೆಡಿಯು ಎನ್‌ಡಿಎಗೆ ಖಂಡಿತವಾಗಿಯೂ ನಂಬರ್ ಗೇಮ್‌ನಲ್ಲಿ ಬಹಳ ನೆರವಾಗಲಿದೆ.
ಇನ್ನೊಂದು ಕಡೆ ಕರ್ನಾಟಕದಲ್ಲಿ, ಜಾತ್ಯತೀತ ಜನತಾ ದಳದ ನಾಯಕರು ಅದಾಗಲೇ ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಸಲದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಜೊತೆ ಸಿಕ್ಕಿದಷ್ಟು ಲೋಕಸಭೆ ಕ್ಷೇತ್ರಗಳನ್ನು ಹಂಚಿಕೊಂಡು ಜೆಡಿಎಸ್ ಬದುಕುಳಿಯುವ ರಾಜಕಾರಣ ಮಾಡಲಿದೆ. ಕಾಂಗ್ರೆಸ್ ಒಕ್ಕಲಿಗ ಬೆಲ್ಟ್‌ನಲ್ಲಿ ತಮ್ಮ ಪಕ್ಷವನ್ನು ಮುಗಿಸಲಿದೆ ಎಂಬ ಆತಂಕವನ್ನು ಹೊಂದಿರುವ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಬಿಜೆಪಿ ಮಡಿಲಿಗೆ ಹೋದುದು, ಬಿಜೆಪಿಗೆ ರಾಜ್ಯದ ಮಟ್ಟಿಗೆ ವರವೇ ಆಗಲಿದೆ. ಆದರೆ ಇದರಿಂದ, ರಾಜ್ಯದಲ್ಲಿ ಇದ್ದ ಒಂದೇ ಒಂದು ಬಲಿಷ್ಠ ಪ್ರಾದೇಶಿಕ ಎನ್ನಬಹುದಾದ ಪಕ್ಷವೂ ಎನ್‌ಡಿಎ ಸೇರಿದಂತಾಗಿದೆ. ಅದೂ ವಿಪಕ್ಷಕ್ಕೆ ನಷ್ಟ, ಬಿಜೆಪಿಗೆ ಲಾಭ.
ಇನ್ನೊಂದು ಬೆಳವಣಿಗೆ, ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಅವರು ಮರಳಿ ಮಾತೃಪಕ್ಷದ ಮಡಿಲು ಸೇರಿದ್ದಾರೆ. ಶೆಟ್ಟರ್ ನಿರ್ಗಮನದಿಂದ ಲಿಂಗಾಯತರ ಬಲು ದೊಡ್ಡ ಮತ ಬ್ಯಾಂಕ್ ಕಳೆದುಕೊಂಡೆವು ಎಂದು ಹತಾಶರಾಗಿದ್ದ ಬಿಜೆಪಿಯ ನಾಯಕರು ಈಗ ನಿರಾಳರಾಗಿರಬಹುದು. ಆದರೆ ಕಾಂಗ್ರೆಸ್‌ಗಂತೂ ಇದು ಮತ್ತೊಂದು ಏಟು. ಪ್ರಬಲ ಕೋಮುವೊಂದರ ನಾಯಕನನ್ನು ತನ್ನಲ್ಲಿ ಉಳಿಸಿಕೊಳ್ಳಲು ಅದು ವಿಫಲವಾಗಿದೆ. ಸ್ವತಃ ಶೆಟ್ಟರ್ ಅವರು ಈ ಬಗ್ಗೆ ಯಾವುದೇ ದೂರು ಹೇಳದೇ ಇದ್ದರೂ ಕೂಡ ಇದು ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ನಕಾರಾತ್ಮಕ ಆಗಲಿದೆ.
ಇನ್ನು ದಕ್ಷಿಣ ರಾಜ್ಯಗಳಲ್ಲಿ ತೆಲಂಗಾಣದಲ್ಲಿ ಬಿಆರ್‌ಎಸ್ ಈಗಾಗಲೇ ಕಾಂಗ್ರೆಸ್‌ನಿಂದ ದೂರ ಸರಿದಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ ಅನ್ನು ಹಿಂದಿಕ್ಕಿ ಕಾಂಗ್ರೆಸ್ ಸಾಧಿಸಿದ ವಿಜಯವೇ ಇದಕ್ಕೆ ಕಾರಣ. ತಮಿಳುನಾಡಿನಲ್ಲಿ ಡಿಎಂಕೆ ಸದ್ಯಕ್ಕೆ ಇಂಡಿಯಾ ಬ್ಲಾಕ್ ಜೊತೆಗೆ ನಿಂತಿದೆಯಾದರೂ ಕಾಂಗ್ರೆಸ್ ಜೊತೆಗೆ ತಗಾದೆ ಅದಕ್ಕೂ ಇದೆ. ಇವೆಲ್ಲವನ್ನೂ ಗಮನಿಸಿದರೆ, ಇಂಡಿಯಾ ಬ್ಲಾಕ್‌ನ ಮೈತ್ರಿ ಪಕ್ಷಗಳಿಗೆ ಕಾಂಗ್ರೆಸ್ಸೇ ದೊಡ್ಡ ತಲೆನೋವಾಗಿರುವುದು ಖಚಿತ. ಕಾಂಗ್ರೆಸ್ ಯಾವುದೇ ರೀತಿಯ ರಾಜಿ, ಅಧಿಕಾರ ಹೊಂದಾಣಿಕೆಗೆ ಸಿದ್ಧವಿಲ್ಲದಿರುವುದು, ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆ ಇನ್ನೂ ಇತರ ಪಕ್ಷಗಳ ನಾಯಕರು ಭರವಸೆ ಹೊಂದಿಲ್ಲದಿರುವುದು ಇದೆಲ್ಲದಕ್ಕೆ ಕಾರಣ.
ಇದನ್ನೂ ಓದಿ: India Bloc: ನಿತೀಶ್ ವಿದಾಯ ವದಂತಿ ಬೆನ್ನಲ್ಲೇ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟು
ಇದೆಲ್ಲದರಿಂದ ಆಗುತ್ತಿರುವುದೇನೆಂದರೆ, ಈ ಸಲದ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಭಾರಿ ಬಹುಮತದಿಂದ ಗೆದ್ದು ಬರಬಹುದು. ಆದರೆ ಸದೃಢ ವಿರೋಧಪಕ್ಷವೊಂದು ಅಥವಾ ವಿಪಕ್ಷಗಳ ಒಕ್ಕೂಟವೊಂದು ಪ್ರಜಾಪ್ರಭುತ್ವದಲ್ಲಿ ಅತೀ ಅಗತ್ಯ. ಇಲ್ಲವಾದರೆ ಅಧಿಕಾರದಲ್ಲಿರುವ ಪಕ್ಷ ನಿಶೃಂಕಲವಾಗುತ್ತದೆ. ವಿಪಕ್ಷಗಳು ಪ್ರಜಾಪ್ರಭುತ್ವದ ಕಾವಲುಶ್ವಾನಗಳು. ಇಂಡಿಯಾ ಬ್ಲಾಕ್ ಗಟ್ಟಿಯಾಗಲಿ; ಸರ್ಕಾರದ ನಡೆಗಳನ್ನು ಸಕಾರಣವಾಗಿ, ವಿಮರ್ಶಾತ್ಮಕವಾಗಿ ಪ್ರಶ್ನಿಸುವ ಧ್ವನಿ ಹಾಗೂ ಸ್ಥಾನಬಲ ಉಳಿಸಿಕೊಳ್ಳಲಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ