Site icon Vistara News

ವಿಸ್ತಾರ ಸಂಪಾದಕೀಯ: ಎಲ್ಲ ಕಡೆಯೂ ಲಭ್ಯವಾಗಲಿ ಭಾರತೀಯ ಯುಪಿಐ ಸೇವೆ

Vistara Editorial: Indian UPI service should be available in all over world

ವಾರ ಯುಎಇ(UAE), ಶ್ರೀಲಂಕಾ (Sri Lanka) ಮತ್ತು ಮಾರಿಷಸ್‌ನಲ್ಲಿ (mauritius) ಭಾರತದ ಯುಪಿಐ ಸೇವೆಗಳು ಕಾರ್ಯಾರಂಭಿಸಿವೆ(India UPI Services). ಶ್ರೀಲಂಕಾ ಮತ್ತು ಮಾರಿಷಸ್‌ಗೆ ಪ್ರಯಾಣಿಸುವ ಭಾರತೀಯ ಪ್ರಜೆಗಳಿಗೆ ಹಾಗೂ ಭಾರತಕ್ಕೆ ಪ್ರಯಾಣಿಸುವ ಮಾರಿಷಸ್ ಪ್ರಜೆಗಳಿಗೆ ಯುಪಿಐ ಸೇವೆಗಳು ದೊರೆಯಲಿವೆ. ಫ್ರಾನ್ಸ್‌ನಲ್ಲಿ ಈಗಾಗಲೇ ನಮ್ಮ ಯುಪಿಐ ಸೇವೆ ಲಭ್ಯವಿದೆ. ಫ್ರಾನ್ಸ್ ಬಳಿಕ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ ಸೇವೆಗಳನ್ನು ಸೋಮವಾರ ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ವರ್ಚುವಲ್ ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು. ಈ ಯುಪಿಐ ಸೇವೆಗಳು ಪರಸ್ಪರ ದೇಶಗಳ ನಡುವಿನ ಗಡಿಯಾಚೆಗಿನ ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ಈ ದೇಶಗಳೊಂದಿಗೆ ಹೆಚ್ಚುತ್ತಿರುವ ನಮ್ಮ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳ ದ್ಯೋತಕವಾಗಿದೆ. ಯುಪಿಐ ಸೇವೆಗಳ ಆರಂಭವು ನಮ್ಮ ನಡುವಿನ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ. ಭಾರತೀಯ ಪ್ರವಾಸಿಗರು ಯುಪಿಐ ಸೇವೆಗಳು ಲಭ್ಯವಿರುವ ಸ್ಥಳಗಳಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚು ಇದೆ. ಇದು ಭಾರತೀಯ ಡಿಜಿಟಲ್‌ ಹಣಕಾಸು ಸೇವೆಯ ಸೀಮೋಲ್ಲಂಘನ(Vistara Editorial).

ಈ ತಿಂಗಳ ಆರಂಭದಲ್ಲಿ ಪ್ಯಾರಿಸ್‌ನ ಐಕಾನಿಕ್ ಐಫೆಲ್ ಟವರ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ ಯುಪಿಐ ಕಾರ್ಯವಿಧಾನದ ಮೂಲಕ ಟಿಕೆಟ್ ಖರೀದಿಸಲು ಫ್ರಾನ್ಸ್ ಅನುಮತಿ ನೀಡಿತ್ತು. ಯುಪಿಐ ಪಾವತಿಗಳನ್ನು ಸ್ವೀಕರಿಸಿದ ಮೊದಲ ಯುರೋಪಿಯನ್ ದೇಶ ಫ್ರಾನ್ಸ್. ಈ ಯುಪಿಐ ಸೇವೆಯನ್ನು ಯುರೋಪಿಯನ್ ರಾಷ್ಟ್ರದ ಇತರ ಪ್ರವಾಸೋದ್ಯಮ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ವಿಸ್ತರಿಸುವ ಚಿಂತನೆ ಇದೆ. ಇದೂ ಕೂಡ ಬೇಗನೆ ಆಗಲಿದೆ. ಅಮೆರಿಕದಲ್ಲಿ ಹಾಗೂ ಇತರ ತೈಲ ಶ್ರೀಮಂತ ಮಧ್ಯಪ್ರಾಚ್ಯ ದೇಶಗಳಲ್ಲಿ ಕೂಡ ಭಾರತೀಯರ ಸಂಖ್ಯೆ ಹೆಚ್ಚಿರುವುದರಿಂದ, ಅಲ್ಲಿಯೂ ಯುಪಿಐ ಸೇವೆಗಳನ್ನು ವಿಸ್ತರಿಸುವುದಕ್ಕೆ ಅವಕಾಶವಿದೆ.

ಜಗತ್ತಿನಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಪಾವತಿಯಾಗುವ ದೇಶಗಳಲ್ಲಿ ಭಾರತ ನಂ.1 ಆಗಿದೆ. 2023ರಲ್ಲಿ ಭಾರತದಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವಹಿವಾಟುಗಳಲ್ಲಿ ಅಸಾಧಾರಣವಾದ ಹೆಚ್ಚಳ ಆಗಿದೆ. ಯುಪಿಐ ಆಧಾರಿತ ವಹಿವಾಟುಗಳು ಡಿಸೆಂಬರ್ 2023ರಲ್ಲಿ ಒಟ್ಟು ರೂ 17.4 ಲಕ್ಷ ಕೋಟಿಗಳನ್ನು ಮುಟ್ಟಿದೆ ಎಂದು ಆರ್‌ಬಿಐ ಇತ್ತೀಚೆಗೆ ತನ್ನ ಮಾಸಿಕ ಬುಲೆಟಿನ್‌ನಲ್ಲಿ ತಿಳಿಸಿದೆ. ಯುಪಿಐ ವಹಿವಾಟುಗಳ ಮೌಲ್ಯ 2017-18ರಲ್ಲಿ 1 ಲಕ್ಷ ಕೋಟಿ ಇದ್ದದ್ದು, ಈಗ ಕಳೆದ ವರ್ಷ 139 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಅಂದರೆ ಸುಮಾರು 168% ಏರಿಕೆ. ಭಾರತೀಯ ರಿಸರ್ವ್ ಬ್ಯಾಂಕಿನ ತಜ್ಞರ ಪ್ರಕಾರ, ಭಾರತದ ಡಿಜಿಟಲ್ ಪಾವತಿ ವಲಯವು ಮೌಲ್ಯ ಮತ್ತು ಪ್ರಮಾಣ ಎರಡರಲ್ಲೂ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಅನೇಕ ಕಾರಣಗಳಿಂದಾಗಿ ಇದೊಂದು ಗಮನಾರ್ಹ ಸಾಧನೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಅದರ ಪರಿಣಾಮವೇ ಈಗಿನ ಈ ಸಾಧನೆ. ನೋಟ್ ಬ್ಯಾನ್ ಮಾಡಿದ ಬಳಿಕವಂತೂ ದೇಶದಲ್ಲಿ ಪರೋಕ್ಷವಾಗಿ ಡಿಜಿಟಲ್ ಕ್ರಾಂತಿಯೇ ಶುರುವಾಗಿತ್ತು. ದೊಡ್ಡ ಮೊತ್ತದ ಕರೆನ್ಸಿ ನೋಟುಗಳು ಮರೆಗೆ ಸರಿದಾಗ ಸಹಜವಾಗಿಯೇ ದೊಡ್ಡ ಮೊತ್ತದ ವ್ಯಾಪಾರ ವಹಿವಾಟುಗಳು ಡಿಜಿಟಲ್‌ ಮೂಲಕ ಆಗತೊಡಗಿದವು. ಇದರ ಜತೆಗೆ ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ವ್ಯವಸ್ಥೆಯೂ ದೊಡ್ಡ ಮೊತ್ತದ ವಹಿವಾಟುಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿತು. ಕರೆನ್ಸಿ ವಹಿವಾಟಿನ ಮೂಲಕ ಯಾವುದೆಲ್ಲ ತೆರಿಗೆ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿತ್ತೋ ಅದೆಲ್ಲವೂ ಡಿಜಿಟಲ್‌ ಪಾವತಿಯಿಂದಾಗಿ ತೆರಿಗೆ ವ್ಯಾಪ್ತಿಯೊಳಗೆ ಬಂದವು. ಇದು ದೇಶದ ತೆರಿಗೆ ಸಂಗ್ರಹಕ್ಕೂ ಗಣನೀಯ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ.

ಇದೀಗ ಯುಪಿಐ ವ್ಯವಸ್ಥೆಯ ಸೀಮೋಲ್ಲಂಘನದ ಸಮಯ. ಹೆಚ್ಚಿನ ದೇಶಗಳಲ್ಲಿ ಈ ವ್ಯವಸ್ಥೆ ಅಳವಡಿಕೆ ಆಗುತ್ತ ಹೋದಂತೆ, ಭಾರತೀಯ ರೂಪಾಯಿಯ ವಿಶ್ವಾಸಾರ್ಹತೆ ಹಾಗೂ ಮೌಲ್ಯ ಹೆಚ್ಚುತ್ತ ಹೋಗುತ್ತವೆ. ಸದ್ಯಕ್ಕೆ ಇದನ್ನು ಭಾರತೀಯರು ಬಳಸಬಹುದು. ಮುಂದೊಂದು ದಿನ ಇತರ ದೇಶಗಳ ಪ್ರಜೆಗಳಿಗೂ ಹಾಗೂ ಇತರ ಕರೆನ್ಸಿಗಳಿಗೂ ವಿಸ್ತರಿಸುವ ದಿನವೂ ಬರಬಹುದು. ತಂತ್ರಜ್ಞಾನ ಬೆಳೆದಂತೆ ಇದೂ ಅಸಾಧ್ಯವೇನಲ್ಲ. ಭಾರತದ ಅರ್ಥ ವ್ಯವಸ್ಥೆ, ಬ್ಯಾಂಕಿಂಗ್‌ ವ್ಯವಸ್ಥೆಯ ಗಟ್ಟಿತನ, ಸುಲಭತೆ ಹಾಗೂ ಬೆಳವಣಿಗೆ ಎಲ್ಲವೂ ಇದರಿಂದ ಮನದಟ್ಟಾಗುತ್ತದೆ. ಇದರಲ್ಲಿರುವ ಕೆಲವು ವಂಚನೆಯ ಸಾಧ್ಯತೆಗಳೂ ಇದ್ದು, ಇವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಡಿಜಿಟಲ್ ಪಾವತಿಯನ್ನು ಸರ್ಕಾರ ಶುಲ್ಕ ಮುಕ್ತಗೊಳಿಸಬೇಕು.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಕತಾರ್‌ ಜೈಲಿನಿಂದ ನೌಕಾಪಡೆ ಹಿರಿಯ ಯೋಧರ ಬಿಡುಗಡೆ; ಇದು ನಮ್ಮ ರಾಜತಾಂತ್ರಿಕದ ಗೆಲುವು

Exit mobile version