Site icon Vistara News

ವಿಸ್ತಾರ ಸಂಪಾದಕೀಯ: ಇರಾನ್ ಹೋರಾಟಗಾರ್ತಿಗೆ ನೊಬೆಲ್ ಶಾಂತಿ ಪುರಸ್ಕಾರ ಸೂಕ್ತ ಆಯ್ಕೆ

Vistara Editorial, Iranian activist Narges Mohammadi wins Nobel peace prize ant she deserve it

ಸಲದ ನೊಬೆಲ್‌ ಶಾಂತಿ ಪ್ರಶಸ್ತಿ ಅಚ್ಚರಿ ಹಾಗೂ ಆನಂದಕ್ಕೆ ಕಾರಣವಾಗಿದೆ. ಇರಾನಿಯನ್‌ ಮಹಿಳಾ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ (Iranian activist Narges Mohammadi) ಅವರಿಗೆ 2023ರ ಸಾಲಿನ ಶಾಂತಿ ನೊಬೆಲ್ ಪ್ರಶಸ್ತಿಯನ್ನು (Nobel peace Prize) ಘೋಷಣೆ ಮಾಡಲಾಗಿದೆ. ಇರಾನ್‌ನಲ್ಲಿ (Iran) ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ ಮತ್ತು ಎಲ್ಲರಿಗೂ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುವ ಹೋರಾಟಕ್ಕಾಗಿ ನರ್ಗೀಸ್ ಮೊಹಮ್ಮದಿ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಟಾಕ್‌ಹೋಮ್‌ನಲ್ಲಿರುವ ಸ್ವೀಡಿಷ್ ಅಕಾಡೆಮಿ ಶುಕ್ರವಾರ ಪ್ರಕಟಿಸಿದೆ. ಸಾಮಾಜಿಕ ನ್ಯಾಯ, ಮಾನವಹಕ್ಕುಗಳು ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಟ ನಡೆಸುವ ವ್ಯಕ್ತಿಗಳಿಗೆ ಶಾಂತಿ ಪುರಸ್ಕಾರ ನೀಡುವ ಸ್ವೀಡಿಷ್ ಅಕಾಡೆಮಿಯ ಸಂಪ್ರದಾಯವನ್ನು ನರ್ಗೀಸ್ ಮೊಹಮ್ಮದಿ ಅವರಿಗೆ ನೀಡುವ ಮೂಲಕ ಪಾಲನೆ ಮಾಡಲಾಗಿದೆ ಎಂದು ಅಕಾಡೆಮಿ ಹೇಳಿಕೊಂಡಿದೆ.‌

ಕಟ್ಟರ್ ಇಸ್ಲಾಮಿಕ್ ರಾಷ್ಟ್ರದಲ್ಲಿ ಮಹಿಳಾ ದೌರ್ಜನ್ಯ ವಿರುದ್ಧ ಧ್ವನಿ ಎತ್ತಿ ಜೈಲು ಪಾಲಾಗಿರುವ ನರ್ಗೀಸ್ ಮೊಹಮ್ಮದಿ, ವಿಶ್ವದಾದ್ಯಂತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ನರ್ಗೀಸ್ ಮೊಹಮ್ಮದಿ ಅವರ ಕೆಚ್ಚೆದೆಯ ಹೋರಾಟದ ಹಿನ್ನೆಲೆಯಲ್ಲಿ ವೈಯಕ್ತಿಕ ಕಷ್ಟನಷ್ಟಗಳು, ತ್ಯಾಗ ಇತ್ಯಾದಿ ಇವೆ. ಇರಾನ್‌ ಸರ್ಕಾರ ಅವರನ್ನು 13 ಬಾರಿ ಬಂಧಿಸಿದೆ. ಐದು ಬಾರಿ ಅಪರಾಧಿ ಎಂದು ತೀರ್ಪು ನೀಡಿದೆ. ಅವರಿಗೆ ಒಟ್ಟು 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟಿನ ಶಿಕ್ಷೆ ವಿಧಿಸಿದೆ. ಈಗಲೂ ಅವರು ಜೈಲಿನಲ್ಲೇ ಇದ್ದಾರೆ. ಜೈಲಿನಲ್ಲಿದ್ದರೂ, ಹಲವು ನಿರ್ಬಂಧಗಳ ಹೊರತಾಗಿಯೂ ನರ್ಗೀಸ್ ಮೊಹಮ್ಮದಿ ಅವರು ಲೇಖನಗಳನ್ನು ಪ್ರಕಟಿಸುವ ಮೂಲಕ ತಮ್ಮ ಹೋರಾಟವನ್ನು ಜಾರಿಯಲ್ಲಿಟ್ಟಿದ್ದಾರೆ. ಇರಾನ್‌ನ ಝಂಜಾನ್‌ ನಗರದಲ್ಲಿ ಜನಿಸಿದ ನರ್ಗೀಸ್, ಭೌತಶಾಸ್ತ್ರದಲ್ಲಿ ಪದವಿ ಪಡೆದುಕೊಂಡು ಎಂಜಿನಿಯರ್ ಆದವರು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಮಾನತೆ ಮತ್ತು ಮಹಿಳಾ ಹಕ್ಕುಗಳ ಪರವಾಗಿ ಹೋರಾಟದಲ್ಲಿ ಪಾಲ್ಗೊಂಡು ಲೇಖನಗಳನ್ನು ಬರೆಯುತ್ತಿದ್ದರು. ಪತ್ರಿಕೆಗಳ ಮೂಲಕವೇ ತಮ್ಮ ವಿಚಾರಗಳನ್ನು ಹೊರ ಪ್ರಪಂಚಕ್ಕೆ ದಾಟಿಸಿದರು. ಪತ್ರಕರ್ತೆಯಾಗಿ ಕೆಲಸ ಮಾಡಿದರು. ಪ್ರತಿಭಟನಾ ಹಕ್ಕು, ಮಹಿಳಾ ಹಕ್ಕುಗಳ ಪರ ಮತ್ತು ಗಲ್ಲು ಶಿಕ್ಷೆ ವಿರುದ್ಧ ಹೋರಾಟ ನಡೆಸಿದರು.

ಹೋರಾಟ, ಹಕ್ಕುಗಳು, ದೌರ್ಜನ್ಯ ಕುರಿತು ನಿರತರವಾಗಿ ಲೇಖನಗಳನ್ನು, ಪುಸ್ತಕಗಳನ್ನು ಬರೆದು ಜಗತ್ತಿನ ಗಮನ ಸೆಳೆದಿದ್ದಾರೆ ನರ್ಗಿಸ್.‌ ನೊಬೆಲ್ ಪುರಸ್ಕೃತ ಸಾಹಿತಿ ಶಿರಿನ್ ಎಬಾದಿ ಅವರು ಆರಂಭಿಸಿದ ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್‌ನೊಂದಿಗೆ ನರ್ಗೀಸ್ ಗುರುತಿಸಿಕೊಂಡಿದ್ದಾರೆ. ಬಂಧಿತ ಕಾರ್ಯಕರ್ತರು ಮತ್ತು ಅವರ ಕುಟುಂಬಗಳಿಗೆ ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ ನರ್ಗೀಸ್ ಅವರನ್ನು 2011ರಲ್ಲಿ ಮೊದಲ ಬಾರಿಗೆ ಬಂಧಿಸಿ ಜೈಲಿಗೆ ಕಳುಹಿಸಿತು. ಇವರ ಪತಿ ತಘಿ ರಹಮಾನಿ ಕೂಡ ಹೋರಾಟಗಾರ, ಅವರೂ ಕೂಡ ಜೈಲುಪಾಲಾಗಿದ್ದರು. ದೇಶಭ್ರಷ್ಟರಾಗಿರುವ ರಹಮಾನಿ ಇಬ್ಬರು ಮಕ್ಕಳೊಂದಿಗೆ ಫ್ರಾನ್ಸ್‌ನಲ್ಲಿ ಆಶ್ರಯ ಪಡೆದಿದ್ದಾರೆ. ನರ್ಗಿಸ್‌ ಮಾತ್ರ ಇರಾನ್‌ನಲ್ಲೇ ಉಳಿದುಕೊಂಡು ಹೋರಾಟ ನಡೆಸುತ್ತಿದ್ದಾರೆ.

ಇರಾನ್‌ನಂಥ ದೇಶದಲ್ಲಿ ಮಹಿಳೆಯರ ಹಕ್ಕುಗಳ ಪರ, ದೌರ್ಜನ್ಯಗಳ ವಿರುದ್ಧ ಹೋರಾಡಲು ಸಾಮಾನ್ಯ ಧೈರ್ಯ ಸಾಲದು. ಇದು ಜಾತ್ಯತೀತ ದೇಶವಲ್ಲ, ತನ್ನನ್ನು ʼಇಸ್ಲಾಮಿಕ್‌ ದೇಶʼ ಎಂದೇ ಘೋಷಿಸಿಕೊಂಡಿದೆ. ವರ್ಷದ ಹಿಂದೆ ಇರಾನ್‌ನ ನೈತಿಕ ಪೋಲೀಸರ ಕೈಯಲ್ಲಿ ನಡೆದ ಮಹ್ಸಾ ಅಮಿನಿ ಎಂಬ ಮಹಿಳೆಯ ಹತ್ಯೆಯು ಇಸ್ಲಾಮಿಕ್ ರಿಪಬ್ಲಿಕ್ ನಡೆಸಿದ ಮಹಿಳೆಯರ ವಿರುದ್ಧದ ಹಿಂಸಾಚಾರಕ್ಕೆ ಮತ್ತೊಂದು ಸಾಕ್ಷಿ. ಇಲ್ಲಿ ಮಹಿಳೆಯರ ವಿರುದ್ಧದ ಹಿಂಸಾಚಾರ ದೈಹಿಕ ಮಾತ್ರವಲ್ಲ, ಸಾಮಾಜಿಕ, ಕಾನೂನಾತ್ಮಕ ಮತ್ತು ಆರ್ಥಿಕವಾಗಿಯೂ ವಿಸ್ತರಿಸಿದೆ. ಇಸ್ಲಾಮಿಕ್ ಗಣರಾಜ್ಯದ ಸಂವಿಧಾನದ ಕಾನೂನಿನ ಅಡಿಯಲ್ಲಿ ಮಹಿಳೆಯರು ಎರಡನೇ ದರ್ಜೆ ಪ್ರಜೆಗಳು. ಇಲ್ಲಿನ ಕಾನೂನು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದಿಲ್ಲ. ಇಸ್ಲಾಮಿಕ್ ರಿಪಬ್ಲಿಕ್ ಅಡಿಯಲ್ಲಿ, ಮಹಿಳೆಯರ ವಿರುದ್ಧದ ದೈಹಿಕ ಹಿಂಸೆ ಮನೆಯಲ್ಲಿ ಪ್ರಾರಂಭವಾಗಿ ಸಮಾಜಕ್ಕೆ ವ್ಯಾಪಿಸಿದೆ. ಇರಾನ್ ಪುರುಷ ಪ್ರಧಾನ ದೇಶ. 1979ರ ಕ್ರಾಂತಿಯ ಮೊದಲು ಇಲ್ಲಿ ಮಹಿಳೆಯರಿಗೆ ಬುರ್ಖಾ ಅಥವಾ ಹಿಜಾಬ್‌ ಕಡ್ಡಾಯ ಇರಲಿಲ್ಲ. ಮಹಿಳೆಯರು ದಿರಸಿನ ವಿಚಾರದಲ್ಲಿ ಸ್ವತಂತ್ರರಾಗಿದ್ದರು. ಇಸ್ಲಾಮಿಕ್‌ ಕ್ರಾಂತಿಯ ಬಳಿಕ ಹಿಜಾಬ್ ಕಡ್ಡಾಯವಾಯಿತು. ಇದರಿಂದ ಪುರುಷರು ಮಹಿಳೆಯರನ್ನು ನಿಯಂತ್ರಿಸುವ ವಿಧಾನಗಳನ್ನು ಕಂಡುಕೊಂಡರು. ನಿಧಾನವಾಗಿ ಇದು ಶಿಕ್ಷಣ, ಉದ್ಯೋಗ ಮತ್ತಿತರ ಕಡೆಗಳಿಗೂ ವ್ಯಾಪಿಸತೊಡಗಿತು.

ಆದರೆ ಯುವ ಪೀಳಿಗೆಯ, ವಿದ್ಯಾವಂತ ಮಹಿಳೆಯರು ಈ ಕಡ್ಡಾಯವನ್ನು ತಿರಸ್ಕರಿಸಿದರು. ಬೀದಿಗಳಲ್ಲಿ ಪ್ರತಿಭಟಿಸಲು ಅವರು ಹೊರಬಂದಾಗ ಅವರ ಮೇಲೆ ಪೊಲೀಸರು ಹಾಗೂ ನೈತಿಕ ಪೊಲೀಸರು ದಾಳಿ ಮಾಡಿದರು. ಪ್ರತೀಕಾರದ ಕಾನೂನುಗಳು ಹೆಚ್ಚಿದವು. ಬುರ್ಖಾ ಧರಿಸದ ಮಹಿಳೆಯರನ್ನು ಬಂಧಿಸಲಾಯಿತು. ಹಿಜಾಬ್ ಅನ್ನು ಉಲ್ಲಂಘಿಸಿದರೆ ಎಪ್ಪತ್ತು ಛಡಿ ಏಟಿನ ಶಿಕ್ಷೆಯಾಗುತ್ತದೆ. ವ್ಯಭಿಚಾರದ ಹೆಸರಿನಲ್ಲಿ ಮಹಿಳೆಯನ್ನು ಕಲ್ಲಿನಿಂದ ಹೊಡೆದು ಕೊಲ್ಲುವ ಶಿಕ್ಷೆ ಬಂತು. ಪುರುಷ ಏಕಪಕ್ಷೀಯವಾಗಿ ತನ್ನ ಹೆಂಡತಿಗೆ ವಿಚ್ಛೇದನ ನೀಡಬಹುದು; ಇಮೇಲ್ ಮೂಲಕವೂ ಇದನ್ನು ಮಾಡಬಹುದು. ತಾಯಂದಿರಿಗೆ ಮಾತ್ರ ಮಗುವಿನ ಪಾಲನೆ ಕಡ್ಡಾಯವಾಯಿತು. ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಒಂಬತ್ತಕ್ಕೆ ಇಳಿಸಲಾಯಿತು. ಕೌಟುಂಬಿಕ ಹಿಂಸಾಚಾರ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಮಹಿಳೆಯರು ಆಶ್ರಯ ಪಡೆಯಬಹುದಾದ ಕೌಟುಂಬಿಕ ನ್ಯಾಯಾಲಯಗಳನ್ನು ಅಮಾನತುಗೊಳಿಸಲಾಯಿತು. ಬಹುಪತ್ನಿತ್ವವನ್ನು ಮತ್ತೊಮ್ಮೆ ಅನುಮತಿಸಲಾಯಿತು. ಪುರುಷರು ತಮ್ಮ ಸಂಗಾತಿಯ ಅನುಮತಿಯಿಲ್ಲದೆ ಎರಡನೇ, ಮೂರನೇ ಅಥವಾ ನಾಲ್ಕನೇ ಮದುವೆಯಾಗಬಹುದು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಕ್ರೀಡೆಗೂ ವಿಸ್ತರಿಸಿದ ಚೀನಾದ ಕುತಂತ್ರ

ಇದೆಲ್ಲವನ್ನೂ ಪ್ರತಿಭಟಿಸಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಇಲ್ಲಿಯವರೆಗೆ ಕನಿಷ್ಠ 27 ಮಹಿಳೆಯರು ಕೊಲ್ಲಲ್ಪಟ್ಟಿದ್ದಾರೆ. ಸಾವಿರಾರು ಮಹಿಳೆಯರನ್ನು ಜೈಲಿಗೆ ತಳ್ಳಲಾಗಿದೆ. ದೈಹಿಕ ದೌರ್ಜನ್ಯ ಹಾಗೂ ಅತ್ಯಾಚಾರಕ್ಕೊಳಗಾದವರು ಅಸಂಖ್ಯ. ಬೀದಿಗಳಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವುದೂ ಸಾಧ್ಯವಿಲ್ಲ. ಇಂಥ ಸನ್ನಿವೇಶದಲ್ಲಿ ನರ್ಗಿಸ್‌ ಅವರ ಧ್ವನಿಯನ್ನು ಜಗತ್ತು ಆಲಿಸುವಂತೆ ಮಾಡಿರುವುದು ನೊಬೆಲ್‌ ಶಾಂತಿ ಪುರಸ್ಕಾರ. ಈ ಪುರಸ್ಕಾರ ಇರಾನ್‌ ಆಡಳಿತದ ಕಣ್ಣನ್ನು ಸ್ವಲ್ಪವಾದರೂ ತೆರೆಸುವುದೋ? ಕಾದು ನೋಡಬೇಕು.

ಇತರ ನೊಬೆಲ್‌ ಪ್ರಶಸ್ತಿಗಳೂ ಘೋಷಣೆಯಾಗಿವೆ. ನಾರ್ವೆ ಕಾದಂಬರಿಕಾರ ಹಾಗೂ ನಾಟಕಕಾರ ಜಾನ್ ಫೋಸ್ಸೆಗೆ ಸಾಹಿತ್ಯ ನೊಬೆಲ್ ನೀಡಲಾಗಿದೆ. ಹೊಸ ನಮೂನೆಯ ನಾಟಕಗಳು ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾದ ಗದ್ಯಕ್ಕಾಗಿ ಜಾನ್ ಫೋಸ್ಸೆ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅಕಾಡೆಮಿ ಹೇಳಿದೆ. ಕ್ವಾಂಟಮ್ ಡಾಟ್ಸ್‌ ಸೂಕ್ಷ್ಮ ಕಣಗಳ ಕುರಿತಾದ ಸಂಶೋಧನೆಗಾಗಿ ಫ್ರೆಂಚ್ ಮೂಲದ ಮೌಂಗಿ ಬವೆಂಡಿ(Moungi Bawendi), ಅಮೆರಿಕದ ಲೂಯಿಸ್ ಬ್ರಸ್ (Louis Brus) ಮತ್ತು ರಷ್ಯನ್ ಮೂಲದ ಅಲೆಕ್ಸಿ ಎಕಿಮೂವ್‌ಗೆ (Alexei Ekimov) ರಸಾಯನಶಾಸ್ತ್ರ ನೊಬೆಲ್; ವಸ್ತುಗಳಲ್ಲಿನ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಫ್ರಾನ್ಸ್‌ನ ಪಿಯರೆ ಅಗೋಸ್ಟಿನಿ (Pierre Agostini), ಹಂಗೇರಿ-ಆಸ್ಟ್ರಿಯಾದ ಫೆರೆಂಕ್ ಕ್ರೌಸ್ಟ್ (Ferenc Krausz) ಮತ್ತು ಫ್ರಾನ್ಸ್-ಸ್ವೀಡನ್‌ನ ಆನ್ನೆ ಎಲ್’ಹುಲ್ಲಿಯರ್ (Anne L’ Huillier) ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್; ತ್ವರಿತ ಕೋವಿಡ್ ವ್ಯಾಕ್ಸಿನ್ (Covid Vaccine) ‌ತಯಾರಿಕೆಗೆ ದಾರಿ ಮಾಡಿಕೊಟ್ಟ ಮೆಂಸೆಂಜರ್ ಆರ್‌ಎನ್ಎ(mRNA) ತಂತ್ರಜ್ಞಾನದ ಕೆಲಸಕ್ಕಾಗಿ ಕಟಲಿನ್ ಕರಿಕೊ (Katalin Kariko) ಮತ್ತು ಡ್ರೂ ವೈಸ್‌ಮನ್ (Drew Weissman) ಅವರಿಗೆ ವೈದ್ಯಕೀಯ (Medicine) ನೊಬೆಲ್ ಪುರಸ್ಕಾರ ನೀಡಲಾಗಿದೆ. ಇವು ಕೂಡ ಮಹತ್ವದ ಘೋಷಣೆಗಳಾಗಿವೆ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version