Site icon Vistara News

ವಿಸ್ತಾರ ಸಂಪಾದಕೀಯ: 370ನೇ ವಿಧಿ ಬಗ್ಗೆ ಕೋರ್ಟ್‌ ತೀರ್ಪು ಐತಿಹಾಸಿಕ, ಅದರ ಬೆಳಕಿನಲ್ಲಿ ಮುನ್ನಡೆಯೋಣ

Article 370 Election in Jammu and Kashmir

ಜಮ್ಮು ಮತ್ತು ಕಾಶ್ಮೀರಕ್ಕೆ (Jammu & Kashmir) ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370ಯನ್ನು (Article 370) ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ ಎತ್ತಿ ಹಿಡಿದಿದೆ. ಆರ್ಟಿಕಲ್ 370 ಅನ್ನು ರದ್ದುಗೊಳಿಸಲು ಬಳಸಿದ ಕಾರ್ಯವಿಧಾನದ ಸಾಂವಿಧಾನಿಕತೆ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ, ಜಮ್ಮು ಮತ್ತು ಕಾಶ್ಮೀರದ ಮೇಲೆ ರಾಷ್ಟ್ರಪತಿ ಆಡಳಿತ, ಸಂಸತ್ತಿನ ಒಪ್ಪಿಗೆ, ರಾಜ್ಯವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿಸಿರುವುದು ಮುಂತಾದ ಎಲ್ಲ ಆಯಾಮಗಳನ್ನು, ಸಾಂವಿಧಾನಿಕ ಅಂಶಗಳನ್ನು ವಿಚಾರಣೆಯಲ್ಲಿ ಪರಿಶೀಲಿಸಲಾಗಿದೆ. ಆರ್ಟಿಕಲ್ 370 ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ 23 ಅರ್ಜಿಗಳು ದಾಖಲಾಗಿದ್ದವು. ಇದೀಗ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪು ಸರ್ಕಾರಕ್ಕೆ ದೊರೆತ ಜಯ ಮಾತ್ರವಲ್ಲ, ಇದೊಂದು ಮೈಲಿಗಲ್ಲು ಹಾಗೂ ಹಲವು ದೂರಗಾಮಿ ಪರಿಣಾಮಗಳನ್ನು ಬೀರುವಂಥದಾಗಿದೆ.

ಮುಖ್ಯವಾಗಿ, ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಸಂದ ಜಯ. ನ್ಯಾಯಮೂರ್ತಿಗಳು ನೀಡಿರುವ ತೀರಿನಲ್ಲಿ ಸ್ಪಷ್ಟವಾಗಿ ಹೇಳಿರುವ ಅಂಶವೆಂದರೆ, ಭಾರತ ಒಕ್ಕೂಟದ ಸಂವಿಧಾನದ ಅಡಿಯಲ್ಲಿಯೇ ಜಮ್ಮು ಕಾಶ್ಮೀರದ ಸಂವಿಧಾನ ಕಾರ್ಯ ನಿರ್ವಹಿಸಬೇಕು ಎನ್ನುವುದು. ಅಂದರೆ ಜಮ್ಮು ಕಾಶ್ಮೀರ ಆಡಳಿತದ ವಿಚಾರದಲ್ಲಿ ಸಾರ್ವಭೌಮ ಅಲ್ಲ. ಅದು ಕೇಂದ್ರ ಸರ್ಕಾರದ ಅಧೀನ. ಆದರೆ ಇತರ ಎಲ್ಲ ರಾಜ್ಯಗಳಿಗೆ ಅನ್ವಯವಾಗುವ ಸ್ವಾಯತ್ತತೆಯ ಮಾನದಂಡಗಳೇ ಕಾಶ್ಮೀರಕ್ಕೂ ಸಲ್ಲುತ್ತವೆ. 370ನೇ ವಿಧಿಯನ್ನು ವಿಧಿಸುವಾಗ ಆ ಕಾಲದ ಆಡಳಿತಗಾರರಿಗೂ ಇದ್ದ ಆಶಯವೂ ಇದೇ ಆಗಿದೆ. ಅಂದು ಭಾರತ ಒಕ್ಕೂಟದಲ್ಲಿ ವಿಲೀನವಾಗಲಿದ್ದ ಕಾಶ್ಮೀರ ಪ್ರತ್ಯೇಕ ಮಾನಸಿಕತೆ ಹೊಂದಿತ್ತು; ಅದು ನಿಧಾನವಾಗಿಯಾದರೂ ಒಕ್ಕೂಟದೊಳಗೆ ಪೂರ್ಣ ವಿಲೀನವಾಗಬೇಕಿತ್ತು. ಆದರೆ ನಂತರ ಬಂದ ಆಡಳಿತಗಾರರ ತಪ್ಪುಗಳಿಂದಾಗಿ ಈ ವಿಶೇಷ ಸ್ಥಾನಮಾನವೂ ಅದರಿಂದ ಹುಟ್ಟಿಕೊಂಡು ಪ್ರತ್ಯೇಕತಾವಾದ ಮತ್ತಿತರ ಗೊಂದಲಗಳೂ ಹಾಗೇ ಮುಂದುವರಿಯುತ್ತ ಹೋದವು. ಹಾಗೆಯೇ ಕಾಶ್ಮೀರಿ ಪಂಡಿತರ ಹತ್ಯಾಕಾಂಡವೂ ನಡೆದುಹೋಯಿತು. ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಲ್ಲಿ ನ್ಯಾ. ಕೌಲ್‌ ಅವರು ಇದನ್ನೂ ಉಲ್ಲೇಖಿಸಿದ್ದು, “ಈ ಗಾಯಗಳು ಗುಣವಾಗಬೇಕಿವೆ” ಎಂದಿದ್ದಾರೆ. ಇದು 370ನೇ ವಿಧಿ ರದ್ದತಿಯ ನೈಜ ಆಶಯ. ರದ್ದತಿಯನ್ನು ಪ್ರಶ್ನಿಸಿ ಕೋರ್ಟಿಗೆ ಹೋದವರು ಈ ಆಶಯವನ್ನು ಅರ್ಥ ಮಾಡಿಕೊಂಡಿಲ್ಲ ಎಂದಲ್ಲ; ಆ ಅರ್ಜಿಗಳು ʼಉರಿಯುವ ಮನೆಯಲ್ಲಿ ಗಣ ಹಿರಿಯುವʼ ದುರುದ್ದೇಶಗಳ ಮೊತ್ತವಾಗಿದೆ. ಇನ್ನಾದರೂ ಕಾಶ್ಮೀರ ಹಾಗೂ ಅಲ್ಲಿನ ಜನತೆ ಭಾರತ ಒಕ್ಕೂಟದಲ್ಲಿ ತಾವೂ ಒಂದು ಎಂದು ಪರಿಪೂರ್ಣವಾಗಿ ಭಾವಿಸುವುದು ಎಲ್ಲರ ಹಿತಾಸಕ್ತಿಗೂ ಒಳ್ಳೆಯದು. ಈ ತೀರ್ಪಿನಿಂದ ಅದು ಸಾಧ್ಯ.

ಭಾತ ಸ್ವಾತಂತ್ರ್ಯ ಪಡೆದಾಗಲೂ ಆರ್ಟಿಕಲ್ 370 ಇರಲಿಲ್ಲ. ಭಾರತೀಯ ಸಂವಿಧಾನದಲ್ಲಿ ಅವಿಭಜಿತ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಈ ನಿಬಂಧನೆ ಬಂದುದು 1949ರ ಜುಲೈ ತಿಂಗಳಲ್ಲಿ. ಆ ವಿಧಿಯಿಂದಾಗಿ ರಾಜ್ಯ ತನ್ನದೇ ಆದ ಸಂವಿಧಾನವನ್ನು ಹೊಂದಲು ಅವಕಾಶ ನೀಡಿತು, ಪ್ರತ್ಯೇಕ ಧ್ವಜ ಮತ್ತು ಭಾರತ ಸರ್ಕಾರದ ಸೀಮಿತ ನ್ಯಾಯವ್ಯಾಪ್ತಿಯನ್ನು ಕಲ್ಪಿಸಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ರಾಷ್ಟ್ರಪತಿ ಆದೇಶದ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು 2019 ಆಗಸ್ಟ್ 5ರಂದು ರದ್ದು ಮಾಡಿತು. ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳನ್ನು ಮಾಡಿತು.

ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಉಳಿದ ಭಾಗಗಳೊಂದಿಗೆ ಏಕೀಕರಣಕ್ಕೆ ಅಡ್ಡಿಪಡಿಸುತ್ತದೆ. ಈ ಪ್ರದೇಶದ ಅಭಿವೃದ್ಧಿಯನ್ನು ಸೀಮಿತಗೊಳಿಸುತ್ತದೆ ಎಂಬ ಕಾರಣಕ್ಕಾಗಿ ರದ್ದುಗೊಳಿಸಲಾಯಿತು ಎಂದು ಕೇಂದ್ರ ಸರಕಾರ ತನ್ನ ವಾದವನ್ನು ಮಂಡಿಸಿದೆ. ರದ್ದ ನಿರ್ಧಾರವು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ, ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಉತ್ತೇಜಿಸಲು ಮತ್ತು ಪ್ರದೇಶದಲ್ಲಿ ಉತ್ತಮ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣವಾಗಿ ಅನ್ವಯವಾಗದ ರಾಷ್ಟ್ರೀಯ ಕಾನೂನುಗಳು ಮತ್ತು ಕಾರ್ಯಕ್ರಮಗಳ ಅನ್ವಯಕ್ಕೆ ಇದು ಅನುಕೂಲವಾಗುತ್ತದೆ. ಜಮ್ಮು ಕಾಶ್ಮೀರ ಇಂದು ಬರಿಯ ಪ್ರವಾಸೋದ್ಯಮವನ್ನು ಮಾತ್ರ ನೆಚ್ಚಿಕೊಂಡು, ಇತರ ಯಾವ ಕ್ಷೇತ್ರಗಳಲ್ಲೂ ಮುಂದುವರಿಯದೆ ಉಳಿಯಲೂ ಇದೇ ಕಾರಣ. ಇತ್ತೀಚೆಗೆ ಅಲ್ಲಿ ಹೂಡಿಕೆ ಹೆಚ್ಚುತ್ತಿದೆ. 370ನೇ ವಿಧಿ ರದ್ದಾದುದರಿಂದ ಅಲ್ಲಿ ಭಾರತದ ಇತರ ಕಡೆಗಳವರೂ ಹೂಡಿಕೆ ಮಾಡಬಹುದಾಗಿದೆ. ಇದು ಅಭಿವೃದ್ಧಿಗೆ ಪೂರಕ. 370 ರದ್ದತಿ ಬಳಿಕ ಕಾಶ್ಮೀರದಲ್ಲಿ ಭಯೋತ್ಪಾದನೆ (ಶೇ. 45.2), ಒಳನುಸುಳುವಿಕೆ (ಶೇ. 90.2), ಕಲ್ಲು ತೂರಾಟದ ಘಟನೆಗಳು (ಶೇ. 97.2), ಮತ್ತು ಭದ್ರತಾ ಸಿಬ್ಬಂದಿ ಸಾವು (ಶೇ. 65.9) ಕಡಿಮೆಯಾಗಿವೆ. ಈ ಅಂಶವನ್ನು ಕೇಂದ್ರ ಸರ್ಕಾರವು ಕೋರ್ಟ್‌ ಗಮನಕ್ಕೆ ತಂದಿದೆ.

ಈ ಭಾಗದಲ್ಲಿ ಚುನಾವಣೆ ನಡೆಸುವುದು ಬಾಕಿ ಇದೆ. ಪರಿಸ್ಥಿತಿ ಸುಧಾರಿಸಿದ ನಂತರ ಚುನಾವಣೆಯನ್ನು ನಡೆಸುವ ಆಶಯ ಸರ್ಕಾರಕ್ಕೆ ಇದೆ. 2024ರ ಸೆಪ್ಟೆಂಬರ್‌ ಒಳಗೆ ಚುನಾವಣೆ ನಡೆಸಲು ಕೋರ್ಟ್‌ ಪೀಠವೂ ಸೂಚಿಸಿದೆ. ಹಾಗೆಯೇ 1980ರಿಂದ ಈಚೆಗೆ ನಡೆದ ಮಾನವ ಹಕ್ಕು ಉಲ್ಲಂಘನೆಗಳ ಸಮಗ್ರ ತನಿಖೆಯನ್ನು ನಡೆಸಲು ಆಯೋಗವನ್ನು ರಚಿಸಲೂ ಸೂಚಿಸಿದೆ. ಇವೂ ಆಗಬೇಕಾದ ಕ್ರಮಗಳೇ ಆಗಿವೆ.

Exit mobile version