Site icon Vistara News

ವಿಸ್ತಾರ ಸಂಪಾದಕೀಯ: ಸಾಲದ ಹೊರೆಯ ನಡುವೆ ಸರ್ವ ವಲಯಗಳಿಗೂ ಸಮಾನ ಹಂಚಿಕೆಯ ಬಜೆಟ್

Vistara Editorial, Karnataka budget touches all sectors amid debt burden

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು 2024-25ರ ಬಜೆಟ್‌ ಅನ್ನು ಮಂಡಿಸಿದ್ದಾರೆ. ಈ ಸಾಲಿನ ಕರ್ನಾಟಕ ರಾಜ್ಯ ‌ ಆಯವ್ಯಯದ (Karnataka Budget 2024) ಒಟ್ಟು ಗಾತ್ರ 3,71,383 ಕೋಟಿ ರೂ. ಇದು 2023-24ನೇ ಸಾಲಿಗಿಂತ 44 ಸಾವಿರ ಕೋಟಿ ರೂ. ಹೆಚ್ಚು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಇನ್ನಷ್ಟು ಆಕರ್ಷಕ ಯೋಜನೆಗಳನ್ನು ಪ್ರಕಟಿಸಿ ಮತದಾರರನ್ನು ಸೆಳೆಯಬಹುದು ಎಂದು ಹೇಳಲಾಗಿತ್ತಾದರೂ, ಸಿಎಂ ಹಾಗೇನೂ ಮಾಡಲು ಮುಂದಾಗಿಲ್ಲ. ಖಜಾನೆಯ ಸ್ಥಿತಿಗತಿ ಗಮನಿಸಿಕೊಂಡು, ಏರಿಸಬೇಕಾದಲ್ಲಿ ತೆರಿಗೆ ಏರಿಸಿ, ಸಾಲ ಮಾಡಬೇಕಾದಲ್ಲಿ ಸಾಲ ಮಾಡಿ, ಗ್ಯಾರಂಟಿ ಯೋಜನೆಗಳಿಗೂ ಹಣಕಾಸು ಹೊಂದಿಸಿಕೊಂಡು, ವಿತ್ತೀಯ ಶಿಸ್ತನ್ನು ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ಮಾಡಿ ಬಜೆಟನ್ನು ಸಿಎಂ ಮಂಡಿಸಿದ್ದಾರೆ. ಎಲ್ಲ ವಲಯಗಳನ್ನೂ ಈ ಬಜೆಟ್‌ ಸ್ಪರ್ಶಿಸಿದೆ(Vistara Editorial).

ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಅಡಚಣೆ ಆಗದಂತೆ ತಾಳಮೇಳ ಕಾಯ್ದುಕೊಂಡಿದ್ದಾರೆ. ಒಟ್ಟಾರೆಯಾಗಿ ಐದೂ ಗ್ಯಾರಂಟಿಗಳಿಗೆ ಸೇರಿ 52,009 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಐದೂ ಗ್ಯಾರಂಟಿ ಯೋಜನೆಯಲ್ಲಿ ಸಿಂಹಪಾಲು ಗೃಹ ಲಕ್ಷ್ಮಿ ಯೋಜನೆಗೆ (28,608 ಕೋಟಿ ರೂ) ಖರ್ಚಾಗುತ್ತಿದ್ದರೆ, ಅತಿ ಕಡಿಮೆ ಅನುದಾನ (650 ಕೋಟಿ ರೂ.) ಯುವ ನಿಧಿಗೆ ಮೀಸಲಿಡಲಾಗಿದೆ. ಇಲಾಖೆಗಳಲ್ಲಿ ಶಿಕ್ಷಣ 44422 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ 34406 ಕೋಟಿ ರೂ., ಇಂಧನ 23159 ಕೋಟಿ ರೂ., ಗ್ರಾಮೀಣಾಭಿವೃದ್ಧಿ 21160 ಕೋಟಿ ರೂ. ಹೆಚ್ಚಿನ ಅನುದಾನ ಪಡೆದಿವೆ.

ಪ್ರಸಕ್ತ ಸಾಲಿನಲ್ಲಿ ರಾಜ್ಯದ 36 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 27,000 ಕೋಟಿ ರೂ.ಗಳಷ್ಟು ದಾಖಲೆಯ ಬೆಳೆ ಸಾಲ ವಿತರಣೆ ಗುರಿ, ಸರ್ಕಾರದ ಹಿಂದಿನ ಅವಧಿಯ ಬೆಳೆಸಾಲ ಮನ್ನಾ ಬಾಬ್ತು ಬಾಕಿ ಇರುವ 132 ಕೋಟಿ ರೂ. ಮೊತ್ತ ಡಿಸಿಸಿ ಬ್ಯಾಂಕುಗಳಿಗೆ ಬಿಡುಗಡೆ, ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ ಇವೆಲ್ಲವೂ ಕೃಷಿ ಕ್ಷೇತ್ರವನ್ನು ಬಲಿಷ್ಠಗೊಳಿಸುವ ಘೋಷಣೆಗಳಾಗಿವೆ. ಕಾವೇರಿ ಕಣಿವೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಒಂದು ಪ್ರತ್ಯೇಕ ಯೋಜನಾ ವಿಭಾಗ ಹಾಗೂ 2 ಉಪವಿಭಾಗಗಳ ಸ್ಥಾಪನೆ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡನಗರದ ಬಳಿಯ ವಿತರಣಾ ತೊಟ್ಟಿಯವರೆಗೆ ಪೂರ್ವ ಪರೀಕ್ಷಾರ್ಥ ಚಾಲನೆ, ಲಿಫ್ಟ್‌ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುರುತ್ವ ಕಾಲುವೆಗೆ ನೀರು ಹರಿಸಲು ಕ್ರಮ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಯಡಿಯ ಉಪಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ, ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಸುಮಾರು 75,000 ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಗುರಿ ಹೊಂದಿರುವುದು ನೀರಾವರಿಯ ಬೋನಸ್.

2024-25 ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿರುವುದು ವಸತಿ ಹೊಂದುವ ಕನಸು ಹೊಂದಿದವರಿಗೆ ಭರವಸೆ. 2000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ ಮಾಡುತ್ತಿರುವುದು ಶಿಕ್ಷಣ ಕ್ಷೇತ್ರದಲ್ಲಿ ಕುತೂಹಲಕಾರಿಯಾದ, ಕನ್ನಡ ಭಾಷೆಯ ಮೇಲೆ ದೂರಗಾಮಿ ಪರಿಣಾಮ ಬೀರಬಲ್ಲ ಹೆಜ್ಜೆಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್‌ ಘೋನ್‌ ಒದಗಿಸಲು ಕ್ರಮ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿ೦ದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ ಒಟ್ಟು 2,710 ಕೋಟಿ ರೂ. ಅನುದಾನ, ಪರಿಶಿಷ್ಟ ಜಾತಿಯ 5,000 ಯುವಕ/ಯುವತಿಯರಿಗೆ ಡ್ರೋನ್‌ ಆಧಾರಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ, ಹಿಂದುಳಿದ ವರ್ಗಗಳ 150 ಮೆಟ್ರಿಕ್‌ ನಂತರದ ಹೊಸ ವಸತಿನಿಲಯಗಳ ಪ್ರಾರಂಭ ಇವುಗಳು ದುರ್ಬಲ ವರ್ಗಗಳ ಸಬಲೀಕರಣಕ್ಕೆ ಹೆಚ್ಚಿನ ಮೌಲ್ಯ ಕಲ್ಪಿಸಬಲ್ಲ ಕ್ರಮಗಳಾಗಿವೆ. ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸು ಜಾರ ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿದೆ.

ಆದರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಸಾಲ ಮಾಡಿರುವುದು ಕಂಡುಬರುತ್ತಿದೆ. 2024-25ರಲ್ಲಿ ರಾಜಸ್ವ ಕೊರತೆ 27,354 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆ 82,981 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದ್ದು, ರಾಜ್ಯದ ಜಿ.ಎಸ್.ಡಿ.ಪಿಯ ಶೇ.2.95ರಷ್ಟಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಯು 2024-25ರ ಅಂತ್ಯಕ್ಕೆ 6,65,095 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ಅಂದರೆ ಈಗ ರಾಜ್ಯ ಸರ್ಕಾರದ ಮೇಲೆ 6.65 ಲಕ್ಷ ಕೋಟಿ ರೂ. ಸಾಲ ಇದೆ. ಅಂದರೆ, ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆ ಇದೆ ಎಂದು ಇಟ್ಟುಕೊಂಡರೆ ಪ್ರತಿಯೊಬ್ಬರ ಮೇಲೆ ಒಂದೊಂದು ಲಕ್ಷ ರೂ. ಸಾಲ ಇರುವಂತಾಗಿದೆ. ಇಷ್ಟು ದೊಡ್ಡ ಗಾತ್ರದ ಬಜೆಟ್‌ ಮಂಡನೆಗಾಗಿ ಸಿದ್ದರಾಮಯ್ಯ ಅವರು 1,05,246 ಕೋಟಿ ರೂ. ಸಾಲ ಮಾಡಬೇಕಾಗಿದೆ. ಆದರೆ ಇದು ವಿತ್ತೀಯ ಶಿಸ್ತನ್ನು ದಾಟಿ ಹೋಗಿಲ್ಲ. ಹೀಗಾಗಿ ರಾಜ್ಯಕ್ಕೆ ಆರ್ಥಿಕ ಅಪಾಯವೇನೂ ಎದುರಾಗುವ ಸ್ಥಿತಿಯಲ್ಲಿ ಇಲ್ಲ ಎಂಬ ವಾದ ಮುಖ್ಯಮಂತ್ರಿಯದು. ಸಾಲ ಮಾಡಿ ತುಪ್ಪ ತಂದರೂ ರಾಜ್ಯದ ಎಲ್ಲ ವಲಯಗಳ ಜನತೆಗೂ ಹದವಾಗಿ ಹಂಚಿದ್ದಾರೆ. ಈ ಮೇಲಿನ ಘೋಷಣೆಗಳು ಹಾಗೂ ಭರವಸೆಗಳು ಸಕಾಲದಲ್ಲಿ ಕಾರ್ಯರೂಪದಲ್ಲಿ ಬಂದಾಗ ಮಾತ್ರ ಅರ್ಥಪೂರ್ಣವಾಗಲಿವೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಚುನಾವಣೆ ಬಾಂಡ್; ಪಾರದರ್ಶಕತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Exit mobile version