ಅಮೆರಿಕ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಈಜಿಪ್ಟ್ ಪ್ರವಾಸವನ್ನು ಪೂರ್ತಿ ಮಾಡಿದ್ದಾರೆ. ಈ ವೇಳೆ, ಮೋದಿ ಅವರಿಗೆ ಅಲ್ಲಿನ ಸರ್ಕಾರವು ಈಜಿಪ್ಟ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ನೈಲ್’ ನೀಡಿ ಗೌರವಿಸಿದೆ. ಇದರೊಂದಿಗೆ ಪ್ರಧಾನಿ ಮೋದಿ ಅವರ ವಿಶ್ವ ಗೌರವದ ಪಟ್ಟಿಯಲ್ಲಿ ಮತ್ತೊಂದು ಗರಿ ಸೇರಿದೆ. ಈವರೆಗೂ ಒಟ್ಟು 13 ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ, ಸನ್ಮಾನಿಸಿವೆ. ಈಜಿಪ್ಟ್ ಕೂಡ ಮೋದಿಗೆ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡುವ ಮೂಲಕ ಭಾರತ ಮತ್ತು ಈಜಿಪ್ಟ್ ನಡುವಿನ ಬಾಂಧವ್ಯವನ್ನು ಮತ್ತೊಂದು ಹಂತಕ್ಕೆ ವಿಸ್ತರಿಸಿದೆ; ಹೊಸ ಬಾಂಧವ್ಯಕ್ಕೆ ನಾಂದಿ ಹಾಡಿದೆ.
ಪ್ರಶಸ್ತಿ ಸ್ವೀಕಾರಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯರು ಹಾಗೂ ಈಜಿಪ್ಟ್‌ನ ದಾವೂದಿ ಬೋಹ್ರಾ ಮುಸ್ಲಿಮರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ, ಹಲವು ಒಡಂಬಡಿಕೆಗಳಿಗೂ ಸಹಿ ಹಾಕಿದ್ದಾರೆ. ಅಲ್-ಹಕೀಮ್ ಐತಿಹಾಸಿಕ ಮಸೀದಿಗೆ ಭೇಟಿ ನೀಡಿದ್ದರು. ಯುದ್ಧ ಸ್ಮಾರಕಕ್ಕೂ ಮೋದಿ ಹೋಗಿದ್ದರು. 2023ರ ಭಾರತದ ಗಣರಾಜ್ಯೋತ್ಸವಕ್ಕೆ ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಹೀಗೆ, ಈಜಿಪ್ಟ್ ಮತ್ತು ಭಾರತದ ನಡುವಿನ ಸಂಬಂಧಗಳು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಆಳವಾಗಿ ಹಾಗೂ ವಿಸ್ತಾರಗೊಳ್ಳುತ್ತಿರುವುದು ಜಾಗತಿಕ ನೆಲೆಗಟ್ಟಿನಲ್ಲಿ ಉತ್ತಮ ಬೆಳವಣಿಗೆಯಾಗಿದೆ.
ಆಧುನಿಕ ಭಾರತ ಮತ್ತು ಈಜಿಪ್ಟ್ ನಡುವಿನ ಸಂಬಂಧಕ್ಕೆ ದೊಡ್ಡ ಇತಿಹಾಸದ ಹಿನ್ನೆಲೆ ಇದೆ. ಇದು ಈಜಿಪ್ಟ್‌ನ ಕ್ರಾಂತಿಕಾರಿ, ಮುತ್ಸದ್ದಿ ಹಾಗೂ ಪ್ರಧಾನಿಯಾಗಿದ್ದ ಸಾದ್ ಝಗ್ಲೌಲ್ ಪಾಶಾ ಹಾಗೂ ಮಹಾತ್ಮ ಗಾಂಧಿ ಅವರಿಂದ ಶುರುವಾಗುತ್ತದೆ. ಈ ಇಬ್ಬರು ಮಹಾನ್ ನಾಯಕರು ತಮ್ಮ ದೇಶದಲ್ಲಿ ನಡೆಯುತ್ತಿದ್ದ ಚಳವಳಿಯ ನಾಯಕತ್ವವು ವಹಿಸಿಕೊಂಡಿದ್ದರು. ಅವರಿಬ್ಬರೂ ಅನುಸರಿಸುತ್ತಿದ್ದ ತತ್ವಗಳ ನಡುವೆ ಸಾಮ್ಯತೆ ಇತ್ತು. ಹಾಗಾಗಿ, ಅಂದಿನಿಂದಲೂ ಈಜಿಪ್ಟ್ ಮತ್ತು ಭಾರತ ಸ್ನೇಹಿತ ರಾಷ್ಟ್ರಗಳಾಗಿಯೇ ಜಾಗತಿಕ ವೇದಿಕೆಯಲ್ಲಿ ಕಾಣಿಸಿಕೊಂಡಿವೆ. 1955ರಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಅಲಿಪ್ತ ಚಳವಳಿಗೆ ಈಜಿಪ್ಟ್ ನಾಯಕ ಗಮಲ್ ಅಬ್ದೆಲ್ ನಾಸರ್ ಅವರು ಸಾಥ್ ನೀಡಿದರು. ಈಜಿಪ್ಟ್ ಸಂಕಟಕ್ಕೆ ಸಿಲುಕಿದಾಗ ಭಾರತವು ಬಹಿರಂಗವಾಗಿಯೇ ಅದರ ಬೆಂಬಲಕ್ಕೆ ನಿಂತ ಉದಾಹರಣೆಗಳಿವೆ. 1956ರಲ್ಲಿ ಈಜಿಪ್ಟ್ ಪರವಾಗಿ ದನಿ ಎತ್ತಿದ್ದ ನೆಹರು ಅವರು ಬ್ರಿಟಿಷ್ ಕಾಮನ್‌ವೆಲ್ತ್‌ನಿಂದ ಹೊರ ಹೋಗುವ ಬೆದರಿಕೆ ಹಾಕಿದ್ದರು. 1967ರಲ್ಲಿ 6 ದಿನಗಳ ಯುದ್ಧದ ವೇಳೆ ಭಾರತವು ಈಜಿಪ್ಟ್ ಗೆ ಬೆಂಬಲ ನೀಡಿತ್ತು. ಹೀಗೆ ನೆಹರು ಅವರಿಂದ ಹಿಡಿದು ಮೋದಿ ತನಕ ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಸಂಬಂಧವು ಗಟ್ಟಿಯಾಗುತ್ತಲೇ ಬಂದಿದೆ.
ರಾಜಕೀಯವಾಗಿ ಮಾತ್ರವಲ್ಲದೇ, ವ್ಯಾಪಾರ ದೃಷ್ಟಿಯಿಂದಲೂ ಭಾರತಕ್ಕೆ ಈಜಿಪ್ಟ್ ಪ್ರಮುಖ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಅಮೆರಿಕ, ಇಟಲಿ, ಸೌದಿ ಅರೆಬಿಯಾ ಬಳಿಕ ಭಾರತವು ಈಜಿಪ್ಟ್‌ನ ನಾಲ್ಕೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಕಚ್ಚಾ ಹತ್ತಿ, ಸಿದ್ಧ ರಾಸಾಯನಿಕ ಗೊಬ್ಬರ, ತೈಲ ಮತ್ತು ತೈಲೋತ್ಪನ್ನಗಳು, ಆರ್ಗ್ಯಾನಿಕ್ ಮತ್ತು ನಾನ್ ಆರ್ಗ್ಯಾನಿಕ್ ಕೆಮಿಕಲ್ಸ್, ಚರ್ಮ, ಕಬ್ಬಿಣ ಉತ್ಪನ್ನಗಳನ್ನು ಈಜಿಪ್ಟ್ ಭಾರತಕ್ಕೆ ರಫ್ತು ಮಾಡುತ್ತದೆ. ಅದೇ ರೀತಿ, ಭಾರತವು ಈಜಿಪ್ಟ್‌ಗೆ ಕಾಟನ್ ಯಾರ್ನ್, ಎಳ್ಳು, ಕಾಫಿ, ಗಿಡಮೂಲಿಕೆಗಳು, ತಂಬಾಕು, ಬೇಳೆಕಾಳುಗಳನ್ನು ರಫ್ತು ಮಾಡುತ್ತದೆ. ಹೀಗೆ ವ್ಯಾಪಾರ-ವಹಿವಾಟು ದೃಷ್ಟಿಯಿಂದಲೂ ಉಭಯ ರಾಷ್ಟ್ರಗಳ ನಡುವೆ ಒಳ್ಳೆಯ ಸಂಬಂಧ ಬೆಳೆದಿದೆ. ಈ ಹಂತದಲ್ಲಿ ಪ್ರಧಾನಿ ನರೇಂದ್ರ ಈಜಿಪ್ಟ್ ಪ್ರವಾಸ ಕೈಗೊಳ್ಳುವುದು ಮಾತ್ರವಲ್ಲದೇ, ಅಲ್ಲಿನ ಐತಿಹಾಸಿಕ ಮಸೀದಿಗೆ ಭೇಟಿ ನೀಡುವ ಮೂಲಕ ಇಡೀ ಜಗತ್ತಿಗೇ ಸ್ಪಷ್ಟವಾದ ಶಾಂತಿಯ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ರಷ್ಯಾದಲ್ಲಿ ಬಂಡಾಯ, ಪುಟಿನ್ ವಿಸ್ತರಣಾಕಾಂಕ್ಷೆಯ ದುಷ್ಪರಿಣಾಮ
ಈ ಮಧ್ಯೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು, ಮುಸ್ಲಿಮರ ಕುರಿತು ಮೋದಿ ಅವರು ಅನುಸರಿಸುತ್ತಿರುವ ನೀತಿ ಸರಿ ಇಲ್ಲ ಎಂದು ಟೀಕಿಸಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಯಾವುದೇ ನಿರ್ದಿಷ್ಟ ಅಂಕಿ ಸಂಖ್ಯೆಗಳು ಇಲ್ಲದೇ ಟೀಕೆ ಮಾಡುವುದು ಸರಿಯಲ್ಲ. ಮೋದಿ ಸರ್ಕಾರವು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನೀತಿಯಡಿ ಕೆಲಸ ಮಾಡುತ್ತಿದೆ. ಅಲ್ಲದೇ, ಈವರೆಗೆ ಮೋದಿ ಅವರಿಗೆ ದೊರೆತಿರುವ 13 ದೇಶಗಳ ಗೌರವಗಳ ಪೈಕಿ 6 ಮುಸ್ಲಿಮ್ ರಾಷ್ಟ್ರಗಳೇ ನೀಡಿವೆ ಎಂದು ಹೇಳುವ ಮೂಲಕ ಮುಸ್ಲಿಮರು ಮತ್ತು ಮೋದಿ ನಡುವೆ ಇರುವ ಸಂಬಂಧವನ್ನು ಜಾಹೀರು ಮಾಡಿದ್ದಾರೆ. ಒಟ್ಟಾರೆಯಾಗಿ ಮೋದಿ ಅವರ ಕೈಗೊಂಡ ಅಮೆರಿಕ ಮತ್ತು ಈಜಿಪ್ಟ್ ರಾಷ್ಟ್ರಗಳ ಭಾರೀ ಯಶಸ್ವಿಯಾಗಿದೆ. ಜಾಗತಿಕ ನಕಾಶೆಯಲ್ಲಿ ಭಾರತವು ಯಾವ ಸ್ಥಾನದಲ್ಲಿದೆ ಎಂಬ ಸಂದೇಶವನ್ನು ಸಾರುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ.
ಇನ್ನಷ್ಟು ವಿಸ್ತಾರ ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.