Site icon Vistara News

ವಿಸ್ತಾರ ಸಂಪಾದಕೀಯ: ಪ್ಯಾಲೆಸ್ತೀನ್‌ ನಾಗರಿಕರಿಗೂ ಮಾನವೀಯ ನೆರವು ದೊರೆಯಲಿ

Vistara Editorial,Palestinian citizens should get Humanitarian aid

ಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಕಾಳಗವು (Israel Palestine War) ತಾರಕಕ್ಕೇರಿದ್ದು, ಗಾಜಾ ಸರ್ಕಾರಿ ಆಸ್ಪತ್ರೆ ಮೇಲೆ ರಾಕೆಟ್‌ ದಾಳಿ ನಡೆಸಲಾಗಿದೆ. ಇದರಿಂದ 500ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಇಡೀ ಆಸ್ಪತ್ರೆ ಈಗ ಮಸಣದಂತಾಗಿದ್ದು, ಗಾಯಗೊಂಡವರು, ಸಂಬಂಧಿಕರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ. ಆಸ್ಪತ್ರೆಯಲ್ಲಿ ಮೃತಪಟ್ಟವರ ಶವಗಳನ್ನು ಸಾಲಾಗಿ ಬಿಳಿ ಬಟ್ಟೆ ಸುತ್ತಿ ಮಲಗಿಸಿರುವ, ಗಾಯಗೊಂಡ ಕಂದಮ್ಮಗಳು ಹಾಗೂ ಮಹಿಳೆಯರ ರಕ್ತಸಿಕ್ತ ಚಿತ್ರಗಳು ಎಲ್ಲೆಡೆ ಪ್ರಕಟವಾಗಿದ್ದು, ಮನ ಕಲಕುವಂತಿವೆ. ಆಸ್ಪತ್ರೆ ಮೇಲೆ ದಾಳಿ ಮಾಡಿದ್ದು ಯಾರು ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಪರಸ್ಪರರ ಮೇಲೆ ಆರೋಪ ಹೊರಿಸಿವೆ. ಯಾರೇ ಮಾಡಿದ್ದರೂ ಇದು ಅಕ್ಷಮ್ಯ. ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ ಎರಡೂ ಕಡೆ ದಾಳಿಗಳಿಂದಾಗಿ ಸಾವು ನೋವು, ಕಷ್ಟ ನಷ್ಟಗಳುಂಟಾಗಿವೆ. ಈಗ ವಿಶ್ವ ಸಮುದಾಯದಿಂದ ಮಾನವೀಯ ನೆರವು ಹಾಗೂ ನಾಗರಿಕರ ಮೇಲೆ ಆಗುತ್ತಿರುವ ಅಮಾನವೀಯ ದಾಳಿಗಳನ್ನು ನಿಲ್ಲಿಸಲು ಪ್ರಯತ್ನ ಮಾಡಬೇಕಿದೆ(Vistara Editorial).

ಈ ನಡುವೆ ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ ಉಂಟಾದ ಪ್ರಾಣಹಾನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಪ್ಯಾಲೆಸ್ತೀನ್ ನಾಗರಿಕರಿಗೆ ಮಾನವೀಯ ನೆರವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಅದೇ ಹೊತ್ತಿಗೆ ಈ ಪ್ರದೇಶದಲ್ಲಿ ಭಯೋತ್ಪಾದನೆ, ಹಿಂಸಾಚಾರ ಮತ್ತು ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಸ್ರೇಲ್- ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತದ ದೀರ್ಘಕಾಲದ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಉಭಯ ದೇಶಗಳು ಸೌಹಾರ್ದಯುತ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಂಡು ಮಧ್ಯ ಪ್ರಾಚ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ಭಾರತ ಸೇರಿದಂತೆ ಎಲ್ಲರ ಆಶಯ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಆಂಟೋನಿಯೋ ಗುಟೆರಸ್‌ ಕೂಡ ಇದನ್ನೇ ಹೇಳಿದ್ದಾರೆ. ʼಇಸ್ರೇಲ್‌ ಮೇಲೆ ಹಮಾಸ್‌ ನಡೆಸಿರುವ ದಾಳಿ ಅಕ್ಷಮ್ಯ. ಆದರೆ ಅದು ಪ್ಯಾಲೆಸ್ತೀನ್‌ ನಾಗರಿಕರ ಮೇಲೆ ದಾಳಿ ನಡೆಸುವುದಕ್ಕೆ ಕಾರಣವಾಗಬಾರದುʼ ಎಂದಿದ್ದಾರೆ ಅವರು. ಇತ್ತ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕೂಡʼ ʼಇಸ್ರೇಲ್‌ ಅಮೆರಿಕವನ್ನು ನೋಡಿ ಪಾಠ ಕಲಿಯಬೇಕು. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡಬಾರದುʼ ಎಂದು ಹೇಳಿದ್ದಾರೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ನಿತಾರಿ ಹಂತಕರ ಖುಲಾಸೆ: ಸಮಾಜ ಯಾವ ವ್ಯವಸ್ಥೆ ಮೇಲೆ ನಂಬಿಕೆ ಇಡಬೇಕು?

ಇವೆಲ್ಲವುಗಳ ಒಟ್ಟು ತಾತ್ಪರ್ಯವೇನೆಂದರೆ, ನಾಗರಿಕರ ಪ್ರಾಣ ಅಮೂಲ್ಯ. ಎಷ್ಟೇ ಬೆಲೆ ತೆತ್ತಾದರೂ ಅವರನ್ನು ರಕ್ಷಿಸಬೇಕು. ಅವರು ಪ್ಯಾಲೆಸ್ತೀನ್‌ ಕಡೆಯವರಾಗಲಿ, ಇಸ್ರೇಲ್‌ ಕಡೆಯವರಾಗಲಿ ಮುಖ್ಯವಲ್ಲ. ಕೆಲವು ಅರಬ್‌ ದೇಶಗಳು, ಇರಾನ್‌- ಜೋರ್ಡಾನ್‌ನಂಥ ದೇಶಗಳು ಹಮಾಸ್‌ ಉಗ್ರರಿಗೆ ನೆರವಾಗುತ್ತಿವೆ. ಭಯೋತ್ಪಾದನೆಗೆ ನೆರವಾಗುವುದು ಸಮರ್ಥನೀಯವಲ್ಲ. ಹಮಾಸ್‌ ಉಗ್ರರು ಇಸ್ರೇಲ್‌ನೊಳಗೆ ನುಸುಳಿ ಸಾವಿರಾರು ಅಮಾಯಕ ಜನರ ಮಾರಣಹೋಮಕ್ಕೆ ಕಾರಣರಾದವರು. ಅಂಥವರ ಬಗ್ಗೆ ಸಹಾನುಭೂತಿ ಅಗತ್ಯವಿಲ್ಲ. ಆ ಕಾರಣದಿಂದ, ಉಗ್ರರನ್ನು ಪತ್ತೆ ಹಚ್ಚಿ ಶಿಕ್ಷಿಸಲು ಗಾಜಾ ಮೇಲೆ ಇಸ್ರೇಲ್‌ ನಡೆಸಿರುವ ದಾಳಿ ಸಮರ್ಥನೀಯ. ಆದರೆ, ಇದೇ ಸಂದರ್ಭ ಬಳಸಿಕೊಂಡು ಕೆಲವು ಉಗ್ರ ಬಣಗಳು ಆಸ್ಪತ್ರೆಯಂಥ ಸ್ಥಳಗಳಲ್ಲೂ ದುಷ್ಕೃತ್ಯ ಎಸಗಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ಯತ್ನಿಸುತ್ತಿವೆ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಎಂದು ತನಿಖೆಯಾಗಿ ಶಿಕ್ಷೆಯಾಗಬೇಕು. ಎರಡನೇ ಮಹಾಯುದ್ಧದ ಕಾಲದಲ್ಲಿ ಜರ್ಮನಿಯಲ್ಲಿ ಯಹೂದಿಗಳ ಹತ್ಯೆಗೆ ಕಾರಣರಾದ ನಾಜಿ ಸೈನ್ಯದ ಪ್ರತಿಯೊಬ್ಬ ಸೈನ್ಯಾಧಿಕಾರಿಯನ್ನೂ ನಂತರ ವಿಚಾರಣೆಗೊಳಪಡಿಸಿ ಶಿಕ್ಷಿಸಲಾಗಿತ್ತು. ಅಂತಾರಾಷ್ಟ್ರೀಯ ಕಾನೂನು, ನ್ಯಾಯಾಂಗ ವ್ಯವಸ್ಥೆ ಗಟ್ಟಿಯಾಗಿದ್ದಾಗ ಇದು ಸಾಧ್ಯ. ಹಾಗೆಯೇ ಹಮಾಸ್‌ ಉಗ್ರರನ್ನು ಕಟಕಟೆಯಲ್ಲಿ ನಿಲ್ಲಿಸಿ ಶಿಕ್ಷಿಸಬೇಕಿದೆ.

ಇದರ ಜತೆಗೆ ಸಂತ್ರಸ್ತರಿಗೆ ಈಗ ಉದಾರ ಮಾನವೀಯ ನೆರವು ಅಗತ್ಯವಾಗಿದೆ. ಗಾಜಾ ಪ್ರದೇಶ ಎರಡು ಕಡೆ ಇಸ್ರೇಲ್‌ನಿಂದ, ಒಂದು ಕಡೆ ಈಜಿಪ್ಟ್‌ನಿಂದ, ಇನ್ನೊಂದು ಕಡೆ ಮೆಡಿಟರೇನಿಯನ್‌ ಸಮುದ್ರದಿಂದ ಆವೃತವಾಗಿದ್ದು, ದಿಗ್ಬಂಧನಕ್ಕೊಳಗಾಗಿದೆ. ಅಲ್ಲಿ ಅಂತಾರಾಷ್ಟ್ರೀಯ ನೆರವು ಒದಗಿಸಲು ಇಸ್ರೇಲ್‌ ಅಥವಾ ಈಜಿಪ್ಟ್‌ನ ಸಹಕಾರವಿಲ್ಲದಿದ್ದರೆ ಸಾಧ್ಯವಿಲ್ಲ. ಸದ್ಯ ಇಸ್ರೇಲ್‌ ಎಲ್ಲ ಬಗೆಯ ನೆರವುಗಳನ್ನು ಇಲ್ಲಿಗೆ ನಿಲ್ಲಿಸಿದೆ. ಅದು ಉಗ್ರರಿಗೆ ದುರ್ಬಳಕೆಯಾಗಬಹುದು ಎಂಬುದು ಆ ದೇಶದ ಆತಂಕ. ಈ ಆತಂಕದಲ್ಲಿ ತಥ್ಯವಿದೆ. ಆದರೆ ರೆಡ್‌ ಕ್ರಾಸ್‌, ವಿಶ್ವಸಂಸ್ಥೆ, ನ್ಯಾಟೋದಂಥ ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಾಯದಿಂದ ಈ ನೆರವು ಅಗತ್ಯವುಳ್ಳವರನ್ನು ತಲುಪುವಂತೆ ಮಾಡಲು ಸಾಧ್ಯವಿದೆ. ಇದನ್ನೇ ನಮ್ಮ ಪ್ರಧಾನಿ ಕೂಡ ಪ್ರತಿಪಾದಿಸಿದ್ದಾರೆ. ಪ್ಯಾಲೆಸ್ತೀನ್‌ನ ಮುಗ್ಧ ನಾಗರಿಕರಿಗೆ ನಮ್ಮ ಸಹಾಯ, ಕಾಳಜಿ ಸಲ್ಲುತ್ತವೆ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version