ಬೆಂಗಳೂರು: ಇಸ್ರೋ (ISRO) ತನ್ನ ಇನ್ನೊಂದು ಮಹತ್ವದ ಸಾಧನೆಯನ್ನು ಮುಗಿಲಿಗೇರಿಸಿದೆ. ಇಂದು ಮಧ್ಯಾಹ್ನ ಆದಿತ್ಯ L1 ಮಿಷನ್ (Aditya L1 mission) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಗಗನಕ್ಕೆ ಜಿಗಿದಿದೆ. ಚಂದ್ರಯಾನ 3ರ (Chandrayaan 3) ಬಳಿಕ ಭಾರತದ ಮಹತ್ವಾಕಾಂಕ್ಷೆಯ ಈ ಬಾಹ್ಯಾಕಾಶ ಯೋಜನೆಯ ಬಗ್ಗೆ ನಿಮಗೆ ತಿಳಿದಿರಲೇಬೇಕಾದ ಸಂಗತಿಗಳು ಇಲ್ಲಿವೆ.
- ಆದಿತ್ಯ L1 ಸೂರ್ಯನನ್ನು ಅಧ್ಯಯನ ಮಾಡುವ ಉಪಗ್ರಹ. ಆದಿತ್ಯ ಎಂಬುದು ಸೂರ್ಯನ ಇನ್ನೊಂದು ಹೆಸರು. L1 ಎಂದರೆ ʼಲಾಗ್ರೇಂಜ್ ಪಾಯಿಂಟ್ 1ʼ ಎಂದರ್ಥ. ಇದು ಸೂರ್ಯ- ಭೂಮಿಯ ನಡುವೆ ಇರುವ ಒಂದು ಕಕ್ಷೆ.
- ಇಸ್ರೋದ PSLV C57 ರಾಕೆಟ್, ಆದಿತ್ಯ ಉಪಗ್ರಹವನ್ನು ಲಾಗ್ರೇಂಜ್ ಪಾಯಿಂಟ್‌ಗೆ 125 ದಿನಗಳ ಪ್ರಯಾಣದಲ್ಲಿ ಹೊತ್ತೊಯ್ಯುತ್ತದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಇಸ್ರೋ ವಿನ್ಯಾಸಗೊಳಿಸಿದ ಮತ್ತು ನಿರ್ವಹಿಸುವ ಉಡಾವಣಾ ವಾಹನ.
- ಲಾಗ್ರೇಂಜ್ ಪಾಯಿಂಟ್ ಅಂದರೆ ಸೂರ್ಯ ಮತ್ತು ಭೂಮಿಯಂತಹ ಎರಡು ಆಕಾಶಕಾಯಗಳ ನಡುವೆ ಇರುವ ಜಾಗ. ಇಲ್ಲಿ ಎರಡೂ ಆಕಾಶಕಾಯಗಳ ಗುರುತ್ವಾಕರ್ಷಣೆಯ ಬಲಗಳು ಸಮತೋಲನದಲ್ಲಿರುತ್ತವೆ. ಅಲ್ಲಿ ಇರಿಸಲಾದ ವಸ್ತುವು ಎರಡೂ ಆಕಾಶಕಾಯಗಳಿಂದ ಸೆಳೆಯಲ್ಪಡದೆ ಸ್ಥಿರವಾಗಿರುತ್ತದೆ.
- ಭೂಮಿ ಮತ್ತು ಸೂರ್ಯನ ನಡುವೆ ಐದು ಲಾಗ್ರೇಂಜ್ ಪಾಯಿಂಟ್‌ಗಳಿವೆ. ಆದಿತ್ಯ L1 ಉಪಗ್ರಹವನ್ನು ಲಾಗ್ರೇಂಜ್ ಪಾಯಿಂಟ್ 1 ಅಥವಾ L1 ಸುತ್ತಲೂ ಇರಿಸಲಾಗುತ್ತದೆ.
- ಆದಿತ್ಯ-L1 ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿ ಇರುತ್ತದೆ. ಇದು ಭೂಮಿ-ಸೂರ್ಯನ ನಡುವೆ ಇರುವ ದೂರದ ಸುಮಾರು 1% ಮಾತ್ರ.
- ಉಪಗ್ರಹವು ಭೂಮಿ ಮತ್ತು ಸೂರ್ಯನನ್ನು ಸೇರುವ ರೇಖೆಗೆ ಸರಿಸುಮಾರು ಲಂಬವಾಗಿರುವ ಸಮತಲದಲ್ಲಿ ಅನಿಯಮಿತ ಆಕಾರದ ಕಕ್ಷೆಯಲ್ಲಿ ಸುತ್ತುತ್ತ ತನ್ನ ಕಾರ್ಯಾಚರಣೆ ನಡೆಸುತ್ತದೆ.
- ಆದಿತ್ಯ-L1 ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯನನ್ನು ಸಮೀಪಿಸುವುದಿಲ್ಲ. ಇದು ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುತ್ತದೆ.
- ಉಡಾವಣೆಯಾದ ನಂತರ ಆದಿತ್ಯ-ಎಲ್1 16 ದಿನಗಳವರೆಗೆ ಭೂಮಿಗೆ ಸುತ್ತುವ ಕಕ್ಷೆಯಲ್ಲಿ ಉಳಿಯುತ್ತದೆ. ಈ ಸಮಯದಲ್ಲಿ ಇದು ತನ್ನ ಪ್ರಯಾಣಕ್ಕೆ ಅಗತ್ಯವಾದ ವೇಗವನ್ನು ಪಡೆಯುತ್ತದೆ.
- ಇದರ ನಂತರ ಉಪಗ್ರಹವು ಟ್ರಾನ್ಸ್-ಲಗ್ರಾಂಜಿಯನ್ 1ಕ್ಕೆ ಹೋಗುತ್ತದೆ. ಇಲ್ಲಿಂದ ಲಾಗ್ರೇಂಜ್ ಪಾಯಿಂಟ್ 1ಕ್ಕೆ 110 ದಿನಗಳ ಪ್ರಯಾಣ.
- ಆದಿತ್ಯ L1 7 ವಿಭಿನ್ನ ಪೇಲೋಡ್‌ಗಳನ್ನು ಹೊಂದಿದೆ. ಎಲ್ಲವನ್ನೂ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಪೇಲೋಡ್‌ಗಳು ಫೋಟೊಸ್ಪಿಯರ್, ಕ್ರೋಮೋಸ್ಪಿಯರ್ ಮತ್ತು ಸೂರ್ಯನ ಹೊರಗಿನ ಪದರಗಳನ್ನು (ಕರೋನಾ) ವೀಕ್ಷಿಸುತ್ತವೆ.
- ಸೂರ್ಯನ ಕರೋನದ ಉಷ್ಣತೆ, ಸಾಮೂಹಿಕ ಜ್ವಾಲೆ ಚಿಮ್ಮುವಿಕೆಯ ಪ್ರಮಾಣ, ಜ್ವಾಲೆಯ ಚಟುವಟಿಕೆಯ ರೀತಿ, ಅವುಗಳ ಗುಣಲಕ್ಷಣಗಳು, ಬಾಹ್ಯಾಕಾಶ ಹವಾಮಾನ ಮತ್ತಿತರ ಮಾಹಿತಿಯನ್ನು ಇದು ಪಡೆಯುತ್ತದೆ.
- ಆದಿತ್ಯ L1 ಮಿಷನ್‌ನ ಅಂದಾಜು ವೆಚ್ಚ 400 ಕೋಟಿ ರೂಪಾಯಿ.
ಇದನ್ನೂ ಓದಿ: Aditya L1 Launch: ಆದಿತ್ಯ ಎಲ್ 1 ಮಿಷನ್ ಉಡಾವಣೆ ಯಶಸ್ವಿ; ಬಾಹ್ಯಾಕಾಶದಲ್ಲಿ ಇಸ್ರೋ ಅಶ್ವಮೇಧ ಯಾಗ!