Site icon Vistara News

ವಿಸ್ತಾರ Explainer: Chandrayaan- 3; ಚಂದ್ರಯಾನ- 3ಕ್ಕೆ ಕ್ಷಣಗಣನೆ; ದಕ್ಷಿಣ ಧ್ರುವಕ್ಕೆ ಪ್ರಥಮ ಚುಂಬನ ಸೇರಿದಂತೆ ಹಲವು ವಿಶೇಷತೆ!

chandrayaan3

ಭಾರತದ ಇಸ್ರೊ (ISRO) ಸಂಸ್ಥೆಯ ಚಂದ್ರಯಾನ ಸರಣಿಯ (moon mission) ಮೂರನೇ ಸಾಹಸವಾದ ಚಂದ್ರಯಾನ- 3 (Chandrayaan- 3) ಜುಲೈ 14ರಂದು ತನ್ನ ಯಾನವನ್ನು ಚಂದ್ರನೆಡೆಗೆ ಆರಂಭಿಸಲಿದೆ. ಇದಕ್ಕೆ ವಿಶೇಷತೆಯೂ ಇದೆ. ಇದುವರೆಗೂ ಮಾನವ ಹಾರಿಬಿಟ್ಟ ನೌಕೆಗಳಲ್ಲಿ ಯಾವುದೂ ಚಂದಿರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿರಲಿಲ್ಲ. ಚಂದ್ರಯಾನ-3 ತಿಂಗಳಿನ ದಕ್ಷಿಣ ಧ್ರುವದಲ್ಲಿ (south pole) ಹೆಜ್ಜೆಯೂರಲಿದೆ.

ಚಂದ್ರಯಾನ-3ರ ಮೂಲಕ ಆ ಉಪಗ್ರಹದ ನೆಲದ ಮೇಲೆ ಇಳಿಯುವ ವೈಜ್ಞಾನಿಕ ಉಪಕರಣಗಳು ಅಲ್ಲಿ 14 ಭೂಗ್ರಹ ದಿನಗಳ ಕಾಲ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿವೆ. ಚಂದ್ರನ ಮೇಲಿನ ಒಂದು ದಿನ ಭೂಗ್ರಹದ ಮೇಲಿನ 14 ದಿನಗಳಿಗೆ ಸಮಾನ. ಈ ಚಂದ್ರಯಾನದ ತಂತ್ರಜ್ಞಾನ ಸೇರಿದಂತೆ ಇವೆಲ್ಲವೂ ಮುಂದೊಂದು ದಿನ ಇತರ ಗ್ರಹಗಳ ನಡುವಿನ ಸಂಪರ್ಕ ಸಾಹಸಗಳಿಗೆ ಹೇತುವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.

ನಾಳೆ ಉಡಾವಣೆ

ಜುಲೈ 14ರ ಮಧ್ಯಾಹ್ನ 2.35ಕ್ಕೆ ಸರಿಯಾಗಿ ಚಂದ್ರಯಾನ-3 ಉಡಾವಣೆಯಾಗಲಿದೆ (Chandrayaan- 3 launch). ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ III (LVM-3) ಮೂಲಕ ಇದರ ಉಡಾವಣೆ.

ಮೂರು ಮುಖ್ಯ ಭಾಗಗಳು

ಚಂದ್ರಯಾನ-3 ನೌಕೆಯಲ್ಲಿರುವ ಮುಖ್ಯ ಭಾಗಗಳು ಮೂರು- ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್. ಒಟ್ಟು 3,900 ಕಿಲೋಗ್ರಾಂಗಳಷ್ಟು ತೂಕ. 2,148 ಕಿಲೋಗ್ರಾಂ ತೂಕವಿರುವ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ ಅನ್ನು 100 ಕಿಲೋಮೀಟರ್ ಎತ್ತರದ ಚಂದ್ರನ ಕಕ್ಷೆಗೆ ಒಯ್ಯುತ್ತದೆ. 1,752 ಕಿಲೋಗ್ರಾಂ ತೂಗುವ ಲ್ಯಾಂಡರ್‌ನ ಒಳಗೆ 26 ಕಿಲೋ ತೂಕದ ರೋವರ್‌ ಇರುತ್ತದೆ. ಈ ರೋವರ್, ಚಂದ್ರಯಾನ-2ರ ವಿಕ್ರಮ್ ರೋವರ್‌ನಂತೆಯೇ ಇದೆ. ಆದರೆ ಈ ಬಾರಿ ಸುರಕ್ಷಿತ ಲ್ಯಾಂಡಿಂಗ್‌ಗೆ ಬೇಕಾದ ಸುಧಾರಣೆಗಳನ್ನು ಮಾಡಲಾಗಿದೆ.

ಚಂದ್ರನಲ್ಲಿ ಇಳಿಯುವುದೇ ಮುಖ್ಯ

ಚಂದ್ರಯಾನ-3ರ ನೌಕೆಯ ಮೂಲ ಕೆಲಸ ಚಂದಿರನಲ್ಲಿ ಇಳಿಯುವುದು (ಲ್ಯಾಂಡಿಂಗ್) ಮತ್ತು ಪರಿಶೀಲಿಸುವುದು (ರೋವಿಂಗ್). 2019ರಲ್ಲಿ ನಡೆಸಿದ ಚಂದ್ರಯಾನ-2 ಭಾಗಶಃ ಯಶಸ್ವಿಯಾಗಿತ್ತು. ಅದರಲ್ಲಿದ್ದಂತೆ ಈ ಬಾರಿ ಆರ್ಬಿಟರ್ ಇಲ್ಲ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಮತ್ತು ಹಗುರವಾಗಿ ಇಳಿಯುವುದು, ರೋವರ್ ಚಂದ್ರನ ಮೇಲೆ ಸಂಚರಿಸುವುದು, ಕೆಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಉದ್ದೇಶ.

ಇನ್ನು ಮುಂದೆ ಚಂದ್ರನಲ್ಲಿಗೆ ಮಾತ್ರವಲ್ಲ; ಅದರಿಂದಲೂ ದೂರವಿರುವ ಇತರ ಗ್ರಹಗಳಿಗೂ ನೌಕೆಗಳನ್ನು ಕಳುಹಿಸಬೇಕಾಗಬಹುದು. ಅದಕ್ಕಾಗಿ ಅಗತ್ಯವಾದ ಹೊಸ ತಂತ್ರಜ್ಞಾನ ಹೊಂದಿದ, ದೇಸೀಯವಾಗಿ ತಯಾರಿಸಿದ ಅತ್ಯಾಧುನಿಕ ಲ್ಯಾಂಡರ್ ಮಾಡ್ಯೂಲ್ (LM), ಪ್ರೊಪಲ್ಷನ್ ಮಾಡ್ಯೂಲ್ (PM) ಮತ್ತು ರೋವರ್‌ಗಳು ಬೇಕಿವೆ. ಪ್ರಸ್ತುತ ಚಂದ್ರಯಾನ ಇವುಗಳ ಶಕ್ತಿಪರೀಕ್ಷೆ ಮಾಡುವ, ಪ್ರದರ್ಶಿಸುವ ಉದ್ದೇಶವನ್ನೂ ಹೊಂದಿದೆ. ಚಂದ್ರನ ಮೇಲೆ ಆಘಾತವಿಲ್ಲದಂತೆ ಮೆಲ್ಲಗೆ ಇಳಿಯಲು ಲ್ಯಾಂಡರ್ ಅಗತ್ಯ. ಅದರೊಳಗಿರುವ ರೋವರ್‌, ಕೆಳಗಿಳಿದು ಆ ಸ್ಥಳದಲ್ಲಿ ಅಗತ್ಯವಾದ ಭೌಗೋಳಿಕ, ರಾಸಾಯನಿಕ ವಿಶ್ಲೇಷಣೆಯನ್ನು ಕೈಗೊಳ್ಳುತ್ತದೆ.

ಮೊದಲು ಚಂದ್ರನ 100 ಕಿಲೋಮೀಟರ್‌ ಮೇಲಿರುವ ಕಕ್ಷೆಯನ್ನು ಪ್ರೊಪಲ್ಷನ್‌ ಮಾಡ್ಯೂಲ್‌ ತಲುಪುತ್ತದೆ. ಅದರಿಂದ ಲ್ಯಾಂಡರ್‌ ಹೊರಬಂದು ನಿದಾನವಾಗಿ ಚಂದ್ರನ ಮೇಲೆ ಇಳಿಯುತ್ತದೆ. ಅದರಿಂದ ರೋವರ್‌ ಹೊರಬಂದು ಅಲ್ಲೇ ನಡೆದಾಡಿ ಮಾದರಿಗಳನ್ನು ಸಂಗ್ರಹಿಸಿಕೊಂಡು ಕೆಲವು ರಾಸಾಯನಿಕ ಪ್ರಯೋಗಗಳನ್ನು ನೆರವೇರಿಸುತ್ತದೆ. ಮೂರೂ ಯಂತ್ರಗಳಲ್ಲೂ ಅವುಗಳದೇ ಆದ ಪೇಲೋಡ್‌ ಹಾಗೂ ಸಾಧನಗಳಿದ್ದು, ತಮ್ಮದೇ ಆದ ರೀತಿಯಲ್ಲಿ ಪ್ರಯೋಗಗಳನ್ನು ಮಾಡಲಿವೆ. ಆರ್ಬಿಟರ್‌ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಭೂಗ್ರಹದ ಜತೆ ಸಂಪರ್ಕವಿಟ್ಟುಕೊಳ್ಳಲಿದೆ.

ದಕ್ಷಿಣ ಧ್ರುವಕ್ಕೆ ಪ್ರಥಮ ಚುಂಬನ

ಎಲ್ಲ ಎಣಿಸಿದಂತೆಯೇ ನಡೆದರೆ ಚಂದ್ರಯಾನ-3, ಚಂದ್ರನ ದಕ್ಷಿಣ ಧ್ರುವದಲ್ಲಿ ಮಾನವ ಇಳಿಸಿದ ಮೊದಲ ನೌಕೆ (moon mission) ಎನಿಸಲಿದೆ. ಅಮೆರಿಕದ ಅಪೋಲೋ ಸೇರಿದಂತೆ ಯಾವುದೇ ಮಾನವ ಕಾರ್ಯಾಚರಣೆಗಳು ಉಪಹಗ್ರಹದ ದಕ್ಷಿಣ ಧ್ರುವಕ್ಕೆ ಇದುವರೆಗೆ ತಲುಪಿಲ್ಲ. ಹೀಗಾಗಿ ಇದೊಂದು ಮಹತ್ವಾಕಾಂಕ್ಷೆಯ ತಾಂತ್ರಿಕ ಪರಾಕ್ರಮವೇ ಸರಿ.

ಚಂದ್ರನ ದಕ್ಷಿಣ ಧ್ರುವದ ಮೇಲೆ ಇಸ್ರೋಗೆ ವಿಶೇಷ ಆಸಕ್ತಿ ಯಾಕೆ? ಯಾಕೆಂದರೆ ಆ ಭಾಗ ಇನ್ನೂ ಅಜ್ಞಾತತೆಯ ಕತ್ತಲಿನಲ್ಲಿಯೇ ಇದೆ. ಇಲ್ಲಿ ಇಳಿದರೆ ಬಹುಶಃ ಚಂದ್ರನ ಮೇಲಿರುವ ಮಂಜುಗಡ್ಡೆಯ ಮಾದರಿಗಳನ್ನೂ ಪರೀಕ್ಷೆಗೊಡ್ಡಬಹುದು. ದಕ್ಷಿಣ ಧ್ರುವದ ಸಮೀಪವಿರುವ ದೊಡ್ಡ ಕುಳಿಗಳಲ್ಲಿ ಸೌರವ್ಯೂಹದ ಆರಂಭಿಕ ದಿನಗಳ ಬಗ್ಗೆ ಏನಾದರೂ ಸುಳಿವುಗಳಿರಬಹುದು. ಹೀಗೆಲ್ಲಾ ವಿಜ್ಞಾನಿಗಳು ಹೇಳುತ್ತಾರೆ.

ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಅಮೆರಿಕ ಕೂಡ ದಕ್ಷಿಣ ಧ್ರುವದತ್ತ ಕಣ್ಣಿಟ್ಟಿದೆ. ಅದರ ಆರ್ಟೆಮಿಸ್‌-3 ನೌಕೆ ಕೂಡ ಆ ದಿಕ್ಕಿಗೇ ಹೋಗಲಿದೆ. ಈ ನೌಕೆಯಲ್ಲಿ ಮನುಷ್ಯರೂ ಹೋಗಲಿದ್ದಾರೆ. ಹಗೆ ಹೋದರೆ, ಮೊದಲ ಮಾನವ ಯಾತ್ರೆಯ 50 ವರ್ಷಗಳ ಬಳಿಕ ಮತ್ತೆ ಇಲ್ಲಿಗೆ ಮಾನವ ಹೋದಂತಾಗುತ್ತದೆ.

ಈ ಹಿಂದೆ ಅಮೆರಿಕದ ಅಪೊಲೊ ಯಾತ್ರೆ, ಚೀನಾದ ಚಾಂಗ್‌ ನೌಕೆಯ ಯಾತ್ರೆಗಳು ಚಂದ್ರನ ಸಮಭಾಜಕ ವೃತ್ತದ ಬಳಿ ಇಳಿದು ಪ್ರಯೋಗ ನಡೆಸಿವೆ. ಅವೇ ಪ್ರಯೋಗಗಳು ಭಾರತದಿಂದ ದಕ್ಷಿಣ ಧ್ರುವದಲ್ಲಿ ನಡೆಯಲಿವೆ. ಇದು ವಿಶೇಷ. ದಕ್ಷಿಣ ಧ್ರುವಕ್ಕೆ ಇದು ಭಾರತದ ಎರಡನೇ ಯಾತ್ರೆ. 2008ರಲ್ಲಿ ನಡೆಸಿದ ಮೊದಲ ಚಂದ್ರಯಾನದಲ್ಲಿ ನೌಕೆಯಲ್ಲಿದ್ದ ಆರ್ಬಿಟರ್‌ನಲ್ಲಿದ್ದ 29 ಕಿಲೋ ಇಂಪ್ಯಾಕ್ಟರ್‌ ಅನ್ನು ದಕ್ಷಿಣ ಧ್ರುವಕ್ಕೆ ಉದ್ದೇಶಪೂರ್ವಕವಾಗಿ ಅಪ್ಪಳಿಸಲಾಗಿತ್ತು. ಅಲ್ಲಿ ಮಂಜುಗಡ್ಡೆ ಇರುವುದು ಇದರಿಂದ ತಿಳಿದುಬಂದಿತ್ತು.

ಚಂದ್ರಯಾನ- 2ರ ವೈಫಲ್ಯ

ಚಂದ್ರಯಾನ-2 ಕೂಡ ಪ್ರಸ್ತುತ ಯಾನದ ಉದ್ದೇಶವನ್ನು ಹೊಂದಿತ್ತು. 2019ರ ಸೆಪ್ಟೆಂಬರ್‌ 19ರಂದು ಈ ನೌಕೆಯನ್ನು ಉಡಾಯಿಸಲಾಗಿತ್ತು. ಉಡಾಯಿಸಿದ 13 ನಿಮಿಷಗಳ ಬಳಿಕ, ಚಂದ್ರನ ಕಕ್ಷೆಯನ್ನು ಸೇರಿದ ಆರ್ಬಿಟರ್‌ನಿಂದ ಹೊರಗಿಳಿದ ʼವಿಕ್ರಮ್‌ʼ ಹೆಸರಿನ ಲ್ಯಾಂಡರ್‌, ಮೃದುವಾಗಿ ಚಂದ್ರನ ಮೇಲ್ಮೈಗೆ ಇಳಿಯುವ ಬದಲು, ಅಪ್ಪಳಿಸಿತ್ತು. ಚಂದ್ರಯಾನವನ್ನು ವೀಕ್ಷಿಸಲು ಇಸ್ರೊ ಕೇಂದ್ರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (pm narendra modi) ಅವರು, ಇದರಿಂದ ಹತಾಶರಾಗಿ ಕಣ್ಣೀರು ಹಾಕಿದ್ದ ಇಸ್ರೊ ಮುಖ್ಯಸ್ಥ ಕೆ. ಶಿವನ್‌ ಅವರನ್ನು ಅಪ್ಪಿಕೊಂಡು ಸಮಾಧಾನಿಸಿದ್ದರು.

Exit mobile version