Site icon Vistara News

ವಿಸ್ತಾರ Explainer: ಭಾರತ -ಚೀನಾ ತಿಕ್ಕಾಟಕ್ಕೆ ದಲೈ ಲಾಮಾ ಕಾರಣವೇ?

dalai lama

ದಲೈ ಲಾಮ ಅವರ ನೆಪದಲ್ಲಿ ಭಾರತ ಮತ್ತು ಚೀನಾ ನಡುವೆ ಆಗಾಗ ಮಾತಿನ ತಿಕ್ಕಾಟಗಳು ಆಗುತ್ತಿರುತ್ತವೆ. 1962ರಲ್ಲಿ ಉಭಯ ದೇಶಗಳ ನಡುವೆ ಸಂಭವಿಸಿದ ಯುದ್ಧಕ್ಕೂ ದಲೈ ಲಾಮಾ ಅವರಿಗೆ ಭಾರತ ಆಶ್ರಯ ಕೊಟ್ಟದ್ದೇ ಕಾರಣ ಎಂದು ಚೀನಾ ನಂಬಿಸಲು ಯತ್ನಿಸಿದೆ. ಆದರೆ ಸತ್ಯ ಕೆಲವು ದಾಖಲೆಗಳಿಂದ ಗೊತ್ತಾಗಿದೆ. ಏನಿದು ದಲೈ ಲಾಮಾ ಹಾಗೂ ಭಾರತ- ಚೀನಾ ತಿಕ್ಕಾಟದ ಸಂಬಂಧ? ವಿವರವಾಗಿ ತಿಳಿಯೋಣ.

ದಲೈ ಲಾಮಾ ಅವರ 84ನೇ ಜನ್ಮದಿನದ ಹಿನ್ನೆಲೆಯಲ್ಲಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಾಮಾಗೆ ಶುಭ ಹಾರೈಸಿದ್ದಾರೆ. ಇದರಿಂದ ಚೀನಾದ ಕಣ್ಣ ಕೆಂಪಾಗಿದೆ. ʼʼಚೀನಾದ ಆಂತರಿಕ ವಿಚಾರಗಳಲ್ಲಿ, ಟಿಬೆಟ್‌ ನೆಪ ಇಟ್ಟುಕೊಂಡು ಹಸ್ತಕ್ಷೇಪ ಮಾಡುವುದು ಸಲ್ಲದುʼʼ ಎಂದು ಎಚ್ಚರಿಸಿದೆ. ಆದರೆ ಭಾರತ ʼʼಲಾಮಾ ಅವರು ನಮ್ಮ ಗೌರವಾನ್ವಿತ ಅತಿಥಿ. ಅವರನ್ನು ಹಾಗೇ ನಡೆಸಿಕೊಳ್ಳುತ್ತೇವೆ. ಅವರಿಗೆ ಇಲ್ಲಿ ಎಲ್ಲ ಸ್ವಾತಂತ್ರ್ಯವೂ ಇದೆʼʼ ಎಂದು ಉತ್ತರಿಸಿದೆ.

ಈ ಹಿಂದೆಯೂ ಹಲವು ಬಾರಿ ಚೀನಾ ದಲೈ ಲಾಮಾ ವಿಷಯದಲ್ಲಿ ಕೆಂಗಣ್ಣು ಬೀರಿದ್ದು ಉಂಟು. ಯಾವುದೋ ಕಾರಣಕ್ಕೆ ಅರುಣಾಚಲ ಪ್ರದೇಶಕ್ಕೆ ದಲೈ ಲಾಮಾ ಅವರು ಭೇಟಿ ನೀಡಿದಾಗಲೆಲ್ಲ ಚೀನಾ ಪರಪರ ಮೈ ಕೆರೆದುಕೊಂಡು ಚೀರಾಡುತ್ತದೆ. ದಲೈ ಲಾಮಾ ಅಮೆರಿಕ ಮುಂತಾದ ಕಡೆ ಭೇಟಿ ನೀಡಿದರೂ ಅದರ ತಗಾದೆ. ದೊಡ್ಡ ಗಂಟಲು ಇರುವವನೇ ಗೆಲ್ಲುತ್ತಾನೆ ಎಂಬುದು ಅದರ ನಂಬಿಕೆ. ಕಳೆದ 60 ವರ್ಷಗಳಿಂದ ಭಾರತವನ್ನು ಟೀಕಿಸಲು ದಲೈ ಲಾಮಾ ಒಂದು ನೆಪವಾಗಿದ್ದಾರೆ ಚೀನಾಕ್ಕೆ.

ಯಾಕೆ ಚೀನಾಗೆ ದಲೈ ಲಾಮಾ ಹಾಗೂ ಅವರಿಗೆ ಆಶ್ರಯ ನೀಡಿದ ಭಾರತದ ಮೇಲೆ ಸಿಟ್ಟು?

ದಲೈ ಲಾಮಾ ಯಾರು?

ಸರಳವಾಗಿ ಹೇಳಬೇಕೆಂದರೆ ಇವರು ಟಿಬೆಟಿಯನ್ನರ ಧರ್ಮಗುರು. ದಲೈ ಲಾಮಾ ಎಂಬುದು ಒಬ್ಬ ವ್ಯಕ್ತಿಯ ಹೆಸರಲ್ಲ, ಒಂದು ಪದವಿಯ ಹೆಸರು. ಟಿಬೆಟಿಯನ್ನರ ಧರ್ಮಗುರುವಿನ ಪದವಿಯದು. ಈಗಿರುವವರು 14ನೇ ದಲೈ ಲಾಮಾ. ಮೂಲ ಹೆಸರು ತೆಂಜಿನ್‌ ಗ್ಯಾತ್ಸೊ. ಟಿಬೆಟ್‌ನ ಪುಟ್ಟದೊಂದು ಬಡ ಕುಟುಂಬದಲ್ಲಿ ಜನಿಸಿದವರು. ದಲೈ ಲಾಮಾ ಉತ್ತರಾಧಿಕಾರಿಯನ್ನು ಗುರುತಿಸುವ ಹಲವು ಸಂಪ್ರದಾಯಗಳು ಟಿಬೆಟ್‌ನಲ್ಲಿವೆ. ಅವುಗಳ ಮೂಲಕ ಪರೀಕ್ಷಿಸಿದಾಗ, ತೆಂಜಿನ್‌ ಗ್ಯಾತ್ಸೊ ಅರ್ಹ ಉತ್ತರಾಧಿಕಾರಿ ಎಂದು ತಿಳಿದುಬಂತು. 1950ರಲ್ಲಿ ಅವರನ್ನು ಈ ಪಟ್ಟಕ್ಕೆ ಏರಿಸಲಾಯಿತು.

ಪಟ್ಟಕ್ಕೆ ಏರಿದಂದಿನಿಂದಲೂ ಇವರು ಚೀನಾ ಸರ್ಕಾರದ ಒಂದಲ್ಲ ಒಂದು ಕಿರುಕುಳವನ್ನು ಎದುರಿಸುತ್ತಲೇ ಬಂದರು. ಆಗ ಟಿಬೆಟ್‌ ಸ್ವಾಯತ್ತ ಪ್ರದೇಶವಾಗಿತ್ತು. ಆದರೆ ಚೀನಾ ಇದನ್ನು ಸಂಪೂರ್ಣ ಆವರಿಸಿತ್ತು. ಎಲ್ಲ ವಾಣಿಜ್ಯ ಹಾಗೂ ಆರ್ಥಿಕ ಚಟುವಟಿಕೆಗಳು ಚೀನಾವನ್ನು ಆಧರಿಸಿ ನಡೆಯುತ್ತಿದ್ದವು. ಟಿಬೆಟಿಯನ್ನರ ಪ್ರಾದೇಶಿಕವಾದ ಬೌದ್ಧ ಧರ್ಮದ ಪಂಥವನ್ನ ಅನುಸರಿಸುತ್ತಾರೆ. ಆದರೆ ಚೀನಾದ ಬೌದ್ಧ ಧರ್ಮ ಕಮ್ಯುನಿಸಂನ ಪ್ರಭಾವಕ್ಕೆ ಒಳಗಾಗಿ, ಮಾವೋ ಅವರ ಸಂಪೂರ್ಣ ಕ್ರಾಂತಿಗೆ ಬಲಿಯಾಗಿ, ತನ್ನತನವನ್ನು ಕಳೆದುಕೊಂಡು ಸಾಮ್ರಾಜ್ಯಶಾಹಿಯಾಗಿದೆ. ಇದಕ್ಕೆ ಸದಾ ಟಿಬೆಟ್‌ನ ಮೇಲೆ ಕಣ್ಣು. ಟಿಬೆಟ್‌ ಅನ್ನು ಆಕ್ರಮಿಸಿದರೆ ಅಲ್ಲಿಂದ ಭಾರತದ ಮೇಲೂ ಕಣ್ಣಿಡುವುದು ಸುಲಭ ಎಂಬುದು ಅದರ ಯೋಚನೆ.

ಚೀನಾದ ಒಕ್ಕೂಟದಲ್ಲಿ ಟಿಬೆಟ್‌ ಒಂದಾಗಬೇಕು ಎಂಬ ನಿರ್ದೇಶನವನ್ನು ಟಿಬೆಟ್‌ ಸರ್ಕಾರಕ್ಕೆ ನೀಡಲಾಯಿತು. ಇದನ್ನು ಅಲ್ಲಿನ ಬಹುತೇಕರು ವಿರೋಧಿಸಿದರು. ಚೀನಾ ಸರ್ಕಾರದಿಂದ ದಲೈ ಲಾಮ ಜೀವಕ್ಕೆ ಅಪಾಯವಿದೆ. ಆದ್ದರಿಂದ ಅಲ್ಲಿಂದ ಹೊರಡುವುದು ಒಳ್ಳೆಯದು ಎಂಬ ಸೂಚನೆಯನ್ನು ಅಮೆರಿಕ ಅವರಿಗೆ ಗುಪ್ತವಾಗಿ ರವಾನಿಸಿತು. 1959ರ ಒಂದು ರಾತ್ರಿ ದಲೈ ಲಾಮ ತಮ್ಮ ಕೆಲವು ಬೆಂಬಲಿಗರ ಜತೆ ಅಲ್ಲಿಂದ ಪರಾರಿಯಾಗಿ ಭಾರತದೊಳಗೆ ಬಂದು ಆಶ್ರಯ ಪಡೆದರು.

ಆಗ ಜವಾಹರಲಾಲ್‌ ನೆಹರೂ ಪ್ರಧಾನ ಮಂತ್ರಿ ಆಗಿದ್ದರು. ದಲೈ ಲಾಮ ಅವರ ಹಿಂದೆಯೇ ಸಾವಿರಾರು ಸಂಖ್ಯೆಯಲ್ಲಿ ಟಿಬೆಟಗರು ಭಾರತಕ್ಕೆ ಬಂದರು. ಇವರಿಗೆ ಆಶ್ರಯ ಒದಗಿಸಲೆಂದು ನೆಹರೂ ಕೆಲವು ಪ್ರದೇಶಗಳನ್ನು ಬಿಟ್ಟುಕೊಟ್ಟರು. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ದಲೈ ಲಾಮಾ ತಂಗಿದರು. ಮುಂದೆ ಅದೇ ಅವರ ಕೇಂದ್ರಸ್ಥಾನವಾಯಿತು. ಅಲ್ಲಿಂದಲೇ ʻಹೊರಗಿನಿಂದ ನಡೆಯುವ ಟಿಬೆಟ್‌ ಸರ್ಕಾರʼವನ್ನೂ ನಡೆಸಲಾಗುತ್ತಿದೆ. ಕರ್ನಾಟಕದಲ್ಲೂ ಬೈಲಕುಪ್ಪೆ, ಮುಂಡಗೋಡಗಳಲ್ಲಿ ಟಿಬೆಟ್‌ ನಿರಾಶ್ರಿತರ ಕ್ಯಾಂಪ್‌ಗಳಿವೆ.

ಭಾರತದ ಬಗ್ಗೆ ಚೀನಾ ವ್ಯಗ್ರ

ದಲೈ ಲಾಮಾ ಹೊರಬಿದ್ದರೂ ಸ್ವಾತಂತ್ರ್ಯಕ್ಕಾಗಿ ಟಿಬೆಟಿಯನ್ನರು ನಡೆಸಿದ ಹೋರಾಟ ತಣ್ಣಗಾಗಲಿಲ್ಲ. ಬದಲು ಉಗ್ರವಾಯಿತು. ಅಮೆರಿಕದ ಸಿಐಎ ಕೂಡ ಸಾವಿರಾರು ಟಿಬೆಟಿಯನ್ನರಿಗೆ ಗುಪ್ತವಾಗಿ ತರಬೇತಿ ನೀಡಿತು. ಆದರೆ ಸಾಕಷ್ಟು ಟಿಬೆಟಿಯನ್ನರನ್ನು ಚೀನಾ ಹೊಸಕಿಹಾಕಿತು. ಉಳಿದವರು ಭಾರತಕ್ಕೆ ಓಡಿಬಂದರು.

ಟಿಬೆಟ್‌ನ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಪ್ರಚೋದನೆ ಏನೇನೂ ಇರಲಿಲ್ಲ. ಆದರೆ ಭಾರತವೇ ಇದರ ಹಿಂದೆ ಇದೆ ಎಂದು ಚೀನಾ ಭಾವಿಸಿತು. ದಲೈ ಲಾಮ ಪರಾರಿಯಾಗಲೂ, ಟಿಬೆಟ್‌ನ ಬಂಡಾಯಕ್ಕೂ ಭಾರತದ ಪ್ರಚೋದನೆಯಿದೆ ಎಂದು ಆರೋಪಿಸಿತು. ಇದಕ್ಕೂ ಮುನ್ನ, 1949ರಿಂದಲೇ ಭಾರತದ ಹಲವು ಪ್ರದೇಶಗಳತ್ತ ಚೀನಾ ಕಣ್ಣು ಹಾಕಿತ್ತು. ಲಡಾಖ್‌, ಸಿಕ್ಕಿಂ, ಅರುಣಾಚಲ ಪ್ರದೇಶಗಳು ತಮಗೆ ಸೇರಬೇಕು ಎಂದು ಅದು ವಾದಿಸುತ್ತಿತ್ತು. ಆಗಾಗ ಗಡಿಯಲ್ಲಿ ಘರ್ಷಣೆ ಚಕಮಕಿ ಸಂಭವಿಸುತ್ತಿದ್ದವು. 1958ರಲ್ಲಿ ಅಕ್ಸಾಯ್‌ ಚಿನ್‌ನಲ್ಲಿ ಭಾರತದೊಳಗೆ ನುಗ್ಗಿ ಕೆಲವು ಭಾರತೀಯ ಯೋಧರನ್ನು ಸೆರೆಹಿಡಿದೂ ಇತ್ತು. ಇದನ್ನೆಲ್ಲಾ ಪ್ರಧಾನಿ ನೆಹರೂ ವಿರೋಧಿಸಿದ್ದರು.

ಇದನ್ನೂ ಓದಿ: ದಲೈ ಲಾಮಾ ನಮ್ಮ ಗೌರವಾನ್ವಿತ ಅತಿಥಿ: ಚೀನಾಗೆ ಭಾರತ ಪ್ರತ್ಯುತ್ತರ

ಆಗಿನ ಸೋವಿಯತ್‌ ರಷ್ಯಾ ಹಾಗೂ ಚೀನಾ ಸರ್ಕಾರದ ನಡುವೆ ನಡೆದ ಮಾತುಕತೆಯ ಕೆಲವು ದಾಖಲೆಗಳು, ಚೀನಾ ದಲೈ ಲಾಮ ವಿಚಾರವನ್ನಿಟ್ಟುಕೊಂಡು ಭಾರತಕ್ಕೆ ʼಬುದ್ಧಿ ಕಲಿಸಲುʼ ಬಯಸಿತ್ತು ಎಂಬದನ್ನು ಹೊರಗೆಡಹಿವೆ. ಈ ದಾಖಲೆ ಆಗಿನ ಚೀನಾ ಪ್ರಧಾನ ಚೌ ಎನ್‌ ಲೈ ಹಾಗೂ ರಷ್ಯಾ ಪ್ರಧಾನಿ ನಿಕಿಟಾ ಕ್ರುಶ್ಚೇವ್‌ ನಡುವೆ ನಡೆದ ಮಾತುಕತೆಯಾಗಿತ್ತು. ಇದು ನಡೆದುದು ದಲೈ ಲಾಮ ಟಿಬೆಟ್‌ ತೊರೆದ ಆರು ತಿಂಗಳ ನಂತರ. ಈ ಸಂವಾದದಲ್ಲಿ ಭಾರತ ಚೀನಾದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಿದೆ ಎಂದೂ, ಟಿಬೆಟ್‌ನ ಬಂಡಾಯಕ್ಕೆ ಭಾರತವೇ ಕಾರಣ ಎಂದೂ, ಗಡಿಯಲ್ಲಿ ನಡೆದ ಚಕಮಕಿಯನ್ನು ಭಾರತವೇ ಮೊದಲು ಆರಂಭಿಸಿತೆಂದೂ ಚೌ ಎನ್‌ ಲೈ ವಾದಿಸುತ್ತಾರೆ. ಚೌ ಎನ್‌ ಲೈ ಅವರ ಮನವನ್ನು ಒಲಿಸಲು, ಭಾರತದ ವಿರುದ್ಧ ಇರುವ ಕೆಟ್ಟ ಅಭಿಪ್ರಾಯ ಹೋಗಲಾಡಿಸಲು ಕ್ರುಶ್ಚೇವ್‌ ಪ್ರಯತ್ನಿಸುತ್ತಾರೆ. ಆದರೆ, ʻʻನಾವು ನಿಮ್ಮ ಮಾತಿಗೆ ಮರುಳಾಗುವುದಿಲ್ಲ. ನಾವು ನಮ್ಮ ಅಭಿಪ್ರಾಯ ಹೇಳಲು ಬಂದಿದ್ದೇವೆ ಅಷ್ಟೇʼʼ ಎಂದು ಚೌ ಎನ್‌ ಲೈ ಖಡಕ್ಕಾಗಿ ಹೇಳಿದ ಬಳಿಕ ಸುಮ್ಮನಾಗುತ್ತಾರೆ.

ಈ ದಾಖಲೆಯಲ್ಲಿ ʼದಲೈ ಲಾಮ ಭಾರತಕ್ಕೆ ಓಡಿಹೋಗಬಹುದು ಎಂಬ ಮಾಹಿತಿ ನಮಗೆ ಇರಲೇ ಇಲ್ಲ; ಎಂದು ಚೌ ಎನ್‌ ಲೈ ವಾದಿಸುತ್ತಾರೆ. ಆದರೆ ರಷ್ಯಾ ಅಧ್ಯಕ್ಷ ಕ್ರುಶ್ಚೇವ್.‌ ʼಈ ಬಗ್ಗೆ ಮಾಹಿತಿ ನಮಗೇ ಇತ್ತು, ನಿಮಗೆ ಇರಲಿಲ್ಲ ಎಂದರೆ ಆಶ್ಚರ್ಯವಾಗುತ್ತದೆʼ ಎಂದು ಉತ್ತರಿಸುತ್ತಾರೆ. ಅಂದರೆ ದಲೈ ಲಾಮ ಅವರನ್ನು ಓಡಿಹೋಗಲು ಬಿಟ್ಟು, ಅದೇ ಕಾರಣವನ್ನು ಇಟ್ಟುಕೊಂಡು ಭಾರತದ ಜತೆಗೆ ಕಾಲು ಕೆರೆಯಬಹುದು ಎಂದು ಚೀನಾ ಭಾವಿಸಿದ್ದು ಸ್ಪಷ್ಟವಾಗುತ್ತದೆ. 1962ರಲ್ಲಿ ಅರುಣಾಚಲ ಪ್ರದೇಶದಲ್ಲಿ ಕಾಲು ಕೆರೆದು ಯುದ್ಧಕ್ಕೆ ಬಂದುಬಿಟ್ಟಿತು ಚೀನಾ. ಚೀನಾ ಬೆನ್ನಿಗಿರಿಯಬಹುದು ಎಂದು ಭಾವಿಸದ, ಕದನಕ್ಕೆ ಸಿದ್ಧವಾಗಿರದ ಭಾರತ ಈ ಯುದ್ಧದಲ್ಲಿ ಮುಖಭಂಗ ಅನುಭವಿಸುವಂತಾಯಿತು.

ಅಂದರೆ, ದಲೈ ಲಾಮಾ ಭಾರತಕ್ಕೆ ಬಂದುದು ನಿಜಕ್ಕೂ ಚೀನಾದ ದಾಳಿಗೆ ಕಾರಣ ಆಗಿರಲೇ ಇಲ್ಲ. ಅದೊಂದು ನೆಪ ಆಗಿತ್ತಷ್ಟೇ. ದಲೈ ಲಾಮಾ ಓಡಿಬರುವುದಕ್ಕೂ ಎಷ್ಟೋ ಮುನ್ನವೇ, ಚೀನಾದ ಅಧ್ಯಕ್ಷ ಮಾವೋತ್ಸೆ ತುಂಗ್‌ ಅವರು ಭಾರತದ ವಿರುದ್ಧ “ಐದು ಬೆರಳಿನ ನೀತಿʼ ರೂಪಿಸಿಕೊಂಡಿದ್ದರು. ʻʻಐದು ಬೆರಳುಗಳು ಅಂದರೆ ಲಡಾಖ್‌, ಅರುಣಾಚಲ ಪ್ರದೇಶ, ಸಿಕ್ಕಿಂ, ಭೂತಾನ್‌, ನೇಪಾಳ. ಈ ಐದೂ ಚೀನಾಗೆ ಸೇರಬೇಕು, ಕ್ರಮೇಣ ಇವುಗಳು ವಿಸ್ತೃತ ಚೀನಾದ ಭಾಗವಾಗುತ್ತವೆʼʼ ಎಂದು ಅವರು ಗಟ್ಟಿಯಾಗಿ ನಂಬಿದ್ದರು. ಈಗಿನ ಚೀನಾ ಆಡಳಿತ ಕೂಡ ಚಾಚೂ ತಪ್ಪದೇ ಇದನ್ನು ಆಚರಿಸುತ್ತ ಬಂದಿದೆ. ಈಗಲೂ ಗಲ್ವಾನ್‌ ಮುಂತಾದ ಕಡೆಗಳಲ್ಲಿ, ದೋಕ್ಲಾಮ್‌ನಲ್ಲಿ ಚೀನಾದ ಸೈನಿಕರ ಆಕ್ರಮಣಕಾರಿ ನಡೆಗಳಿಗೆ ಭಾರತದ ಪ್ರಚೋದನೆಯಿಲ್ಲ. ಕಾಲಕಾಲಕ್ಕೆ ಬೀಜಿಂಗ್‌ನಿಂದ ಬರುವ ನಿರ್ದೇಶನಗಳಿಗೆ ಅನುಸಾರವಾಗಿ ಅವರು ವರ್ತಿಸುತ್ತಾರೆ.

ಇದನ್ನೂ ಓದಿ: ಶಿಂಜೊ ಅಬೆ ಸಾವು ಸಂಭ್ರಮಿಸಿದ ಚೀನಾ ಪ್ರಜೆಗಳು; ಈಗಿನ ಪ್ರಧಾನಿ ಸರದಿ ಯಾವಾಗ ಎಂಬ ಪ್ರಶ್ನೆ

Exit mobile version