Site icon Vistara News

ವಿಸ್ತಾರ Explainer | Sukhoi Su-30MKI ಆಧುನೀಕರಣ, ಭಾರತ-ರಷ್ಯಾ ಕಂಕಣ!

Sukhoi

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಇತ್ತೀಚಿನ ದಿನಗಳಲ್ಲಿ ಭಾರತ ಸತತವಾಗಿ ತನ್ನ ದೇಶೀಯ ರಕ್ಷಣಾ ಉದ್ಯಮದ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಾ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ, ಭಾರತಕ್ಕೆ ರಷ್ಯಾದ ಸಹಕಾರ ಅತ್ಯಂತ ಮಹತ್ವದ್ದಾಗಿದೆ. ಈ ವಿಚಾರ ಭಾರತದ ಗಮನದಲ್ಲೂ ಇದೆ. ಈಗಾಗಲೇ ಪಾಶ್ಚಾತ್ಯ ರಾಷ್ಟ್ರಗಳು ಭಾರತಕ್ಕೆ ರಷ್ಯಾದೊಡನೆ ವ್ಯವಹಾರ, ಸಂಬಂಧಗಳನ್ನು ಕತ್ತರಿಸುವಂತೆ ಅಪಾರ ಒತ್ತಡ ಹೇರುತ್ತಿವೆ. ಆದರೂ ಭಾರತ ತಾನು ಅಂತಹ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಹಠ ಹಿಡಿದಿದೆ. ಭಾರತದ ಸಾರ್ವಭೌಮತ್ವದ ನಡೆ ಅಮೆರಿಕ, ಇಂಗ್ಲೆಂಡ್ ಹಾಗೂ ಯುರೋಪಿಯನ್ ಒಕ್ಕೂಟಗಳಿಗೆ ಅಸಮಾಧಾನ ಉಂಟಾಗುವಂತೆ ಮಾಡಿದ್ದರೂ, ಅವುಗಳು ಇದನ್ನು ವಿರೋಧಿಸುತ್ತಿದ್ದರೂ, ನೈಜ ರಾಜತಾಂತ್ರಿಕತೆಯನ್ನು ಅರ್ಥ ಮಾಡಿಕೊಳ್ಳದಂತೆ ವರ್ತಿಸುವ ಅವರ ನಡವಳಿಕೆಯಿಂದ ನವದೆಹಲಿ ತಲೆ ಕೆಡಿಸಿಕೊಳ್ಳುವಂತೆ ಕಾಣುತ್ತಿಲ್ಲ. ಭಾರತ ಮತ್ತು ರಷ್ಯಾದ ಸಂಬಂಧ ಕೇವಲ ಬೆಳೆಯುತ್ತಿರುವ ಆರ್ಥಿಕ ಸಹಕಾರಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಅದರೊಡನೆ, ಈ‌ ಎರಡೂ ದೈತ್ಯ ಶಕ್ತಿ ರಾಷ್ಟ್ರಗಳು ಸಾಂಪ್ರದಾಯಿಕವಾಗಿ ರಕ್ಷಣಾ ಸಂಬಂಧಗಳನ್ನೂ ಹೊಂದಿವೆ. ಈ ಸಂಬಂಧ ಎಲ್ಲಾ ರೀತಿಯ ಸಮಯದ ಪರೀಕ್ಷೆಗಳನ್ನು ಎದುರಿಸಿ ಗೆದ್ದಿದೆ. ಭಾರತ ತನ್ನ ರಕ್ಷಣೆಗಾಗಿ ದೇಶೀಯವಾಗಿ ರಕ್ಷಣಾ ಕ್ಷೇತ್ರದ ಅಭಿವೃದ್ಧಿಗಾಗಿ ಪಡುತ್ತಿರುವ ಪ್ರಯತ್ನಕ್ಕೂ ಮಾಸ್ಕೋ ತನ್ನ ಬೆಂಬಲ ಒದಗಿಸುತ್ತಿದೆ(ವಿಸ್ತಾರ Explainer).

ಭಾರತೀಯ ವಾಯುಪಡೆ (ಐಎಎಫ್), ರಷ್ಯಾ ವಿನ್ಯಾಸಗೊಳಿಸಿ ನಿರ್ಮಿಸಿರುವ ತನ್ನ ಸು-30 ಎಂಕೆಐ ಯುದ್ಧ ವಿಮಾನಗಳನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸುವ ಯೋಜನೆ ಹಮ್ಮಿಕೊಂಡಿತ್ತು. ಇದಕ್ಕಾಗಿ ರಷ್ಯಾದ ಸಹಾಯ ಮತ್ತು ಪರಿಣತಿಯನ್ನು ಬಳಸಿಕೊಳ್ಳಲು ಮತ್ತು ಜೊತೆಯಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲೂ ಬಯಸಿತ್ತು. ಭಾರತದ ಬಳಿ ಇರುವ 262 ಸು-30 ಎಂಕೆಐ ಯುದ್ಧ ವಿಮಾನಗಳ ಪ್ರಬಲ ಪಡೆ ಇನ್ನೂ ಮುಂಬರುವ ದಶಕಗಳಲ್ಲೂ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿ ಉಳಿಯಲಿದೆ. ಈ ಯುದ್ಧ ವಿಮಾನವನ್ನು ರಷ್ಯಾ ನಿರ್ಮಿತ, ಲೆಜೆಂಡರಿ ಸು-27 “ಫ್ಲಾಂಕರ್” ವಿಮಾನದ ವಿನ್ಯಾಸವನ್ನು ಆಧರಿಸಿದೆ. ಅದರ ಗಾತ್ರದ ಪರಿಣಾಮವಾಗಿ ಅದನ್ನು ಅಭಿವೃದ್ಧಿ ಪಡಿಸುವುದು ಕಡಿಮೆ ವೆಚ್ಚದಾಯಕವೂ, ಸುಲಭವೂ ಆಗಿದೆ. ಅದರೊಡನೆ, ಅದಕ್ಕೆ ಸಂಪೂರ್ಣ ಹೊಸದಾದ ಪಾತ್ರಗಳನ್ನು ನೀಡಲೂ ಅವಕಾಶ ಇರುತ್ತದೆ. ಭಾರತೀಯ ವಾಯುಪಡೆ ಈ ಬಹುಮುಖಿ ವಿಮಾನವನ್ನು ಆಯುಧಗಳನ್ನು ಕೊಂಡೊಯ್ಯಲು ಮತ್ತು ಭಾರತೀಯ ದೇಶೀಯ ವಿನ್ಯಾಸದ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ಅಥವಾ ಸ್ಟೆಲ್ತ್ ಸಾಮರ್ಥ್ಯ ಹೊಂದಿರುವ “ಲಾಯಲ್ ವಿಂಗ್‌ ಮ್ಯಾನ್” ಡ್ರೋನ್‌ಗಳನ್ನೂ ಸು-57 ಹಾಗೂ ಎಸ್-70 ಒಖೋಟಿಂಕ್-ಬಿಗಳ ಜೊತೆಯಲ್ಲೇ ನಿರ್ವಹಿಸಬಹುದಾಗಿದೆ.

ಅತಿದೊಡ್ಡ ಬಳಕೆದಾರ ರಾಷ್ಟ್ರ
ಪ್ರಸ್ತುತ ಭಾರತೀಯ ವಾಯುಪಡೆ ಸು-30 ಯುದ್ಧ ವಿಮಾನದ ಅತಿದೊಡ್ಡ ಬಳಕೆದಾರ ರಾಷ್ಟ್ರವಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಭಾರತ ಸು-30 ಎಂಕೆಐ ಯುದ್ಧ ವಿಮಾನಗಳನ್ನು ಜೋಡಿಸಲು, ಉಪಯೋಗಿಸಲು, ನಿರ್ವಹಿಸಲು ಮತ್ತು ಅಭಿವೃದ್ಧಿ ಪಡಿಸಲು ಸಾಕಷ್ಟು ಹಣವನ್ನು ವಿನಿಯೋಗಿಸಿದೆ. ಇದಕ್ಕಾಗಿ ರಷ್ಯಾದ ಕೊಡುಗೆಯೂ ಅತ್ಯಂತ ಗಣನೀಯವಾಗಿದ್ದು, ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧದ ಬೆದರಿಕೆಗಳ ಮಧ್ಯ ಭಾರತ ರಷ್ಯಾದೊಡನೆ ಮೊದಲಿನ ಹಂತದ ಸಂಬಂಧ, ಸಹಕಾರ ಉಳಿಸಿಕೊಳ್ಳುವುದು ಕಷ್ಟಕರವಾದರೂ, ಭಾರತ ತ‌ನ್ನ ರಕ್ಷಣೆಯನ್ನೇ ತನ್ನ ಪ್ರಥಮ ಆದ್ಯತೆಯನ್ನಾಗಿಸಿದೆ. ಭಾರತೀಯ ವಾಯು ಸೇನೆಯ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರ ಪ್ರಕಾರ, ಸು-30ಎಂಕೆಐ ಯುದ್ಧ ವಿಮಾನಗಳನ್ನು ಅಭಿವೃದ್ಧಿ ಪಡಿಸಲು ಬೇಕಾದ ತಾಂತ್ರಿಕ ನಿಯತಾಂಕಗಳನ್ನು ಈಗ ಪರಿಶೀಲಿಸಲಾಗುತ್ತಿದೆ.

“ನಾವು ಈಗಾಗಲೇ ಸು-30ಎಂಕೆಐ ಯುದ್ಧ ವಿಮಾನಗಳ ಅಭಿವೃದ್ಧಿ ಕಾರ್ಯಗಳನ್ನು ದೇಶೀಯವಾಗಿ ಕೈಗೊಳ್ಳುವ ಕುರಿತು ನಿರ್ಧರಿಸಿದ್ದೇವೆ. ಇದು ದೇಶೀಯವಾಗಿ ನಿರ್ಮಿಸಿದ ಆಯುಧಗಳು, ಎಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಗಳು, ಮತ್ತಿತರ ವ್ಯವಸ್ಥೆಗಳನ್ನು ಒಳಗೊಂಡಿದೆ. ನಾವು ಮೊದಲ ಹಂತದಲ್ಲಿ 84 ಸುಖೋಯಿ ಯುದ್ಧ ವಿಮಾನಗಳನ್ನು ಅಭಿವೃದ್ಧಿ ಪಡಿಸಲು ಯೋಜಿಸುತ್ತಿದ್ದೇವೆ” ಎಂದು ಚೌಧರಿ ಹೇಳಿಕೆ ನೀಡಿದ್ದಾರೆ.

ಇನ್ನೂ ನಾಲ್ಕೈದು ವರ್ಷ ಬೇಕು
ಭಾರತೀಯ ಸೇನಾಪಡೆಗಳ ಮೂಲಗಳ ಪ್ರಕಾರ, ಈ ಆಧುನೀಕರಣದ ವಿನ್ಯಾಸ ಮತ್ತು ಅಭಿವೃದ್ಧಿ ಕಾರ್ಯಗಳು ನಾಲ್ಕರಿಂದ ಐದು ವರ್ಷಗಳ ಅವಧಿ ತೆಗೆದುಕೊಳ್ಳಲಿವೆ. ಆ ಬಳಿಕವೇ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಭಾರತೀಯ ನಿರ್ಮಾಣದ ಆಯುಧಗಳನ್ನು ಅಳವಡಿಸುವುದು ಮಾತ್ರವಲ್ಲದೆ, ಈ ಅಭಿವೃದ್ಧಿಯಲ್ಲಿ ಇನ್‌ಫ್ರಾರೆಡ್ ಸರ್ಚ್ ಆ್ಯಂಡ್ ಟ್ರ್ಯಾಕ್ ಸಿಸ್ಟಮ್ (ಐಆರ್‌ಎಸ್‌ಟಿ), ಎಇಎಸ್ಎ (ಆ್ಯಕ್ಟಿವ್ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ) ರೇಡಾರ್ ಹಾಗೂ ಶಕ್ತಿಯುತ ಜೆಟ್ ಎಂಜಿನ್‌ ಅಳವಡಿಕೆಯೂ ಸೇರಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಸ್ತುತ ಲಾಂಗ್ ರೇಂಜ್ ಡ್ಯುಯಲ್ ಬ್ಯಾಂಡ್ ಐಆರ್‌ಎಸ್‌ಟಿ ಸಂಶೋಧನೆ ಮತ್ತು ಅಭಿವೃದ್ಧಿಯ ಕುರಿತು ಕಾರ್ಯ ನಿರ್ವಹಿಸುತ್ತಿದೆ. ಇದನ್ನು ಪ್ರಸ್ತುತ ಇರುವ ಸು-30ಎಂಕೆಐ ಯುದ್ಧ ವಿಮಾನಗಳಿಗೆ ಅಳವಡಿಸಲಾಗುತ್ತದೆ.

“ಉದ್ದೇಶಿತ ಐಆರ್‌ಎಸ್‌ಟಿ ಸಿಸ್ಟಮ್ ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಐಆರ್‌ಎಸ್‌ಟಿ ವ್ಯವಸ್ಥೆಗಿಂತ ತಾಂತ್ರಿಕವಾಗಿ ಸ್ಪರ್ಧಾತ್ಮಕವಾಗಿದೆ. ಇದರಲ್ಲಿ ಟೆಲಿವಿಷನ್ ಡೇ ಕ್ಯಾಮರಾ, ಇನ್‌ಫ್ರಾರೆಡ್ ಹಾಗೂ ಲೇಸರ್ ಸೆನ್ಸರ್‌ಗಳಿದ್ದು, ಗಾಳಿಯಿಂದ ಗಾಳಿಗೆ ಹಾಗೂ ಗಾಳಿಯಿಂದ ಭೂಮಿಗೆ ದಾಳಿ ನಡೆಸಲು ಸಹಕಾರಿಯಾಗಲಿದೆ” ಎಂದು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಎಇಎಸ್ಎ ರೇಡಾರ್ ಅಭಿವೃದ್ಧಿ
ಆಧುನೀಕರಿಸಿದ ಸು-30ಎಂಕೆಐ ಹೊಸ ವೈಶಿಷ್ಟ್ಯಗಳಲ್ಲಿ ಎಇಎಸ್ಎ ರೇಡಾರ್ ಇದ್ದು, ಅದನ್ನು ಪ್ರಸ್ತುತ ಇರುವ ಎನ್011ಎಂ “ಬಾರ್ಸ್” ಪಿಇಎಸ್ಎ (ಪ್ಯಾಸಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ) ರೇಡಾರ್ ಬದಲಿಗೆ ಅಳವಡಿಸಲಾಗುತ್ತದೆ. ಡಿಆರ್‌ಡಿಒ, ಎಚ್ಎಎಲ್ ಮತ್ತು ರಷ್ಯಾದ ರಕ್ಷಣಾ ಉದ್ಯಮದ ಜೊತೆಗೂಡಿ ಕಾರ್ಯ ನಿರ್ವಹಿಸಿ, ಸು-30ಎಂಕೆಐಗೆ ಎಇಎಸ್ಎ ರೇಡಾರ್ ಅಭಿವೃದ್ಧಿ ಪಡಿಸುತ್ತಿದೆ. ಸು-30ಎಂಕೆಐ ಯುದ್ಧ ವಿಮಾನದ ಗಾತ್ರದ ಕಾರಣದಿಂದ ಇದರಲ್ಲಿ ಯುದ್ಧ ವಿಮಾನಗಳಲ್ಲಿ ಉಪಯೋಗಿಸಲಾದ ಅತ್ಯಂತ ಶಕ್ತಿಯುತ ಎಇಎಸ್ಎ ರೇಡಾರ್ ಅಳವಡಿಸಲು ಸಾಧ್ಯವಾಗುತ್ತದೆ. ಅದೇ ರೀತಿ, ಭಾರತ ಎನ್036 “ಬ್ಯೆಲ್ಕಾ” ಎಇಎಸ್ಎ ರೇಡಾರ್ ಆವೃತ್ತಿಯನ್ನೂ ಆಯ್ಕೆ ಮಾಡುವ ಸಾಧ್ಯತೆಗಳಿದೆ. ಇದನ್ನು ಭವಿಷ್ಯದ ಅಭಿವೃದ್ಧಿಯಲ್ಲಿ ಬಳಸಿಕೊಳ್ಳಬಹುದು.

ಇದರೊಡನೆ, ಭಾರತ ತನ್ನ ಅಭಿವೃದ್ಧಿ ಹೊಂದಿದ ಸು-30ಎಂಕೆಐ ಗಾಗಿ ಇನ್ನೂ ಅತ್ಯಾಧುನಿಕ ರಷ್ಯನ್ ಜೆಟ್ ಇಂಜಿನ್ನನ್ನು ಪಡೆದುಕೊಳ್ಳಲಿದೆ. ರಷ್ಯಾದ ಸಂಸ್ಥೆಗಳು ಈಗಾಗಲೇ ಆಧುನಿಕ ಎಎಲ್-41ಎಫ್-1ಎಸ್ (Izdeliye – ಪ್ರಾಡಕ್ಟ್ 117ಎಸ್) ಇಂಜಿನ್ನನ್ನು ಅಭಿವೃದ್ಧಿ ಪಡಿಸಿದ್ದು, ರಷ್ಯಾದ ವಾಯುಪಡೆಯ ಸು-35ಎಸ್ ಯುದ್ಧ ವಿಮಾನಗಳಲ್ಲಿ ಬಳಸಲಾಗುತ್ತಿದೆ. ರಷ್ಯಾದ ಮಿಲಿಟರಿ ಮೂಲಗಳ ಪ್ರಕಾರ, ರಷ್ಯಾದ ಮಿಲಿಟರಿ ಉದ್ಯಮ ಈ ಇಂಜಿನ್ನಿನ ನೂತನ ಆವೃತ್ತಿಯ ನಿರ್ಮಾಣದಲ್ಲಿ ಕಾರ್ಯ ನಿರತವಾಗಿದೆ. ಈ ನೂತನ ಆವೃತ್ತಿಯ ಇಂಜಿನ್ ಸು-30ಎಂಕೆಐ ಸೇರಿದಂತೆ, ಸು-30 ಯುದ್ಧ ವಿಮಾನಗಳಿಗೆ ಸೂಕ್ತವಾಗಿರಲಿದೆ. ಇದಕ್ಕಾಗಿ ಯಾವುದೇ ಏರ್‌ಫ್ರೇಮ್ ಬದಲಾವಣೆಯ ಅಗತ್ಯವಿರುವುದಿಲ್ಲ.

ಇದು ಯುದ್ಧ ವಿಮಾನದ ಚಲನ ಸಾಮರ್ಥ್ಯದ ಜೊತೆಗೆ, ವಿಮಾನದ ವ್ಯಾಪ್ತಿ ಮತ್ತು ಯುದ್ಧ ತಯಾರಿಯನ್ನೂ ಅಭಿವೃದ್ಧಿ ಪಡಿಸಲಿದೆ. ಈ ಮೂಲಕ ಸು-30ಎಂಕೆಐ ಯುದ್ಧ ವಿಮಾನದ ಜೆಟ್ ಇಂಜಿನ್ನಿನ ಬದಲಾವಣೆ ಸುಲಭವೂ, ಕಡಿಮೆ ವೆಚ್ಚದಾಯಕವೂ ಆಗಿರಲಿದೆ. ಸು-30ಎಸ್‌ಎಂ ಯುದ್ಧ ವಿಮಾನದಲ್ಲಿ (ಇದರ ಮಾದರಿಯ ಮೇಲೆಯೇ ಸು-30ಎಂಕೆಐ ಯುದ್ಧ ವಿಮಾನದ ನಿರ್ಮಾಣವಾಗಿದೆ) ಎಎಲ್-41ಎಫ್-1ಎಸ್ ಇಂಜಿನ್ನನ್ನು ಅಳವಡಿಸಿ, ಜನವರಿ ತಿಂಗಳಿಂದಲೇ ಪರೀಕ್ಷಾ ಹಾರಾಟ ನಡೆಸಲಾಗುತ್ತಿದೆ. ಈ ನೂತನ ಇಂಜಿನ್ 16% ಹೆಚ್ಚಿನ ಒತ್ತಡ, ಉತ್ತಮ ಇಂಧನ ಹೀರುವಿಕೆ ಹಾಗೂ ಹೆಚ್ಚಿನ ಸಹಿಷ್ಣುತೆ ಹೊಂದಿದ್ದು, ಒಟ್ಟಾರೆ 4,000 ಗಂಟೆಗಳ ಹಾರಾಟ ಸಮಯ ಹೊಂದಿರಲಿದೆ.

ರಕ್ಷಣಾ ಸಂಬಂಧ ಮತ್ತಷ್ಟು ಗಟ್ಟಿ
ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳು ಭಾರತೀಯ ರಕ್ಷಣಾ ವಲಯಕ್ಕೆ ತೊಂದರೆಯಾಗದ ರೀತಿಯಲ್ಲಿ ರಷ್ಯಾ ಭಾರತಕ್ಕೆ ಸಹಾಯ ಮಾಡಲಿದ್ದು, ಈ ಅಭಿವೃದ್ಧಿ ಯೋಜನೆಯಲ್ಲಿ ಅಧಿಕೃತವಾಗಿ ಪಾಲ್ಗೊಳ್ಳುವುದಿಲ್ಲ. ಜುಲೈ ತಿಂಗಳ ಆರಂಭದಲ್ಲಿ ಟಿಎಎಸ್ಎಸ್ ಒಂದು ರಾಸ್‌ಟೆಕ್ ಸಂಸ್ಥೆಯ ಪತ್ರಿಕಾ ಹೇಳಿಕೆಯನ್ನು ಉಲ್ಲೇಖಿಸಿ, ರಷ್ಯಾ ಸು-30ಎಂಕೆಐ ಯುದ್ಧ ವಿಮಾನಗಳ ಅಭಿವೃದ್ಧಿ ಕಾರ್ಯದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಹಕರಿಸಲಿದೆ ಎಂದು ಹೇಳಿತ್ತು. ಇದರಲ್ಲಿ ಹೆಚ್ಚಿನ ಸು-30ಎಂಕೆಐ ವಿಮಾನಗಳಿಗಾಗಿ ಅಸೆಂಬ್ಲಿ ಕಿಟ್‌ಗಳ ಪೂರೈಕೆ, ಹಾಗೂ ನೂತನ ಆಯುಧಗಳು ಹಾಗೂ ಏವಿಯಾನಿಕ್ಸ್ ವ್ಯವಸ್ಥೆಗಳ ಅಳವಡಿಕೆಯೂ ಸೇರಿದೆ.

ರಷ್ಯಾದ ಬೆಂಬಲದ ಜೊತೆಗೆ ಭಾರತ ತನ್ನ ದೇಶೀಯ ವ್ಯವಸ್ಥೆ ಹಾಗೂ ಸೆನ್ಸರ್‌ಗಳ ಅಭಿವೃದ್ಧಿ ಮತ್ತು ಸು-30ಎಂಕೆಐ ವಿಮಾನಗಳಲ್ಲಿ ಅವುಗಳ ಅಳವಡಿಕೆಯನ್ನು ಮುಂದುವರಿಸಲಿದೆ. ರಷ್ಯಾದ ರಾಜತಾಂತ್ರಿಕ ನೀತಿ ಮತ್ತು ಭಾರತದ ಭೌಗೋಳಿಕ ರಾಜಕೀಯ ಅಂಶಗಳನ್ನು ಗಮನಿಸಿ ಕ್ರಮ ಕೈಗೊಳ್ಳುವುದನ್ನು ನವದೆಹಲಿ ಪ್ರಶಂಸಿಸುತ್ತಿದೆ. ಈ ಕಾರಣದಿಂದಲೇ ಭಾರತ ಮತ್ತು ರಷ್ಯಾಗಳು ತಮ್ಮ ನಿಕಟ ರಕ್ಷಣಾ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿವೆ.

ಇದನ್ನೂ ಓದಿ | ಭಾರತದಿಂದ 300 ಕಿ.ಮೀ ಗುರಿ ಭೇದಿಸಬಲ್ಲ ಅಸ್ತ್ರ ಕ್ಷಿಪಣಿಯ ಅಭಿವೃದ್ಧಿ, ಯುದ್ಧ ವಿಮಾನಗಳಿಗೆ ಭೀಮಬಲ

Exit mobile version