ಹೊಸದಿಲ್ಲಿ: ಇತ್ತೀಚೆಗೆ ಸಂಸತ್ ಅಧಿವೇಶನದ (Parliament Session) ಕೊನೆಯಲ್ಲಿ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ (BJP) 370 ಸ್ಥಾನಗಳನ್ನು ಗೆಲ್ಲಲಿದೆ ಹಾಗೂ ಎನ್‌ಡಿಎ (NDA) 400 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಏರಲಿದೆ ಎಂದು ಹೇಳಿದ್ದರು. ಇದು ಹೇಗೆ ಸಾಧ್ಯ?
ಚುನಾವಣೆ ಫಲಿತಾಂಶವನ್ನು ಮೊದಲೇ ಊಹಿಸುವುದು ಸ್ವಲ್ಪ ರಿಸ್ಕಿನ ಕೆಲಸವೇ ಸರಿ. ಆದರೆ ಈಗಿರುವ ಸನ್ನಿವೇಶವನ್ನು ಹಾಗೂ ಕಳೆದ ಲೋಕಸಭೆ ಚುನಾವಣೆಗಳ ಫಲಿತಾಂಶವನ್ನು ಅವಲಂಬಿಸಿ ಕೆಲವು ಲೆಕ್ಕಾಚಾರಗಳನ್ನು ಮಾಡಬಹುದು. ಆ ಮೂಲಕ ಮೋದಿಯವರ ಆತ್ಮವಿಶ್ವಾಸದ ಹಿನ್ನೆಲೆ ಏನು ಎಂದು ಊಹಿಸಬಹುದಾಗಿದೆ.
ಈ ಹಿಂದಿನ ಲೋಕಸಭೆ ಚುನಾವಣೆಗಳಲ್ಲಿ ಗೆದ್ದ ಎಲ್ಲ ಸ್ಥಾನಗಳನ್ನೂ ಗೆದ್ದರೆ:
2009ಕ್ಕಿಂತ ಹಿಂದಿನ ಚುನಾವಣೆಗಳ ಫಲಿತಾಂಶಗಳನ್ನು ಇಂದಿನದಕ್ಕೆ ಹೋಲಿಸಲು ಸಾಧ್ಯವಿಲ್ಲ. ಯಾಕೆಂದರೆ 2008ರಲ್ಲಿ ಲೋಕಸಭೆ ಸ್ಥಾನಗಳ (ಪಿಸಿ) ಗಡಿಗಳನ್ನು ಮರುರಚನೆ ಮಾಡಲಾಗಿತ್ತು. 2009, 2014 ಹಾಗೂ 2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಕ್ರಮವಾಗಿ 116, 282 ಹಾಗೂ 303 ಸ್ಥಾನಗಳನ್ನು ಗೆದ್ದುಕೊಂಡಿದೆ. 2009ರಲ್ಲಿ ಗೆದ್ದ 116 ಸ್ಥಾನಗಳಲ್ಲಿ 95ನ್ನು ಬಿಜೆಪಿ ಮುಂದಿನ ಎರಡೂ ಚುನಾವಣೆಗಳಲ್ಲಿ ಮರಳಿ ಗೆದ್ದುಕೊಂಡಿದೆ. 2019ರಲ್ಲಿ ಗೆದ್ದ 303 ಸ್ಥಾನಗಳಲ್ಲಿ 55 ಸ್ಥಾನಗಳನ್ನು ಪಕ್ಷ 2014ರಲ್ಲಿ ಗೆದ್ದಿರಲಿಲ್ಲ. ಅದರಲ್ಲಿ 50ರಲ್ಲಿ ಪಕ್ಷ ಸೋತಿತ್ತು ಹಾಗೂ 5ರಲ್ಲಿ ಸ್ಪರ್ಧಿಸಿರಲಿಲ್ಲ. 2014ರಲ್ಲಿ ಗೆದ್ದ 282 ಸ್ಥಾನಗಳಲ್ಲಿ 34 ಸ್ಥಾನಗಳು 2019ರಲ್ಲಿ ಬಿಜೆಪಿಗೆ ದಕ್ಕಿರಲಿಲ್ಲ; ಅಂದರೆ ಅವುಗಳಲ್ಲಿ 24 ಸೋಲು ಮತ್ತು 10 ಸ್ಥಾನಗಳು ಮಿತ್ರಪಕ್ಷಗಳಿಗೆ ಹೋಗಿವೆ. ಮೂರೂ ಚುನಾವಣೆಗಳಲ್ಲೂ ಪಕ್ಷ ಗೆದ್ದಿರುವ ಸ್ಥಾನಗಳನ್ನು ಒಟ್ಟಾಗಿ ಪರಿಗಣಿಸಿದರೆ, ಪಕ್ಷದ ಪಾಲಿಗೆ ಒಟ್ಟಾಗುವ ಸ್ಥಾನಗಳ ಸಂಖ್ಯೆ 343. ಆದರೂ ಇದು ನಿಗದಿತ ಗುರಿಯಾದ 370ಕ್ಕೆ 27 ಕಡಿಮೆಯೇ ಆಗುತ್ತದೆ.
2014ರಿಂದ 2019ಕ್ಕೆ ಬೆಳವಣಿಗೆಯಾಗದೆ ಉಳಿದ ಅಂಶಗಳು:
2014ರಲ್ಲಿ ಗೆದ್ದುಕೊಂಡು, 2019ರಲ್ಲಿ ಪಡೆಯಲು ಸಾಧ್ಯವಾಗದ 24 ಲೋಕಸಭೆ ಸ್ಥಾನಗಳಲ್ಲಿ 10ನ್ನು ಮಿತ್ರಪಕ್ಷಗಳಿಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಅವುಗಳನ್ನು ಮಿತ್ರಪಕ್ಷಗಳು ಗೆದ್ದಿವೆ. ಇನ್ನುಳಿದ 24 ಕಡೆಗಳಲ್ಲಿ ಬಿಜೆಪಿ ಸ್ಪರ್ಧಿಸಿ ಸೋತಿದೆ. ಇದರಲ್ಲಿ ಹೆಚ್ಚಿನ ಸ್ಥಾನಗಳನ್ನು ಸೋತದ್ದು ಉತ್ತರಪ್ರದೇಶದಲ್ಲಿ. ಅಲ್ಲಿ ಗಣನೀಯ ಸ್ಪರ್ಧೆ ಒಡ್ಡಿದ್ದೆಂದರೆ ಸಮಾಜವಾದಿ ಪಾರ್ಟಿ- ಬಹುಜನ ಸಮಾಜ ಪಾರ್ಟಿ ಮೈತ್ರಿ. ಈ ಮೈತ್ರಿ 2024ರಲ್ಲಿ ಇಲ್ಲ. 2019ರಲ್ಲಿ ಸೋತ ಇನ್ನುಳಿದ ಲೋಕಸಭೆ ಸ್ಥಾನಗಳು ಬೇರೆ ಬೇರೆ ರಾಜ್ಯಗಳಲ್ಲಿ ಹರಡಿವೆ. ಇಲ್ಲೆಲ್ಲಾ ಯಾವುದೇ ಕಾಮನ್ ಟ್ರೆಂಡ್ ಗುರುತಿಸುವಂತಿಲ್ಲ.
2019ರಲ್ಲಿ ಸೋತ ಸ್ಥಾನಗಳನ್ನು ಪಡೆಯಲು ಏನಾಗಬೇಕು?
2019ರಲ್ಲಿ ಬಿಜೆಪಿ ದೇಶದ 436 ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸಿತು. ಗೆದ್ದಿದ್ದು 303ರಲ್ಲಿ. ತಾನು ಸೋತ 133 ಸ್ಥಾನಗಳಲ್ಲಿ, 72 ಪಿಸಿಗಳಲ್ಲಿ ಎರಡನೇ ಸ್ಥಾನದಲ್ಲಿದೆ. 61 ಪಿಸಿಗಳಲ್ಲಿ ಮೂರನೇ ಅಥವಾ ಅದರ ನಂತರದ ಸ್ಥಾನಗಳಲ್ಲಿದೆ. ಬಿಜೆಪಿಯ ಹಾಗೂ ವಿಜೇತರ ಮತ ಹಂಚಿಕೆಯ ಅಂತರವನ್ನು ಗಮನಿಸಿದರೆ, 92 ಪಿಸಿಗಳಲ್ಲಿ 10% ಹಾಗೂ ಅದಕ್ಕಿಂತ ಹೆಚ್ಚಿನ ಮತಗಳ ಅಂತರ ಇದೆ. 23 ಪಿಸಿಗಳಲ್ಲಿ 5ರಿಂದ 10%, 14 ಪಿಸಿಗಳಲ್ಲಿ 1ರಿಂದ 5%, 4 ಪಿಸಿಗಳಲ್ಲಿ 1%ಕ್ಕಿಂತಲೂ ಕಡಿಮೆ ಅಂತರ ಇದೆ. 10%ಗಿಂತ ಕಡಿಮೆ ಮತಗಳ ಅಂತರ ಇರುವ ರಾಜ್ಯಗಳೆಂದರೆ ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಪಶ್ಚಿಮ ಬಂಗಾಲ. ಈ ಪಟ್ಟಿಯಲ್ಲಿ ತಮಿಳುನಾಡು ಇಲ್ಲ. ಯಾಕೆಂದರೆ 2019ರಲ್ಲಿ ಎಐಡಿಎಂಕೆಯು ಎನ್‌ಡಿಎಯ ಭಾಗವಾಗಿತ್ತು. ಸದ್ಯ 2024ರಲ್ಲಿ ಆಲ್ ಇಂಡಿಯಾ ದ್ರಾವಿಡ ಮುನ್ನೇತ್ರ ಕಳಗಂ ಇನ್ನೂ ಎನ್‌ಡಿಎಯ ಮೈತ್ರಿ ಘೋಷಿಸಿಲ್ಲ.
ಯಾವ ರಾಜ್ಯಗಳು ಬಿಜೆಪಿಗೆ 370ರ ಗಡಿ ದಾಟಲು ನೆರವಾಗಬಹುದು?
ಇದು ಈ ಸಲದ ಚುನಾವಣೆಯ ದೃಷ್ಟಿಯಿಂದ ತುಂಬಾ ಆಸಕ್ತಿಕರ ಸಂಗತಿ. ಈ ಹಿಂದಿನ ಮೂರೂ ಚುನಾವಣೆಗಳಲ್ಲಿ ಬಿಜೆಪಿ ಗೆದ್ದುಕೊಂಡ ಒಟ್ಟು ಸ್ಥಾನಗಳನ್ನು ಗಮನಿಸಿದರೆ, 15 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆ ಸ್ಥಾನಗಳ 100% ಹಂಚಿಹೋಗಿದೆ. ಇದರಲ್ಲಿ ಚತ್ತೀಸ್‌ಗಢ, ಹರಿಯಾಣ, ಜಾರ್ಖಂಡ್, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ತಲಾ ಕನಿಷ್ಠ 10 ಸ್ಥಾನಗಳಿವೆ. ಇವುಗಳು ಒಟ್ಟು ಸೇರಿದರೆ 112 ಸ್ಥಾನಗಳಾಗುತ್ತವೆ. ಒಂದು ವೇಳೆ ನಾವು ಇದರ ಮೇಲ್ಮಿತಿಯನ್ನು 95%ಕ್ಕೆ ಇಳಿಸಿದರೆ, 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 221 ಸ್ಥಾನಗಳನ್ನು ತಂದುಕೊಡುತ್ತವೆ. ಇವುಗಳಲ್ಲಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶವೂ ಸೇರಿವೆ. ಎರಡು ಮುಖ್ಯ ರಾಜ್ಯಗಳಾದ ಮಹಾರಾಷ್ಟ್ರ (48 ಪಿಸಿ) ಹಾಗೂ ಬಿಹಾರ(40 ಪಿಸಿ)ದಲ್ಲಿ, 2009ರ ನಂತರದ ಯಾವುದೇ ಚುನಾವಣೆಯಲ್ಲಿ ಬಿಜೆಪಿ 58%ಗಿಂತ ಹೆಚ್ಚು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಎರಡೂ ರಾಜ್ಯಗಳಲ್ಲಿ ಮಿತ್ರಪಕ್ಷಗಳೊಂದಿಗೆ ಸೇರಿ 2014 ಹಾಗೂ 2019ರ ಚುನಾವಣೆಗಳನ್ನು ಗೆದ್ದುಕೊಂಡಿದೆ. ಈ ರಾಜ್ಯಗಳಲ್ಲಿ ಬಿಜೆಪಿ- ಎನ್‌ಡಿಎಯ ಒಟ್ಟಾರೆ ಪ್ರದರ್ಶನವು ಅವುಗಳ ಹೊಂದಾಣಿಕೆ, ಸ್ಥಾನ ಹಂಚಿಕೆಯ ಮೇಲೆ ನಿಂತಿದೆ. ಇನ್ನು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳಗಳ ಒಟ್ಟಾರೆ ಸ್ಥಾನಗಳಿಕೆ 2009ರ ನಂತರದ ಚುನಾವಣೆಗಳಲ್ಲಿ 7% ಅಷ್ಟೇ ಇದೆ. ಈ ರಾಜ್ಯಗಳು 101 ಸಂಸದರನ್ನು ಲೋಕಸಭೆಗೆ ಕಳಿಸುತ್ತವೆ. ಒಬ್ಬಂಟಿಯಾಗಿ ಬಿಜೆಪಿ ಭಾರಿ ಪ್ರದರ್ಶನ ತೋರಿಸಬಲ್ಲ ಸಾಧ್ಯತೆ ಇರುವುದು ಎರಡು ರಾಜ್ಯಗಳಲ್ಲಿ- ಪಶ್ಚಿಮ ಬಂಗಾಲ ಹಾಗೂ ಒಡಿಶಾ. ಇಲ್ಲಿ ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಪ್ರಬಲ ಪ್ರತಿಪಕ್ಷವಾಗಿ ಹೊಮ್ಮಿದೆ. ದಕ್ಷಿಣದ ರಾಜ್ಯಗಳಲ್ಲಿ ಹೊಸ ನೆಲೆಗಳನ್ನು ಪಕ್ಷ ಅನ್ವೇಷಿಸಿ ತನ್ನನ್ನು ಸ್ಥಾಪಿಸಿಕೊಳ್ಳಬೇಕಿದೆ.