Site icon Vistara News

ವಿಸ್ತಾರ Explainer: ʼನಂಬಿʼ ಕೆಟ್ಟವರಲ್ಲ! ದೇಶ ಪ್ರೇಮಿ ವಿಜ್ಞಾನಿ ದೇಶ ದ್ರೋಹಿ ಆಗಿದ್ದು ಹೇಗೆ?

nambi narayanan

ಆರ್.‌ ಮಾಧವನ್‌ ನಾಯಕನಾಗಿ ನಟಿಸಿರುವ ʻರಾಕೆಟ್ರಿ: ದಿ ನಂಬಿ ಎಫೆಕ್ಟ್‌ʼ ಸಿನೆಮಾ ಹಿರಿತೆರೆಯನ್ನು ಆವರಿಸಿದೆ. ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಪಡೆಯುತ್ತಿದೆ. ಇದು ಭಾರತೀಯ ಬಯೋಪಿಕ್‌ಗಳ ಪಟ್ಟಿಗೆ ಇನ್ನೊಂದು ಸೊಗಸಾದ ಸೇರ್ಪಡೆ. ನಮ್ಮ ದೇಶ ಕಂಡ ಪ್ರಾಮಾಣಿಕ, ಅನುಭವಿ ವೈಮಾನಿಕ ಎಂಜಿನಿಯರ್‌ ಒಬ್ಬರನ್ನು ಸುಳ್ಳು ಬೇಹುಗಾರಿಕೆ ಆರೋಪ ಹೊರಿಸಿ ಚಿತ್ರಹಿಂಸೆ ನೀಡಿ, ಅವರ ಬದುಕನ್ನೇ ನಾಶ ಮಾಡಿದ ದುಷ್ಟ ವ್ಯವಸ್ಥೆಯ ಇಂಚಿಂಚನ್ನೂ ಈ ಸಿನಿಮಾ ಬಯಲಿಗೆ ತಂದಿಟ್ಟಿದೆ.

ಇದು ಡಾ. ನಂಬಿ ನಾರಾಯಣನ್‌ ಅವರ ಜೀವನದ, ಅವರು ಎದುರಿಸಿದ ದುಷ್ಟವ್ಯೂಹದ ಕತೆ. ಯಾರಿವರು ನಂಬಿ? ಯಾಕೆ ಸುದ್ದಿಯಾದವರು?

ನಂಬಿ ನಾರಾಯಣನ್‌ ಕೇರಳದವರು. ದೇಶ ಹೆಮ್ಮೆಪಡುವಂಥ ಏರೋಸ್ಪೇಸ್‌ ಎಂಜಿನಿಯರ್. ಆದರೆ ಸುಳ್ಳು ಕೇಸ್‌ಗಳಿಂದಾಗಿ ಜೈಲು ಸೇರಿದರು. ಕೊನೆಗೂ ತಮ್ಮ ಪ್ರಾಮಾಣಿಕತೆಯನ್ನು ದೇಶದ ಮುಂದೆ ನಿರೂಪಿಸಿಕೊಂಡರು. ಇತ್ತೀಚೆಗಷ್ಟೆ ನಂಬಿ ನಾರಾಯಣನ್ ಅವರ ಮೇಲಿನ ಸುಳ್ಳು ದೇಶದ್ರೋಹ ಪ್ರಕರಣದ ಸಿಬಿಐ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಏನಿದು ನಂಬಿ ನಾರಾಯಣನ್ ಕೇಸ್?

ಇಸ್ರೊದಲ್ಲಿ ಏರೋಸ್ಪೇಸ್‌ ಎಂಜಿನಿಯರ್‌ ಆಗಿದ್ದ ಕೇರಳದ ಡಾ. ನಂಬಿ ನಾರಾಯಣನ್ ಅಪಾರ ವಿಜ್ಞಾನ ಪಾಂಡಿತ್ಯ ಹೊಂದಿದವರು. ಹುಟ್ಟಿದ್ದು 1941ರಲ್ಲಿ. ಇಸ್ರೊದ ಕ್ರಯೊಜನಿಕ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರು. ಇಸ್ರೋದ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ದ್ರವ ಇಂಧನ ಎಂಜಿನ್‌ಗಳ ಅಗತ್ಯವಿದೆ ಎಂಬುದನ್ನು ಮನಗಂಡ ಅವರು, ಈ ತಂತ್ರಜ್ಞಾನವನ್ನು 1970ರಷ್ಟು ಹಿಂದೆಯೇ ಇಸ್ರೊದ ಕಾರ್ಯಕ್ರಮಗಳಲ್ಲಿ ಅಳವಡಿಸಿದ್ದರು. ಇದೇ ಮುಂದೆ ಅವರ ಮೇಲಿನ ಆರೋಪಕ್ಕೂ ಕಾರಣವಾಯಿತು.

1992ರಲ್ಲಿ ರಷ್ಯದೊಂದಿಗೆ ಇಸ್ರೊ, ಕ್ರಯೋಜನಿಕ್ ಮೂಲದ ಇಂಧನಗಳ ಉತ್ಪಾದನೆ ತಂತ್ರಜ್ಞಾನದ ಹಸ್ತಾಂತರಕ್ಕೆ ಒಪ್ಪಂದವನ್ನು ಅಂತಿಮಗೊಳಿಸಿತು. ಆದರೆ ಅಮೆರಿಕ ಹಾಗೂ ಫ್ರಾನ್ಸ್‌ಗಳು ರಷ್ಯದ ಮೇಲೆ ಒತ್ತಡ ಹೇರಿ, ಈ ಒಪ್ಪಂದವನ್ನು ತಡೆಗಟ್ಟಿದವು. ಆದರೂ, ತಂತ್ರಜ್ಞಾನದ ಹಸ್ತಾಂತರವಿಲ್ಲದೆ ನಾಲ್ಕು ಕ್ರಯೊಜನಿಕ್ ಎಂಜಿನ್‌ಗಳನ್ನು ಕಟ್ಟಿಕೊಡುವುದಕ್ಕೆ ರಷ್ಯ ಒಪ್ಪಿತು. ಈ ಎಂಜಿನ್‌ಗಳನ್ನು ಕಟ್ಟಲು ಕೇರಳದ ಹೈಟೆಕ್ ಇಂಡಸ್ಟ್ರಿಸ್ ಲಿ. ಎಂಬ ಸಂಸ್ಥೆಗೆ ಕಡಿಮೆ ದರದಲ್ಲಿ ಟೆಂಡರ್ ಕೊಡುವ ನಿರ್ಧಾರ ಕೂಡ ಆಯಿತು. ಅದೇ ಹೊತ್ತಿಗೆ ನಂಬಿ ಅವರ ಕೆರಿಯರ್‌ಗೆ ಈ ಪ್ರಕರಣ ತಗುಲಿಕೊಂಡಿತು.

ಬೇಹುಗಾರಿಕೆ ಆರೋಪ

1994ರ ಅಕ್ಟೋಬರ್‌ನಲ್ಲಿ, ತಿರುವನಂತಪುರದಲ್ಲಿ ಕೇರಳ ಪೊಲೀಸರು ಮಾಲ್ದೀವ್ಸ್‌ನ ಪ್ರಜೆ ಮರಿಯಮ್ ರಷೀದಾ ಎಂಬಾಕೆಯನ್ನು ಬಂಧಿಸಿ, ಆಕೆಯ ಮೇಲೆ ವಿದೇಶೀಯರ ಕಾಯಿದೆ-1946ನ ಸೆಕ್ಷನ್ 14 ಹಾಗೂ ಸೆಕ್ಷನ್ 7ರ ಪ್ರಕಾರ ಕೇಸು ದಾಖಲಿಸಿದರು. ಆರಂಭದಲ್ಲಿ ಆಕೆಯ ಮೇಲಿದ್ದ ಆರೋಪವೆಂದರೆ ಭಾರತದಲ್ಲಿ ನಿಗದಿತ ಅವಧಿಗಿಂತ ಹೆಚ್ಚು ಕಾಲ ವಾಸಿಸುತ್ತಿದ್ದುದು. ನಂತರ ಆಕೆಯನ್ನು ಬಳಸಿಕೊಂಡು ಪೊಲೀಸರು ಇನ್ನೊಂದು ಕೇಸ್ ಸೃಷ್ಟಿಸಿದರು. ಈಕೆ ಇಸ್ರೊ ವಿಜ್ಞಾನಿಗಳ ಸಂಪರ್ಕದಲ್ಲಿದ್ದಾಳೆ, ಅವರಿಂದ ಕ್ರಯೊಜನಿಕ್ ಎಂಜಿನ್‌ನ ಮಾಹಿತಿ ಪಡೆದು ರಹಸ್ಯವಾಗಿ ಪಾಕಿಸ್ತಾನಕ್ಕೆ ಸಾಗಿಸುತ್ತಿದ್ದಾಳೆ ಎಂಬುದು ಆರೋಪವಾಗಿತ್ತು.

ಮುಂದಿನ ತಿಂಗಳಲ್ಲಿ ಇದಕ್ಕೆ ಸಂಬಂಧಿಸಿ ನಂಬಿ ನಾರಾಯಣನ್ ಹಾಗೂ ಇನ್ನೊಬ್ಬ ವಿಜ್ಞಾನಿ ಡಾ. ಶಶಿಕುಮಾರನ್ ಅವರನ್ನು ಬಂಧಿಸಿ, ಅವರ ಮೇಲೆ ಬೇಹುಗಾರಿಕೆ, ದೇಶದ್ರೋಹದ ಆರೋಪ ಹೊರಿಸಲಾಯಿತು. ಇವರಿಬ್ಬರೂ ಇಸ್ರೋದ ರಹಸ್ಯ ದಾಖಲೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುತ್ತಿದ್ದರು ಎನ್ನಲಾಯಿತು. ಬೇಹುಗಾರಿಕೆ ಇಲಾಖೆ ಅಧಿಕಾರಿಗಳು, ಆಗಿನ ರಾಜ್ಯ ಹೆಚ್ಚುವರಿ ನಿರ್ದೇಶಕ ಆರ್.ಬಿ.ಶ್ರೀಕುಮಾರ್ (ಇದೇ ಶ್ರೀಕುಮಾರ್‌ ಅವರನ್ನು ಈಗ ಬಂಧಿಸಲಾಗಿದೆ. ಗುಜರಾತ್‌ ಗಲಭೆಯ ಹಿನ್ನೆಲೆಯಲ್ಲಿ ಮೋದಿಯವರ ಕೈವಾಡವಿದೆ ಎಂದು ಸುಳ್ಳು ಆರೋಪ ಮಾಡಿದ್ದಕ್ಕಾಗಿ) ನೇತೃತ್ವದಲ್ಲಿ ಸತತ ವಿಚಾರಣೆ, ಹಿಂಸೆಗಳಿಗೆ ಇವರಿಬ್ಬರನ್ನೂ ಒಡ್ಡಿದರು. ರಷ್ಯದ ಗ್ಲಾಕೋಸ್‌ಮಾಸ್‌ನ ಭಾರತ ಪ್ರತಿನಿಧಿ ಚಂದ್ರಶೇಖರ್, ಇನ್ನೊಬ್ಬ ಮಾಲ್ದೀವ್ಸ್ ಪ್ರಜೆ ಫೌಜಿಯಾ ಹಸನ್, ಬೆಂಗಳೂರು ಮೂಲದ ಕಾಂಟ್ರಾಕ್ಟರ್ ಎಸ್.ಕೆ.ಶರ್ಮ ಅವರನ್ನೂ ಈ ಕೇಸಿನಲ್ಲಿ ಸಿಕ್ಕಿಸಿದರು. ಕೇರಳದ ಐಜಿಪಿ ರಮಣ್ ಶ್ರೀವಾಸ್ತವ ಅವರನ್ನೂ ಆರೋಪಿಸಲಾಯಿತು.

ಮುಖ್ಯಮಂತ್ರಿಯ ತಲೆದಂಡ

ಐಜಿಪಿ ಮೇಲಿನ ಆರೋಪದಿಂದಾಗಿ ಕೇರಳದ ಆಳುವ ಕಾಂಗ್ರೆಸ್- ಮುಸ್ಲಿಂ ಲೀಗ್ ಸರಕಾರದಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತು. ರಮಣ್, ಮುಖ್ಯಮಂತ್ರಿ ಕೆ.ಕರುಣಾಕರನ್‌ಗೆ ಆಪ್ತರಾಗಿದ್ದವರು. ಕರುಣಾಕರನ್ ಅವರ ಸ್ವಪಕ್ಷೀಯ ವೈರಿ ಎ.ಕೆ.ಆಂಟನಿ ಮತ್ತು ಮುಸ್ಲಿಂ ಲೀಗ್, ಕರುಣಾಕರನ್ ಅವರ ತಲೆದಂಡಕ್ಕೆ ಆಗ್ರಹಿಸಿದರು. ಒತ್ತಡದಿಂದಾಗಿ ಕರುಣಾ ರಾಜೀನಾಮೆ ನೀಡಿದರು. ಪ್ರಕರಣದ ದಾಖಲಿಸಿದ 20 ದಿನಗಳ ಬಳಿಕ, ಅದನ್ನು ಸಿಬಿಐಗೆ ಒಪ್ಪಿಸಲಾಯಿತು. 1996ರಲ್ಲಿ ಸಿಬಿಐ ಕೊಚ್ಚಿ ನ್ಯಾಯಾಲಯದ ಮುಂದೆ ಪ್ರಕರಣದ ವರದಿ ಸಲ್ಲಿಸಿತು. ಬೇಹುಗಾರಿಕೆ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪ್ರಕರಣದ ಕಡತ ಮುಚ್ಚುತ್ತಿರುವುದಾಗಿ ತಿಳಿಸಿತು. ಇದನ್ನು ಒಪ್ಪಿಕೊಂಡ ಕೋರ್ಟ್, ಎಲ್ಲ ಆಪಾದಿತರನ್ನೂ ಬಿಡುಗಡೆಗೊಳಿಸಿತು. ನಂಬಿ ನಾರಾಯಣನ್ ಸುಮಾರು 50 ದಿನ ವ್ಯರ್ಥವಾಗಿ ಜೈಲಿನಲ್ಲಿ ಕಳೆದಿದ್ದರು. ಸಾಕ್ಷ್ಯಾಧಾರಗಳಿಲ್ಲದೆ, ವೃತ್ತಿಪರತೆಯಿಲ್ಲದೆ ಬೇಜವಾಬ್ದಾರಿಯಿಂದ ಆರೋಪ ಮಾಡಿದ ಪೊಲೀಸರು ಮತ್ತು ಐಬಿಯನ್ನು ಕೋರ್ಟ್‌ ಕಟುವಾಗಿ ಟೀಕಿಸಿತು.

ಮತ್ತೆ ವಿಚಾರಣೆಯ ಸುಳಿ

1996ರಲ್ಲಿ ಅಧಿಕಾರಕ್ಕೇರಿದ ಸಿಪಿಎಂ ಸರಕಾರ, ಈ ಪ್ರಕರಣದ ಮರುತನಿಖೆಗೆ ಆದೇಶಿಸಿತು. ನಂಬಿ ಮತ್ತಿತರರು ತಡೆಯಾಜ್ಞೆ ತರಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ನಂಬಿ ಸುಪ್ರೀಂ ಕೋರ್ಟ್‌ಗೆ ಹೋದರು. ಅದು ಸರಕಾರದ ಆಜ್ಞೆಯನ್ನು ರದ್ದುಪಡಿಸಿತು. ಇದೇ ವೇಳೆಗೆ, ತನ್ನ ಮೇಲೆ ಸುಳ್ಳು ಆರೋಪ ಹೊರಿಸಿದ ಕೇರಳ ಪೊಲೀಸ್ ಅಧಿಕಾರಿಗಳ ಮೇಲೆ ಮಾನವ ಹಕ್ಕುಗಳ ಆಯೋಗದ ಮುಂದೆ ನಂಬಿ ಒಂದು ಕೋಟಿ ರೂ. ಪರಿಹಾರಕ್ಕಾಗಿ ಮೊಕದ್ದಮೆ ಹೂಡಿದರು. 2001ರಲ್ಲಿ ಆಯೋಗ ಅವರಿಗೆ 10 ಲಕ್ಷ ರೂ.ಗಳ ಮಧ್ಯಂತರ ಪರಿಹಾರ ಆದೇಶಿಸಿತು. 2006ರಲ್ಲಿ ರಾಜ್ಯ ಸರಕಾರ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. 2012ರಲ್ಲಿ ನಂಬಿಯವರ ಪರವಾಗಿ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿಯಿತು. 2013ರಲ್ಲಿ ಕಾಂಗ್ರೆಸ್ ಸರಕಾರ, ಪರಿಹಾರ ನೀಡಲು ನಿರ್ಧರಿಸಿತು.

ಹೋರಾಟ ಕೈಬಿಡದ ವಿಜ್ಞಾನಿ

ಆದರೆ ಸುಳ್ಳು ಕೇಸ್ ಹೇರಿ ತನ್ನ ವಿಶ್ವಾಸಾರ್ಹತೆಗೆ ಧಕ್ಕೆ ತಂದ, ಕೆರಿಯರ್ ಹಾಳುಗೆಡವಿದ ಪೊಲೀಸರಿಗೆ ಪಾಠ ಕಲಿಸುವ ಹೋರಾಟವನ್ನು ನಂಬಿ ಕೈಬಿಡಲಿಲ್ಲ. ಅಧಿಕಾರಿ ಸಿಬಿ ಮ್ಯಾಥ್ಯೂ ಸೇರಿದಂತೆ ಹಲವು ಪೊಲೀಸರ ಮೇಲೆ ಅಪರಾಧ ಶಿಕ್ಷೆ ಮತ್ತು ಶಿಸ್ತು ಕ್ರಮ ಕೋರಿ ಸುಪ್ರೀಂ ಕೋರ್ಟ್‌ಗೆ ಹೋದರು. 2018ರಲ್ಲಿ ಈ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿ, ನಂಬಿ ನಾರಾಯಣನ್‌ಗೆ 50 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಹೇಳಿತು. ಮಾಜಿ ನ್ಯಾಯಮೂರ್ತಿಗಳ ಒಂದು ಸಮಿತಿ ರಚಿಸಿ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸಲು ನಿರ್ದೇಶಿಸಿತು. ನಂಬಿ ಇದನ್ನು ಒಪ್ಪಿಕೊಂಡರಾದರೂ, ಪೊಲೀಸ್ ಅಧಿಕಾರಗಳ ಮೇಲೆ ಸಿಬಿಐ ತನಿಖೆ ನಡೆಸಲು ನಿರ್ದೇಶಿಸುವಂತೆ ಮತ್ತೆ ಕೋರ್ಟ್ ಮೊರೆ ಹೋದರು. 2021ರಲ್ಲಿ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿತು.

ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಹಾಳುಗೆಡಹುವ ಸಂಚು?

ಈ ಪ್ರಕರಣದ ಹಿಂದೆ ಅಮೆರಿಕದ ಬೇಹುಗಾರಿಕೆ ಸಂಸ್ಥೆ ಸಿಐಎಯ ಸಂಚು ಇದೆ ಎಂದು ನಂಬಿ ನಾರಾಯಣನ್ ಆರೋಪಿಸಿದ್ದಾರೆ. ಅವರು ತಮ್ಮ ಆತ್ಮಕತೆಯನ್ನು ‘ಆರ್ಬಿಟ್ ಆಫ್ ಮೆಮೊರೀಸ್’ ಎಂಬ ಹೆಸರಿನಲ್ಲಿ ಬರೆದಿದ್ದು, ಅದರಲ್ಲಿ ಈ ಪ್ರಕರಣದ ಬಗ್ಗೆ ವಿವರವಾಗಿ ಬರೆದಿದ್ದಾರೆ. ಈ ಪ್ರಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತ ಕ್ರಯೊಜೆನಿಕ್ ಎಂಜಿನ್ ತಂತ್ರಜ್ಞಾನವನ್ನು ಹೊಂದಲು ಬಯಸಿತ್ತು. ಆದರೆ ಭಾರತ ಅದನ್ನು ಹೊಂದುವುದು ಅಮೆರಿಕ, ಫ್ರಾನ್ಸ್‌ಗಳಿಗೆ ಇಷ್ಟವಿರಲಿಲ್ಲ. ಹೀಗಾಗಿ ಸಂಚು ರೂಪಿಸಿ ಕ್ರಯೊಜೆನಿಕ್ ಎಂಜಿನ್ ತಂತ್ರಜ್ಞಾನದಲ್ಲಿ ಮುಂದಿದ್ದ ಇಸ್ರೊ ವಿಜ್ಞಾನಿಗಳನ್ನು ಪೊಲೀಸ್ ಕೇಸಿನ ಬಲೆಗೆ ಕೆಡವಲಾಯಿತು.

ಇದರಿಂದಾಗಿ ದೇಶದ ಕ್ರಯೊಜೆನಿಕ್ ರಾಕೆಟ್ ತಂತ್ರಜ್ಞಾನವೇ 15 ವರ್ಷಗಳಷ್ಟು ಹಿಂದೆ ಬಿತ್ತು ಎಂದು ನಂಬಿ ನಾರಾಯಣನ್ ಆರೋಪಿಸಿದ್ದಾರೆ. ಈ ಸಂಚಿನ ಹಿಂದೆ ಯಾವ್ಯಾವ ದೊಡ್ಡ ತಲೆಗಳಿದ್ದವೋ ತಿಳಿಯದು; ಶ್ರೀಕುಮಾರ್‌ ಅವರ ಬಾಯಿ ಬಿಡಿಸಿದರೆ ಗೊತ್ತಾಗಬಹುದು.

ಕ್ರಯೊಜೆನಿಕ್ ಎಂಜಿನ್ ತಂತ್ರಜ್ಞಾನದ ಮೇಧಾವಿ‌

ನಂಬಿ ನಾರಾಯಣನ್ ಅಂತಿಂಥ ವಿಜ್ಞಾನಿಯಲ್ಲ. ಇಂದು ಚಂದ್ರಯಾನ, ಮಂಗಳಯಾನಕ್ಕೆ ಮುಂದಾಗಿರುವ ಇಸ್ರೋದ ರಾಕೆಟ್‌ಗಳಲ್ಲಿ ನಂಬಿ ನಾರಾಯಣನ್ ಅವರು ಅಭಿವೃದ್ಧಿಪಡಿಸಿದ ಕ್ರಯೊಜೆನಿಕ್ ತಂತ್ರಜ್ಞಾನವಿದೆ. ಈ ತಂತ್ರಜ್ಞಾನವನ್ನು ಇಸ್ರೋಗೆ ಅಳವಡಿಸಿದ ಮೊದಲ ತಲೆಮಾರಿನ ವಿಜ್ಞಾನಿಗಳಲ್ಲೊಬ್ಬರು ನಂಬಿ. 1966ರಲ್ಲಿ ಇವರು ಇಸ್ರೊ ಸೇರಿದರು. ಆಗ ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಶೈಶವಾವಸ್ಥೆಯಲ್ಲಿತ್ತು. ಇಸ್ರೊ ಘನ ಇಂಧನಗಳನ್ನಷ್ಟೆ ತನ್ನ ಕಾರ್ಯಕ್ರಮಗಳಿಗೆ ಬಳಸುತ್ತಿತ್ತು. ದ್ರವ ಇಂಧನಗಳು ಹೆಚ್ಚಿನ ಶಕ್ತಿ ಉತ್ಪಾದಿಸುತ್ತಿದ್ದವು. ನಂಬಿ ಅವರ ಹಿರಿಯ ಸಹೋದ್ಯೋಗಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ, ವಿಕ್ರಮ್ ಸಾರಾಭಾಯಿ, ಸತೀಶ್ ಧವನ್ ಮುಂತಾದವರು ದ್ರವ ಇಂಧನದ ಅಗತ್ಯವನ್ನು ಮನಗಂಡು, ಈ ಕ್ಷೇತ್ರದಲ್ಲಿ ಕೆಲಸ ಮಾಡಲು ನಂಬಿಯವರನ್ನು ಹುರಿದುಂಬಿಸಿದ್ದರು. ಸಾರಾಭಾಯಿ ಅವರು ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ನಂಬಿಯವರನ್ನು ಪ್ರಿನ್ಸ್‌ಟನ್ ಯುನಿವರ್ಸಿಟಿಗೂ ಕಳಿಸಿದ್ದರು. ನಂತರ ಫ್ರಾನ್ಸ್‌ನಲ್ಲೂ ನಂಬಿ ನೇತೃತ್ವದ ವಿಜ್ಞಾನಿಗಳ ತಂಡ ಐದು ವರ್ಷ ನೂತನ ತಂತ್ರಜ್ಞಾನ ಕಲಿತು ಬಂದು, ಇಲ್ಲಿ ‘ವಿಕಾಸ್’ ದ್ರವ ಇಂಧನ ತಂತ್ರಜ್ಞಾನ ರೂಪಿಸಿದರು. ಇದಾದ ನಂತರ ನಂಬಿ ಕ್ರಯೊಜೆನಿಕ್ ತಂತ್ರಜ್ಞಾನದಲ್ಲಿ ತೊಡಗಿಕೊಂಡಿದ್ದರು. ಕ್ರಯೊಜೆನಿಕ್ ಎಂದರೆ ಅತ್ಯಂತ ಕಡಿಮೆ ಉಷ್ಣಾಂಶದಲ್ಲಿ ಹೆಚ್ಚಿನ ಶಕ್ತಿ ಉತ್ಪಾದಿಸುವ ತಂತ್ರಜ್ಞಾನ.

ನಂಬಿ ನಾರಾಯಣನ್‌ ಅವರ ಕೊಡುಗೆಗಾಗಿ 2019ರಲ್ಲಿ ಪದ್ಮಭೂಷಣ ಪುರಸ್ಕಾರವನ್ನೂ ಕೇಂದ್ರ ಸರಕಾರ ಅವರಿಗೆ ನೀಡಿ ಗೌರವಿಸಿದೆ.

ಪ್ರಸ್ತುತ ಮಾಧವನ್‌ ಅವರು ಚಿತ್ರದಲ್ಲಿ ನಂಬಿ ಅವರ ಪಾತ್ರವನ್ನು ಮಾಡಿದ್ದಾರೆ. ಸುಳ್ಳು ಕೇಸಿನಿಂದಾಗಿ ಕುಖ್ಯಾತಿ ಗಳಿಸಿದ್ದ, ನಂತರ ದೋಷಮುಕ್ತರಾದ ನಂಬಿ ಹಾಗೂ ಅವರ ಹಿಂದೆ ನಡೆದ ದುಷ್ಟಸಂಚುಗಳ ಬಗ್ಗೆ ಜನತೆಯಲ್ಲಿ ಇನ್ನಷ್ಟು ಅರಿವು ಮೂಡಿಸುವ ಕೆಲಸವನ್ನು ಈ ಫಿಲಂ ಮಾಡುತ್ತಿದೆ. ಮಾಧವನ್‌ ಕಲಿತಿರುವುದು ಎಂಜಿನಿಯರಿಂಗ್‌. ʼʼಮಾಧವನ್‌ ಅವರಿಗೆ ಎಂಜಿನಿಯರಿಂಗ್‌ ವಿಚಾರಗಳು ಚೆನ್ನಾಗಿ ಗೊತ್ತಿವೆ. ನನ್ನ ಕತೆಯನ್ನು ಥಟ್ಟನೆ ಅರ್ಥ ಮಾಡಿಕೊಂಡರು. ಹೀಗಾಗಿ ನಾನು ಅವರಿಗೆ ನನ್ನ ಬಯೋಪಿಕ್‌ ಮಾಡಲು ಅವಕಾಶ ಕೊಟ್ಟೆʼʼ ಎಂದಿದ್ದಾರೆ ನಂಬಿ.

Exit mobile version