ʼʼಭಾರತ ಶ್ರೀಮಂತ ದೇಶ. ಆದರೆ ಇಲ್ಲಿನ ಜನ ಬಡವರುʼʼ ಎಂಬ ಒಂದು ಹೇಳಿಕೆ ಇದೆ. ಇದೊಂದು ಸಾಮಾನ್ಯೀಕೃತ ಹೇಳಿಕೆಯಂತೆ ಕಂಡರೂ ಇದರಲ್ಲಿ ನಿಜವಿದೆ. ಫೋರ್ಬ್ಸ್ ಪಟ್ಟಿಯಲ್ಲಿ ಸದಾ ಭಾರತೀಯ ಕುಬೇರರು ಕಾಣಿಸಿಕೊಂಡರೂ ಬಡತನ ಇಲ್ಲಿ ಹಾಸಿ ಹೊದೆಯುವಷ್ಟಿದೆ ಎಂಬುದನ್ನು ಅನೇಕ ಅಂಕಿ ಅಂಶಗಳು ಸಾರಿ ಹೇಳುತ್ತವೆ.
ಇಲ್ಲಿ ಅನೇಕ ವಿಚಿತ್ರವಾದ ಸಂಗತಿಗಳಿವೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಬಡವರು ಇರುವ ರಾಜ್ಯಗಳು ಉತ್ತರದಲ್ಲಿವೆ. ಶ್ರೀಮಂತ ರಾಜ್ಯಗಳು ದಕ್ಷಿಣದಲ್ಲಿವೆ. ಆದರೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರ ಉತ್ತರದಲ್ಲಿದೆ. ಕುಟುಂಬ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತಂದು ಜನಸಂಖ್ಯೆಯನ್ನು ನಿಯಂತ್ರಿಸಿದ ಕೀರ್ತಿ ದಕ್ಷಿಣ ಭಾರತದ್ದು. ಆದರೆ ಅನಿಯಂತ್ರಿತ ಜನಸಂಖ್ಯೆಯ ಮೂಲಕ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತಕ್ಕೂ ಬೆದರಿಕೆಯಾಗಿ ನಿಲ್ಲುವಂತಿರುವುದು ಉತ್ತರ ಭಾರತದ ರಾಜ್ಯಗಳು!
ಇವುಗಳನ್ನು ಸಾಬೀತುಪಡಿಸುವ ಅಂಕಿ ಅಂಶಗಳು ಹಾಗೂ ವಾಸ್ತವಗಳು ಮುಂದಿವೆ. ಅವುಗಳನ್ನು ನೋಡೋಣ.
ದೇಶದಲ್ಲಿ ಅತಿ ಹೆಚ್ಚು ಬಡವರು ಇರುವುದು ಬಿಹಾರದಲ್ಲಿ- ಅಲ್ಲಿನ ಜನತೆಯಲ್ಲಿ 51.9% ಬಡವರು. ಅದರ ನಂತರದ ಉತ್ತಮದ ಸ್ಥಾನಗಳಲ್ಲಿ ಜಾರ್ಖಂಡ್ (42.2%), ಉತ್ತರಪ್ರದೇಶ (37.8%), ಮಧ್ಯಪ್ರದೇಶ (36.7%), ರಾಜಸ್ಥಾನ (29.5%) ಇವೆ. ಒಡಿಶಾ (29.4%) ಮತ್ತು ಚತ್ತೀಸ್‌ಗಢ (29.9%) ಗಳಲ್ಲಿ ಕೂಡ ಗಣನೀಯ ಸಂಖ್ಯೆಯ ಬಡವರು ಇದ್ದಾರೆ.
ಶ್ರೀಮಂತ ರಾಜ್ಯಗಳಲ್ಲಿ ಮೊದಲಿನ ಸ್ಥಾನದಲ್ಲಿರುವ ಕೇರಳ. ಇಲ್ಲಿನ ಬಡವರ ಪ್ರಮಾಣ 0.7%. ನಂತರದ ಸ್ಥಾನಗಳಲ್ಲಿ ಪುದುಚೇರಿ (1.7%), ಗೋವಾ ಮತ್ತು ಸಿಕ್ಕಿಂ (3.8%), ತಮಿಳುನಾಡು (4.9%), ಪಂಜಾಬ್ (5.6%) ಇವೆ. ದಕ್ಷಿಣ ರಾಜ್ಯಗಳಾದ ಕರ್ನಾಟಕ (13.2%), ಆಂಧ್ರಪ್ರದೇಶ (12.3%), ತೆಲಂಗಾಣ (13.7%), ಮಹಾರಾಷ್ಟ್ರ (14.9%)ಗಳಲ್ಲಿ ಬಡವರ ಪ್ರಮಾಣ ಕಡಿಮೆ.
ಜಮ್ಮು ಕಾಶ್ಮೀರ (12.6%) ಕೂಡ ಬಿಹಾರಕ್ಕೆ ಹೋಲಿಸಿದರೆ ಎಷ್ಟೋ ಉತ್ತಮವಾಗಿದೆ. ಗುಜರಾತ್ (18.6%) ಮತ್ತು ಉತ್ತರಾಖಂಡ (17.7%) ಗಳ ಸನ್ನಿವೇಶ ಹೆಚ್ಚುಕಡಿಮೆ ಸಮಾನವಾಗಿದೆ. ಅಕ್ಕಪಕ್ಕದ ರಾಜ್ಯಗಳಾದ ಕೃಷಿಪ್ರಧಾನ ಹರಿಯಾಣ(12.3%) ಹಾಗೂ ರಾಜಧಾನಿ ದೆಹಲಿ (4.8%) ಗಳ ನಡುವೆ ಗಣನೀಯ ವ್ಯತ್ಯಾಸವಿದೆ. ಪಶ್ಚಿಮ ಬಂಗಾಳದ (21.4%) ಪರಿಸ್ಥಿತಿ ಮಮತಾ ಹೇಳಿಕೊಂಡಷ್ಟೇನೂ ಉತ್ತಮವಾಗಿಲ್ಲ.
ಬಡತನ ಗುರುತಿಸುವುದು ಹೇಗೆ?
ಬಡತನವೆಂದರೇನು? ವ್ಯಕ್ತಿ ಅಥವಾ ಮನೆಯವರು ಮೂಲಭೂತ ಕನಿಷ್ಠ ಜೀವನಮಟ್ಟವನ್ನು ಹೊಂದಲು ಅಗತ್ಯವಾದ ಹಣಕಾಸಿನ ಸಂಪನ್ಮೂಲ ಇಲ್ಲದ ಸ್ಥಿತಿ. ಬಡತನದ ಮಾನದಂಡಗಳನ್ನು ನಿಗದಿಪಡಿಸಿ ಒಂದು ರೇಖೆಯನ್ನೂ ತಜ್ಞರು ನಿಗದಿಪಡಿಸುತ್ತಾರೆ. ಈದಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಬಡತನ ರೇಖೆಯ ಕೆಳಗೆ (bpl) ಇರುವವರು.
ಆರು ಅಧಿಕೃತ ಸಮಿತಿಗಳು ಇದುವರೆಗೆ ಭಾರತದಲ್ಲಿ ಬಡತನದಲ್ಲಿ ವಾಸಿಸುವ ಜನರ ಸಂಖ್ಯೆಯನ್ನು ಅಂದಾಜು ಮಾಡಿವೆ. 1962ರ ಸಮಿತಿ, 1971ರ ವಿ.ಎನ್. ದಾಂಡೇಕರ್ ಮತ್ತು ಎನ್. ರಾತ್ ಸಮಿತಿ, 1979ರ ವೈ.ಕೆ. ಅಲಾಘ್ ಸಮಿತಿ, 1993ರ ಡಿ.ಟಿ. ಲಕ್ಡಾವಾಲಾ ಸಮಿತಿ, 2009ರ ಸುರೇಶ್ ತೆಂಡೂಲ್ಕರ್ ಸಮಿತಿ ಹಾಗೂ 2014ರ ಸಿ. ರಂಗರಾಜನ್ ಸಮಿತಿ.
ಇದನ್ನೂ ಓದಿ: ವಿಸ್ತಾರ Explainer: ಅಬಾರ್ಷನ್- ಎಲ್ಲಿ ಓಕೆ, ಎಲ್ಲಿ ನಾಟ್ ಓಕೆ?
ರಂಗರಾಜನ್ ಸಮಿತಿಯ ವರದಿಯ ಪ್ರಕಾರ ದೇಶದಲ್ಲಿ 36.3 ಕೋಟಿ ಬಡವರು ಇದ್ದಾರೆ. ಅಂದರೆ ಒಟ್ಟಾರೆ ಜನಸಂಖ್ಯೆಯ 29.6 ಶೇಕಡಾ. ಇವರ ಪ್ರಕಾರ ಬಡವ ಎನ್ನಿಸಿಕೊಳ್ಳಬೇಕಾದರೆ ವ್ಯಕ್ತಿಯ ವೆಚ್ಚ ಮಾಡುವ ಶಕ್ತಿ ನಗರದಲ್ಲಿ ₹ 1,407 ಇರಬೇಕು. ಗ್ರಾಮೀಣ ಪ್ರದೇಶದಲ್ಲಿ ₹ 972 ಇರಬೇಕು.
ನಮ್ಮ ಕೊಡುಗೆ ಉತ್ತರದ ಕಡೆಗೆ
ಅಂದರೆ, ಬಡವರ ಸಂಖ್ಯೆ ಹೆಚ್ಚಾದಷ್ಟೂ ರಾಜ್ಯದ ಸಂಪತ್ತು ಕಡಿಮೆಯಾಗುತ್ತದೆ. ಹಾಗೆಯೇ ರಾಜ್ಯ ನೀಡುವ ತೆರಿಗೆಯ ಪ್ರಮಾಣವೂ ಕಡಿಮೆಯಾಗುತ್ತದೆ. ಆದರೆ ನಮ್ಮ ದೇಶದ ಆಡಳಿತ ವ್ಯವಸ್ಥೆ ಒಕ್ಕೂಟದ್ದಾಗಿರುವುದರಿಂದ, ಬಡ ರಾಜ್ಯಗಳ ಮೇಲೂ ಹೆಚ್ಚಿನ ವೆಚ್ಚವನ್ನು ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ ಆಗಿರುತ್ತದೆ. ಹೀಗಾಗಿ, ಶ್ರೀಮಂತ ರಾಜ್ಯಗಳು ಕಟ್ಟಿದ ತೆರಿಗೆ ಹಣ ಬಡ ರಾಜ್ಯಗಳ ಪಾಲಾಗುತ್ತದೆ.
ಈಗ ಯಾವ್ಯಾವ ರಾಜ್ಯದ ತೆರಿಗೆ ಸಂಗ್ರಹ ಹೇಗಿದೆ ಎಂಬುದನ್ನೂ ನೋಡೋಣ.
ತೆರಿಗೆ ಸಂಗ್ರಹದಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಮಹಾರಾಷ್ಟ್ರ (₹20,313 ಕೋಟಿ), ಗುಜರಾತ್ (₹9,321 ಕೋಟಿ) ಹಾಗೂ ಕರ್ನಾಟಕ (₹9,232 ಕೋಟಿ) ಇವೆ. ಆಂಧ್ರಪ್ರದೇಶ (₹3,047 ಕೋಟಿ), ತೆಲಂಗಾಣ (₹3,982 ಕೋಟಿ), ಕೇರಳ (₹2,064 ಕೋಟಿ), ತಮಿಳುನಾಡು (₹ 7,910 ಕೋಟಿ)ಗಳ ಜಿಎಸ್‌ಟಿ ಸಂಗ್ರಹ ಕೂಡ ಉತ್ತಮವಾಗಿದೆ. ಜನಸಂಖ್ಯೆಗೆ ಹೋಲಿಸಿದರೆ ಉತ್ತರದ ರಾಜ್ಯಗಳ ಜಿಎಸ್‌ಟಿ ಆದಾಯ ಕಡಿಮೆ.
ಬಿಹಾರದ ಜನಸಂಖ್ಯೆಗೆ ಹೋಲಿಸಿದರೆ (12.8 ಕೋಟಿ) ಅದರ ತೆರಿಗೆ ಆದಾಯ (1178 ಕೋಟಿ) ಸರಾಸರಿ ಕೇವಲ 97 ರೂ. ಅದೇ ಕರ್ನಾಟಕಕ್ಕೆ (ಜನಸಂಖ್ಯೆ 6.9 ಕೋಟಿ) ಬಂದರೆ ಇಲ್ಲಿನ ಸರಾಸರಿ ತಲಾ ತೆರಿಗೆ ನೀಡುವಿಕೆ 1538 ರೂ.! ಎಂಥ ಅಜಗಜಾಂತರ ಅಲ್ಲವೇ?
ಪಾಲ್ ಮತ್ತು ಶ್ರೀಧರ್ ಎಂಬ ತಜ್ಞರು ವಿವರಿಸಿರುವಂತೆ, ನಾಲ್ಕು ಉತ್ತರದ ರಾಜ್ಯಗಳ ಸರಾಸರಿ ವಾರ್ಷಿಕ ತಲಾ ಆದಾಯ ಸುಮಾರು 3.20 ಲಕ್ಷ ರೂ. ಹಾಗೂ ನಾಲ್ಕು ದಕ್ಷಿಣದ ರಾಜ್ಯಗಳ ತಲಾದಾಯ 8 ಲಕ್ಷ ರೂ.ಗಿಂತ ಹೆಚ್ಚು.
ದಕ್ಷಿಣದ ರಾಜ್ಯಗಳು
ರಾಜ್ಯ | ಜನಸಂಖ್ಯೆ(ಕೋಟಿ) | ಜಿಎಸ್‌ಟಿ(ಕೋಟಿ ರೂ.) | ಸಂಸದರ ಸಂಖ್ಯೆ |
ಕರ್ನಾಟಕ | 6.9 | 9,232 | 28 |
ಕೇರಳ | 3.5 | 2,064 | 20 |
ಆಂಧ್ರಪ್ರದೇಶ | 9.1 | 3,047 | 25 |
ತಮಿಳುನಾಡು | 8.4 | 7,910 | 39 |
ತೆಲಂಗಾಣ | 3.8 | 3,982 | 17 |
ಲೋಕಸಭೆಯಲ್ಲಿ ಯಾರು ಪವರ್‌ಫುಲ್?
ಇನ್ನೀಗ ಆಯಾ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯದ ವಿಷಯಕ್ಕೆ ಬರೋಣ. ಬರಿಯ ಅಂಕಿ ಅಂಶಗಳನ್ನು ನೋಡಿದರೆ ಸಾಕು, ತೆರಿಗೆ ಕೊಡುವವರು ಯಾರು, ಅಧಿಕಾರ ಚಲಾಯಿಸುವವರು ಯಾರು ಎಂಬುದು ಗೊತ್ತಾಗುತ್ತದೆ.
ಬಿಹಾರದಿಂದ ಲೋಕಸಭೆಗೆ ಹೋಗುವ ಸಂಸದರ ಸಂಖ್ಯೆ 40. ಉತ್ತರಪ್ರದೇಶ ಬಲು ದೊಡ್ಡ ರಾಜ್ಯ, ಅಲ್ಲಿಂದ 80 ಸಂಸದರು ಚುನಾಯಿತರಾಗುತ್ತಾರೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದಿಂದ ಕ್ರಮವಾಗಿ 25 ಮತ್ತು 29 ಸಂಸದರು ಹೋಗುತ್ತಾರೆ. ಅಂದರೆ ಬಡ ರಾಜ್ಯಗಳೆನಿಸಿಕೊಂಡ ಉತ್ತರ ಭಾರತದ ಈ ನಾಲ್ಕು ರಾಜ್ಯಗಳ ಪಾಲು ಸಂಸತ್ತಿನ 543ರಲ್ಲಿ 174.
ಉತ್ತರದ ರಾಜ್ಯಗಳು
ರಾಜ್ಯ | ಜನಸಂಖ್ಯೆ (ಕೋಟಿ) | ಜಿಎಸ್‌ಟಿ(ಕೋಟಿ ರೂ.) | ಸಂಸದರ ಸಂಖ್ಯೆ |
ಬಿಹಾರ | 12.8 | 1178 | 40 |
ಉತ್ತರಪ್ರದೇಶ | 23 | 6519 | 80 |
ಮಧ್ಯಪ್ರದೇಶ | 8.5 | 2853 | 29 |
ರಾಜಸ್ಥಾನ | 7.9 | 3469 | 25 |
ದಕ್ಷಿಣದ ರಾಜ್ಯಗಳಾದ ಕರ್ನಾಟಕ 28, ಕೇರಳ 20, ತಮಿಳುನಾಡು 39, ಆಂಧ್ರಪ್ರದೇಶ ಮತ್ತು ತೆಲಂಗಾಣ ಒಟ್ಟಾಗಿ 42 ಸಂಸದರನ್ನು, ಅಂದರೆ ಐದು ರಾಜ್ಯಗಳು ಒಟ್ಟಾಗಿ 127 ಎಂಪಿಗಳನ್ನು ಕಳಿಸುತ್ತವೆ.
ಅಂದರೆ ಸಂಸತ್ತಿನಲ್ಲಿ ಮೇಲಿನ ನಾಲ್ಕು ರಾಜ್ಯಗಳ ಪಾಲು 32%. ಕೆಳಗಿನ ಐದು ರಾಜ್ಯಗಳ ಪಾಲು 23%. ಆದರೆ ಆದಾಯದಲ್ಲಿ ಮೇಲಿನ ನಾಲ್ಕು ರಾಜ್ಯಗಳ ಪಾಲು 3.2% ಮತ್ತು ದಕ್ಷಿಣದ ರಾಜ್ಯಗಳ ಪಾಲು 17%.
ಈ ವೈರುಧ್ಯ ಎದ್ದು ಕಾಣಿಸುತ್ತದೆ ಅಲ್ಲವೇ? ಕಡಿಮೆ ಆದಾಯದ ರಾಜ್ಯಗಳಿಗೆ ಕಡಿಮೆ ಪ್ರಾತಿನಿಧ್ಯ ಇರಬೇಕು, ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಇರಬೇಕು ಎಂದು ನಾವು ವಾದಿಸುವುದರಲ್ಲಿ ಅರ್ಥವಿದೆ. ಆದರೆ ಉತ್ತರದ ರಾಜ್ಯಗಳ ಜನಸಂಖ್ಯೆ ಹೆಚ್ಚು ಇದೆ. ಜನಸಂಖ್ಯಾ ಆಧಾರಿತವಾದ ಲೋಕಸಭಾ ಕ್ಷೇತ್ರಗಳ ಪ್ರಾತಿನಿಧ್ಯದ ಮಾದರಿಯನ್ನು ನಮ್ಮ ಸಂವಿಧಾನ ಹೊಂದಿದೆ. ಹೀಗಾಗಿ ಲೋಕಸಭೆಯಲ್ಲಿ ಸದಾ ಉತ್ತರದ ʻಬಿಮಾರುʼ ರಾಜ್ಯಗಳದೇ ಅಬ್ಬರ. ಅವರದೇ ಆಡಳಿತ.
ಈ ಅನ್ಯಾಯ, ಅಸಮಾನತೆ ಸರಿಹೋಗುವುದು ಎಂದು?
ಇದನ್ನೂ ಓದಿ: World Population Day: ಮುಂದಿನ ವರ್ಷ ಚೀನಾವನ್ನೂ ಮೀರಿಸಲಿದೆ ಭಾರತ