Site icon Vistara News

ವಿಸ್ತಾರ Explainer | ಪ್ರೆಷರ್‌ ಕುಕ್ಕರ್‌ ಬಾಂಬ್‌: ತಯಾರಿ ಸುಲಭ, ಪರಿಣಾಮ ಭೀಕರ

Pressure Cooker bomb-Mumbai Train- Vistara Explainer

ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ಬಹುಶಃ ಭಾರತೀಯರಿಗೆ ಪ್ರೆಷರ್ ಕುಕ್ಕರ್ ಬಾಂಬ್ (Pressure Cooker Bomb) ಎಂದಾಕ್ಷಣ, 2006ರ ಮುಂಬೈ ಟ್ರೈನ್ ಸರಣಿ ಬಾಂಬ್ ಸ್ಫೋಟ ಕಣ್ಣ ಮುಂದೆ ಬರುತ್ತದೆ. ಪ್ರೆಷರ್ ಕುಕ್ಕರ್ ಬಾಂಬ್ ಬಳಸಿಕೊಂಡು ಗರಿಷ್ಠ ಹಾನಿಯನ್ನು ಸೃಷ್ಟಿಸಿದ ವಿಧ್ವಂಸಕ ಘಟನೆ ಅದು. ಅದಕ್ಕೂ ಮೊದಲು ದಿಲ್ಲಿಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಪ್ರೆಷರ್ ಕುಕ್ಕರ್ ಬಳಸಿಕೊಳ್ಳಲಾಗಿತ್ತು. ಆ ನಂತರ ಭಾರತ ಸೇರಿದಂತೆ ಪಾಕಿಸ್ತಾನ, ಅಫಘಾನಿಸ್ತಾನ ಹಾಗೂ ಯುರೋಪ್, ಅಮೆರಿಕ ರಾಷ್ಟ್ರಗಳಲ್ಲಿ ಉಗ್ರರು ಈ ಪ್ರೆಷರ್ ಕುಕ್ಕರ್ ಬಾಂಬ್ ಬಳಸಿದ್ದಾರೆ. ಈಗ ಮಂಗಳೂರಿನಲ್ಲಿ ಸಂಭವಿಸಿದ ಆಟೋ ಸ್ಫೋಟದಲ್ಲೂ ಪ್ರೆಷರ್ ಕುಕ್ಕರ್ ಬಳಕೆಯಾಗಿದೆ. ಇದೊಂದು ಭಯೋತ್ಪಾದನೆ ಕೃತ್ಯ ಎಂದು ಈಗಾಗಲೇ ಪೊಲೀಸರು ನಿರ್ಧಾರಕ್ಕೆ ಬಂದಿದ್ದಾರೆ. ಉಗ್ರ ಕೃತ್ಯಗಳ ತನಿಖೆಯ ಹೊಣೆ ಹೊತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಏಜೆನ್ಸಿ(ಎನ್ಐಎ) ಕೂಡ ಸ್ಥಳಕ್ಕೆ ಬಂದು, ಪರಿಶೀಲನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರೆಷರ್ ಕುಕ್ಕರ್ ಬಾಂಬ್ ಕುರಿತು ವಿಸ್ತಾರ Explainer ಇಲ್ಲಿದೆ.

ಏನಿದು ಪ್ರೆಷರ್ ಕುಕ್ಕರ್ ಬಾಂಬ್?
ಇತ್ತೀಚಿನ ದಶಕಗಳಲ್ಲಿ ಉಗ್ರರು ಕಂಡುಕೊಂಡ ಹೊಸ ಮಾದರಿ ಬಾಂಬ್ ಇದು. ವಾಸ್ತವದಲ್ಲಿ ಅಡುಗೆ ಮನೆಯಲ್ಲಿ ಬಳಕೆಯಾಗುವ ಪ್ರೆಷರ್‌ ಕುಕ್ಕರ್‌ಗಳನ್ನು ಬಳಸಿಕೊಂಡು ಬಾಂಬ್ ತಯಾರಿಸಲಾಗುತ್ತದೆ. ನೆನಪಿಡಿ, ಪ್ರೆಷರ್ ಕುಕ್ಕರ್ ಮಾತ್ರವೇ ಬಾಂಬ್ ಅಲ್ಲ! ಬದಲಿಗೆ ಪ್ರೆಷರ್ ಕುಕ್ಕರ್‌ನಲ್ಲಿ ಸ್ಫೋಟಕ ವಸ್ತುಗಳು, ಮೊಳೆಗಳು, ಬಾಲ್ ಬಿಯರಿಂಗ್ಸ್, ಗನ್ ಪೌಡರ್ ಇತ್ಯಾದಿಗಳನ್ನು ಇಡುತ್ತಾರೆ. ಡಿಜಿಟಲ್ ವಾಚ್, ಗ್ಯಾರೇಜ್ ಡೋರ್ ಓಪನ್, ಸೆಲ್ ಫೋನ್, ಪೇಜರ್, ಕಿಚನ್ ಟೈಮರ್ ಅಥವಾ ಅಲಾರಾಂ ಗಡಿಯಾರಂಥ ಸರಳ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿಕೊಂಡು ಬಾಂಬ್ ಸ್ಫೋಟಿಸಲಾಗುತ್ತದೆ. ಇತರ ಸುಧಾರಿತ ಬಾಂಬ್‌ಗಳನ್ನು ತಯಾರಿಸಲು ಬೇಕಾಗುವಂಥ ತಾಂತ್ರಿಕ ನೈಪುಣ್ಯತೆಯೇನೂ ಬೇಕಾಗಿಲ್ಲ. ಹಾಗೆಯೇ, ಇದನ್ನು ಸ್ಥಳೀಯವಾಗಿ ದೊರೆಯುವ ವಸ್ತುಗಳನ್ನು ಬಳಸಿಕೊಂಡು ಬಾಂಬ್ ತಯಾರಿಸಬಹುದು. ಜತೆಗೆ, ಗರಿಷ್ಠ ಹಾನಿಯನ್ನು ಉಂಟು ಮಾಡಲು ಈ ಪ್ರೆಷರ್ ಕುಕ್ಕರ್‌ಗಳಿಂದ ಸಾಧ್ಯ. ಈ ಕಾರಣಕ್ಕೆ ಉಗ್ರರು ಪ್ರೆಷರ್‌ ಕುಕ್ಕರ್‌ಗಳನ್ನು ಬಳಸಿಕೊಳ್ಳುತ್ತಾರೆ. ಪೈಪ್ ಬಾಂಬ್‌ನಂತೆಯೇ, ಇದು ಕಡಿಮೆ ಸ್ಫೋಟಕಗಳನ್ನು ಬಳಸಿಕೊಂಡು ತುಲನಾತ್ಮಕವಾಗಿ ದೊಡ್ಡ ಸ್ಫೋಟವನ್ನು ಸೃಷ್ಟಿಸುತ್ತದೆ.

1679ರಲ್ಲಿ ಮೊದಲ ಬಾರಿಗೆ ಪ್ರಯೋಗ
21ನೇ ಶತಮಾನದಲ್ಲಿ ಈ ಪ್ರೆಷರ್ ಕುಕ್ಕರ್ ಬಾಂಬ್ ಉಗ್ರರ ಮೆಚ್ಚಿನ ಸಾಧನವಾಗಿದ್ದರೂ, ಇದರ ಮೂಲ 16ನೇ ಶತಮಾನದಲ್ಲಿದೆ. 1679ರಲ್ಲಿ ಫ್ರೆಂಚ್ ಭೌತಶಾಸ್ತ್ರಜ್ಞ ಡೆನಿಸ್ ಪ್ಯಾಪಿನ್ ಅವರು ಮೊದಲಿಗೆ ಈ ಪ್ರೆಷರ್ ಕುಕ್ಕರ್ ಬಾಂಬ್ ಅನ್ವೇಷಿಸಿದರು. ಅವರು ಇದಕ್ಕೆ ಡೈಜೆಸ್ಟರ್ ಎಂದು ಹೆಸರಿಟ್ಟಿದ್ದರು. ಮುಂದೆ ಲಂಡನ್ ರಾಯಲ್ ಸೊಸೈಟಿಯಲ್ಲಿ ಈ ಪ್ರಯೋಗ ನಡೆಸಲಾಯಿತು. ಆಗ, ಪ್ರೆಷರ್ ಕುಕ್ಕರ್ ಸ್ಫೋಟದ ತೀವ್ರತೆಗೆ ಮನುಷ್ಯರ ಮೂಳೆಗಳು ಚೀಸ್‌ನಂತೆ ಮೃದುವಾಗಿದ್ದವಂತೆ! ಸ್ಫೋಟವು ಸಂಭವಿಸಿದಾಗ ಅದನ್ನು ತಡೆಯುವ ಕವಚ ಶಕ್ತಿಶಾಲಿಯಾದಷ್ಟು ಅದರ ಸ್ಫೋಟಕದ ತೀವ್ರತೆ ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ. ಪ್ರೆಷರ್ ಕುಕ್ಕರ್‌ನಲ್ಲೂ ಇದೇ ಪರಿಣಾಮವನ್ನು ಕಾಣಬಹುದು. ಹಾಗಾಗಿ, ಪ್ರೆಷರ್ ಕುಕ್ಕರ್ ಬಾಂಬ್‌ ಸರಳವಾಗಿ ತಯಾರಿಸಿ ಗರಿಷ್ಠ ಹಾನಿಯನ್ನುಂಟು ಮಾಡುವ ಬಾಂಬ್ ಎನ್ನಬಹುದು.

ಮತ್ಯಾವ ಬಾಂಬ್‌ಗಳು?
ಬ್ಯಾರೆಲ್ ಬಾಂಬ್, ಬ್ಲಾಕ್ ಬಸ್ಟರ್ ಬಾಂಬ್, ಬಂಕರ್ ಬಸ್ಟರ್, ಸಿ4, ಕಾರ್ ಬಾಂಬ್, ಕ್ಲಸ್ಟರ್ ಬಾಂಬ್, ಗ್ಲೈಡ್ ಬಾಂಬ್, ಗೈಡೆಡ್ ಬಾಂಬ್, ಸುಧಾರಿತ ಸ್ಫೋಟಕ ಸಾಧನ, ಲ್ಯಾಂಡ್ ಮೈನ್, ಲೇಸರ್ ಗೈಡೆಡ್ ಬಾಂಬ್, ನೇಲ್ ಬಾಂಬ್, ಪೈಪ್ ಬಾಂಬ್, ಸ್ಟಿಂಕ್ ಬಾಂಬ್, ಸೂಟ್ಕೇಸ್ ಬಾಂಬ್, ಥರ್ಮೋಮೆಟ್ರಿಕ್ ಬಾಂಬ್, ಟೈಮ್ ಬಾಂಬ್, ಎಲೆಕ್ಟ್ರೋಮ್ಯಾಗ್ನೆಟಿಕ್ ಬಾಂಬ್ ಇತ್ಯಾದಿ

ಭಾರತದಲ್ಲಿ ಸಂಭವಿಸಿದ ಪ್ರಮುಖ ಪ್ರೆಷರ್ ಕುಕ್ಕರ್ ಸ್ಫೋಟಗಳು
| ದಿಲ್ಲಿ ಸರಣಿ ಸ್ಫೋಟ, 2005:
ದಿಲ್ಲಿಯಲ್ಲಿ 2005ರ ಅಕ್ಟೋಬರ್ 29ರಂದು ಮೂರು ಬಾಂಬ್ ಸ್ಫೋಟಗೊಂಡು ಒಟ್ಟು 62 ಜನರು ಮೃತಪಟ್ಟರು. ಕನಿಷ್ಠ 210ಕ್ಕೂ ಅಧಿಕ ಜನರು ಗಾಯಗೊಂಡರು. ದೀಪಾವಳಿಗೆ ಇನ್ನೆರಡು ದಿನ ಇರುವ ಮುಂಚೆಯೇ ಈ ಸ್ಫೋಟ ಸಂಭವಿಸಿದ್ದು, ಭೀತಿಯ ವಾತಾವರಣಕ್ಕೆ ಕಾರಣವಾಗಿತ್ತು. ಎರಡು ಬಾಂಬ್‌ಗಳು ಸೆಂಟ್ರಲ್ ಮತ್ತು ದಕ್ಷಿಣ ದಿಲ್ಲಿಯಲ್ಲಿ ಸ್ಫೋಟಿಸಿದರೆ, ಮತ್ತೊಂದು ಬಾಂಬ್ ಬಸ್‌ನಲ್ಲಿ ಬ್ಲಾಸ್ಟ್ ಆಗಿತ್ತು. ಈ ಸರಣಿ ಸ್ಫೋಟದ ಹೊಣೆಯನ್ನು ಪಾಕಿಸ್ತಾನದ ಲಷ್ಕರೆ ತಯ್ಬಾ ಹೊತ್ತು ಕೊಂಡಿತ್ತು. ಇಂಡಿಯನ್ ಮುಜಾಹಿದೀನ್ ಕೂಡ ಇದರಲ್ಲಿ ಭಾಗಿಯಾಗಿತ್ತು ಎನ್ನಲಾಗಿದೆ.

| ಮುಂಬೈ ಟ್ರೈನ್ ಸರಣಿ ಸ್ಫೋಟ, 2006: ಭಾರತ ಕಂಡ ಅತ್ಯಂತ ಡೆಡ್ಲಿಯಸ್ಟ್ ಟೆರರ್ ಅಟ್ಯಾಕ್ ಇದು. 2006 ಜುಲೈ 11ರಂದು ಸರಣಿ ಬಾಂಬ್ ಸ್ಫೋಟ ಸಂಭವಿಸಿ 209 ಜನರು ಮೃತಪಟ್ಟು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮುಂಬೈ ಮಹಾನಗರದ ಲೋಕಲ್ ಟ್ರೈನ್‌ನಲ್ಲಿ ಒಟ್ಟು 7 ಪ್ರೆಷರ್ ಕುಕ್ಕರ್ ಬಾಂಬ್‌ಗಳನ್ನು ಇಡಲಾಗಿತ್ತು. 11 ನಿಮಿಷಗಳಲ್ಲಿ ಈ ಎಲ್ಲ ಬಾಂಬ್ ಸ್ಫೋಟಗೊಂಡಿದ್ದವು. ಜುಲೈ 11ರಂದು ಮೊದಲ ಬಾಂಬ್ ಮಧ್ಯಾಹ್ನ 12.54ಕ್ಕೆ ಸ್ಫೋಟಗೊಂಡರೆ, ಮುಂದಿನ 11 ನಿಮಿಷಗಳಲ್ಲಿ ಉಳಿದ ಏಳು ಬಾಂಬ್‌ಗಳು ಪಟಾಕಿಯಂತೆ ಸಿಡಿದಿದ್ದವು. ಮುಂಬೈನ ಸಬ್‌ಅರ್ಬನ್ ರೈಲ್ವೆ ಸ್ಟೇಷನ್‌ಗಳಾದ ಮಾತುಂಗಾ ರೋಡ್, ಮಾಹಿಮ್ ಜಂಕ್ಷನ್, ಬಾಂದ್ರಾ, ಖಾರ್ ರೋಡ್, ಜೋಗೇಶ್ವರಿ, ಭಾಯಿಂದರ್‌ ಮತ್ತು ಬೋರಿವಿಲಿ ಹತ್ತಿರ ಈ ಬಾಂಬ್ ಸ್ಫೋಟಿಸಿದ್ದವು. ಬಹುಶಃ ಇದುವರೆಗೆ ಭಾರತದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್‌ಗಳ ಪೈಕಿ ಮುಂಬೈ ಟ್ರೈನ್ ಸರಣಿ ಬಾಂಬ್ ಸ್ಫೋಟ ಅತ್ಯಂತ ಭೀಕರ ಮತ್ತು ಭಯಾನಕ ಎನಿಸಿಕೊಂಡಿದೆ. ಈ ಬಾಂಬ್ ಸ್ಫೋಟದ ಹಿಂದೆ ಲಷ್ಕರೆ ತಯ್ಬಾ ಸಂಘಟನೆಯ ಕೈವಾಡ ಇತ್ತು.

| ವಾರಾಣಸಿ ಸರಣಿ ಸ್ಫೋಟ, 2006: ಉತ್ತರ ಪ್ರದೇಶದ ವಾರಾಣಸಿಯಲ್ಲಿ 2006 ಮಾರ್ಚ್‌ನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತು. ಇಲ್ಲೂ ಉಗ್ರರು ಪ್ರೆಷರ್ ಕುಕ್ಕರ್ ಬಾಂಬ್‌ಗಳನ್ನು ಬಳಸಿದ್ದರು. ಈ ಘಟನೆಯಲ್ಲಿ ಕನಿಷ್ಠ 28 ಜನರು ಮೃತಪಟ್ಟು ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಸ್ಫೋಟದ ಹೊಣೆಯನ್ನು ಬಾಂಗ್ಲಾದೇಶದ ಮೂಲದ ಹರ್ಕತ್-ಉಲ್-ಜೆಹಾದ್ ಅಲ್-ಇಸ್ಲಾಮಿ ಹೊತ್ತುಕೊಂಡಿತು. ಮಾಸ್ಟರ್ ಮೈಂಡ್ ವಲಿಯುಲ್ಲಾ ಖಾನ್. ಕಳೆದ ಜೂನ್‌ನಲ್ಲಿ ಘಾಜಿಯಾಬಾದ್ ಜಿಲ್ಲಾ ಕೋರ್ಟ್ ಈ ವಲಿಯುಲ್ಲಾ ಖಾನ್‌ಗೆ ಮರಣ ದಂಡನೆ ವಿಧಿಸಿ ಶಿಕ್ಷೆ ನೀಡಿದೆ. ಮುಂಬೈ ಟ್ರೈನ್ ಸರಣಿ ಸ್ಫೋಟದ ಬಳಿಕ ದೇಶ ಕಂಡ ಮತ್ತೊಂದು ಭೀಕರ ಪ್ರೆಷರ್ ಕುಕ್ಕರ್ ಸ್ಫೋಟ ಪ್ರಕರಣವಿದು.

| ಮಲಪ್ಪುರಂ ಸ್ಪೋಟ, 2016: ಇದು 2016ರಲ್ಲಿ ನಡೆದ ಸ್ಫೋಟ. ಕೇರಳದ ಮಲಪ್ಪುರಂ ಜಿಲ್ಲಾ ಆವರಣದಲ್ಲಿ ಕಡಿಮೆ ತೀವ್ರತೆಯ ಪ್ರೆಷರ್ ಕುಕ್ಕರ್ ಬಾಂಬ್ ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲಿ ಯಾರೂ ಗಾಯಗೊಂಡಿರಲಿಲ್ಲ. ಸಾರ್ವಜನಿಕರು ಮತ್ತು ಅಧಿಕಾರಿಗಳಲ್ಲಿ ಭಯ ಹುಟ್ಟಿಸುವುದಕ್ಕಾಗಿ ಈ ಬಾಂಬ್ ಸ್ಫೋಟಿಸಲಾಗಿತ್ತು. ಇದು ಕೂಡ ಉಗ್ರರ ಕೃತ್ಯ ಎಂಬುದು ಬಳಿಕ ತನಿಖೆಯಲ್ಲಿ ಪತ್ತೆಯಾಗಿತ್ತು.

| ಮೈಸೂರು ಸ್ಫೋಟ, 2016: ಮೈಸೂರು ಕೋರ್ಟ್ ಆವರಣದ ಶೌಚಾಲಯದಲ್ಲಿ 2016ರ ಆಗಸ್ಟ್‌ನಲ್ಲಿ ಬಾಂಬ್ ಸ್ಫೋಟವಾಗಿತ್ತು. ಇಲ್ಲೂ ಉಗ್ರರು ಪ್ರೆಷರ್ ಕುಕ್ಕರ್ ಬಳಸಿಕೊಂಡು ಬಾಂಬ್ ಸ್ಫೋಟಿಸಿದ್ದರು. ಈ ಘಟನೆಯಲ್ಲಿ ಶಾಲಾ ಬಾಲಕಿಯೊಬ್ಬಳು ಗಾಯಗೊಂಡಿದ್ದಳು. 2021ರಲ್ಲಿ ಎನ್ಐಎ ಕೋರ್ಟ್ ಈ ಘಟನೆ ಸಂಬಂಧ ತಮಿಳುನಾಡಿನ ಮದುರೈನ ಮೂವರಿಗೆ ಶಿಕ್ಷೆ ವಿಧಿಸಿತ್ತು. ನಯನಾರ್ ಅಬ್ಬಾಸ್ ಅಲಿ ಅಲಿಯಾಸ್ ಲೈಬ್ರರಿ ಅಲಿ, ಶಮ್ಸುನ್ ಕರೀಮ್ ಅಲಿಯಾಸ್ ಅಬ್ದುಲ್ ಕರೀಮ್ ಮತ್ತು ದಾವೂದ್ ಸುಲೈಮಾನ್ ಶಿಕ್ಷೆಗೊಳಗಾದ ಉಗ್ರರು. ಈ ಪೈಕಿ, ಪ್ರಮುಖ ಅಪರಾಧ ನಯನಾರ್ ಅಬ್ಬಾಸ್ ಅಲಿ, ಅಲ್ ಕೈದಾ ರೀತಿಯಲ್ಲೇ ಬೇಸ್ ಮೂವ್‌ಮೆಂಟ್ ಉಗ್ರ ಸಂಘಟನೆ ಹುಟ್ಟುಹಾಕಿದ್ದ. ಬಾಂಬ್ ಸ್ಫೋಟಿಸಿದ ಸ್ಥಳದ ಪಕ್ಕದಲ್ಲೇ ರೈಲು ನಿಲ್ದಾಣವಿದೆ. ಚಾಮರಾಜನಗರ-ತಿರುಪತಿ ಎಕ್ಸ್‌ಪ್ರೆಸ್ ರೈಲಿಗೆ ಗರಿಷ್ಠ ಹಾನಿಯನ್ನುಂಟು ಮಾಡುವ ಉದ್ದೇಶಕ್ಕಾಗಿ ಈ ಬಾಂಬ್ ಪ್ಲಾಂಟ್ ಮಾಡಲಾಗಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿತ್ತು.

ಮೈಸೂರು ಬಾಂಬ್ ಸ್ಫೋಟ, 2016

| ನೇಪಾಳ, 2018: ನೇಪಾಳದ ಭಾರತೀಯ ಕಾನ್ಸುಲೇಟ್ ಕಚೇರಿಯ ಹೊರಗೆ ಪ್ರೆಷರ್ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಭಾರತೀಯ ಕಚೇರಿಯ ಒಂದು ಗೋಡೆಗೆ ತೀವ್ರ ಹಾನಿಯಾಗಿತ್ತು ಎಂದು ನೇಪಾಳ ಪೊಲೀಸರು ತಿಳಿಸಿದ್ದರು.

ವಿದೇಶಗಳಲ್ಲಿ ಪ್ರೆಷರ್ ಕುಕ್ಕರ್ ಬಾಂಬ್
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಉಗ್ರರು ಪ್ರೆಷರ್ ಕುಕ್ಕರ್ ಬಾಂಬ್ ಬಳಸುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿ, ವಿದೇಶಗಳಲ್ಲೂ ಇಂಥ ಬಾಂಬ್ ಸ್ಫೋಟಗಳು ನಡೆದಿವೆ. ಈ ಪೈಕಿ 2010ರಲ್ಲಿ ಅಮೆರಿಕದ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಐಸಿಸ್ ಪ್ರೆಷರ್ ಕುಕ್ಕರ್ ಸ್ಫೋಟಕ್ಕೆ ಯತ್ನಿಸಿತ್ತು. 2016ರಲ್ಲಿ ಸೆಪ್ಟೆಂಬರ್ 17ರಂದು ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ನಲ್ಲಿ ಸಂಭವಿಸಿದ ಪ್ರೆಷರ್ ಕುಕ್ಕರ್ ಬಾಂಬ್ ಸ್ಫೋಟದಲ್ಲಿ 29 ನಾಗರಿಕರು ಗಾಯಗೊಂಡಿದ್ದರು. ಇದೇ ವೇಳೆ ಮತ್ತೊಂದು ಬಾಂಬ್ ಸ್ಫೋಟವಾಗಿರಲಿಲ್ಲ. ಬಾಂಬ್ ಪ್ಲಾಂಟ್ ಮಾಡಿದ್ದ ಉಗ್ರ ಅಹ್ಮದ್ ಖಾನ್ ರಹಾಮಿಯನ್ನು ಎರಡು ದಿನಗಳ ಬಳಿಕ ಬಂಧಿಸಲಾಯಿತು.

2013ರ ಏಪ್ರಿಲ್‌ನಲ್ಲಿ ಸಂಭವಿಸಿದ ಬೋಸ್ಟನ್ ಮ್ಯಾರಥಾನ್ ಸ್ಫೋಟದಲ್ಲಿ ಪ್ರೆಷರ್ ಕುಕ್ಕರ್ ಬಾಂಬ್‌ಗಳನ್ನು ಬಳಸಲಾಗಿತ್ತು. ಮೊಳೆಗಳು, ಬಾಲ್ ಬಿಯರಿಂಗ್ಸ್, ಬ್ಲ್ಯಾಕ್ ಪೌಡರ್ ಸೇರಿದಂತೆ ಇನ್ನಿತರ ಸ್ಫೋಟಕ ವಸ್ತುಗಳನ್ನು ಈ ಪ್ರೆಷರ್ ಕುಕ್ಕರ್‌ನಲ್ಲಿದ್ದವು. ರಿಮೋಟ್ ಬಳಸಿಕೊಂಡು ಈ ಬಾಂಬ್ ಬ್ಲಾಸ್ಟ್ ಆಗಿತ್ತು. ಈ ಪ್ರಕರಣದಲ್ಲಿ ಬಂಧಿತರಾದ ಪೈಕಿ ಒಬ್ಬ, ಇನ್ಸ್‌ಪೈರ್ ಮ್ಯಾಗ್‌ಜಿನ್‌ನಲ್ಲಿ ಪ್ರಕಟವಾದ ಲೇಖನದಿಂದ ಪ್ರೇರಣೆಗೊಂಡು ಪ್ರೆಷರ್ ಕುಕ್ಕರ್ ಬಾಂಬ್ ತಯಾರಿಸಿದ್ದಾಗಿ ಹೇಳಿಕೊಂಡಿದ್ದ. ಅದೇ ರೀತಿ, 2010ರಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಪ್ರೆಷರ್ ಕುಕ್ಕರ್ ಬಾಂಬ್ ಸ್ಫೋಟದಲ್ಲಿ 6 ಜನರು ಮೃತಪಟ್ಟಿದ್ದರು.

ಇದನ್ನೂ ಓದಿ | Mangalore Blast | ಮಂಗಳೂರು ಆಟೋ ಸ್ಫೋಟ ಉಗ್ರಕೃತ್ಯ, ಇದರ ಹಿಂದೆ ದೊಡ್ಡ ಜಾಲವೇ ಇದೆ: ಸಿಎಂ ಬಸವರಾಜ ಬೊಮ್ಮಾಯಿ

Exit mobile version