ಪಂಜಾಬ್ ರಾಜ್ಯ ಬೃಹತ್ ಸಾಲದ ಹೊರೆಯಿಂದ (punjab bankrupt) ತತ್ತರಿಸುತ್ತಿದೆ. ಮೂವರು ಅರ್ಥಶಾಸ್ತ್ರಜ್ಞರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸಾಲ ಪರಿಹಾರ ನಿಧಿ (ಡಿಆರ್‌ಎಫ್) ಸ್ಥಾಪಿಸಲು ಸೂಚಿಸಿದ್ದಾರೆ. ರಾಜ್ಯ ದಿವಾಳಿತನದಿಂದ ಹೊರಬರಲು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ದೇಣಿಗೆ ಮಾಡಬೇಕು ಎಂದು ಕೋರಿದ್ದಾರೆ.
ಖ್ಯಾತ ಅರ್ಥಶಾಸ್ತ್ರಜ್ಞರಾದ ಲಖ್ವಿಂದರ್ ಸಿಂಗ್, ಸುಖ್ವಿಂದರ್ ಸಿಂಗ್ ಮತ್ತು ಕೇಸರ್ ಸಿಂಗ್ ಭಂಗೋ ಈ ಪತ್ರ ಬರೆದಿದ್ದಾರೆ. ಪಂಜಾಬ್‌ನ ಹಣಕಾಸಿನ ಸುಧಾರಣೆಗೆ ಶಿಫಾರಸುಗಳನ್ನು ಒದಗಿಸಲು ಸರ್ಕಾರ ಸಮಿತಿಯನ್ನು ಸ್ಥಾಪಿಸಬೇಕು. ಆರ್ಥಿಕತೆ ಚೇತರಿಸಿಕೊಳ್ಳಲು ಸಮಯವನ್ನು ನೀಡಲು ಸಾಲ ಪಾವತಿಗಳ ಮೇಲೆ ಏಳು ವರ್ಷಗಳ ಕಾಲ ವಿನಾಯಿತಿಯನ್ನುಕೋರಬೇಕು ಎಂದು ಪತ್ರದಲ್ಲಿ ಶಿಫಾರಸು ಮಾಡಿದ್ದಾರೆ. ಇವರಲ್ಲಿ ಲಖ್ವಿಂದರ್ ಸಿಂಗ್ ನವದೆಹಲಿಯ ಮಾನವ ಅಭಿವೃದ್ಧಿ ಸಂಸ್ಥೆ (IHD) ನಲ್ಲಿ ಸಂದರ್ಶಕ ಪ್ರಾಧ್ಯಾಪಕ. ಸುಖ್ವಿಂದರ್ ಸಿಂಗ್ ಚಂಡೀಗಢದ ಪಂಜಾಬ್ ಹಣಕಾಸು ಆಯೋಗದ ಮಾಜಿ ಪ್ರಾಧ್ಯಾಪಕ ಮತ್ತು ಸಲಹೆಗಾರ. ಕೇಸರ್ ಸಿಂಗ್ ಅವರು ಪಂಜಾಬ್ ವಿವಿ ಅರ್ಥಶಾಸ್ತ್ರ ವಿಭಾಗದ ಮಾಜಿ ಪ್ರಾಧ್ಯಾಪಕ.
ಹಾಗಿದ್ದರೆ ಏನಾಗಿದೆ ಪಂಜಾಬ್‌ಗೆ?
ವಿಶ್ಲೇಷಕರ ಪ್ರಕಾರ ಪಂಜಾಬ್ ದುಪ್ಪಟ್ಟು ಸಾಲದ ಬಲೆಯನ್ನು ಹೊತ್ತಿದೆ. ಹಿಂದಿನ ಮೂರು ವರ್ಷಗಳಲ್ಲಿ ಸರಾಸರಿಯಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ 35,201.87 ಕೋಟಿ ರೂ. ಸಾಲ ತಂದಿದೆ. ರೂ. 18,209.8 ಕೋಟಿಗಳ ಬಡ್ಡಿ ಹಾಗೂ ರೂ. 14,257.98 ಕೋಟಿಗಳ ಅಸಲು ಸೇರಿ ಒಟ್ಟು 32,467.78 ಕೋಟಿ ರೂ.ಗಳ ಮೊತ್ತವನ್ನು ಮರುಪಾವತಿಸುತ್ತಿದೆ.
ರಾಜ್ಯ ಸರ್ಕಾರದ ಹಣಕಾಸು ಕಾರ್ಯತಂತ್ರ ನಿಷ್ಕ್ರಿಯವಾಗಿದೆ. ಎರವಲು ಪಡೆದ ನಿಧಿಯ ನಿವ್ವಳ ಲಭ್ಯತೆಯು ರೂ 2,734.09 ಕೋಟಿಗಳಷ್ಟಿದೆ. ಇದು ಒಟ್ಟು ಸಾಲಗಳ ಕೇವಲ 7.8% ಮತ್ತು ಉಳಿದ 92.2% ಸಂಚಿತ ಸಾಲವನ್ನು ಪೂರೈಸಲು ಸಾಕಾಗುತ್ತದೆ. ರಾಜ್ಯವು ತಾಜಾ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂಕಿಅಂಶಗಳ ಪ್ರಕಾರ, ಪಂಜಾಬ್ ವಿವಿಧ ಮೂಲಗಳಿಂದ ಎರವಲು ಪಡೆದ ಮೊತ್ತವು ಅದರ ಒಟ್ಟು ರಾಜ್ಯ ದೇಶೀಯ ಉತ್ಪನ್ನದ (GSDP) 53.3% ರಷ್ಟಿದೆ.
2015-16ರಲ್ಲಿ 22.85% ಮತ್ತು 2016-17ರಲ್ಲಿ 40.80%ರಿಂದ ಪ್ರಾರಂಭವಾಗುವ ಸಾಲದ ಪ್ರಮಾಣ ಈಗ ಹೆಚ್ಚು ಆತಂಕಕಾರಿಯಾಗಿದೆ. ಇದು ನಂತರ ಸ್ಥಿರವಾಗಿ, ಸರಾಸರಿಯಾಗಿ, ವರ್ಷಕ್ಕೆ 9%ಕ್ಕಿಂತಲೂ ಹೆಚ್ಚುತ್ತ ಬಂದಿದೆ. ಪ್ರಸ್ತುತ ಆಡಳಿತವೂ ಹಿಂದಿನ ಆಡಳಿತದಂತೆಯೇ ಸಾಲವನ್ನು ಪಡೆಯುತ್ತಿದೆ. ಅದು ಅಧಿಕಾರ ತೊರೆಯುವವರೆಗೂ ಸಾಲವನ್ನು ಮುಂದುವರಿಸುತ್ತದೆ.
ಯಾಕೆ ಹೀಗಾಯ್ತು?
51 ಲಕ್ಷ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವ ಆಮ್ ಆದ್ಮಿ ಪಕ್ಷದ (ಎಎಪಿ) ಚುನಾವಣಾ ಭರವಸೆಗೆ ನಿಧಿ ನೀಡಲು ವಾರ್ಷಿಕವಾಗಿ 20,240 ಕೋಟಿ ರೂ. ಹೆಚ್ಚಿನ ಹೊರೆಯಾಗುತ್ತಿದೆ. ಈಗಾಗಲೇ ರಾಜ್ಯದ ಮೇಲೆ 3.12 ಲಕ್ಷ ಕೋಟಿ ರೂ.ಗಳಷ್ಟು ಸಾಲದ ಹೊರೆಯಿದೆ. ಹೀಗಾಗಿ ಪಂಜಾಬ್ ಖಜಾನೆ ತೀವ್ರ ಒತ್ತಡದಲ್ಲಿದೆ.
ಅಧಿಕಾರಕ್ಕೆ ಬಂದು 16 ತಿಂಗಳುಗಳಾದರೂ, ಹಣ ಎಲ್ಲಿಂದ ತರುವುದು ಎಂಬ ಚಿಂತೆಯಲ್ಲಿ ಆಪ್ ಸರ್ಕಾರದ (Punjab AAP govt) ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ (Punjab CM Bhagwant Mann) ಸೊರಗಿಹೋಗಿದ್ದಾರೆ. ವಿದ್ಯುತ್, ನೀರು ಮುಂತಾದ ಉಚಿತ ಭಾಗ್ಯಗಳನ್ನು ಪೂರೈಸುವ ಹೊಣೆಗಾರಿಕೆ ಇಡೀ ರಾಜ್ಯವನ್ನು ದಿವಾಳಿಯಂಚಿಗೆ ತಳ್ಳಿದೆ. ಇವುಗಳಿಗಾಗಿ ಇನ್ನಷ್ಟು ಸಾಲದ ಹೊರೆ 2.86 ಲಕ್ಷ ಕೋಟಿ ರೂ.ಗಳನ್ನು ಸೇರಿಸಲಿರುವುದರಿಂದ ಉಚಿತ ಕೊಡುಗೆಗಳು ರಾಜ್ಯದ ಆರ್ಥಿಕ ಆರೋಗ್ಯವನ್ನು ಹಾಳುಮಾಡಲಿವೆ ಎಂದು ಪಂಜಾಬ್‌ನ ಅರ್ಥಶಾಸ್ತ್ರಜ್ಞರು ಭಯಪಟ್ಟಿದ್ದಾರೆ.
ತಜ್ಞರೇನು ಹೇಳುತ್ತಾರೆ?
ಸರ್ಕಾರವು ಅಗತ್ಯ ಮಟ್ಟದ ಆದಾಯವನ್ನು ಹೆಚ್ಚಿಸದೆ ವೆಚ್ಚವನ್ನು ಹೆಚ್ಚಿಸಲಿದೆ. ಈಗ ಇರುವ ಜವಾಬ್ದಾರಿಗಳು, ಸರ್ಕಾರಿ ವಲಯದಲ್ಲಿ ಉದ್ಯೋಗಗಳ ಸೃಷ್ಟಿಯ ಭರವಸೆ, ಪಾವತಿಗಳು ಮತ್ತು ಸಬ್ಸಿಡಿಗಳ ಭರವಸೆ, ಇವೆಲ್ಲ ಅದಕ್ಕೆ ಕೊಡುಗೆ ನೀಡಿವೆ. ಇದೆಲ್ಲ ತಜ್ಞರ ಮಾತು. ಹೆಚ್ಚುತ್ತಿರುವ ಸಾಲದ ಹೊರೆಯನ್ನು ತಕ್ಷಣವೇ ನಿವಾರಿಸಲು ಸರ್ಕಾರ ಬಾಂಡ್‌ಗಳನ್ನು ನೀಡಬಹುದು ಎಂದು ಅರ್ಥಶಾಸ್ತ್ರಜ್ಞರು ಸೂಚಿಸಿದ್ದಾರೆ.
2022–2023ರ ವರ್ಷಕ್ಕೆ ಆದಾಯ ಕೊರತೆಯನ್ನು 12,553.80 ಕೋಟಿ ರೂ. ಎಂದು ಸರ್ಕಾರವೇ ಅಂದಾಜು ಮಾಡಿತ್ತು. ಆದರೆ ಪ್ರಸ್ತುತ ಸರ್ಕಾರದ ಮೊದಲ ಒಂಬತ್ತು ತಿಂಗಳ ಅಧಿಕಾರಾವಧಿಯೇ 15.348.55 ಕೋಟಿ ರೂಪಾಯಿಗಳ ಆದಾಯದ ಕೊರತೆಯನ್ನು ಕಾಣಿಸಿದೆ!
ಜಿಡಿಪಿಯ ಬಹುಪಾಲು ಸಾಲ
ಪಂಜಾಬ್‌ನ ಆರ್ಥಿಕ ಸ್ಥಿತಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹದಗೆಡುತ್ತಿದೆ. ರಾಜ್ಯ ಅತಿ ಹೆಚ್ಚು ಸಾಲ- ಜಿಡಿಪಿ ಅನುಪಾತವನ್ನು ಹೊಂದಿದೆ. ರಾಜ್ಯದ ಬೊಕ್ಕಸದಿಂದಲೂ ಉಚಿತಗಳಿಗಾಗಿ ಹಣ ಸೋರಿಕೆಯಾಗುತ್ತಿದೆ. ಮಾರ್ಚ್ 2023ರ ವೇಳೆಗೆ ಪಂಜಾಬ್‌ನ ಜಿಡಿಪಿಯ ಮೇಲಿನ ಸಾಲದ ಅನುಪಾತ 47.6% ಎಂದು ಊಹಿಸಲಾಗಿದೆ. ಇದು ಈ ವಿಚಾರದಲ್ಲಿ ಎರಡನೇ ಸ್ಥಾನ. ಮೊದಲ ಸ್ಥಾನ ಮಿಜೋರಾಂನದು. ಅದು 53.1% ಸಾಲದ ಅನುಪಾತ ಹೊಂದಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯಗಳು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡಿರುವುದರಿಂದ ಪಂಜಾಬ್‌ನ ಅನುಪಾತವು 2021ರಲ್ಲಿ 48.7% ಮತ್ತು 2022ರಲ್ಲಿ 48.4%ರಿಂದ ಸ್ವಲ್ಪ ಹೆಚ್ಚಾಗಿದೆ.
ತನ್ನ ಮೊದಲ 11 ತಿಂಗಳ ಆಡಳಿತದಲ್ಲಿ ರಾಜ್ಯ ಈಗಾಗಲೇ 35,000 ಕೋಟಿ ರೂ.ಗೂ ಹೆಚ್ಚು ಸಾಲ ಮಾಡಿದೆ. ರೈತರ ಸಾಲವನ್ನು ರದ್ದುಗೊಳಿಸಲು ಸಾಲ ಮರುಪಾವತಿಗಾಗಿ ಪಂಜಾಬ್ ಮಂಡಿ ಮಂಡಳಿಯ ಕಂತು 500 ಕೋಟಿ ರೂ.ಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಮಾಸಿಕ 100 ಕೋಟಿ ರೂಪಾಯಿ ಪಾವತಿ ಮಾಡುವ ರೀತಿಯಲ್ಲಿ ಸಾಲವನ್ನು ಮಾರ್ಪಡಿಸಲು ಮಂಡಿ ಮಂಡಳಿಗೆ ಮನವಿ ಮಾಡಲಾಗಿದೆ.
ಉಚಿತಗಳು ಹಾಕಿದ ಬರೆ
ರಾಜ್ಯದ ವಿದ್ಯುತ್ ಇಲಾಖೆಯೂ ಆರ್ಥಿಕ ಸಂಕಷ್ಟದಲ್ಲಿದೆ. ವಿದ್ಯುತ್ ಸಬ್ಸಿಡಿಗಳ ಭಾರದಿಂದಾಗಿ ಈ ಹಣಕಾಸು ವರ್ಷದಲ್ಲಿ ರಾಜ್ಯದ ಬೊಕ್ಕಸಕ್ಕೆ 22,000 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆಯಿದೆ. ಹಿಂದಿನ ತಿಂಗಳ ಸಂಬಳವನ್ನು ಪಾವತಿಸಲು ಅದು 500 ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆಯಬೇಕಾಗಿತ್ತು. ಸರ್ಕಾರವು ಪ್ರಜೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಅನ್ನು ನೀಡಲಾರಂಭಿಸಿದ ನಂತರ ಪರಿಸ್ಥಿತಿ ಹದಗೆಟ್ಟಿದೆ.
ಇದನ್ನೂ ಓದಿ: Punjab Price hike: ಪಂಜಾಬ್‌ನಲ್ಲಿ ಉಚಿತ ಯೋಜನೆ ಜಾರಿಗೆ ಆಪ್ ಸರ್ಕಾರ ಪರದಾಟ, ಪೆಟ್ರೋಲ್, ಡೀಸೆಲ್ ವ್ಯಾಟ್ ಹೆಚ್ಚಳ
ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ನಿರ್ಧರಿಸಲು ರಾಜ್ಯಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ವಾರ್ಷಿಕ 550 ಕೋಟಿ ರೂಪಾಯಿಗಳನ್ನು ಬೊಕ್ಕಸ ಭರಿಸುತ್ತಿದೆ. ಉಚಿತ ಪ್ರಯಾಣದ ಪ್ಯಾಕೇಜ್ ಹಣ ನೀಡುವಂತೆ ಸಾರಿಗೆ ಇಲಾಖೆ ಆರ್ತನಾದ ಮಾಡುತ್ತಿದ್ದರೂ ಸರ್ಕಾರ ಏನೂ ಮಾಡಲು ಸಾಧ್ಯವಾಗಿಲ್ಲ.
ಮತ್ತೊಂದೆಡೆ, ಆರ್ಥಿಕ ಮುಗ್ಗಟ್ಟಿನ ಮಧ್ಯೆ, ಪಂಜಾಬ್‌ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಬಲ್ಜಿತ್ ಕೌರ್ ಮಹಿಳೆಯರಿಗೆ ತಿಂಗಳಿಗೆ 1,000 ರೂ. ನೀಡುವ ಭರವಸೆ ನೀಡುತ್ತಿದ್ದಾರೆ. ಇದು ಆಮ್ ಆದ್ಮಿ ಪಕ್ಷ ಚುನಾವಣಾ ಸಮಯದಲ್ಲಿ ನೀಡಿದ ಭರವಸೆ. ಇತ್ತೀಚೆಗೆ ರಾಜ್ಯ ಮೂರು ಟೋಲ್ ಪ್ಲಾಜಾಗಳನ್ನು ಮುಚ್ಚಿದೆ. ಅದು ಅಕಾಲಿ-ಬಿಜೆಪಿ ಮೈತ್ರಿಕೂಟದ ವೇಳೆ ಸಾರ್ವಜನಿಕರನ್ನು ಲೂಟಿ ಮಾಡಿದೆ, ಕಾಂಗ್ರೆಸ್ ಕೂಡ ಸಹಕರಿಸಿದೆ ಎಂದು ಸಿಎಂ ಆರೋಪಿಸಿದ್ದಾರೆ. ಟೋಲ್ ಪ್ಲಾಜಾಗಳನ್ನು ಬಂದ್ ಮಾಡುವುದರಿಂದ ಸಾರ್ವಜನಿಕರ ನಿತ್ಯ 10.52 ಲಕ್ಷ ರೂಪಾಯಿ ಉಳಿತಾಯವಾಗಲಿದೆ ಎಂದು ಸಿಎಂ ಹೇಳಿದ್ದಾರೆ. ಆದರೆ ಅಷ್ಟೇ ಪ್ರಮಾಣದ ಆದಾಯ ಸರ್ಕಾರಕ್ಕೆ ಕಡಿಮೆಯಾಗಿದೆ.
ಪಂಜಾಬ್‌ನಲ್ಲಿ ಬಂಡವಾಳ ಹೂಡಿಕೆಗಳು ಸಹ ಬರುತ್ತಿಲ್ಲ. ಹೀಗಾಗಿ ಸಮಸ್ಯೆಗಳು ಮತ್ತಷ್ಟು ಹೆಚ್ಚಿವೆ. ರಾಜ್ಯದಲ್ಲಿ ಸ್ಥಾಪಿಸಲಾದ ಹಲವಾರು ಕೈಗಾರಿಕೆಗಳು ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಹತ್ತಿರದ ರಾಜ್ಯಗಳಿಗೆ ವಲಸೆ ಹೋಗಿವೆ.
ಅತಿಕ್ರಮಣದಾರರಿಂದ ವಶಪಡಿಸಿಕೊಂಡ 9,000 ಎಕರೆ ಸಾರ್ವಜನಿಕ ಭೂಮಿಯನ್ನು ಬಾಡಿಗೆಗೆ ನೀಡುವ ಮೂಲಕ ರಾಜ್ಯ ಆದಾಯವನ್ನು ಗಳಿಸಲಿದೆ ಎಂದು ಸಿಎಂ ಭಗವಂತ್ ಮಾನ್ ಹೇಳಿದ್ದಾರೆ. ಇದು ಸಾಧ್ಯವಾಗುವುದು ಕಷ್ಟ. ಮರಳಿನಿಂದ ರಾಜ್ಯಕ್ಕೆ ಆದಾಯ ಬರಲಿದೆ ಎಂದಿದ್ದಾರೆ. ಅದಕ್ಕೂ ಯಾವುದೇ ಪ್ಲಾನ್ ಇಲ್ಲ. 2022ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಹಣಕಾಸಿನ ಸೂಚಕಗಳಿಗೆ ಸಂಬಂಧಿಸಿದಂತೆ ಸಿಎಜಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯ ತನ್ನ ಆದಾಯದ ಗುರಿಗಳನ್ನು ಪೂರೈಸುವುದು ಕಷ್ಟಕರವಾಗಿದೆ.
ಇದನ್ನೂ ಓದಿ: Punjab Debt: 47,107 ಕೋಟಿ ರೂ. ಸಾಲದ ಪೈಕಿ ಅರ್ಧದಷ್ಟು ಬಡ್ಡಿ ಪಾವತಿಗೆ ಬಳಕೆ ಎಂದ ಪಂಜಾಬ್ ಸಿಎಂ