| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಫೀಲ್ಡ್ ಮಾರ್ಷಲ್ ಎಂಬ ಭಾರತೀಯ ಸೇನಾ ಹುದ್ದೆಯ ಕುರಿತು ಎಲ್ಲರಿಗೂ ಕುತೂಹಲವಿರುತ್ತದೆ. ಫೀಲ್ಡ್ ಮಾರ್ಷಲ್‌ಗಳ ಕುರಿತು ನಾವು ತಿಳಿದಿರಬೇಕಾದ ಒಂದಷ್ಟು ಪ್ರಮುಖ ಮಾಹಿತಿಗಳು ಇಲ್ಲಿವೆ. ಫೀಲ್ಡ್ ಮಾರ್ಷಲ್ ಎನ್ನುವುದು ಭಾರತೀಯ ಸೇನೆಯ ಅತ್ಯಂತ ಉನ್ನತ ಹುದ್ದೆಯಾಗಿದೆ. ಫೀಲ್ಡ್ ಮಾರ್ಷಲ್ ಎನ್ನುವುದು ಭಾರತೀಯ ಸೇನೆಯಲ್ಲಿ ಅತ್ಯುನ್ನತ ಹುದ್ದೆಯಾಗಿದ್ದು, 5 ಸ್ಟಾರ್ ರಾಂಕ್ ಆಗಿದೆ. ಇದು 4 ಸ್ಟಾರ್ ಹೊಂದಿರುವ ಜನರಲ್‌ಗಿಂತಲೂ ಉನ್ನತ ರಾಂಕ್ ಆಗಿದೆ((ವಿಸ್ತಾರ Explainer))
ಫೀಲ್ಡ್ ಮಾರ್ಷಲ್ ಎನ್ನುವುದು ಒಂದು ವಿಧ್ಯುಕ್ತ ರಾಂಕ್ ಆಗಿದೆ. ಫೀಲ್ಡ್ ಮಾರ್ಷಲ್‌ಗೆ ಭಾರತೀಯ ಸೇನೆಯ ದೈನಂದಿನ ಕಾರ್ಯಗಳಲ್ಲಿ ಯಾವುದೇ ಕಾರ್ಯಗಳೂ ಇರುವುದಿಲ್ಲ. ಒಂದು ವೇಳೆ ಫೀಲ್ಡ್ ಮಾರ್ಷಲ್ ಹುದ್ದೆ ಇದ್ದರೂ, ನಾಲ್ಕು ಸ್ಟಾರ್ ಜನರಲ್ ಚೀಫ್ ಆಫ್ ಆರ್ಮಿ ಸ್ಟಾಫ್ (ಸಿಓಎಎಸ್) ಆಗುತ್ತಾರೆ.
ಓರ್ವ ಫೀಲ್ಡ್ ಮಾರ್ಷಲ್ ಯಾವತ್ತೂ ನಿವೃತ್ತರಾಗುವುದಿಲ್ಲ. ಫೀಲ್ಡ್ ಮಾರ್ಷಲ್ ಅವರ ಸಾವಿನ ತನಕವೂ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಎಂದೇ ಪರಿಗಣಿಸಲಾಗುತ್ತದೆ. ಭಾರತೀಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಎನಿಸಿಕೊಳ್ಳಲು ಕೇವಲ ಎರಡು ಮಾರ್ಗಗಳು ಮಾತ್ರವೇ ಇವೆ.
ಅವೆಂದರೆ,
- ಯಾವುದಾದರೂ ಪ್ರಮುಖ ಯುದ್ಧದಲ್ಲಿ ಭಾರತೀಯ ಸೇನೆಯನ್ನು ಗೆಲುವಿನತ್ತ ಮುನ್ನಡೆಸಿ, ಅದರ ಗೌರವಾರ್ಥವಾಗಿ ಫೀಲ್ಡ್ ಮಾರ್ಷಲ್ ರ್ಯಾಂಕ್ ಗಳಿಸುವುದು. ಭಾರತದ ಎಲ್ಲ ಫೀಲ್ಡ್ ಮಾರ್ಷಲ್‌ಗಳ ನೇಮಕವೂ ಈ ಮೂಲಕವೇ ನಡೆದಿತ್ತು. ಸ್ಯಾಮ್ ಮಾಣಿಕ್ ಶಾ ಅವರು 1971ರ ಯುದ್ಧದಲ್ಲಿ ಸೇನೆಯನ್ನು ತನ್ನ ನೇತೃತ್ವದಲ್ಲಿ ಪಾಕಿಸ್ತಾನದ ವಿರುದ್ಧ ಜಯಶಾಲಿಯಾಗಿಸಿದ್ದರು. ಅದಕ್ಕೆ ಪ್ರತಿಯಾಗಿ ಅವರನ್ನು ಫೀಲ್ಡ್ ಮಾರ್ಷಲ್ ಪದವಿಗೆ ನೇಮಿಸಲಾಯಿತು. ಕೆ ಎಂ ಕಾರಿಯಪ್ಪ ಅವರೂ 1947ರ ಯುದ್ಧದಲ್ಲಿ ಇಂತಹ ಜಾದೂ ಪ್ರದರ್ಶಿಸಿದ ಪರಿಣಾಮವಾಗಿ ಫೀಲ್ಡ್ ಮಾರ್ಷಲ್ ಹುದ್ದೆಗೆ ನೇಮಕಗೊಂಡರು.
- ಫೀಲ್ಡ್ ಮಾರ್ಷಲ್ ಆಗಿ ನೇಮಕಗೊಳ್ಳಲು ಇನ್ನೊಂದು ಮಾರ್ಗವೆಂದರೆ ಯುದ್ಧದ ಸಂದರ್ಭದಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಏರುವುದು. ಉದಾಹರಣೆಗೆ ಒಂದು ಯುದ್ಧ ಆರಂಭಗೊಂಡಿದೆ ಎಂದುಕೊಳ್ಳಿ. ಆಗ ಜನರಲ್ ವಯಸ್ಸು ನಿವೃತ್ತಿಯ ಅಂಚಿಗೆ ಬಂದಿರುತ್ತದೆ. ಆ ಪರಿಸ್ಥಿತಿಯಲ್ಲಿ ಏನು ಮಾಡಲು ಸಾಧ್ಯ? ಯುದ್ಧದ ಸಂದರ್ಭದಲ್ಲಿ ಸೇನೆಯ ಅತ್ಯುನ್ನತ ಹುದ್ದೆಯಲ್ಲಿರುವವರನ್ನು ಬದಲಾಯಿಸುವುದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಬಹುದು. ಅದಕ್ಕಿರುವ ಪರಿಹಾರ ಎಂದರೆ, ಜನರಲ್ ಅವರಿಗೆ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡುವುದು. ಯಾಕೆಂದರೆ ಫೀಲ್ಡ್ ಮಾರ್ಷಲ್ ನಿವೃತ್ತರಾಗುವುದಿಲ್ಲ. ಯುದ್ಧ ಮುಗಿದ ಬಳಿಕ ಅವರು ಆಡಳಿತಾತ್ಮಕ ಜವಾಬ್ದಾರಿಗಳನ್ನು ಮುಂದಿನ ಜನರಲ್‌ಗೆ ವರ್ಗಾಯಿಸಬಹುದು. ಆದರೆ ಭಾರತಕ್ಕೆ ಈ ರೀತಿ ಓರ್ವ ಫೀಲ್ಡ್ ಮಾರ್ಷಲ್ ನೇಮಕಗೊಳಿಸುವ ಅವಶ್ಯಕತೆ ಬಂದಿಲ್ಲ.
ಹೇಗೆ ನೇಮಕ?
ಫೀಲ್ಡ್ ಮಾರ್ಷಲ್ ಅನ್ನುವುದು ಜೀವನ ಪರ್ಯಂತ ಇರುವ ಹುದ್ದೆಯಾದ್ದರಿಂದ, ಓರ್ವ ನಿವೃತ್ತ ಅಧಿಕಾರಿ ಫೀಲ್ಡ್ ಮಾರ್ಷಲ್ ಆಗಿ ನೇಮಕಗೊಳ್ಳಲು ಸಾಧ್ಯವಿಲ್ಲ. ಸ್ಯಾಮ್ ಮಾಣಿಕ್ ಶಾ ಅವರು 1973ರಲ್ಲಿ ಅವರು ನಿವೃತ್ತಿಯ ಅಂಚಿಗೆ ಬಂದಾಗ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ಪಡೆದಿದ್ದರು. ಜನರಲ್ ಕಾರಿಯಪ್ಪ ಅವರ ವಿಚಾರದಲ್ಲಿ, ಅವರು ಬಹಳ ಹಿಂದೆಯೇ ಸೇನೆಯಿಂದ ನಿವೃತ್ತಿ ಹೊಂದಿದ್ದರು. ಸೇನಾ ನಿಯಮಗಳ ಪ್ರಕಾರ ಅವರನ್ನು ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಲು ಸಾಧ್ಯವಿರಲಿಲ್ಲ. ಆದರೆ ಭಾರತ ಸರ್ಕಾರ ಈ ನಿಯಮಗಳನ್ನು ಮೀರಿ, ಕಾರಿಯಪ್ಪ ಅವರಿಗೆ ಗೌರವ ನೀಡುವ ಉದ್ದೇಶದಿಂದ ಅವರನ್ನು 1986ರಲ್ಲಿ ಫೀಲ್ಡ್ ಮಾರ್ಷಲ್ ಆಗಿ ನೇಮಿಸಿತು.
ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಫೀಲ್ಡ್ ಮಾರ್ಷಲ್‌ಗೆ ಸರಿಸಮನಾದ ಹುದ್ದೆಗಳೆಂದರೆ ಅಡ್ಮಿರಲ್ ಆಫ್ ದ ಫ್ಲೀಟ್ ಹಾಗೂ ಮಾರ್ಷಲ್ ಆಫ್ ದ ಏರ್ ಫೋರ್ಸ್ ಆಗಿವೆ. ಭಾರತೀಯ ನೌಕಾಪಡೆಯಲ್ಲಿ ಯಾವತ್ತೂ ಅಡ್ಮಿರಲ್ ಆಫ್ ದ ಫ್ಲೀಟ್ ನೇಮಕಾತಿ ನಡೆದೇ ಇಲ್ಲ. ಆದರೆ ಮಾರ್ಷಲ್ ಆಫ್ ದ ಏರ್ ಫೋರ್ಸ್ ಹುದ್ದೆಗೆ ಒಂದು ಬಡ್ತಿ ನೀಡಲಾಗಿದೆ. ಅರ್ಜನ್ ಸಿಂಗ್ ಅವರು ಅವರ ನೇತೃತ್ವದಲ್ಲಿ ಭಾರತೀಯ ವಾಯುಪಡೆಯ ಕಮಾಂಡ್‌ಗೆ 1965ರ ಯುದ್ಧದಲ್ಲಿ ಜಯ ತಂದು ಕೊಟ್ಟ ಪರಿಣಾಮ, ಗೌರವಪೂರ್ವಕವಾಗಿ ಬಡ್ತಿ ನೀಡಲಾಯಿತು.
ಗುರುತಿಸುವುದು ಹೇಗೆ?
ಮಾರ್ಷಲ್ ಅವರನ್ನು ಗುರುತಿಸಲು ಇರುವ ಸೂಕ್ತ ಮಾರ್ಗ ಎಂದರೆ ಅವರ ಬ್ಯಾಟನ್. ಅದನ್ನು ಮಾರ್ಷಲ್ಸ್ ಬ್ಯಾಟನ್ ಎಂದೂ ಕರೆಯಲಾಗುತ್ತದೆ. ಅದು ಒಂದು ಚಿನ್ನದ ಬಾರ್ ಆಗಿದ್ದು, ಅದರ ತಲೆ ಭಾಗದಲ್ಲಿ ಒಂದಷ್ಟು ಅಲಂಕಾರಗಳಿರುತ್ತವೆ. ಮಾರ್ಷಲ್ಸ್ ಬ್ಯಾಟನ್ ಅವರ ಹುದ್ದೆಯ ಗೌರವ ಮತ್ತು ಪ್ರತಿಷ್ಠೆಯನ್ನು ಪ್ರತಿನಿಧಿಸುತ್ತದೆ. ಇನ್ನು ಭೂಸೇನೆಯ ವಿಚಾರಕ್ಕೆ ಬಂದರೆ, ಮಾರ್ಷಲ್ಸ್ ಬ್ಯಾಟನ್ ಎನ್ನುವುದು ಬಂಗಾರದ ಬ್ಯಾಟನ್ ಆಗಿದ್ದು, ಅದರ ಅಲಂಕಾರಿಕ ಶಿರಭಾಗದಲ್ಲಿ ಅಶೋಕ ಸ್ತಂಭ ಇರುತ್ತದೆ.
ಇದನ್ನೂ ಓದಿ | ವಾಯುಪಡೆ ನಿವೃತ್ತ ಪೈಲಟ್ ದಲೀಪ್ ಸಿಂಗ್ಗೆ 102 ವರ್ಷದ ಸಂಭ್ರಮ; ಐಎಎಫ್ನಿಂದ ಶುಭಾಶಯ