ಮುಂಬೈನ 26 ವರ್ಷದ ಯುವತಿ ಶ್ರದ್ಧಾ ವಾಳ್ಕರ್ ಬರ್ಬರ ಕೊಲೆ ಹಾಗೂ ಹತ್ಯೆಗೈದ ಆರೋಪಿ ಬಗ್ಗೆ ಹೊರ ಬರುತ್ತಿರುವ ಮಾಹಿತಿಗಳು ಬೆಚ್ಚಿ ಬೀಳಿಸುತ್ತಿವೆ. ಊಹೆಗೆ ನಿಲುಕದ ರೀತಿಯಲ್ಲಿ ಕೊಲೆ ಮಾಡಿದ ವಿಕ್ಷಿಪ್ತ ಅಫ್ತಾಬ್, ಏನೂ ಆಗೇ ಇಲ್ಲ ಎನ್ನುವಂತೆ ಇದ್ದ. ಗೆಳತಿಯ ಶವವನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಕೊಲೆಪಾತಕಿ, ಮತ್ತೊಬ್ಬ ಯುವತಿಯ ಜತೆ ಅದೇ ಫ್ಲ್ಯಾಟ್‌ನಲ್ಲಿ ಸರಸ-ಸಲ್ಲಾಪವಾಡುತ್ತಿದ್ದ ಎನ್ನುವುದು ಈಗ ಗೊತ್ತಾಗಿರುವ ಹೊಸ ಮಾಹಿತಿ! ಆರೋಪಿ ಅಫ್ತಾಬ್‌ನ ಈ ಕೊಲೆ ಹಾಗೂ ಶವವನ್ನು ವಿಲೇವಾರಿ ಮಾಡುವುದಕ್ಕೆ ಅಮೆರಿಕನ್ ಕ್ರೈಮ್ ಡ್ರಾಮಾ ‘ಡೆಕ್ಸ್‌ಟರ್’ ಶೋ ಪ್ರೇರಣೆಯಾಗಿದೆ ಎಂದು ದಿಲ್ಲಿ ಪೊಲೀಸರು ಹೇಳುತ್ತಿದ್ದಾರೆ. 8 ಸೀಸನ್‌ಗಳಲ್ಲಿ ಪ್ರಸಾರವಾದ 96 ಎಪಿಸೋಡ್‌ಗಳ ಈ ಸೀರೀಸ್, ಅಮೆರಿಕದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಸೆಳೆಯುವಲ್ಲಿ ಸಕ್ಸೆಸ್ ಆಗಿತ್ತು. ಡೆಕ್ಸ್‌ಟರ್ ಹೇಗೆ ಶ್ರದ್ಧಾಳ ಕೊಲೆ ಆರೋಪಿಗೆ ಪ್ರೇರಣೆ ಒದಗಿಸಿತು ಎಂಬ ಬಗ್ಗೆ ವಿಸ್ತಾರ Explainer.
ಏನಿದು ಡೆಕ್ಸ್‌ಟರ್ ಶೋ?
ಇದೊಂದು ಅಮೆರಿಕನ್ ಟೆಲಿವಿಷನ್ ಶೋ. 2006ರಿಂದ 2013ರವರೆಗೆ ಅಮೆರಿಕದಲ್ಲಿ ಪ್ರಸಾರವಾದ ಕ್ರೈಮ್ ಥ್ರಿಲ್ಲರ್ ಧಾರಾವಾಹಿ. ಈವರೆಗೆ ಒಟ್ಟು 8 ಸೀಸನ್‌ಗಳಾಗಿದ್ದು, 96 ಎಪಿಸೋಡ್‌ಗಳು ಪ್ರಸಾರವಾಗಿವೆ. ಈ ಶೋ ನಿರ್ಮಾಪಕರು 8ನೇ ಸೀಸನ್ ಕೊನೆಯ ಸೀಸನ್ ಎಂದು ಮೊದಲೇ ಘೋಷಣೆ ಮಾಡಿದ್ದರು. ಹಾಗಾಗಿ, 2013ರ ಬಳಿಕ ಮತ್ತೆ ಈ ಶೋ ಪ್ರಸಾರ ಕಂಡಿಲ್ಲ. ಡೆಕ್ಸ್‌ಟರ್ ಮಾರ್ಗನ್ ಎಂಬ ಪಾತ್ರ ಸುತ್ತ ಹೆಣೆದ ಕತೆ ಇದು. ನಟ ಮೈಕೆಲ್ ಸಿ ಹಾಲ್ ಅವರು ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಡೆಕ್ಸ್‌ಟರ್, ಅಮೆರಿಕದ ಮಿಯಾಮಿ ಮೆಟ್ರೋ ಪೊಲೀಸ್ ಇಲಾಖೆಯಲ್ಲಿ ಬ್ಲಡ್ ಪ್ಯಾಟರ್ನ್ ವಿಶ್ಲೇಷಕನಾಗಿ ಕೆಲಸ ಮಾಡುತ್ತಿರುತ್ತಾನೆ. ಇದು ಮೇಲ್ನೋಟಕ್ಕೆ ಕಾಣುವ ವ್ಯಕ್ತಿತ್ವವಿದು. ಆದರೆ, ಆತನಿಗೆ ಮತ್ತೊಂದು ವ್ಯಕ್ತಿತ್ವವಿರುತ್ತದೆ; ನ್ಯಾಯಾಂಗ ವ್ಯವಸ್ಥೆಯ ಲೋಪಗಳನ್ನು ಬಳಸಿಕೊಂಡು ಶಿಕ್ಷೆಯಿಂದ ಪಾರಾಗುವ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಕೊಲೆ ಮಾಡುತ್ತಿರುತ್ತಾನೆ. ಹಾಗೆ ಮಾಡಿದ ಕೊಲೆಗಳನ್ನು ಯಾರಿಗೂ ಗೊತ್ತಾಗದಂತೆ ವಿಲೇವಾರಿ ಕೂಡ ಮಾಡುತ್ತಿರುತ್ತಾನೆ.
ಡಬಲ್ ವ್ಯಕ್ತಿತ್ವಕ್ಕೆ ಕಾರಣ ಏನು?
ಡೆಕ್ಸ್‌ಟರ್‌ನ ಈ ಕೊಲೆ ಪ್ರವೃತ್ತಿಗೆ ಕಾರಣವೂ ಇದೆ. ಆತ ಮೂರನೇ ವರ್ಷ ಇದ್ದಾಗ, ಕಣ್ಣ ಮುಂದೆಯೇ ತನ್ನ ತಾಯಿಯನ್ನು ಚೈನ್‌ಸಾ(ಗರಗಸ) ಮೆಷೀನ್‌ನಿಂದ ಕೊಲೆ ಮಾಡಿರುವುದನ್ನು ನೋಡಿರುತ್ತಾನೆ. ಎರಡು ದಿನಗಳ ಕಾಲ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾಳೆ. ಅನಾಥನಾದ ಡೆಕ್ಸ್‌ಟರ್‌ನನ್ನು ಮಿಯಾಮಿ ಪೊಲೀಸ್ ಅಧಿಕಾರಿ ಹ್ಯಾರಿ ಮಾರ್ಗನ್ ಎಂಬುವವರು ಸಾಕುತ್ತಾರೆ. ಈ ಹಂತದಲ್ಲಿ ಡೆಕ್ಸ್‌ಟರ್‌ನಲ್ಲಿರುವ ನರಹತ್ಯೆ ಪ್ರವೃತ್ತಿಯನ್ನು ಗುರುತಿಸುವ ಹ್ಯಾರಿ ಆತನಿಗೆ, ಮುಗ್ಧ ಜನರನ್ನು ಕೊಲ್ಲುವವರನ್ನು ಮಾತ್ರವೇ ಸಾಯಿಸುವ ಮನೋಧರ್ಮವನ್ನು ಬೆಳೆಸುತ್ತಾನೆ. ಮುಂದೆ, ಡೆಕ್ಸ್‌ಟರ್ ಮಿಯಾಮಿ ಪೊಲೀಸ್ ಇಲಾಖೆಯನ್ನು ಸೇರುತ್ತಾನೆ. ಅಲ್ಲಿ ಆತ ಬ್ಲಡ್ ಸ್ಪಾಟರ್ ವಿಶ್ಲೇಷಕನಾಗಿ ಕೆಲಸ ಮಾಡುತ್ತಾನೆ. ಡೆಕ್ಸ್‌ಟರ್ ಮಾಡುವ ಈ ಉದ್ಯೋಗವು, ಆತನು ಮಾಡುವ ಕೊಲೆಗಳನ್ನು ಮರೆ ಮಾಚಲು ನೆರವು ಕೂಡ ಒದಗಿಸುತ್ತದೆ.
ಹೇಗೆ ವಿಲೇವಾರಿ?
ಡೆಕ್ಸ್‌ಟರ್ ಆರಂಭದ ಎಪಿಸೋಡ್‌ಗಳನ್ನು ವೀಕ್ಷಿಸಿದವರಿಗೆ, ಅಫ್ತಾಬ್ ಮಾಡಿರುವ ಕೊಲೆಯ ನಡುವೆ ಇರುವ ಸಾಮ್ಯತೆಯನ್ನು ಪತ್ತೆ ಹಚ್ಚಬಹುದು. ಡೆಕ್ಸ್‌ಟರ್ ಸೀರೀಸ್‌ನಲ್ಲಿ, ಡೆಕ್ಸ್‌ಟರ್ ಮಾರ್ಗನ್ ಕೊಲೆ ಮಾಡಿದ ನಂತರ, ಶವವನ್ನು ಯಾರಿಗೂ ಗೊತ್ತಾಗದ ಹಾಗೇ ವಿಲೇವಾರಿ ಮಾಡುತ್ತಿರುತ್ತಾನೆ. ಈ ಸಂಗತಿಯು ಶ್ರದ್ಧಾಳ ಕೊಲೆ ಆರೋಪಿಗೂ ಪ್ರೇರಣೆ ಒದಗಿಸಿದೆ ಎಂದು ಹೇಳಲಾಗುತ್ತಿದೆ. ಡೆಕ್ಸ್‌ಟರ್, ಕೊಲೆ ಮಾಡಿದ ಬಳಿಕ ಶವವನ್ನು ತುಂಡು ತುಂಡಾಗಿ ಕತ್ತರಿಸುತ್ತಿರುತ್ತಾನೆ ಮತ್ತು ಆ ತುಂಡುಗಳನ್ನು ಜೈವಿಕವಿಘಟನೆ(Biodegradable) ಗಾರ್ಬೇಜ್ ಬ್ಯಾಗುಗಳಲ್ಲಿ ಹಾಕುತ್ತಿರುತ್ತಾನೆ. ಕೊಲೆ ಮಾಡಿದ ಸಾಕ್ಷ್ಯಗಳು ಇಲ್ಲದಂತೆ ಮಾಡಲು, ಕೋಣೆಯಲ್ಲಿರುವ ಪ್ಲಾಸ್ಟಿಕ್ ಶೀಟಿಂಗ್ ತೆಗೆಯುತ್ತಿರುತ್ತಾನೆ. ಶವದ ತುಂಡುಗಳು ಇರುವ ಬ್ಯಾಗುಗಳನ್ನು ತನ್ನ ಕಾರಿಗೆ ಹಾಕಿಕೊಂಡು ಹಡಗುಕಟ್ಟೆಯವರೆಗೆ ಹೋಗಿ, ಅಲ್ಲಿಂದ ದೋಣಿಯಲ್ಲಿ ಸಾಗಿ, ತುಂಡುಗಳಿರುವ ಬ್ಯಾಗುಗಳನ್ನು ಸಮುದ್ರದ ಕಂದಕ(Oceanic trench)ದಲ್ಲಿ ವಿಲೇವಾರಿ ಮಾಡುತ್ತಿರುತ್ತಾನೆ!
ಶ್ರದ್ಧಾಳ ಕೊಲೆಗಾರ ಮಾಡಿದ್ದೇನು?
ಡೆಕ್ಸ್‌ಟರ್ ಹೇಗೆ ತಾನು ಮಾಡಿದ ಕೊಲೆಯ ಶವವನ್ನು ವಿಲೇವಾರಿ ಮಾಡುತ್ತಾನೋ ಅದೇ ರೀತಿ, ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ, ಕಾಡಿನಲ್ಲಿ ವಿಲೇವಾರಿ ಮಾಡಿದ್ದಾನೆ ಆರೋಪಿ, ಅಫ್ತಾಬ್ ಅಮೀನ್ ಪೂನಾವಾಲ. ಈ ಪ್ರಕರಣದಲ್ಲಿ ಶ್ರದ್ದಾಳನ್ನು ಕೊಲ್ಲಬೇಕು ಎಂಬ ನಿರ್ಧರಿಸಿದ ಆರೋಪಿ ಅಫ್ತಾಬ್, ಅಗತ್ಯವಿರುವ ಎಲ್ಲವನ್ನು ಪ್ಲ್ಯಾನ್ ಮಾಡಿಕೊಂಡೇ ಹೀನ ಕೃತ್ಯ ಎಸಗಿದ್ದಾನೆ. ಶ್ರದ್ಧಾಳ ಕೊಲೆಗೂ ಮುಂಚೆ, ಚೈನ್‌ಸಾ(ಗರಗಸ) ಮಷೀನ್ ಹಾಗೂ 300 ಲೀಟರ್ ಸಾಮರ್ಥ್ಯದ ಫ್ರಿಡ್ಜ್ ಖರೀದಿಸುತ್ತಾನೆ. ಎಲ್ಲವೂ ರೆಡಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವ ಅಫ್ತಾಬ್ ಮೇ 20ರಂದು ಶ್ರದ್ಧಾಳನ್ನು ಕೊಲೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸುತ್ತಾನೆ. ಆ ತುಂಡುಗಳನ್ನು ಫ್ರಿಡ್ಜ್‌ನಲ್ಲಿಡುತ್ತಾನೆ.
ಮಾಂಸ ಕತ್ತರಿಸುವ ಟ್ರೈನಿಂಗ್
ಹೀನ ಕೃತ್ಯ ಎಸಗಿರುವ ಆರೋಪಿ ಅಫ್ತಾಬ್ ಹೊಟೇಲ್ ಮ್ಯಾನೇಜ್‌ಮೆಂಟ್ ಓದಿದ್ದಾನೆ. ಅಲ್ಲದೇ ಆತ ಕೆಲವು ವರ್ಷಗಳ ಹಿಂದೆ ಷೆಪ್ ಆಗಿಯೂ ಕೆಲಸ ಮಾಡಿದ್ದ. ಈ ಸಂದರ್ಭದಲ್ಲಿ ಎರಡು ವಾರ ಆತ ಮಾಂಸ ಕತ್ತರಿಸುವ ಟ್ರೈನಿಂಗ್ ಕೂಡ ಪಡೆದುಕೊಂಡಿದ್ದ. ಮಾಂಸವನ್ನು ಕತ್ತರಿಸುವ ಮಾದರಿಯಲ್ಲೇ ಗೆಳತಿ ಶ್ರದ್ಧಾ ವಾಳ್ಕರ್ ದೇಹವನ್ನು ಆತ ಕತ್ತರಿಸಿದ್ದಾನೆಂಬುದು ಪೊಲೀಸರ ಹೇಳಿಕೆಯಾಗಿದೆ. ಶ್ರದ್ಧಾಳ ದೇಹವನ್ನು ಸತತ ಎರಡು ದಿನ ಕಾಲ ಆತ ತುಂಡರಿಸಿದ್ದಾನೆ ಎನ್ನುತ್ತಾರೆ ಪೊಲೀಸರು.
ರಾತ್ರಿ 2 ಗಂಟೆಗೆ ಹೋಗಿ ಎಸೆಯುತ್ತಿದ್ದ!
ಆರೋಪಿ ಅಫ್ತಾಬ್, ಶ್ರದ್ಧಾಳ ದೇಹವನ್ನು 35 ಭಾಗಗಳಾಗಿ ಕತ್ತರಿಸಿದ್ದ. ಫ್ರಿಡ್ಜ್‌ನ ಡೀಪ್ ಫ್ರಿಜರ್‌ನಲ್ಲಿ ತುಂಡರಿಸಿದ ಭಾಗಗಳನ್ನು ಇಟ್ಟಿದ್ದ. ಉಳಿದವುಗಳ್ನು ಫ್ರಿಡ್ಜ್‌ನ ಕೆಳ ಭಾಗದ ಟ್ರೇನಲ್ಲಿ ಇಡುತ್ತಿದ್ದ. ದುರ್ನಾತ ಬಾರದಂತೆ ತಡೆಯಲು ಅಗರಬತ್ತಿ ಮತ್ತು ರೂಮ್ ಫ್ರೆಶ್‌ನರ್‌ಗಳನ್ನು ಬಳಸುತ್ತಿದ್ದ. ಹೀಗೆ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ದೇಹದ ತುಂಡುಗಳನ್ನು ಹೊರ ತೆಗೆದು, ಪಾಲಿಥೀನ್ ಬ್ಯಾಗುಗಳಲ್ಲಿ ಹಾಕಿ ಸೀಲ್ ಮಾಡುತ್ತಿದ್ದ. ಬಳಿಕ ಈ ಬ್ಯಾಗುಗಳನ್ನು ಬ್ಯಾಕ್ ಪ್ಯಾಕ್‌ಗೆ ಹಾಕಿಕೊಂಡು, ಮಧ್ಯ ರಾತ್ರಿ 2 ಗಂಟೆಗೆ ಹತ್ತಿರದ ಕಾಡಿಗೆ ಹೋಗುತ್ತಿದ್ದ ಮತ್ತು ದೇಹದ ಭಾಗಗಳನ್ನು ಕಾಡಿನಲ್ಲಿ ಎಸೆಯುತ್ತಿದ್ದ. ಎರಡು ತಾಸು ಆಗುವಷ್ಟರಲ್ಲಿ ಫ್ಲ್ಯಾಟಿಗೆ ವಾಪಸ್ಸಾಗುತ್ತಿದ್ದ. ಹೀಗೆ ಆತ ಸುಮಾರು 20 ದಿನಗಳ ಕಾಲ ಇಡೀ ದೇಹವನ್ನು ಕಾಡಿನಲ್ಲಿ ವಿಲೇವಾರಿ ಮಾಡಿದ್ದಾನೆ ಎನ್ನುತ್ತಾರೆ ಪೊಲೀಸರು.
ಕ್ರೈಮ್‌ಗಳಿಗೆ ಪ್ರೇರಣೆ ಒದಗಿಸುವ ಸಿನಿಮಾ, ಶೋ
ವಾಸ್ತವದಲ್ಲಿ ಯಾವುದೇ ಕ್ರೈಮ್ ಥ್ರಿಲ್ಲರ್ ಸಿನಿಮಾ ಆಗಲೀ, ಟಿವಿ ಶೋಗಳಾಗಲಿ ನಿಜ ಜೀವನದಲ್ಲಿ ನಡೆದ ಭೀಕರ ಕೊಲೆಗಳನ್ನು ಆಧರಿಸಿ ತಯಾರಾಗಿರುತ್ತವೆ. ಆದರೆ, ಶ್ರದ್ಧಾಳ ಕೊಲೆ ಕೇಸಿನಲ್ಲಿ ಉಲ್ಟಾ ಆಗಿದೆ. ಕಾಲ್ಪನಿಕ ಕತೆಯೊಂದರಲ್ಲಿ ನಡೆಯುವ ರೀತಿಯಲ್ಲೇ ನಿಜ ಜೀವನದಲ್ಲಿ ಹತ್ಯೆ ಮಾಡಿ, ಶವವನ್ನು ವಿಲೇವಾರಿ ಮಾಡಲಾಗಿದೆ ಎಂಬುದನ್ನು ಗಮನಿಸಬೇಕಾದ ಸಂಗತಿಯಾಗಿದೆ. ಡೆಕ್ಸ್‌ಟರ್ ಮಾತ್ರವಲ್ಲ, ಅನೇಕ ಸಿನಿಮಾಗಳು, ಟಿವಿ ಧಾರಾವಾಹಿಗಳು ಕೊಲೆ, ದರೋಡೆ, ಸುಲಿಗೆ ಸೇರಿದಂತೆ ನಾನಾ ಅಪರಾಧ ಚಟುವಟಿಕೆಗಳಿಗೆ ಪ್ರೇರಣೆ ಒದಗಿಸುವುದು ಹೊಸದೇನಲ್ಲ. ಈ ಹಿಂದೆ ದೃಶ್ಯಂ ಚಿತ್ರವೂ ಕೊಲೆ ಅಪರಾಧಕ್ಕೆ ಪ್ರೇರಣೆಯಾಗಿರುವುದನ್ನು ನಾವೆಲ್ಲ ಓದಿದ್ದೇವೆ. ಶಾರುಕ್ ಅಭಿನಯದ ಡರ್, ಅಕ್ಷಯ್ ಕುಮಾರ್ ಅಭಿನಯದ ಸ್ಪೇಷಲ್ 26, ಬಂಟಿ ಔರ್ ಬಬ್ಲೀ ಇತ್ಯಾದಿ ಸಿನಿಮಾಗಳನ್ನು ಹೆಸರಿಸಬಹುದು.
ಇದನ್ನೂ ಓದಿ | Delhi Crime | ಶ್ರದ್ಧಾಳ ಶವದ ತುಂಡು ಫ್ರಿಜ್‌ನಲ್ಲಿರುವಾಗಲೇ ಕೋಣೆಯಲ್ಲಿ ಮತ್ತೊಬ್ಬ ಹುಡುಗಿ ಜತೆ ಅಫ್ತಾಬ್ ರೋಮ್ಹಾನ್ಸ್!