Site icon Vistara News

ವಿಸ್ತಾರ Explainer | population of India: ಭಾರತದಲ್ಲಿ ಮುಂದಿನ ನೂರು ಮಕ್ಕಳು ಹುಟ್ಟೋದೆಲ್ಲಿ? ಅದರಿಂದೇನು?

population

ವಿಶ್ವಸಂಸ್ಥೆಯೇ ಲೆಕ್ಕಹಾಕಿ ಹೇಳಿರುವ ಪ್ರಕಾರ, 2023ರಲ್ಲಿ ಚೀನಾವನ್ನೂ ಹಿಂದಿಕ್ಕಿ ಭಾರತ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯ ದೇಶ ಎನಿಸಲಿದೆ. ಈ ವರ್ಷ ಭಾರತದ ಅಂದಾಜು ಜನಸಂಖ್ಯೆ 141.2 ಕೋಟಿ ಆಗಿದ್ದು, ಚೀನಾದಲ್ಲಿ ಅದು 142.6 ಕೋಟಿ ಇದೆ. ಅದಕ್ಕಿಂತ ಕುತೂಹಲಕಾರಿ ಸಂಗತಿ ಒಂದನ್ನು ನೋಡೋಣ. ಭಾರತದಲ್ಲಿ ಪ್ರಸ್ತುತ ವರ್ತಮಾನದಲ್ಲಿ ಹುಟ್ಟುತ್ತಿರುವ ಸರಾಸರಿ ನೂರು ಮಕ್ಕಳಲ್ಲಿ, ಯಾವ ರಾಜ್ಯದ ಮಕ್ಕಳ ಪಾಲು ಎಷ್ಟು ಎಂಬುದು ನಿಮಗೆ ಗೊತ್ತೆ?

ಪ್ರತಿ 2 ನಿಮಿಷಕ್ಕೆ 100 ಶಿಶುಗಳು!

ಗೊತ್ತಿಲ್ಲದಿದ್ದರೆ, ನಮ್ಮ ಆಧಾರ್‌ ಪ್ರಾಧಿಕಾರ ಒದಗಿಸಿರುವ ಅಂಕಿ ಅಂಶಗಳನ್ನು ನೋಡೋಣ. ಅದರ ಪ್ರಕಾರ, ದೇಶದಲ್ಲಿ ಇಂದು ಪ್ರತಿ 2 ನಿಮಿಷಕ್ಕೆ 100 ಮಕ್ಕಳು ಜನಿಸುತ್ತಿದ್ದಾರೆ. ಈ ನೂರು ಮಕ್ಕಳಲ್ಲಿ 34 ಮಕ್ಕಳು ಉತ್ತರಪ್ರದೇಶ ಹಾಗೂ ಬಿಹಾರ ಎರಡೇ ರಾಜ್ಯಗಳಲ್ಲಿ ಹುಟ್ಟುತ್ತಿವೆ! ಉತ್ತರದ ನಾಲ್ಕು ರಾಜ್ಯಗಳಲ್ಲಿ ಈ ನೂರ ಮಕ್ಕಳಲ್ಲಿ ಅರ್ಧ ಭಾಗ, ಅಂದರೆ 50 ಮಕ್ಕಳು ಜನಿಸುತ್ತಿವೆ!

ಪ್ರತೀ ರಾಜ್ಯಗಳ ವಿವರ ಹೀಗಿದೆ- ಉತ್ತರಪ್ರದೇಶ 22, ಬಿಹಾರ 12, ಮಧ್ಯಪ್ರದೇಶ 8, ರಾಜಸ್ಥಾನ 7, ಮಹಾರಾಷ್ಟ್ರ 7, ಪಶ್ಚಿಮ ಬಂಗಾಳ 5, ಗುಜರಾತ್‌ 5, ಕರ್ನಾಟಕ 4, ತಮಿಳುನಾಡು 4, ಆಂಧ್ರಪ್ರದೇಶ 3, ತೆಲಂಗಾಣ 3, ಒಡಿಶಾ 3, ಹರಿಯಾಣ ಪಂಜಾಬ್‌ ತಲಾ 2, ಇತರ ರಾಜ್ಯಗಳು ಒಂದು ಅಥವಾ ಒಂದಕ್ಕಿಂತಲೂ ಕಡಿಮೆ.

ಇದು ಏಕೆ ಹೀಗೆ ಎಂಬುದಕ್ಕೆ ಹೆಚ್ಚು ಕಾರಣಗಳನ್ನು ಹುಡುಕಬೇಕಿಲ್ಲ. ದಶಕಗಳಿಂದಲೂ ದಕ್ಷಿಣದ ರಾಜ್ಯಗಳು ಕುಟುಂಬ ಕಲ್ಯಾಣ ಯೋಜನೆಯನ್ನು ಭಕ್ತಿಯಿಂದ ಪಾಲಿಸುತ್ತ ಬಂದಿವೆ. ಇಲ್ಲಿ ಶೈಕ್ಷಣಿಕ ಅರಿವು ಕೂಡ ಹೆಚ್ಚು. ಉತ್ತರದ ರಾಜ್ಯಗಳು, ಮುಖ್ಯವಾಗಿ ʻಬಿಮಾರುʼ (ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ) ರಾಜ್ಯಗಳು ಕುಟುಂಬ ಕಲ್ಯಾಣವನ್ನೂ ಅಳವಡಿಸಿಕೊಂಡಿಲ್ಲ. ಇಲ್ಲಿ ಶಿಕ್ಷಣವೂ ಸಾಕಷ್ಟಿಲ್ಲ. ಸಾಕ್ಷರತೆ ಪ್ರಮಾಣ ಕಡಿಮೆ. ಹೀಗಾಗಿ ಸಂಸಾರ ದೊಡ್ಡದು, ಆದಾಯ ಕಡಿಮೆ, ಬಡತನ ಹೆಚ್ಚು. ಬಡತನ ಇನ್ನಷ್ಟು ಶೈಕ್ಷಣಿಕ ಹಿಂದುಳಿಯುವಿಕೆಗೂ ಮತ್ತಷ್ಟು ಮಕ್ಕಳಿಗೂ ಕಾರಣವಾಗುತ್ತದೆ.

ಹೀಗಾಗಿ ಇಂದು ಭಾರತ ಜನಸಂಖ್ಯೆಯ ವಿಷಯದಲ್ಲಿ ಅಸಮತೋಲಿತ ದೇಶ. ಪ್ರತಿ ಎರಡು ನಿಮಿಷದಲ್ಲಿ ಐವತ್ತು ಮಕ್ಕಳು ಉತ್ತರದ ನಾಲ್ಕು ರಾಜ್ಯಗಳಲ್ಲಿ, ಇನ್ನು ಐವತ್ತು ಮಕ್ಕಳು ಇತರ 24 ರಾಜ್ಯಗಳಲ್ಲಿ ಜನಿಸುತ್ತಾರೆ ಎಂದರೆ ಎಷ್ಟು ಅಸಮತೋಲಿತ ಬೆಳವಣಿಗೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಉದ್ಯೋಗಕ್ಕಾಗಿ ಭಾರಿ ವಲಸೆ

ಇದರಿಂದ ಏನಾಗುತ್ತದೆ ಎಂಬುದನ್ನು ತಿಳಿಯಲು ಭಾರತದಲ್ಲಿ ಬಡತನ ಹಾಗೂ ಉದ್ಯೋಗಕ್ಕಾಗಿ ವಲಸೆ ಹೇಗಿದೆ ಎಂಬುದನ್ನು ತಿಳಿಯಬೇಕು.

2016ರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದಕ್ಷಿಣದ ರಾಜ್ಯಗಳು, ವಿಶೇಷವಾಗಿ ತಮಿಳುನಾಡು ಮತ್ತು ಕೇರಳ, ವಲಸಿಗರ ಜನಸಂಖ್ಯೆಯಲ್ಲಿ ಹೆಚ್ಚಿನ ಹೆಚ್ಚಳ ಆಗಿದೆ. ಭಾರತದಲ್ಲಿ 45.36 ಕೋಟಿ ವಲಸಿಗರು ನಾನಾ ಕಾರಣಗಳಿಗಾಗಿ ವಲಸೆ ಹೋಗುತ್ತಾರೆ. ಭಾರತದ 121.03 ಕೋಟಿ ಜನಸಂಖ್ಯೆಯಲ್ಲಿ ವಲಸಿಗರು ಶೇ.37.8ರಷ್ಟಿದ್ದಾರೆ. 2006- 2016ರ ನಡುವೆ ಭಾರತದಲ್ಲಿ ಒಟ್ಟು ವಲಸಿಗರ ಸಂಖ್ಯೆ 44.35 ಪ್ರತಿಶತದಷ್ಟು ಹೆಚ್ಚಾಯಿತು. ತಮಿಳುನಾಡಿನ ವಲಸಿಗ ಜನಸಂಖ್ಯೆ 2011ರಲ್ಲಿ 3.13 ಕೋಟಿಗೆ (98 ಶೇಕಡಾ ಏರಿಕೆ) ಏರಿದೆ. ವಲಸಿಗರೇ ರಾಜ್ಯದ ಜನಸಂಖ್ಯೆಯ ಶೇಕಡಾ 43.4ರಷ್ಟಿದ್ದಾರೆ. ಕೇರಳದ ವಲಸೆ ಜನಸಂಖ್ಯೆ ಶೇಕಡಾ 77ರಷ್ಟು ಹೆಚ್ಚಾಗಿದೆ. ಜನಸಂಖ್ಯೆಯ ಸುಮಾರು 49 ಪ್ರತಿಶತ ಜನರು ಇಲ್ಲಿ ವಲಸಿಗರು.

ಕರ್ನಾಟಕವೂ ತನ್ನ ವಲಸೆ ಜನಸಂಖ್ಯೆಯಲ್ಲಿ 50 ಪ್ರತಿಶತ ಹೆಚ್ಚಳವನ್ನು ತೋರಿಸಿದೆ. 1.66 ಕೋಟಿಯಿಂದ 2.50 ಕೋಟಿಗೆ ಏರಿದೆ. ವಲಸಿಗ ಜನಸಂಖ್ಯೆಯಲ್ಲಿ ಶೇಕಡಾ 40ರಷ್ಟು ಏರಿಕೆಯಾಗಿದೆ. ಆಂಧ್ರಪ್ರದೇಶದ ಅಂಕಿಅಂಶವೂ ಹೀಗೇ ಇದೆ.

ಇದನ್ನೂ ಓದಿ | ವಿಸ್ತಾರ Explainer | ರಕ್ಕಮ್ಮ ಜಾಕ್ವೆಲಿನ್‌ ವಂಚಕ ಸುಕೇಶ್‌ ಕೈಯಲ್ಲಿ ರೊಕ್ಕಮ್ಮ ಆಗಿದ್ದು ಹೇಗೆ?

ಇವರು ಎಲ್ಲಿಂದ ಬಂದರು? ಎಲ್ಲರೂ ಬಂದುದು ಉತ್ತರದ ರಾಜ್ಯಗಳಿಂದ. ಇದರಲ್ಲಿ ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ಜನರ ಪಾಲೂ ಸಾಕಷ್ಟಿದೆ. ಇಲ್ಲಿನ ಹವಾಮಾನ, ಶಿಕ್ಷಣ ಮಟ್ಟ, ಉದ್ಯೋಗದ ಲಭ್ಯತೆ, ಜೀವನದ ಸುರಕ್ಷತೆ, ಅಪರಾಧ ಪ್ರಮಾಣ ಕಡಿಮೆಯಾಗಿರುವಿಕೆ ಇತ್ಯಾದಿ ಅಂಶಗಳು ಇವರನ್ನು ಆಕರ್ಷಿಸಿವೆ. ಮುಂದೆಯೂ ಆಕರ್ಷಿಸಲಿವೆ.

ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ ಹೆಚ್ಚಿನ ಮಂದಿ ಬಿಹಾರದವರಾಗಿರುವುದನ್ನು ಕಾಣಬಹುದು. ಕಾರ್ಪೊರೇಟ್‌ ವಲಯದಲ್ಲೂ ಉತ್ತರ ಭಾರತದ ಮಂದಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ಬಂದು ನೆಲೆಸಿದ್ದಾರೆ. ಅನೇಕ ಸಲ ಇವರು, ʻಕನ್ನಡ ಮಾತಾಡುವುದಿಲ್ಲ, ಏನೀಗ?ʼ ಎಂದು ಕೇಳಿ ಕನ್ನಡಿಗರ ಸಿಟ್ಟಿಗೆ ಗುರಿಯಾಗಿರುವುದನ್ನೂ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ರೈಲ್ವೇ ವಲಯ ಹಾಗೂ ಬ್ಯಾಂಕಿಂಗ್‌ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ತರದವರೇ ತುಂಬಿಕೊಳ್ಳಲಿದ್ದಾರೆ, ಈಗಾಗಲೇ ಅರ್ಧಕ್ಕೂ ಅಧಿಕ ಮಂದಿ ತುಂಬಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇರಲಿದ್ದಾರೆ. ಯಾಕೆಂದರೆ ಇವು ಕೇಂದ್ರ ಸರ್ಕಾರದ ಆಡಳಿತವಿರುವ ವಲಯಗಳು.

ಇದರಿಂದ ಆಗಲಿರುವ ಇನ್ನೂ ಒಂದು ಅಪಾಯ ಎಂದರೆ, ರಾಜಕೀಯ ಪ್ರಾತಿನಿಧ್ಯ ನಮಗೆ ಕಡಿಮೆಯಾಗಲಿದೆ. ಅದು ಹೇಗೆ?

ರಾಜಕೀಯದಲ್ಲೂ ಬಲಹೀನ ದಕ್ಷಿಣ

ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ ಗಮನಾರ್ಹವಾದ ಒಂದು ಅಭಿಪ್ರಾಯವನ್ನು ತಿಳಿಸಿತ್ತು. ದಕ್ಷಿಣ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಮಾಡಿದಂತೆ, ಲೋಕಸಭಾ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತಿದೆ. ಇದು ಅನ್ಯಾಯ ಎಂದಿತ್ತು. 1962ರಿಂದ ಲೋಕಸಭೆಯಲ್ಲಿ ಸಿಕ್ಕಿರುವ ಪ್ರಾತಿನಿಧ್ಯದಲ್ಲಿ ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಅನ್ಯಾಯವಾಗಿದೆ. ಯಾಕೆಂದರೆ ಕಾಲಕಾಲಕ್ಕೆ ತಕ್ಕಂತೆ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯಾಗುತ್ತದೆ. 1962ರ ಚುನಾವಣೆಯವರೆಗೂ ತಮಿಳುನಾಡಿನಲ್ಲಿ 41 ಲೋಕಸಭೆ ಕ್ಷೇತ್ರಗಳಿದ್ದವು. 1962ರಲ್ಲಿ ಅದನ್ನು 39ಕ್ಕೆ ಇಳಿಸಲಾಯಿತು. ಯಾಕೆಂದರೆ ಜನಸಂಖ್ಯೆಯಲ್ಲಿ ನಿಯಂತ್ರಣ ಸಾಧಿಸಲಾಗಿತ್ತು. ಇದು ಅನ್ಯಾಯ ಹಾಗೂ ನಿಷ್ಕಾರಣ. ಕೇಂದ್ರ ಸರಕಾರದ ಕುಟುಂಬ ಕಲ್ಯಾಣ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ರಾಜ್ಯಕ್ಕೆ ಬಹುಮಾನ ನೀಡಬೇಕಾಗಿತ್ತು. ಆದರೆ ಶಿಕ್ಷೆ ನೀಡಲಾಗಿದೆ. ಯಾವ ರಾಜ್ಯಗಳು ಕೇಂದ್ರದ ಯೋಜನೆ ಜಾರಿಗೆ ವಿಫಲವಾಗಿವೆಯೋ ಅವುಗಳಿಗೆ ಬಹುಮಾನ, ಅಂದರೆ ಹೆಚ್ಚು ಎಂಪಿ ಸೀಟ್ ಪ್ರಾತಿನಿಧ್ಯ ನೀಡಲಾಗಿದೆ.

ಇದನ್ನೂ ಓದಿ | ವಿಸ್ತಾರ Explainer | ಈಗ ಯಾರು ಬೇಕಿದ್ರೂ ಕಾಶ್ಮೀರದಲ್ಲಿ ವೋಟ್‌ ಮಾಡಬಹುದಾ?

81ನೇ ವಿಧಿ ಏನು ಹೇಳುತ್ತದೆ?

ಸಂವಿಧಾನದ 81ನೇ ವಿಧಿ ಹೇಳುವ ಪ್ರಕಾರ, ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವೂ ತನ್ನ ಜನಸಂಖ್ಯೆಗೆ ಅನುಗುಣವಾಗಿ, ಲೋಕಸಭೆಯಲ್ಲಿ ಸಮಾನ ರೀತಿಯ ಪ್ರಾತಿನಿಧ್ಯವನ್ನು ಹೊಂದಬೇಕು ಎಂದು ಸಾರುತ್ತದೆ. ಲೋಕಸಭಾ ಕ್ಷೇತ್ರಗಳ ಸರಾಸರಿ ಜನಸಂಖ್ಯಾ ಪ್ರಮಾಣವನ್ನು ಒಂದೇ ರೀತಿಯಲ್ಲಿ ಕಾಯ್ದುಕೊಳ್ಳಲು ಸರಕಾರ ಕ್ಷೇತ್ರ ಮರುವಿಂಗಡಣೆಯನ್ನು ನಡೆಸುತ್ತದೆ. ಇದನ್ನು ಸಂವಿಧಾನದಲ್ಲಿ ಹೇಳಿದಂತೆ ಯಥಾವತ್ ಮರುವಿಂಗಡಣೆ ನಡೆಸುವುದಾದರೆ, ಇಂದು ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ದಿಲ್ಲಿಗಳು ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಳ್ಳಬೇಕು. ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಒಡಿಶಾ, ತೆಲಂಗಾಣಗಳು ಈಗಿರುವ ಸ್ಥಾನಗಳನ್ನೂ ಕಳೆದುಕೊಳ್ಳುತ್ತವೆ.

ಕ್ಷೇತ್ರ ಮರುವಿಂಗಡಣೆಗಳು

ಇದುವರೆಗೂ ನಾಲ್ಕು ಕ್ಷೇತ್ರ ಮರುವಿಂಗಡಣೆಗಳು ನಡೆದಿವೆ- 1952, 1963, 1973 ಹಾಗೂ 2002. ಹತ್ತು ವರ್ಷಕ್ಕೊಮ್ಮೆ ಮರುವಿಂಗಡಣೆ ನಡೆಯಬೇಕು. ಸದ್ಯ ಕ್ಷೇತ್ರ ಮರುವಿಂಗಡಣೆಯ ಸ್ವರೂಪಕ್ಕೆ ಕಡಿವಾಣ ಹಾಕಿರುವುದು 1976ರಲ್ಲಿ ತರಲಾದ ಸಂವಿಧಾನದ 42ನೇ ತಿದ್ದುಪಡಿ ಹಾಗೂ 2001ರಲ್ಲಿ ತರಲಾದ 84ನೇ ತಿದ್ದುಪಡಿಗಳು. 42ನೇ ತಿದ್ದುಪಡಿಯ ಪ್ರಕಾರ, ಮುಂದಿನ 25 ವರ್ಷಗಳಿಗೆ(2001) ಕ್ಷೇತ್ರ ಮರುವಿಂಗಡಣೆಗೆ 1971ರ ಜನಗಣತಿಯ ಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡಿರಬೇಕು. ಕುಟುಂಬ ಕಲ್ಯಾಣ ಯೋಜನೆಯಲ್ಲಿ ಹಿಂದುಳಿದ ರಾಜ್ಯಗಳಿಗೆ ಎಚ್ಚರಿಕೆಯಾಗಿ ಈ ನಿಯಮ ರೂಪಿಸಲಾಯಿತು. 2001ರಲ್ಲಿ ಸಂಸತ್ತು 84ನೇ ತಿದ್ದುಪಡಿಯನ್ನು ತಂದಿತು. ಅದರ ಪ್ರಕಾರ, ಜನಸಂಖ್ಯೆಗನುಗುಣವಾದ ಪ್ರಾತಿನಿಧ್ಯ 2026ರವರೆಗೂ 2001ರ ಜನಗಣತಿಯ ಆಧಾರದಲ್ಲೇ ಇರಲಿದೆ; ಅಂದರೆ ಸೀಟುಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಕ್ಷೇತ್ರಗಳ ಬೌಂಡರಿಗಳು ವ್ಯತ್ಯಾಸವಾಗಬಹುದು. ಹೀಗಿದ್ದರೂ ಎಂಪಿ ಸೀಟುಗಳ ಸಂಖ್ಯೆಯನ್ನು ಕಡಿಮೆ- ಹೆಚ್ಚು ಮಾಡಲು ಸರಕಾರ ಮುಂದಾಗಿಲ್ಲ. ಕಡಿಮೆ ಜನಸಂಖ್ಯೆಯ ರಾಜ್ಯಗಳು ಪ್ರಾತಿನಿಧ್ಯದಲ್ಲಿ ಅನ್ಯಾಯಕ್ಕೊಳಗಾಗಬಹುದು ಎಂಬುದು ಈ ನಡೆಯ ಹಿಂದಿನ ಆತಂಕ.

ಇದನ್ನೂ ಓದಿ: ವಿಸ್ತಾರ Explainer | ಹೂಡಿಕೆಗೆ ಈಗ ಸಾವರಿನ್‌ ಗೋಲ್ಡ್‌ ಬಾಂಡ್‌ ಎಂಬ ಸುವರ್ಣಾವಕಾಶ!

ಪ್ರಾತಿನಿಧ್ಯದಲ್ಲಿ ಏರುಪೇರು

ಕ್ಷೇತ್ರ ಮರುವಿಂಗಡಣೆಯಲ್ಲಿ ಉಂಟಾಗಿರುವ ಈ ನನೆಗುದಿಯಿಂದ ಉಂಟಾಗಿರುವ ನೈಜ ಸಮಸ್ಯೆ ಎಂದರೆ, ಪ್ರಾತಿನಿಧ್ಯದಲ್ಲಿ ಆಗಿರುವ ಏರುಪೇರು. 1977ರಿಂದಲೂ ನಮ್ಮಲ್ಲಿ ಸಂಸತ್ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಎಂಪಿಗಳ ಸಂಖ್ಯೆಯಿಲ್ಲ. 1951-52ರಲ್ಲಿ ಒಬ್ಬ ಎಂಪಿ ಎಷ್ಟು ಜನರನ್ನು ಪ್ರತಿನಿಧಿಸುತ್ತಿದ್ದನೋ, ಇಂದು ಅದಕ್ಕಿಂತ ನಾಲ್ಕು ಪಟ್ಟು ಜನರನ್ನು ಪ್ರತಿನಿಧಿಸುತ್ತಿದ್ದಾನೆ. ಭಾರತದಲ್ಲೇ ಹೀಗೆ ಒಬ್ಬ ಎಂಪಿ ಅತ್ಯಧಿಕ ಜನರನ್ನು ಪ್ರತಿನಿಧಿಸುತ್ತಿರುವುದು. ಜಾಗತಿಕ ಸರಾಸರಿ ಒಬ್ಬ ಎಂಪಿಗೆ 1.45 ಲಕ್ಷ ಜನ. ಆದರೆ ಭಾರತದಲ್ಲಿ ಇದು ಸರಾಸರಿ 15 ಲಕ್ಷದಷ್ಟಿದೆ. ಆದರೆ ಇದನ್ನು ಸರಿ ಮಾಡಲೆಂದು ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮರುವಿಂಗಡಣೆಗೆ ಮುಂದಾದರೆ, ಕುಟುಂಬ ಕಲ್ಯಾಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಿ, ದೇಶಕ್ಕೆ ಹೆಚ್ಚಿನ ತಲಾ ಜಿಡಿಪಿ ಕೊಡಮಾಡುತ್ತಿರುವ ದಕ್ಷಿಣ ಭಾರತದ ನಾಲ್ಕಾರು ರಾಜ್ಯಗಳಿಗೆ ತುಂಬಾ ಅನ್ಯಾಯವಾಗುತ್ತದೆ; ಪ್ರತಿಯೊಂದು ರಾಜ್ಯವೂ ಏಳೆಂಟು ಸಂಸದರನ್ನು ಕಳೆದುಕೊಳ್ಳುತ್ತದೆ. ರಾಜಕೀಯ ಪ್ರಾತಿನಿಧ್ಯ ಕುಸಿಯುತ್ತದೆ. ಇದೇ ವೇಳೆಗೆ, ಜನಸಂಖ್ಯೆಯನ್ನು ತಹಬಂದಿಗೆ ತರದೆ, ಜನಸಂಖ್ಯೆಯ ಜೊತೆಗೆ ಬಡತನ ಹೆಚ್ಚಿಸಿ ತಲಾದಾಯ ಕುಸಿದ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಸಂಸದರು, ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಗುತ್ತದೆ.

ಸಂಸತ್ ಸದಸ್ಯರ ಪ್ರಮಾಣ

ರಾಜ್ಯ ಪ್ರಮಾಣ (ಶೇ.)
ಉತ್ತರಪ್ರದೇಶ 15.2
ಮಹಾರಾಷ್ಟ್ರ 9.1
ಪಶ್ಚಿಮ ಬಂಗಾಳ 8.0
ಬಿಹಾರ 7.6
ತಮಿಳುನಾಡು7.4
ಕರ್ನಾಟಕ5.3
ಮಧ್ಯಪ್ರದೇಶ 5.3
ಗುಜರಾತ್ 4.9

ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳು

ರಾಜ್ಯ   ಎಷ್ಟಿದೆ?ಎಷ್ಟಿರಬೇಕು?
ಉತ್ತರಪ್ರದೇಶ 80     93
ಬಿಹಾರ 40    44
ರಾಜಸ್ಥಾನ25  31
ಮಧ್ಯಪ್ರದೇಶ 29       33
ಹರಿಯಾಣ10 12
ಜಾರ್ಖಂಡ್ 14      14
ಮಹಾರಾಷ್ಟ್ರ 48 51
ಗುಜರಾತ್ 26  27
ಕರ್ನಾಟಕ 28  26
ಪಶ್ಚಿಮ ಬಂಗಾಳ 42    40
ಕೇರಳ 20     15
ಆಂಧ್ರಪ್ರದೇಶ, ತೆಲಂಗಾಣ 42   37
ತಮಿಳುನಾಡು 39     29
ದಿಲ್ಲಿ7 9

Exit mobile version