Site icon Vistara News

ವಿಸ್ತಾರ TOP 10 NEWS | ಅಮಿತ್‌ ಶಾ ಕಿಡಿಯಿಂದ ಡಬಲ್‌ ರೈಡ್‌ ನಿಷೇಧ ಯು-ಟರ್ನ್‌ವರೆಗಿನ ಪ್ರಮುಖ ಸುದ್ದಿಗಳಿವು

Vistara TOP 10 04082022

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಮುಜುಗರ, ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿರುವ ಹಿಂದು ಕಾರ್ಯಕರ್ತರ ಹತ್ಯೆ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಅಮಿತ್‌ ಶಾ ಈ ಕುರಿತು ಸಿಎಂ, ಮಾಜಿ ಸಿಎಂ, ರಾಜ್ಯ ಬಿಜೆಪಿ ಅಧ್ಯಕ್ಷರೊಂದಿಗೆ ಚರ್ಚಿಸಿದ್ದಾರೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್‌ ಯು. ಲಲಿತ್‌ ನೇಮಕವಾಗುವ ಸಾಧ್ಯತೆಯಿದೆ, ಬುಧವಾರ ನಡೆದಿದ್ದ ಸಿದ್ದರಾಮೋತ್ಸವದಲ್ಲಿ ಡಿ. ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಒಗ್ಗಟ್ಟಿನ ಮಂತ್ರ ವೇದಿಕೆಗೆ ಸೀಮಿತವೇ ಎಂಬ ಚರ್ಚೆ ನಡೆಯುತ್ತಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Amit Shah in state | ಪ್ರವೀಣ್‌ ನೆಟ್ಟಾರು ಹತ್ಯೆ, ಪ್ರತಿಭಟನೆಗಳಿಂದ ಬಿಜೆಪಿಗೆ ಭಾರಿ ಡ್ಯಾಮೇಜ್‌, ಅಮಿತ್‌ ಶಾ ಕಿಡಿ
ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಮತ್ತು ಅದರ ಬಳಿಕ ಎದುರಾದ ಕಾರ್ಯಕರ್ತರ ಆಕ್ರೋಶ ಮತ್ತು ರಾಜೀನಾಮೆಗಳಿಂದ ಪಕ್ಷಕ್ಕೆ ಭಾರಿ ಹಾನಿಯಾಗಿದೆ ಎಂದು ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಿಡಿ ಕಾರಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಸುಮಾರು ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದ ಅಮಿತ್‌ ಶಾ ಅವರು ಈಗ ಆಗಿರುವ ಹಾನಿಯನ್ನು ತಕ್ಷಣವೇ ಸರಿಪಡಿಸಿ ಎಂದು ಸೂಚನೆ ನೀಡಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. ಸುಪ್ರೀಂಕೋರ್ಟ್​ ಮುಂದಿನ ಮುಖ್ಯ ನ್ಯಾಯಮೂರ್ತಿ ಉದಯ್ ಯು ಲಲಿತ್; ಸಿಜೆಐ ರಮಣ ಶಿಫಾರಸು
ಸುಪ್ರೀಂಕೋರ್ಟ್​​ನ ಈಗಿನ ಮುಖ್ಯ ನ್ಯಾಯಮೂರ್ತಿ (CJI) ಎನ್​.ವಿ.ರಮಣ ಅಧಿಕಾರ ಅವಧಿ ಆಗಸ್ಟ್​ 26ರಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ, ಅವರು ತಮ್ಮ ಉತ್ತರಾಧಿಕಾರಿ ಹೆಸರನ್ನು ಶಿಫಾರಸು ಮಾಡಿದ್ದಾರೆ. ಸಿಜೆಐ ನಿವೃತ್ತರಾಗುವಾಗ ಮುಂದಿನ ಸಿಜೆಐ ಹೆಸರನ್ನು ಶಿಫಾರಸು ಮಾಡುವುದು ನಿಯಮ. ಅದರಂತೆ ಈಗ ಎನ್​. ವಿ.ರಮಣ ಅವರು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿ ಉದಯ್​ ಉಮೇಶ್​ ಲಲಿತ್​ ಹೆಸರನ್ನು ಸೂಚಿಸಿದ್ದಾರೆ. ಇವರ ಹೆಸರನ್ನು ಬರೆದು, ತಮ್ಮ ಸಹಿ ಹಾಕಿ ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದರಂತೆ ಯು.ಯು. ಲಲಿತ್​ ಅವರು ಆಗಸ್ಟ್​ 27ರಂದು, ಸುಪ್ರೀಂಕೋರ್ಟ್​ನ 49ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. ಸಿದ್ದು- ಡಿಕೆಶಿ ಭಾಯಿ ಭಾಯಿ ಸಿದ್ದರಾಮೋತ್ಸವ ಸ್ಟೇಜ್‌ಗೆ ಸೀಮಿತವೆ?: ಹೌದೆನ್ನುತ್ತದೆ ವಿಡಿಯೊ
ಕರ್ನಾಟಕ ರಾಜಕಾರಣದಲ್ಲಿ ಅನೇಕ ದಿನಗಳಿಂದ ಚರ್ಚೆಯಾಗುತ್ತಿದ್ದ ಸಿದ್ದರಾಮೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಬ್ಬಿಕೊಂಡು ʻನಾವಿಬ್ಬರೂ ಒಟ್ಟಾಗಿದ್ದೇವೆʼ ಎಂದು ಸಂದೇಶ ನೀಡಿದ್ದು ಸುಮ್ಮನೆ ತೋರಿಕೆಗೇ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್‌ ತಬ್ಬಿಕೊಂಡ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೊದಲಿಗೆ ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ, ಇಂದಿರಾ ಗಾಂಧಿಯವರ ಪುಸ್ತಕವೊಂದನ್ನು ಶಿವಕುಮಾರ್‌ ನೀಡುತ್ತಾರೆ. ಈ ವೇಳೆಯಲ್ಲಿ ಪಕ್ಕ ಕುಳಿತಿದ್ದ ರಾಹುಲ್‌ ಗಾಂಧಿ ಕೈ ಸನ್ನೆ ಮಾಡಿ, ತಬ್ಬಿಕೊಳ್ಳುವಂತೆ ಶಿವಕುಮಾರ್‌ಗೆ ಹೇಳುತ್ತಾರೆ. ಇದನ್ನು ನೋಡಿದ ಶಿವಕುಮಾರ್‌ ಒಂದಲ್ಲ, ಎರಡು ಬಾರಿ ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು, ನಾವಿಬ್ಬರೂ ಒಟ್ಟಾಗಿದ್ದೇವೆ ಎಂದು ಸಂದೇಶ ನೀಡುವ ಪ್ರಯತ್ನ ಮಾಡಿದರು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. BBMP ಮೀಸಲಾತಿ ಎಡವಟ್ಟು: ಸಂಪೂರ್ಣ ವಾರ್ಡ್‌ ಮಹಿಳಾ ಮೀಸಲು, SC-ST ಪ್ರಮಾಣ ಕಡಿತ
ಅನೇಕ ತಿಂಗಳುಗಳ ನನೆಗುದಿಗೆ, ನ್ಯಾಯಾಲಯದ ಚಾಟಿ ನಂತರ ರೂಪಿಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ವಾರ್ಡ್‌ ಮೀಸಲಾತಿಯನ್ನು, ಚುನಾವಣೆಯನ್ನು ಮುಂದೂಡುವ ಸಲುವಾಗಿಯೇ ರೂಪಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಎಸ್‌ಸಿಎಸ್‌ಟಿ ಮೀಸಲಾತಿ, ಮಹಿಳಾ ಮೀಸಲಾತಿ ನಿಗದಿಯಲ್ಲಿ ಯದ್ವಾತದ್ವ ದಂಡ ಚಲಾಯಿಸಲಾಗಿದೆ. ಒಂದಿಡೀ ವಿಧಾನಸಭಾ ಕ್ಷೇತ್ರವನ್ನೇ ಮಹಿಳಾ ಮೀಸಲು ಮಾಡಿದ ಉದಾಹರಣೆಯೂ ಇದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

5. ಟ್ರೋಲ್‌ ಆದ ಡಬಲ್‌ ರೈಡಿಂಗ್‌ ನಿಷೇಧ ನಿಯಮ, ಕೆಲವೇ ಗಂಟೆಗಳಲ್ಲಿ ವಾಪಸ್‌!
ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರು ಜಾರಿಗೆ ತರಲು ಉದ್ದೇಶಿಸಿದ್ದ ದ್ವಿಚಕ್ರ ವಾಹನಗಳಲ್ಲಿ ಡಬಲ್‌ ರೈಡಿಂಗ್‌ ನಿಷೇಧ ಆದೇಶವನ್ನು ಕೆಲವೇ ಗಂಟೆಗಳಲ್ಲಿ ವಾಪಸ್‌ ಪಡೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ದಿನಗಳ ಅವಧಿಯಲ್ಲಿ ಮೂರು ಕೊಲೆಗಳು ಸಂಭವಿಸಿವೆ. ಬೆಳ್ಳಾರೆ ಸಮೀಪ ಕಳಂಕದ ಮಸೂದ್‌, ಪ್ರವೀಣ್‌ ನೆಟ್ಟಾರು ಮತ್ತು ಸುರತ್ಕಲ್‌ ಫಾಜಿಲ್‌ ಅವರನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ. ಈ ರೀತಿ ಸಾಲು ಸಾಲು ಹತ್ಯೆಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿದೆ. ಇದನ್ನು ತಡೆಯುವುದು ಹೇಗೆ ಎಂದು ಯೋಚಿಸಿದಾಗ ಪೊಲೀಸರಿಗೆ ಹೊಳೆದ ಐಡಿಯಾಗಳಲ್ಲಿ ಒಂದು ದ್ವಿಚಕ್ರ ವಾಹನಗಳಲ್ಲಿ ಡಬಲ್‌ ರೈಡಿಂಗ್‌ನ್ನು ನಿಷೇಧಿಸುವುದು. ಎಡಿಜಿಪಿ ಆಗಿರುವ ಅಲೋಕ್‌ ಕುಮಾರ್‌ ಅವರು ಮಧ್ಯಾಹ್ನದ ಹೊತ್ತಿಗೆ ಈ ನಿಯಮವನ್ನು ಪ್ರಕಟಿಸಿದರು. ಗುರುವಾರ ಸಂಜೆಯಿಂದಲೇ ಈ ನಿಯಮ ಜಾರಿಗೆ ಬರುವುದಾಗಿ ಹೇಳಿದ್ದರು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. Heavy Rain | ಧಾರಾಕಾರ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ರೈತ
ಇಲ್ಲಿನ ಮಾನ್ವಿ ತಾಲೂಕಿನಲ್ಲಿ ವ್ಯಾಪಕ ಮಳೆಯಿಂದ (Heavy Rain) ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ರೈತನೊಬ್ಬ ಕೊಚ್ಚಿ ಹೋದ ದುರ್ಘಟನೆ ಬುಧವಾರ ನಡೆದಿದೆ. ಜಮೀನು ಕೆಲಸ ಮುಗಿಸಿ ಸಂಜೆ ಮನೆಗೆ ಮರಳುವಾಗ ವೆಂಕಟೇಶ (36) ಎಂಬುವವರು ಕೊಚ್ಚಿ ಹೋಗಿದ್ದಾರೆ. ಕುರ್ಡಿ ಗ್ರಾಮದ ಹೊರವಲಯದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಗೆ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿತ್ತು. ಆದರೆ, ಇದನ್ನು ಲೆಕ್ಕಿಸದೇ ವೆಂಕಟೇಶ ದಾಟಲು ಹೋಗಿದ್ದಾರೆನ್ನಲಾಗಿದೆ. ಆಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ವಿಷಯ ತಿಳಿದ ಕೂಡಲೇ ಮಾನ್ವಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯವನ್ನು ನಡೆಸಿದ್ದಾರೆ. ಆದರೆ, ಇನ್ನೂ ವೆಂಕಟೇಶ ಪತ್ತೆಯಾಗದ ಹಿನ್ನೆಲೆಯಲ್ಲಿ ಗುರುವಾರವೂ ಶೋಧ ಕಾರ್ಯ ಮುಂದುವರಿದಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
Heavy Rain | ಸಂಪಾಜೆ ಘಾಟ್ ರಸ್ತೆಯಲ್ಲಿ ಬಿರುಕು; ಸಾಲುಗಟ್ಟಿ ನಿಂತ ನೂರಾರು ಲಾರಿಗಳು
Rain News | ಡ್ರೈ ಕಿಟ್‌ ಯೋಜನೆ ಮೂರು ದಿನದಲ್ಲಿ ಜಾರಿ; ಸಚಿವ ಆರ್.ಅಶೋಕ್

7. ಶಿಂಧೆ ಬಣದ ಅರ್ಜಿ ಬಗ್ಗೆ ಈಗಲೇ ನಿರ್ಧಾರ ಬೇಡ ಎಂದು ಚುನಾವಣಾ ಆಯೋಗಕ್ಕೆ ಹೇಳಿದ ಸುಪ್ರೀಂಕೋರ್ಟ್
‘ನಮ್ಮ ಬಣದಲ್ಲಿಯೇ ಹೆಚ್ಚಿನ ಶಾಸಕರು/ಸಂಸದರು ಇದ್ದಾರೆ. ಹಾಗಾಗಿ ನಮ್ಮದೇ ನಿಜವಾದ ಶಿವಸೇನೆ ಎಂದು ಏಕನಾಥ್ ಶಿಂಧೆ ಪಾಳಯದವರು ಸಲ್ಲಿಸಿರುವ ಅರ್ಜಿ ಬಗ್ಗೆ ಈಗಲೇ ಏನೂ ನಿರ್ಧಾರ ಕೈಗೊಳ್ಳಬೇಡಿ ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್​ ಹೇಳಿದೆ. ಮಹಾರಾಷ್ಟ್ರ ರಾಜಕಾರಣದಲ್ಲಿ ಶಿವಸೇನೆ ಎರಡು ಬಣಗಳಾಗಿದೆ. ಅದರಲ್ಲೊಂದು ಏಕನಾಥ ಶಿಂಧೆ ಬಣ, ಮತ್ತೊಂದು ಉದ್ಧವ್​ ಠಾಕ್ರೆ ಪಾಳಯ. ಇದೀಗ ಎರಡೂ ಬಣಗಳೂ ಶಿವಸೇನೆ ಮೇಲಿನ ಸಂಪೂರ್ಣ ನಿಯಂತ್ರಣಕ್ಕಾಗಿ ಜಿದ್ದಾಜಿದ್ದಿ ನಡೆಸುತ್ತಿವೆ. ಈ ಮನವಿಯನ್ನು ಸುಪ್ರೀಂಕೋರ್ಟ್​​ಗಳು ಸಲ್ಲಿಸಿವೆ ಮತ್ತು ಚುನಾವಣಾ ಆಯೋಗದ ಎದುರೂ ಇಟ್ಟಿವೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. ಜುಲೈನಲ್ಲಿ 3.42 ಲಕ್ಷ ವಾಹನ ಮಾರಾಟ, ಹಬ್ಬಕ್ಕೆ ಮುನ್ನ ಚೇತರಿಸಿದ ಆಟೊಮೊಬೈಲ್‌ ಇಂಡಸ್ಟ್ರಿ
ಭಾರತದ ಆಟೊಮೊಬೈಲ್‌ ವಲಯದಲ್ಲಿ ಕಳೆದ ಜುಲೈನಲ್ಲಿ ೩.೪೨ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ವಾಹನಗಳು (passenger vehicle) ಮಾರಾಟವಾಗಿವೆ. ಬಿಡಿಭಾಗಗಳು ಹಾಗೂ ಸೆಮಿಕಂಡಕ್ಟರ್‌ ಚಿಪ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ಚೇತರಿಕೆಯಿಂದ ಆಟೊಮೊಬೈಲ್‌ ಉತ್ಪಾದನೆ ಮತ್ತು ಮಾರಾಟ ಚುರುಕಾಗಿದೆ. ಟ್ರ್ಯಾಕ್ಟರ್‌ಗಳು ಹೊರತುಪಡಿಸಿ ಉಳಿದ ಎಲ್ಲ ವಾಹನಗಳ ಮಾರಾಟದಲ್ಲಿ ಕಳೆದ ಜುಲೈನಲ್ಲಿ ಪ್ರಗತಿ ದಾಖಲಾಗಿದೆ. ಈ ಸಲದ ಹಬ್ಬದ ಋತುವಿನಲ್ಲಿ ಭರ್ಜರಿ ಮಾರಾಟ ನಿರೀಕ್ಷಿಸಲಾಗಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

9. Airtel 5G | ಭಾರತದಲ್ಲಿ ಮೊದಲ ಬಾರಿಗೆ ಏರ್‌ಟೆಲ್‌ನಿಂದ ಇದೇ ತಿಂಗಳು 5ಜಿ ಸೇವೆ ಆರಂಭ
ಖಾಸಗಿ ವಲಯದ ಟೆಲಿಕಾಂ ಕಂಪನಿ ಏರ್‌ಟೆಲ್‌ (Airtel) ಆಗಸ್ಟ್‌ನಲ್ಲಿಯೇ ತನ್ನ ೫ಜಿ ಸೇವೆಯನ್ನು ಆರಂಭಿಸುವುದಾಗಿ ತಿಳಿಸಿದೆ. ಆಗಸ್ಟ್‌ ಅಂತ್ಯದೊಳಗೆ ೫ಜಿ ಸೇವೆ ಆರಂಭಿಸಲಾಗುವುದು. ೫ಜಿ ನೆಟ್‌ ವರ್ಕ್‌ ಅಳವಡಿಸುವುದಕ್ಕೆ ಸಂಬಂಧಿಸಿ ಎರಿಕ್ಸನ್‌, ನೋಕಿಯಾ ಮತ್ತು ಸ್ಯಾಮ್‌ಸಂಗ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಏರ್‌ಟೆಲ್‌ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ೫ಜಿ ಸೇವೆಯನ್ನು ಮೊದಲ ಬಾರಿಗೆ ಏರ್‌ಟೆಲ್‌ ಆರಂಭಿಸಲಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. Amrit Mahotsav | ಹರ್‌ ಘರ್‌ ಗೀತೆಯಲ್ಲಿ ಕನ್ನಡಿಗರನ್ನು ಪ್ರತಿನಿಧಿಸಿದ ಕೆ. ಎಲ್‌ ರಾಹುಲ್‌
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ಬಿಡುಗಡೆ ಮಾಡಿರುವ ಹರ್ ಘರ್‌ ಗೀತೆಯಲ್ಲಿ ಕೆ.ಎಲ್‌ ರಾಹುಲ್‌ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಸಂಸ್ಕೃತಿ ಸಚಿವಾಲಯವು ಈ ಹಾಡನ್ನು ಬಿಡುಗಡೆ ಮಾಡಿದ್ದು, ಕ್ರೀಡಾಪಟುಗಳನ್ನೇ ಹೆಚ್ಚು ಬಳಸಿಕೊಳ್ಳಲಾಗಿದೆ. ವಿರಾಟ್‌ ಕೊಹ್ಲಿ, ಪಿ.ವಿ ಸಿಂಧೂ, ಪಿಟಿ. ಉಷಾ ಸೇರಿದಂತೆ ಹಲವರು ಈ ಹಾಡಿನಲ್ಲಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version