Site icon Vistara News

ವಿಸ್ತಾರ TOP 10 NEWS | ಯಶಸ್ವಿ ಸಿದ್ದರಾಮೋತ್ಸವದಿಂದ ಯಶ್‌ ಟ್ವೀಟ್‌ವರೆಗಿನ ಪ್ರಮುಖ ಸುದ್ದಿಗಳಿವು

Vistara top 10 02082022

ಬೆಂಗಳೂರು: ಕಳೆದೊಂದು ತಿಂಗಳಿಂದ ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿದ್ದ ಸಿದ್ದರಾಮೋತ್ಸವ ಕಾರ್ಯಕ್ರಮ ಬುಧವಾರ, ನಿರೀಕ್ಷೆಯಂತೆಯೇ ಅದ್ಧೂರಿಯಾಗಿ ನಡೆದಿದೆ. ಸಿದ್ದರಾಮೋತ್ಸವ ಆದ ಕೂಡಲೆ ಕಾಂಗ್ರೆಸ್‌ ಇಬ್ಭಾಗವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ವ್ಯತಿರಿಕ್ತವಾಗಿ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ರಾಜ್ಯದಲ್ಲಿ ಮಳೆ ಇನ್ನೂ ಎರಡು ದಿನ ಮುಂದುವರಿಯಲಿದೆ, ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳ ಪದಕ ಬೇಟೆ ಮುಂದುವರಿದಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ನಾನು, ಶಿವಕುಮಾರ್‌ ಒಟ್ಟಾಗಿದ್ದೇವೆ; ನಮ್ಮ ನಡುವೆ ಬಿರುಕಿಲ್ಲ: ಸಿದ್ದರಾಮಯ್ಯ ಪ್ರತಿಪಾದನೆ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರೂ ಒಟ್ಟಾಗಿದ್ದೇವೆ. ನಮ್ಮಿಬ್ಬರ ನಡುವೆ ಬಿರುಕು ಇದೆ ಎನ್ನುವುದು ವಿರೋಧ ಪಕ್ಷಗಳು ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಪ್ರತಿಪಾದಿಸಿದರು. ತಮ್ಮ 75ನೇ ವರ್ಷದ ಪ್ರಯುಕ್ತ ದಾವಣಗೆರೆಯಲ್ಲಿ ಆಯೋಜನೆ ಮಾಡಲಾಗಿದ್ದ ಬೃಹತ್‌ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. 75ನೇ ಹುಟ್ಟುಹಬ್ಬ ಆಚರಿಸಲು ಶಿವಕುಮಾರ್‌ ವಿರೋಧ ಇದೆ ಎಂದು ಹೇಳುತ್ತಾರೆ. ಇದು ವಿರೋಧಪಕ್ಷದವರ ಭ್ರಮೆ ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿ. ನಾನು ಹಾಗೂ ಶಿವಕುಮಾರ್‌ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು. ಸಂಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

2. ಡಿ.ಕೆ. ಶಿವಕುಮಾರ್‌ರನ್ನು ಬಿಟ್ಟುಕೊಡದ ರಾಹುಲ್‌ ಗಾಂಧಿ: ಒಟ್ಟಾಗಿ ಹೋಗಿ ಎಂಬ ಸಂದೇಶ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವದ ಕಾರ್ಯಕ್ರಮದಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ನಡುವೆ ಕಂದಕ ಹೆಚ್ಚಾಗುತ್ತಿದೆ ಎಂಬುದನ್ನು ಅರಿತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇಬ್ಬರೂ ಒಟ್ಟಾಗಿ ಹೋದರೆ ಮಾತ್ರವೇ ಅಧಿಕಾರ ಸಿಗುತ್ತದೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್‌ ಅವರು ತಬ್ಬಿಕೊಂಡದ್ದನ್ನು ಕಂಡು ನನಗೆ ಬಹಳ ಸಂತೋಷವಾಯಿತು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅತ್ಯುತ್ತಮ ರೀತಿಯಲ್ಲಿ ಪಕ್ಷವನ್ನು ಸಂಘಟಿಸುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

3. ಮೋದಿಯ ನಾಲ್ಕು ಡೈಲಾಗ್‌ ಮೂಲಕವೇ ಬಿಜೆಪಿ ಸರ್ಕಾರಗಳನ್ನು ಮೂದಲಿಸಿದ ಸಿದ್ದರಾಮಯ್ಯ
ಸದಾ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಹರಿಹಾಯುವ ತಮ್ಮ ಅಭ್ಯಾಸವನ್ನು ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ 75ನೇ ಹುಟ್ಟುಹಬ್ಬದ ಸಂಭ್ರಮದ ಸಮಯದಲ್ಲೂ ಇದನ್ನು ಮುಂದುವರಿಸಿದೆ. ಆದರೆ ಈ ಬಾರಿ ಪೂರ್ವಸಿದ್ಧತೆಯೊಂದಿಗೆ ಆಗಮಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಡೈಲಾಗ್‌ಗಳನ್ನೇ ಆಧಾರವಾಗಿಟ್ಟುಕೊಂಡು ವಾಗ್ದಾಳಿ ನಡೆಸಿದರು. ʻನಾ ಖಾವೂಂಗಾ, ನಾ ಖಾನೇ ದೂಂಗಾʼ, ʻಸಬ್‌ ಕಾ ಸಾಥ್‌, ಸಬ್‌ಕಾ ವಿಶ್ವಾಸ್‌ʼ, ʻಅಚ್ಛೇ ದಿನ್‌ʼ ಹಾಗೂ ʻಕಾಂಗ್ರೆಸ್‌ ಮುಕ್ತ ಭಾರತ್‌ʼ ಘೋಷಣೆಗಳ ಕುರಿತು ಪ್ರತಿಯೊಂದಕ್ಕೂ ಪ್ರತಿಯುತ್ತರ ನೀಡಿದರು. ಸಂಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

4. ಸಿದ್ದರಾಮೋತ್ಸವ: ಸಿದ್ದು ಪವರ್‌ ಶೋ ಸಕ್ಸಸ್‌, ಜೈ ಎಂದ ಡಿಕೆಶಿ, ಬಿಜೆಪಿಗೂ ಬಿಸಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಆಯೋಜಿಸಿದ ʻಸಿದ್ದರಾಮೋತ್ಸವʼ ಭರ್ಜರಿ ಯಶಸ್ಸು ಗಳಿಸಿದೆ. ರಾಜ್ಯದ ಮೂಲೆ ಮೂಲೆಗಳಿಂದ ಮಳೆಯನ್ನೂ ಲೆಕ್ಕಿಸದೆ ಬಂದ ಸುಮಾರು ಏಳು ಲಕ್ಷ ಅಭಿಮಾನಿಗಳು ಸಿದ್ದರಾಮಯ್ಯ ಅವರ ಜೀವನದ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾದರು. ಒಂದು ಕಡೆ ಇದು ಕಾಂಗ್ರೆಸ್‌ನ ಅಧಿಕೃತ ಕಾರ್ಯಕ್ರಮವೇ ಆಗಿದ್ದರೂ ನಿಜವಾಗಿ ಸಿದ್ದರಾಮಯ್ಯ ಅವರ ಪರ್ಸನಲ್‌ ಪವರ್‌ ಶೋ ಆಗಿ ದಾಖಲಾಯಿತು. ಸಂಪೂರ್ಣ ವಿಶ್ಲೇಷಣೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

5. ರಾಹುಲ್‌ಗೂ ತಟ್ಟಿದ ಜನಸ್ತೋಮದ ಬಿಸಿ, ಹೆದರಿ ಪ್ರಯಾಣದ ಮಾರ್ಗವನ್ನೇ ಬದಲಿಸಿದ ಎಸ್‌ಪಿಜಿ!
ರ್ಯಕ್ರಮಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಕರೆತರಲು ಎಸ್‌ಪಿಜಿ ಭಾರಿ ಹರಸಾಹಸ ನಡೆಸಬೇಕಾಗಿ ಬಂದಿದೆ. ಮಧ್ಯಾಹ್ನ 12.30ಕ್ಕೆ ವೇದಿಕೆ ಏರಬೇಕಾಗಿದ್ದ ರಾಹುಲ್‌ ಅವರು ಕೊನೆಗೆ ೨.30ಕ್ಕೆ ವೇದಿಕೆ ಏರಿದರು. ಹುಬ್ಬಳ್ಳಿಯಿಂದ ಚಿತ್ರದುರ್ಗಕ್ಕೆ ಬಂದು ಇಲ್ಲಿ ಮುರುಘಾಮಠಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ ಅವರು ಬಳಿಕ ದಾವಣಗೆರೆಗೆ ಹೊರಟಿದ್ದರು. ಆದರೆ, ದಾರಿಯುದ್ದಕ್ಕೂ ಭಾರಿ ಜನಸ್ತೋಮ ಮತ್ತು ವಾಹನಗಳ ನಿಭಿಡತೆ ಇರುವುದು ಭದ್ರತಾ ಸಿಬ್ಬಂದಿಗಳನ್ನು ಕಂಗೆಡಿಸಿದೆ. ಲಕ್ಷಾಂತರ ಜನರು ಹತ್ತಾರು ಕಿ.ಮೀ. ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲೇ ಸಾಗಿಬರುತ್ತಿದ್ದರು. ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ತಮ್ಮ ವಾಹನದಿಂದ ಇಳಿದು ಬೇರೆ ವಾಹನ ಹಿಡಿದು ಸ್ಥಳ ತಲುಪಿದರು. ಸಂಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

6. Weather Report | ರಾಜ್ಯಾದ್ಯಂತ ಅತಿವೃಷ್ಟಿಯ ತಲ್ಲಣ, ಮಳೆ ಅಬ್ಬರಿಸಲಿದೆ ಇನ್ನೂ ಎರಡು ದಿನ
ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಆಗಸ್ಟ್ 4, 5ರಂದು ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು (Weather Report) ಹವಾಮಾನ ಇಲಾಖೆ ನೀಡಿದೆ. ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 50-60 ಕಿಮೀ ತಲುಪುವ ಸಾಧ್ಯತೆಯಿದ್ದು, ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಕರಾವಳಿಯ ಎಲ್ಲ ಜಿಲ್ಲೆಗಳ ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಗುವ ಸಾಧ್ಯತೆ ಇದೆ. ಉಳಿದಂತೆ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರದ ಕೆಲವು ಕಡೆ ವ್ಯಾಪಕ ಮಳೆಯಾಗಲಿದೆ. ಸಂಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

7. CWG- 2022 | ಭಾರತ ಬ್ಯಾಡ್ಮಿಂಟನ್‌ ತಂಡಕ್ಕೆ ಬೆಳ್ಳಿಯ ಬೆಡಗು, ಮಲೇಷ್ಯಾ ಚಾಂಪಿಯನ್‌
ಭಾರತ ಮಿಶ್ರ ಬ್ಯಾಡ್ಮಿಂಟನ್‌ ತಂಡ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಬೆಳ್ಳಿಯ ಪದಕ ಗೆದ್ದುಕೊಂಡಿದೆ. ಇದರೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೧೩ಕ್ಕೆ ಏರಿಕೆಯಾಗಿದೆ. ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌ಅಪ್‌ ಮಲೇಷ್ಯಾ ವಿರುದ್ಧ ೩-೧ ಅಂತರದಿಂದ ಸೋಲು ಕಂಡ ಭಾರತದ ಸ್ಪರ್ಧಿಗಳು ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಮಂಗಳವಾರ ತಡರಾತ್ರಿ ನಡೆದ ಪ್ರಶಸ್ತಿ ಸುತ್ತಿನ ಫೈಟ್‌ನ ಮೊದಲ ಪಂದ್ಯದಲ್ಲಿ ಭಾರತದ ಪುರುಷರ ಡಬಲ್ಸ್‌ ತಂಡ ಮೊದಲ ಸೋಲಿಗೆ ಒಳಗಾದರೆ, ಸ್ಟಾರ್‌ ಆಟಗಾರ್ತಿ ಪಿ.ವಿ ಸಿಂಧೂ ಗೆಲುವು ಕಂಡರು. ಹೀಗಾಗಿ ಇತ್ತಂಡಗಳ ನಡುವೆ ೧-೧ರ ಸಮಬಲದ ಸಾಧನೆ ಕಂಡುಬಂತು. ಬಳಿಕ ಕಿಡಂಬಿ ಶ್ರೀಕಾಂತ್‌ ಸಿಂಗಲ್ಸ್‌ನಲ್ಲಿ ಎದುರಾಳಿ ತಂಡದ ವಿರುದ್ಧ ಸೋಲುಕಂಡರು .ಅಂತೆಯೇ ನಾಲ್ಕನೇ ಪಂದ್ಯದಲ್ಲಿ ತ್ರಿಸಾ ಜೊಲ್ಲಿ ಹಾಗೂ ಗಾಯತ್ರಿ ಗೋಪಿಚಂದ್‌ ಅವರಿದ್ದ ಮಹಿಳೆಯರ ಡಬಲ್ಸ್‌ ಬಳಗವೂ ಪರಾಭವಗೊಂಡಿತು. ಹೀಗಾಗಿ ಭಾರತಕ್ಕೆ ಸುಲಭ ಸೋಲಿಗೆ ಒಳಗಾಯಿತು. ಸಂಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

8. ಬ್ಯಾಂಕ್‌ಗಳಿಂದ ನಗದು ಹಿಂತೆಗೆತ, ಆಸ್ಪತ್ರೆ ಬೆಡ್‌, ಐಸಿಯುಗೆ ಜಿಎಸ್‌ಟಿ ಇಲ್ಲ: ಕೇಂದ್ರ ಸ್ಪಷ್ಟನೆ
ಬ್ಯಾಂಕ್‌ಗಳಿಂದ ನಗದು ಹಿಂತೆಗೆತಕ್ಕೆ ಯಾವುದೇ ಜಿಎಸ್‌ಟಿ ಇರುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯಸಭೆಯಲ್ಲಿ ತಿಳಿಸಿದರು. ಬೆಲೆ ಏರಿಕೆಗೆ ಸಂಬಂಧಿಸಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವೇಳೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಉತ್ತರಿಸಿದ ನಿರ್ಮಲಾ ಸೀತಾರಾಮನ್‌, ದೇಶದ ಆರ್ಥಿಕತೆಯ ಬುನಾದಿ ಸುಭದ್ರವಾಗಿದೆ ಎಂದರು. ಹಲವು ವಸ್ತುಗಳು ಮತ್ತು ಸೇವೆಗಳಿಗೆ ಜಿಎಸ್‌ಟಿ ಅನ್ವಯವಾಗುತ್ತಿಲ್ಲ ಎಂದು ಅವರು ತಿಳಿಸಿದರು. ಸಂಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

9. ತೈವಾನ್ ಅಧ್ಯಕ್ಷೆ ಪಕ್ಕ ನಿಂತು ಚೀನಾಕ್ಕೊಂದು ಖಡಕ್​ ಸಂದೇಶ ಕೊಟ್ಟ ನ್ಯಾನ್ಸಿ; ಎಚ್ಚರಿಕೆಗೆ ಡೋಂಟ್​​ ಕೇರ್​ !
ಚೀನಾದ ಎಚ್ಚರಿಕೆಯ ನಡುವೆಯೂ ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್​ ನ್ಯಾನ್ಸಿ ಪೆಲೋಸಿ (Nancy Pelosi) ತೈವಾನ್​ ನೆಲಕ್ಕೆ ಕಾಲಿಟ್ಟಿದ್ದಲ್ಲದೆ, ಅಲ್ಲಿನ ಅಧ್ಯಕ್ಷೆ ತ್ಸೈ ಇಂಗ್-ವೆನ್​​ರನ್ನು ಭೇಟಿಯಾದರು. ಇದೇ ವೇಳೆ ಮಾತನಾಡಿದ ನ್ಯಾನ್ಸಿ, ‘ತೈವಾನ್​ ವಿಚಾರದಲ್ಲಿ ನಮಗೆ (ಯುಎಸ್​​) ಇರುವ ಬದ್ಧತೆಯನ್ನು ನಾವೆಂದಿಗೂ ತೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುವ ಸಲುವಾಗಿಯೇ ನಮ್ಮ ನಿಯೋಗ ಇಲ್ಲಿಗೆ ಬಂದಿದೆ. ತೈವಾನ್​ ಜತೆಗಿನ ನಮ್ಮ ಸ್ನೇಹಕ್ಕೆ ಯಾವುದೇ ಚ್ಯುತಿ ಬರಲೂ ಬಿಡುವುದಿಲ್ಲ ಎಂದು ಇದೇ ವೇಳೆ ಹೆಮ್ಮೆಯಿಂದ ಹೇಳುತ್ತಿದ್ದೇನೆ’ ಎಂದು ತಿಳಿಸಿದ್ದಾರೆ. ಈ ಮೂಲಕ ಚೀನಾಕ್ಕೊಂದು ಖಡಕ್​ ಸಂದೇಶ ಕೊಟ್ಟಿದ್ದಾರೆ. ಸಂಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

10. Yash |‌ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ರಾಕಿಂಗ್‌ ಸ್ಟಾರ್‌ ಯಶ್ ರೆಡಿ: ಅಭಿಮಾನಿಗಳಿಗೆ ಹೇಳಿದ್ದೇನು?
ರಾಕಿಂಗ್‌ ಸ್ವಾರ್‌ ಯಶ್‌ (Yash) ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಆಗಿದ್ದಾರೆ. ಈ ಹಿಂದೆ ಅಷ್ಟೇ ಫ್ಯಾಮಿಲಿ ಜತೆ ಇರುವ ಫೋಟೊ ಒಂದನ್ನು ಶೇರ್‌ ಮಾಡಿಕೊಂಡಿದ್ದರು. ಇಟಲಿ ಫ್ಯಾನ್ಸ್‌ ಜತೆ ಯಶ್‌ ಮತ್ತು ರಾಧಿಕಾ ಫೋಟೊ ಹಂಚಿಕೊಂಡು ಸುದ್ದಿಯಲ್ಲಿದ್ದರು. ಇದೀಗ ಸ್ವಾತಂತ್ರ್ಯೋತ್ಸವದ ಕುರಿತು ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಈಗಲೇ ಯಶ್‌ ಶುಭ ಹಾರೈಸಿದ್ದಾರೆ. ಪ್ರತಿ ಮನೆಗೂ ಧ್ವಜ ತರೋಣ ಎಂದು ಸಂದೇಶ ರವಾನಿಸಿದ್ದಾರೆ. ಸಂಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

Exit mobile version