ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ (US Presidential Election 2024) ಮುಂದಾಗಿದ್ದ ಭಾರತೀಯ ಮೂಲದ ಬಯೋಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಮಂಗಳವಾರ ರೇಸ್‌ನಿಂದ ಹೊರಗೆ ಬಂದಿದ್ದಾರೆ. ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.
ಭಾರತ ಮೂಲದ ಅಮೆರಿಕನ್ ಪ್ರಜೆ, ಆರೋಗ್ಯ ಮತ್ತು ಬಯೋಟೆಕ್ ವಲಯದಲ್ಲಿ ಖ್ಯಾತ ಉದ್ಯಮಿ, ಲೇಖಕ ವಿವೇಕ್ ರಾಮಸ್ವಾಮಿ (Vivek Ramaswamy) ಈ ಹಿಂದೆ ತಾವು ಅಭ್ಯರ್ಥಿ ಎಂದು ಪ್ರಕಟಿಸಿದ್ದರು. ಆದರೆ ಅಯೋವಾದ ಲೀಡ್ ಆಫ್ ಕಾಕಸ್‌ಗಳಲ್ಲಿ ಅವರು ನಿರಾಶಾದಾಯಕ ಬೆಂಬಲ ಪಡೆದ ಪರಿಣಾಮ, ಶ್ವೇತಭವನದ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ.
Live from Des Moines, IA | Vivek 2024 Caucus Night Press Conference https://t.co/ykH9wRlSKL
— Vivek Ramaswamy (@VivekGRamaswamy) January 16, 2024
“ಈ ಕ್ಷಣದಿಂದ ನಾನು ಅಧ್ಯಕ್ಷೀಯ ಪ್ರಚಾರವನ್ನು ಅಮಾನತುಗೊಳಿಸಲಿದ್ದೇನೆ. ನಾನು ಡೊನಾಲ್ಡ್ ಟ್ರಂಪ್ ಅವರನ್ನು ಅವರ ವಿಜಯಕ್ಕಾಗಿ ಅಭಿನಂದಿಸುತ್ತೇನೆ. ಈಗ ಅವರು ಅಧ್ಯಕ್ಷರಾಗುವ ಸ್ಪರ್ಧೆಯಲ್ಲಿ ನನ್ನ ಸಂಪೂರ್ಣ ಅನುಮೋದನೆಯನ್ನು ಹೊಂದಿರುತ್ತಾರೆ” ಎಂದು ರಾಮಸ್ವಾಮಿ ಹೇಳಿದರು. ರಾಮಸ್ವಾಮಿ ಈ ಹಿಂದೆ ಟ್ರಂಪ್ ಅವರನ್ನು ʼ21ನೇ ಶತಮಾನದ ಅತ್ಯುತ್ತಮ ಅಧ್ಯಕ್ಷʼ ಎಂದು ಹೊಗಳಿದ್ದರು.
ಅಮೆರಿಕದ ಅತ್ಯಂತ ಹಳೇ ಪಕ್ಷವಾಗಿರುವ ರಿಪಬ್ಲಿಕನ್ ಪಾರ್ಟಿ ಸದಸ್ಯರಾಗಿರುವ ವಿವೇಕ್ ರಾಮಸ್ವಾಮಿ ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡುತ್ತ, “ಅಮೆರಿಕ ದೇಶದ ಆದರ್ಶಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ನಾನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲು ಬಯಸುತ್ತೇನೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದರು. ಹಾಗೇ ಬಳಿಕ ಟ್ವೀಟ್ ಮಾಡಿದ್ದ ಅವರು “ನಾವು ವೈವಿದ್ಯತೆಯನ್ನು ಪ್ರೀತಿಸಿ ಒಪ್ಪಿಕೊಳ್ಳುವ ಭರದಲ್ಲಿ 250 ವರ್ಷಗಳ ಹಿಂದಿನ, ಒಗ್ಗಟ್ಟಿನ ಸಿದ್ಧಾಂತಗಳನ್ನೇ ಮರೆತಿದ್ದೇವೆ. ಅದನ್ನು ಮತ್ತೆ ಪುನರುಜ್ಜೀವನಗೊಳಿಸಲು ನಾನು ಅಧ್ಯಕ್ಷನಾಗಲು ಬಯಸುತ್ತೇನೆ” ಎಂದಿದ್ದರು.
ವಿವೇಕ್ ರಾಮಸ್ವಾಮಿಯವರು ಚಿಕ್ಕವಯಸ್ಸಿನಲ್ಲಿಯೇ ಪ್ರಭಾವಿ ಎನ್ನಿಸಿಕೊಂಡವರು. ಅವರ ತಂದೆ-ತಾಯಿ ಮೂಲತಃ ಕೇರಳದವರಾಗಿದ್ದು, ಇಲ್ಲಿಂದ ಯುಎಸ್ಗೆ ವಲಸೆ ಹೋಗಿದ್ದರು. ವಿವೇಕ್ ರಾಮಸ್ವಾಮಿ ಹುಟ್ಟಿದ್ದು-ಬೆಳೆದಿದ್ದೆಲ್ಲ ಅಮೆರಿಕದಲ್ಲಿ. ಅವರಿಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ.