Site icon Vistara News

ಮೋದಿ ಕರೆಗೆ ಓಗೊಟ್ಟು ದೇಶೀಯ ಉತ್ಪನ್ನ ಖರೀದಿ; ಹಬ್ಬದ ವೇಳೆ ಚೀನಾಗೆ ಲಕ್ಷ ಕೋಟಿ ರೂ. ನಷ್ಟ!

Vocal For Local In India

ನವದೆಹಲಿ: ದೀಪಾವಳಿ ಸೇರಿ ಯಾವುದೇ ಪ್ರಮುಖ ಹಬ್ಬವಿರಲಿ, ಪಟಾಕಿ, ದೇವರ ಫೋಟೊದಿಂದ ಹಿಡಿದು, ಕುಂಕುಮದವರೆಗೆ ಚೀನಾದ ವಸ್ತುಗಳೇ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತವೆ. ಹಾಗಾಗಿ, ಪ್ರತಿ ಹಬ್ಬದ ವೇಳೆ ಚೀನಾದ ಉತ್ಪನ್ನಗಳು ಭಾರತದ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಆದರೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೀಡಿದ ಒಂದು ಕರೆಯಿಂದಾಗಿ ಈ ಬಾರಿಯ ದೀಪಾವಳಿ (Deepavali) ವೇಳೆ ಚೀನಾಗೆ (China) ಒಂದು ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎಂದು ತಿಳಿದುಬಂದಿದೆ.

ಹೌದು, ಮನ್‌ ಕೀ ಬಾತ್‌ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದರು. “ಹಬ್ಬಗಳ ಸಂದರ್ಭಗಳಲ್ಲಿ ದೇಶೀಯ ಉತ್ಪನ್ನಗಳನ್ನೇ ಖರೀದಿಸಿ. ವೋಕಲ್‌ ಫಾರ್‌ ಲೋಕಲ್‌ ಎಂಬುದು ಎಲ್ಲರ ಮಂತ್ರವಾಗಿರಲಿ. ಇದರಿಂದ ಸ್ಥಳೀಯ ರೈತರು, ಕರಕುಶಲಕರ್ಮಿಗಳಿಗೆ ಅನುಕೂಲವಾಗಲಿದೆ” ಎಂದು ಮೋದಿ ಕರೆ ನೀಡಿದ್ದರು. ಈಗ ಮೋದಿ ಅವರ ಕರೆಗೆ ಜನಬೆಂಬಲ ವ್ಯಕ್ತವಾಗುತ್ತಿದೆ. ದೇಶೀಯ ಉತ್ಪನ್ನಗಳಿಗೇ ಜನ ಆದ್ಯತೆ ನೀಡುತ್ತಿರುವ ಕಾರಣ ದೀಪಾವಳಿ ವೇಳೆ ಚೀನಾಗೆ ಒಂದು ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ವ್ಯಾಪಾರಿಗಳ ಒಕ್ಕೂಟದಿಂದಲೂ ಬೆಂಬಲ

ಅದರಲ್ಲೂ ದೀಪಾವಳಿಯ ಧನತ್ರಯೋದಶಿ (ಧನ್‌ತೆರಸ್)‌ ದಿನವೇ ಸುಮಾರು 50 ಸಾವಿರ ಕೋಟಿ ರೂ. ವ್ಯಾಪಾರ ಆಗಲಿದೆ. ಹಾಗಾಗಿ, ದೇಶದ ವ್ಯಾಪಾರಿಗಳು ಕೂಡ ನರೇಂದ್ರ ಮೋದಿ ಅವರ ಕರೆಗೆ ಬೆಂಬಲ ಸೂಚಿಸಿದ್ದಾರೆ. “ನರೇಂದ್ರ ಮೋದಿ ಅವರು ನೀಡಿದ ವೋಕಲ್‌ ಫಾರ್‌ ಲೋಕಲ್‌ ಕರೆಗೆ ನಮ್ಮ ಬೆಂಬಲವಿದೆ. ದೇಶಾದ್ಯಂತ ಹೆಣ್ಣುಮಕ್ಕಳು ಹಣತೆ ತಯಾರಿ ಸೇರಿ ಹಲವು ವಸ್ತುಗಳ ತಯಾರಿಕೆಗೆ ಅವಕಾಶ ನೀಡಲಾಗಿದೆ. ಜನರು ಕೂಡ ಸ್ಥಳೀಯ ಮಹಿಳೆಯರಿಂದ ಉತ್ಪನ್ನಗಳನ್ನು ಖರೀದಿಸಬೇಕು” ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ಖಂಡೇಲ್‌ವಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ: Indigenous OS: ದೇಶೀಯ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ಅಭಿವೃದ್ಧಿಗೊಳಿಸಿದ ಮದ್ರಾಸ್‌ ಐಐಟಿ, ಆತ್ಮನಿರ್ಭರಕ್ಕೆ ಬಲ

ದೀಪಾವಳಿ ಸಂದರ್ಭದಲ್ಲಿ ಪಟಾಕಿ, ಬಟ್ಟೆ, ಹಣತೆ, ದೇವರ ಫೋಟೊಗಳು ಸೇರಿ ಹಲವು ಚೀನಾ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಅದರಲ್ಲೂ, ಗೃಹೋಪಯೋಗಿ ವಸ್ತುಗಳು, ಮೊಬೈಲ್‌ ಸೇರಿ ಹಲವು ಎಲೆಕ್ಟ್ರಾನಿಕ್‌ ಉತ್ಪನ್ನಗಳಲ್ಲಂತೂ ಚೀನಾ ಪ್ರಾಬಲ್ಯವಿದೆ. ಆದರೆ, ಈ ಬಾರಿ ದೇಶದ ಜನ ಹೆಚ್ಚಿನ ಪ್ರಮಾಣದಲ್ಲಿ ಮೇಡ್‌ ಇನ್‌ ಇಂಡಿಯಾ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಚೀನಾಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗಲಿದೆ ಎಂದು ವರದಿಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version