Site icon Vistara News

ವಿಸ್ತಾರ ಸಂಪಾದಕೀಯ | ಕ್ಷೇತ್ರದಿಂದ ದೂರ ಇದ್ದರೂ ಮತದಾನ ಸಾಧ್ಯ! ಚುನಾವಣೆ ಆಯೋಗದ ಕ್ರಾಂತಿಕಾರಕ ಪ್ರಯೋಗ

Voting

ಕೇಂದ್ರ ಚುನಾವಣೆ ಆಯೋಗವು ಮತ್ತೊಂದು ಕ್ರಾಂತಿಕಾರಕ ಪ್ರಯೋಗಕ್ಕೆ ಮುಂದಾಗಿದೆ. ಚುನಾವಣೆ ಆಯೋಗ ಪ್ರಸ್ತಾಪಿಸಿರುವ ರಿಮೋಟ್‌ ವೋಟಿಂಗ್‌ ಮೆಷಿನ್‌ (ಆರ್‌ವಿಎಂ) ಯೋಜನೆ ಜಾರಿಗೆ ಬಂದರೆ, ಮತದಾನದ ದಿನ ನಾನಾ ಕಾರಣಗಳಿಂದ ಕ್ಷೇತ್ರದಿಂದ ದೂರ ಇದ್ದರೂ ಮತ ಚಲಾಯಿಸಬಹುದಾಗಿದೆ!

ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್‌ ಕುಮಾರ್‌ ಅವರು ಚುನಾವಣೆ ವ್ಯವಸ್ಥೆಯಲ್ಲಿನ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳುತ್ತಿದ್ದಾರೆ. ಅವುಗಳಲ್ಲಿ ಇದೂ ಒಂದು. ಈಗ ಸಿದ್ಧಪಡಿಸಿರುವ ಒಂದು ಆರ್‌ವಿಎಂ ಸಾಧನದ ಮೂಲಕ ಒಟ್ಟು 72 ಮತ ಕ್ಷೇತ್ರಗಳನ್ನು ಸಂಪರ್ಕಿಸಬಹುದಾಗಿದೆ.

ಹಾಗಂತ ಇದನ್ನು ತರಾತುರಿಯಲ್ಲಿ ಜಾರಿ ಮಾಡಲಾಗದು. ಈ ಹೊಸ ವಿಧಾನವನ್ನು ಜಾರಿ ಮಾಡಬೇಕೆಂದರೆ, ಜನ ಪ್ರತಿನಿಧಿ ಕಾಯಿದೆ ಸೇರಿದಂತೆ ಮೂರು ಕಾಯಿದೆಗಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಆಡಳಿತಾತ್ಮಕವಾಗಿ ಆ ಯಂತ್ರಗಳ ಕಾರ್ಯ ನಿರ್ವಹಣೆ, ಪಾರದರ್ಶಕ ವ್ಯವಸ್ಥೆ ಸೇರಿದಂತೆ ಹಲವು ತಯಾರಿ ಮಾಡಬೇಕಾಗುತ್ತದೆ. ಇದಕ್ಕಿರುವ ತಾಂತ್ರಿಕ ಸವಾಲುಗಳನ್ನೂ ನಿವಾರಿಸಬೇಕಾಗುತ್ತದೆ. ಈ ಬಗ್ಗೆ ಚರ್ಚಿಸಲು ಕೇಂದ್ರ ಚುನಾವಣೆ ಆಯೋಗವು ದೇಶದ 8 ರಾಷ್ಟ್ರೀಯ ಪಕ್ಷಗಳ ಪ್ರಮುಖರ ಸಭೆಯನ್ನು ಜ.16ರಂದು ಕರೆದಿದೆ. ರಾಷ್ಟ್ರೀಯ ಪಕ್ಷಗಳ ಅಭಿಮತವೂ ಇಲ್ಲಿ ಮುಖ್ಯವಾಗುತ್ತದೆ.

ಪ್ರಸ್ತಾಪಿತ ರಿಮೋಟ್ ವೋಟಿಂಗ್ ಮೆಷಿನ್RVMನಿಂದ ಹಲವು ಪ್ರಯೋಜನಗಳಿವೆ. ಎಲೆಕ್ಷನ್‌ ದಿನ ಅನಿವಾರ್ಯ ಕಾರಣಗಳಿಂದ ಕ್ಷೇತ್ರದಿಂದ ಹೊರಗೆ ಹೋಗಿರುವವರೂ ಮತ ಚಲಾಯಿಸಲು ಸಾಧ್ಯ ಆಗುವುದರಿಂದ ಮತದಾನದ ಪ್ರಮಾಣವೂ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ನಗರ ಪ್ರದೇಶದ ಯುವ ಜನ ಎಲೆಕ್ಷನ್ ದಿನವೇ ಪ್ರವಾಸಕ್ಕಾಗಿ ಹೊರ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ನಗರ ಪ್ರದೇಶದಲ್ಲಿ ಮತ ಪ್ರಮಾಣ ಕಡಿಮೆ ಆಗುತ್ತಿದೆ. RVM ವ್ಯವಸ್ಥೆ ಜಾರಿಗೆ ಬಂದರೆ ಅವರೂ ಮತ ಚಲಾಯಿಸಬಹುದು. ಇನ್ನು ಹೊಟ್ಟೆಪಾಡಿಗಾಗಿ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆಯೂ ಗಣನೀಯ. ಹೊಸ ವ್ಯವಸ್ಥೆಯ ಅಡಿ ಅವರೂ ಮತ ಚಲಾಯಿಸಲು ಸಾಧ್ಯ ಆಗುವುದರಿಂದ ಸಹಜವಾಗಿಯೇ ಮತ ಚಲಾವಣೆ ಪ್ರಮಾಣದಲ್ಲಿ ಏರಿಕೆ ಆಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ, ಭಯೋತ್ಪಾಕರ ಬೆದರಿಕೆ ಮತ್ತು ಹತ್ಯಾಕಾಂಡದ ಕಾರಣ ಕಣಿವೆಯಿಂದ ಓಡಿ ಬಂದಿರುವ ಕಾಶ್ಮೀರದ ಮಣ್ಣಿನ ಮಕ್ಕಳಾದ ಲಕ್ಷಾಂತರ ಪಂಡಿತರು ಜಮ್ಮು – ಕಾಶ್ಮೀರ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದೆ. ಈ ಮೂಲಕ ಅಲ್ಲಿಯ ಚುನಾವಣೆ ಮತ್ತು ಸರ್ಕಾರ ಸ್ಥಾಪನೆ ವ್ಯವಸ್ಥೆಯಲ್ಲಿ ಅವರೂ ಶಾಮೀಲಾಗಲು ಸಾಧ್ಯವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ರಿಮೋಟ್‌ ವೋಟಿಂಗ್‌ ಮೆಷಿನ್‌ ವ್ಯವಸ್ಥೆ ಐತಿಹಾಸಿಕ ಆಗಲಿದೆ.

ಆದರೆ ಈ ವಿಧಾನವನ್ನು ಎಲ್ಲ ರಾಜಕೀಯ ಪಕ್ಷಗಳು ತಕ್ಷಣ ಒಪ್ಪುತ್ತವೆ ಎಂದು ನಿರೀಕ್ಷಿಸಲಾಗದು. ಈಗಾಗಲೇ ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌(EVM) ಬಗ್ಗೆ ಅಪಸ್ವರ ಇದ್ದೇ ಇದೆ. ಹಾಗಾಗಿ, ಹೊಸ ವ್ಯವಸ್ಥೆ ಸಂಪೂರ್ಣ ಪಾರದರ್ಶಕ ಎಂಬುದನ್ನು ಸಾಬೀತುಪಡಿಸುವುದು ಮತ್ತು ಖಚಿತಪಡಿಸುವುದು ಚುನಾವಣೆ ಆಯೋಗದ ಜವಾಬ್ದಾರಿಯಾಗಿದೆ. ಈ ಹೊಸ ಸಾಧನ ಅಕ್ರಮ ಮತದಾನಕ್ಕೆ ದಾರಿ ಆಗದಂತೆ ಎಚ್ಚರ ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನು ಕೇಂದ್ರ ಚುನಾವಣೆ ಆಯೋಗ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿ ಇಡಬೇಕು. ಹಾಗೆಯೇ ರಾಜಕೀಯ ಪಕ್ಷಗಳು ಕೂಡ ವಿರೋಧಕ್ಕಾಗಿಯೇ ವಿರೋಧ ಮಾಡದೆ ಈ ಹೊಸ ವ್ಯವಸ್ಥೆಯ ಬಗ್ಗೆ ವಸ್ತುನಿಷ್ಠ ಅಭಿಪ್ರಾಯ ನೀಡಬೇಕು. ಏಕೆಂದರೆ, ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಯ ಹೆಜ್ಜೆಗಳನ್ನು ಇರಿಸಲೇಬೇಕಾಗುತ್ತದೆ. 80ರ ದಶಕದಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ ಬಗ್ಗೆ ಚುನಾವಣೆ ಆಯೋಗ ಪ್ರಸ್ತಾಪ ಮಾಡಿದ್ದಾಗಲೂ ಹಲವು ಸವಾಲುಗಳು ಎದುರಾಗಿದ್ದವು. ಇದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿತ್ತು. 1982ರಲ್ಲಿ ಮೊದಲ ಬಾರಿ ಇವಿಎಂಗಳನ್ನು ಕೇರಳದ ಪರವೂರ್‌ ವಿಧಾನಸಭೆ ಕ್ಷೇತ್ರದ 50 ಬೂತ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಆ ಬಳಿಕ 2004ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಇವಿಎಂಗಳನ್ನು ಯಶಸ್ವಿಯಾಗಿ ಬಳಸಲಾಯಿತು. ವಿಶ್ವದ ಹಲವು ದೇಶಗಳಿಗೆ ಇವಿಎಂ ವಿಚಾರದಲ್ಲಿ ಭಾರತವೇ ಮಾದರಿಯಾಗಿದೆ. ಸೋತಾಗ ಪ್ರತಿಪಕ್ಷಗಳು ಮಾಡುವ ಆಪಾದನೆಗಳ ನಡುವೆಯೂ ವಿದ್ಯುನ್ಮಾನ ಮತ ಯಂತ್ರ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮತ ಚೀಟಿ ಕಾಲದಲ್ಲಿ ಕೆಲವೊಮ್ಮೆ ಎರಡು ದಿನ ಕಳೆದರೂ ಫಲಿತಾಂಶ ಸಿಗುತ್ತಿರಲಿಲ್ಲ. ಈಗ ಕೆಲವೇ ಗಂಟೆಯೊಳಗೆ ಎಲೆಕ್ಷನ್‌ ರಿಸಲ್ಟ್‌ ಲಭ್ಯವಾಗುತ್ತಿದೆ. ಮತದಾನ ವ್ಯವಸ್ಥೆಯೂ ಸರಾಗವಾಗಿದೆ. ದೇಶಾದ್ಯಂತ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆಯೂ ಗಂಭೀರ ಚರ್ಚೆ ಕೆಲವು ವರ್ಷಗಳಿಂದ ನಡೆಯುತ್ತಿದೆ. ಹೀಗೆ, ಚುನಾವಣೆ ಸುಧಾರಣೆ ಕ್ರಮಗಳು ಸಹಜ ಮತ್ತು ಸ್ವಾಗತಾರ್ಹ ಕೂಡ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮತ್ತೆ ಅಲ್ ಕೈದಾದ ಒಣ ಬೆದರಿಕೆ!

Exit mobile version