Site icon Vistara News

Wayanad Landslide: ಇಲ್ಲಿಗೇಕೆ ಬಂದ್ರಿ? ಕಾರ್ಯಾಚರಣೆಗೆ ಅಡ್ಡಿ ಮಾಡೋಕಾ?- ರಾಹುಲ್‌ ಗಾಂಧಿ ಮೇಲೆ ಕೂಗಾಡಿದ ವ್ಯಕ್ತಿ-ವಿಡಿಯೋ ಇದೆ

wayanad Landslide

ವಯನಾಡ್‌: ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೀಕರ ಭೂಕುಸಿತಕ್ಕೆ ಕೇರಳದ ವಯನಾಡು ಈಗ ಸೂತಕದ ಮನೆಯಂತಾಗಿದೆ. ಭೂಕುಸಿತದಲ್ಲಿ (Wayanad Landslide) ಮೃತಪಟ್ಟವರ ಸಂಖ್ಯೆ ಈಗ 300 ದಾಟಿದೆ. ಇನ್ನು ಈ ಮಧ್ಯೆಯೇ, ಕಾಂಗ್ರೆಸ್‌ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ವಯನಾಡಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರಿಂದ ರಾಹುಲ್‌ ಗಾಂಧಿಯವರಿಗೆ ಭಾರೀ ವಿರೋಧ ವ್ಯಕ್ತವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲೇನಿದೆ?

ದುರಂತ ಸ್ಥಳ ವಯನಾಡಿಗೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು. ಈ ವೇಳೆ ಅವರು ವಾಹನದಲ್ಲಿ ಕುಳಿತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ರಾಹುಲ್‌ ಭೇಟಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾನೆ. ವಾಹನದಲ್ಲಿ ಬಂದು ಪರಿಸ್ಥಿತಿ ಅವಲೋಕಿಸುವ ಅವಶ್ಯಕತೆ ಏನಿದೆ? ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಅವರಿಗೆ ನಿಜವಾಗಿಗೆ ಕಾಳಜಿ ಇದ್ದರೆ ವಾಹನದಿಂದ ಕೆಳಗಿಳಿಯಲಿ. ಕಾಲಿಗೆ ಮಣ್ಣಾಗುತ್ತದೆ ಎಂಬಚಿಂತೆಯೇ ಹಾಗಿದ್ದರೆ ಇಲ್ಲಿಗೆ ಬಂದಿದ್ದೇಕೆ? ಏನನ್ನು ನೋಡಲು ಆತ ಬಂದಿದ್ದಾರೆ ಎಂದು ವ್ಯಕ್ತಿಯೊಬ್ಬ ಕೋಪದಲ್ಲಿ ಕಿರುಚುತ್ತಾ ರಾಹುಲ್‌ ಇದ್ದ ವಾಹನವನ್ನು ತಡೆಯುವ ಪ್ರಯತ್ನ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅದಾಗಿಯೂ ಆತನನ್ನು ರಾಹುಲ್‌ ಗಾಂಧಿ ಲೆಕ್ಕಿಸಲೇಇಲ್ಲ. ವಾಹನ ಹಾಗೇ ಮುಂದಕ್ಕೆ ಚಲಿಸಿದೆ. ಆಗ ಆವ್ಯಕ್ತಿ ಮತ್ತಷ್ಟು ಕೋಪದಿಂದ ಕೂಗಾಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿದ್ದು, ಎಲ್ಲರೂ ರಾಹುಲ್‌ ಗಾಂಧಿಯನ್ನು ಪ್ರವಾಸಿಗ ಎಂದು ವ್ಯಂಗ್ಯವಾಡಿದ್ದಾರೆ.

ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ ಗ್ರಾಮಗಳು ಸಂಪೂರ್ಣವಾಗಿ ಮಸಣದಂತಾಗಿವೆ. ಈ ಪ್ರದೇಶಗಳಿಗೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡಿರುವ, ನೀರಿನಲ್ಲಿ ಮನೆಗಳು ಕೊಚ್ಚಿ ಹೋಗಿ ನಿರಾಶ್ರಿತರಾಗಿರುವ ಸಂತ್ರಸ್ತರನ್ನು ಭೇಟಿಯಾದ ಅವರು, ಆತ್ಮಸ್ಥೈರ್ಯ ತುಂಬಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಹಾನಿಯ ವೀಕ್ಷಣೆ ಮಾಡಿದರು.

ಇದನ್ನೂ ಓದಿ: Wayanad Landslide: ವಯನಾಡ್‌ ಅಕ್ಷರಶಃ ಸ್ಮಶಾನ; ಭೂಕುಸಿತ ಸ್ಥಳಕ್ಕೆ ರಾಹುಲ್‌, ಪ್ರಿಯಾಂಕಾ ಭೇಟಿ ಸ್ಥಗಿತ

Exit mobile version