Site icon Vistara News

Wayanad Landslide: “ಧಾರ್ಮಿಕ ಸಂಘಟನೆಗಳ ಒತ್ತಡದಿಂದ ವಯನಾಡಿನಲ್ಲಿ ಭೂಮಿ ಒತ್ತುವರಿ ತೆರವು ಸಾಧ್ಯವಾಗ್ತಿಲ್ಲ”- ತೇಜಸ್ವಿ ಸೂರ್ಯ ಕಿಡಿ

wayanad Landslide

ನವದೆಹಲಿ: ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತ(Wayanad Landslide) ದುರಂತ ವಿಚಾರವಾಗಿ ಸಂಸತ್‌ನಲ್ಲಿ ಕೋಲಾಹಲವೇ ಎದ್ದಿದೆ. ಈ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ(Tejasvi Surya) ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಯನಾಡಿನಲ್ಲಿ ಅಕ್ರಮ ಒತ್ತುವಾರಿಯಿಂದಾಗಿಯೇ ಇಂತಹ ದುರಂತಗಳು ಪದೇ ಪದೆ ನಡೆಯುತ್ತಿದೆ. ಧಾರ್ಮಿಕ ಸಂಘಟನೆಗಳ ಒತ್ತಡದಿಂದಾಗಿ ಒತ್ತುವರಿ ತೆರವು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ರಾಹುಲ್​ ಗಾಂಧಿ ಅವರು ವಯನಾಡ್​ ಸಂಸದರಾಗಿದ್ದಾಗಿನಿಂದ ಕಳೆದ 1800 ದಿನಗಳಲ್ಲಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಒಮ್ಮೆಯೂ ತಮ್ಮ ಕ್ಷೇತ್ರದಲ್ಲಿನ ಭೂಕುಸಿತ ಮತ್ತು ಪ್ರವಾಹದ ಬಗ್ಗೆ ಎಂದಿಗೂ ಪ್ರಸ್ತಾಪಿಸಲಿಲ್ಲ. 2020ರಲ್ಲಿ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಿಂದ 4000 ಕುಟುಂಬಗಳನ್ನು ಸ್ಥಳಾಂತರಿಸಲು ಸಲಹೆ ನೀಡಿತು. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ವಯನಾಡನ್ನು ಪ್ರತಿನಿಧಿಸುವ ಸಂಸದರು ಇಲ್ಲಿಯವರೆಗೆ ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ.” ಎಂದು ಆರೋಪಿಸಿದರು.

ಧಾರ್ಮಿಕ ಸಂಘಟನೆಗಳಿಂದ ಒತ್ತಡ

ಕೇರಳ ವಿಪತ್ತು ನಿರ್ವಹಣಾ ಮಂಡಳಿಯ ಶಿಫಾರಸುಗಳ ಹೊರತಾಗಿಯೂ ವಯನಾಡಿನಲ್ಲಿ ಅಕ್ರಮ ಒತ್ತುವರಿಯನ್ನು ತೆಗೆದುಹಾಕಲಾಗಿಲ್ಲ. ಕೇರಳದ ಅರಣ್ಯ ಸಚಿವರು ಕೂಡ, ವಿವಿಧ ಧಾರ್ಮಿಕ ಸಂಘಟನೆಗಳ ಒತ್ತಡದಿಂದಾಗಿ ಅಕ್ರಮ ಒತ್ತುವರಿಯನ್ನು ತೆಗೆದುಹಾಕಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ವಿಧಾನಸಭೆಯಲ್ಲಿ ಒಪ್ಪಿಕೊಳ್ಳುತ್ತಾರೆ. ರಾಹುಲ್​ ಗಾಂಧಿ ಅವರು ವಯನಾಡ್​ ಸಂಸದರಾಗಿದ್ದ ಅವಧಿಯಲ್ಲಿ ಭೂಕುಸಿತ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ತೇಜಸ್ವಿ ಸೂರ್ಯ ಆರೋಪಕ್ಕೆ ಕಾಂಗ್ರೆಸ್‌ ಕಿಡಿ

ಇನ್ನು ತೇಜಸ್ವಿ ಸೂರ್ಯ ಆರೋಪಕ್ಕೆ ಕಾಂಗ್ರೆಸ್‌ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಯಾನಾಡು ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಯನಾಡ್ ಘಟನೆಯ ಬಗ್ಗೆ ಮಾತನಾಡಿದ ರೀತಿ ತಪ್ಪು. ಆಡಳಿತ ಪಕ್ಷದ ಸದಸ್ಯರ ಮಾತು ಬೇಸರ ತಂದಿದೆ ಎಂದರು. ಇದು ಇಡೀ ದೇಶ ಮತ್ತು ಕೇರಳ ಕಂಡ ಅತ್ಯಂತ ದುರಂತ ಘಟನೆಯಾಗಿದ್ದು, ತೇಜಸ್ವಿ ಸೂರ್ಯ ಅವರನ್ನು ವಜಾಗೊಳಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ:Parliament Session: RSS ಬಗ್ಗೆ ದೋಷಾರೋಪಣೆ ಸಲ್ಲದು; ಜಗದೀಪ್ ಧನ್‌ಕರ್ ಹೇಳಿಕೆ- ಪ್ರತಿಪಕ್ಷಗಳು ವಾಕ್‌ಔಟ್‌!

Exit mobile version