ನವದೆಹಲಿ: ಬೆಲೆಯೇರಿಕೆ ಸೇರಿ ಹಲವು ವಿಷಯಗಳ ಕುರಿತು ಪ್ರತಿಪಕ್ಷಗಳ ಟೀಕೆಗಳ ಮಧ್ಯೆಯೂ ಬಿಜೆಪಿ ನಾಯಕರು, “ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಭಾರತ ವಿಶ್ವಗುರು ಆಗುತ್ತಿದೆ” ಎಂದು ಹೇಳುತ್ತಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೂಡ “ದೇಶವು 20 ವರ್ಷದಲ್ಲಿ ವಿಶ್ವಗುರು ಎನಿಸಲಿದೆ” ಎಂದು ಮಾರ್ಚ್ 9ರಂದು ಮುಂಬೈನಲ್ಲಿ ಹೇಳಿದ್ದಾರೆ. ಇದರ ಬೆನ್ನಲ್ಲೇ, ಉಕ್ರೇನ್ ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಸಚಿವೆ ಎಮಿನೆ ಝಪರೋವಾ (Emine Dzhaparova) ಅವರು ಭಾರತದ ಕುರಿತು ಮಾತನಾಡಿದ್ದು, “ನಾವು ಭಾರತವನ್ನು ವಿಶ್ವಗುರು (Vishwaguru) ಎಂಬುದಾಗಿ ಕರೆಯುತ್ತೇವೆ” ಎಂದಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಎಮಿನೆ ಝರಪೋವಾ ಅವರು ಈ ಕುರಿತು ಪ್ರಸ್ತಾಪಿಸಿದ್ದಾರೆ. “ಉಕ್ರೇನ್ ಮೇಲೆ ರಷ್ಯಾ ಮಾಡುತ್ತಿರುವ ಆಕ್ರಮಣದ ತೀವ್ರತೆಯನ್ನು ತಣಿಸುವಲ್ಲಿ, ಜಾಗತಿಕವಾಗಿ ಉಕ್ರೇನ್ ಪರ ಅಭಿಪ್ರಾಯ ರೂಪಿಸುವಲ್ಲಿ, ಯುದ್ಧ ನಿಲ್ಲಿಸುವ ದಿಸೆಯಲ್ಲಿ ಭಾರತದ ಪಾತ್ರ ಹಿರಿದಾಗಿದೆ. ಅದರಲ್ಲೂ, ಭಾರತವು ಮೌಲ್ಯಗಳ ಆಧಾರದ ಮೇಲೆ ನಿಂತಿರುವ ರಾಷ್ಟ್ರವಾಗಿದೆ. ನಾಗರಿಕತೆಯ ಧ್ವನಿಯಾಗಿ ಭಾರತ ಇದೆ. ಹಾಗಾಗಿ, ನಾವು ಭಾರತವನ್ನು ವಿಶ್ವಗುರು ಎಂಬುದಾಗಿ ಕರೆಯುತ್ತೇವೆ” ಎಂದು ಹೇಳಿದರು.
ಕೀವ್‌ಗೆ ಭೇಟಿ ನೀಡುವಂತೆ ಮೋದಿಗೆ ಆಹ್ವಾನ
“ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂಬ ದಿಸೆಯಲ್ಲಿ ಭಾರತದ ಪ್ರಯತ್ನ ಅಪಾರವಾಗಿದೆ. ಹಾಗೆಯೇ, ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ನೀಡುವಂತೆ ಆಹ್ವಾನಿಸುತ್ತೇವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನೂ ನಾವು ಆಹ್ವಾನಿಸುತ್ತೇವೆ. ಆ ಮೂಲಕ ನಮ್ಮ ದೇಶಕ್ಕೆ ಬೆಂಬಲ ನೀಡುವಂತೆ ಬಯಸುತ್ತೇವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಅವರ ಜತೆ ಮಾತುಕತೆ ನಡೆಸುವಂತೆ ಕೋರುತ್ತೇವೆ” ಎಂದು ತಿಳಿಸಿದರು.
ಚೀನಾಕ್ಕಿಂತ ಭಾರತದ ಪಾತ್ರ ಹಿರಿದು
ರಷ್ಯಾ ಆಕ್ರಮಣ ನಿಲ್ಲಲು ಚೀನಾಕ್ಕಿಂತ ಭಾರತದ ಪಾತ್ರ ಹಿರಿದಾಗಿದೆ ಎಂದು ಎಮಿನೆ ಝಪರೋವಾ ಹೇಳಿದರು. “ಜಾಗತಿಕ ವೇದಿಕೆಗಳಲ್ಲಿ ಭಾರತವು ಶಾಂತಿ ಸ್ಥಾಪನೆ ಕುರಿತು ಮಾತನಾಡಿದೆ. ರಷ್ಯಾಗೂ ಇದೇ ಸಂದೇಶವನ್ನು ರವಾನಿಸಿರುವ ಕಾರಣ ನಮಗೆ ಭಾರತದ ಮುಂದಾಳತ್ವದಲ್ಲಿ ನಂಬಿಕೆ ಇದೆ. ಮಾತುಕತೆ ಮೂಲಕ ಯಾವುದೇ ಸಮಸ್ಯೆ ಬಗೆಹರಿಸಿಕೊಳ್ಳಬಹುದು, ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿ ಸ್ಥಾಪನೆ ಮಾಡಿಕೊಳ್ಳಬಹುದು ಎಂಬ ಭಾರತದ ವಿಚಾರ ಉತ್ತಮವಾಗಿದೆ. ನಾವೂ ಇದನ್ನೇ ನಂಬುತ್ತೇವೆ. ಆದರೆ, ಶಾಂತಿ ಸ್ಥಾಪನೆ ಕುರಿತು ಚೀನಾ ನೀಡಿರುವ ಯೋಜನೆಯು ಸಕಾರಾತ್ಮಕವಾಗಿಲ್ಲ” ಎಂದರು. ಶಾಂಘೈ ಸಹಕಾರ ಸಂಘಟನೆ ಸೇರಿ ಜಗತ್ತಿನ ಹಲವು ವೇದಿಕೆಗಳಲ್ಲಿ ನರೇಂದ್ರ ಮೋದಿ ಅವರು ಶಾಂತಿ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೇ, “ಯುದ್ಧಕ್ಕೆ ಇದು ಕಾಲವಲ್ಲ” ಎಂಬ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: G20 Summit | ಜಿ20 ಶೃಂಗಸಭೆಯಲ್ಲಿ ಸಿರಿಧಾನ್ಯಗಳ ಮಹತ್ವ ಹೇಳಿದ ಪ್ರಧಾನಿ ಮೋದಿ; ಉಕ್ರೇನ್ ಕದನ ವಿರಾಮಕ್ಕೆ ಕರೆ