ಹೊಸದಿಲ್ಲಿ: ಚಂದ್ರಯಾನ-3ರ (Chandrayaan 3) ಐತಿಹಾಸಿಕ ಕ್ಷಣಗಳು ಹತ್ತಿರವಾಗುತ್ತಿವೆ. ಲ್ಯಾಂಡರ್ ಚಂದ್ರನಿಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಿದ್ದಂತೆ (Chandrayaan soft landing) ಶತಕೋಟಿಗೂ ಹೆಚ್ಚು ಭಾರತೀಯರು ಸಂಭ್ರಮ ಆಚರಿಸಲು ತಯಾರಾಗುತ್ತಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ತಮ್ಮ ಶ್ರಮಕ್ಕೆ ಫಲ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಚಂದ್ರಯಾನ-3ರ (Chandrayaan 3) ನಂತರವೂ, ಇಸ್ರೋ ಸಂಸ್ಥೆ ತನ್ನ ಮುಂದೆ ಹಲವು ಸವಾಲುಗಳನ್ನೂ ಹೊಸ ಕೆಲಸಗಳನ್ನೂ ಹೊಂದಿದೆ. ಬಾಹ್ಯಾಕಾಶದಲ್ಲಿ ಹೊಸ ಗಡಿಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿದ್ದು, ಮುಂದಿನ ಕಾರ್ಯಾಚರಣೆಗಳ ದೀರ್ಘ ಪಟ್ಟಿಯನ್ನು ಹೊಂದಿದೆ. ಇಸ್ರೋದ ಮುಂಬರುವ ಕೆಲವು ಯೋಜನೆಗಳ ನೋಟ ಇಲ್ಲಿದೆ:
ಮಿಷನ್ ಆದಿತ್ಯ (mission aditya)
ಚಂದ್ರನ ನಂತರ ಇಸ್ರೋ ಸೂರ್ಯನ ಕಡೆಗೆ ತಿರುಗಲಿದೆ. ಸೂರ್ಯನನ್ನು ಅಧ್ಯಯನ ಮಾಡಲು ಮೊದಲ ಭಾರತೀಯ ಬಾಹ್ಯಾಕಾಶ ಮಿಷನ್ ಆದಿತ್ಯ L1 ಅನ್ನು ಸೆಪ್ಟೆಂಬರ್ ಆರಂಭದಲ್ಲಿ ಪ್ರಾರಂಭಿಸುವ ನಿರೀಕ್ಷೆಯಿದೆ. ಉದ್ದೇಶಿತ ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.5 ದಶಲಕ್ಷ ಕಿಮೀ ದೂರದಲ್ಲಿರುವ ಸೂರ್ಯ- ಭೂಮಿಯ ನಡುವಿನ ಲಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಗೆ ಕಳಿಸಿ ಉಪಗ್ರಹವನ್ನು ಅಲ್ಲಿ ಇರಿಸಲಾಗುತ್ತದೆ. L1ನಲ್ಲಿ ಯಾವುದೇ ಅಡೆತಡೆ/ಗ್ರಹಣ ಮುಂತಾದವುಗಳಿಲ್ಲದೆ ನಿರಂತರವಾಗಿ ಸೂರ್ಯನನ್ನು ವೀಕ್ಷಿಸಬಹುದು. ಇದು ಸೌರ ಚಟುವಟಿಕೆಗಳನ್ನು ನೈಜ ಸಮಯದಲ್ಲಿ ವೀಕ್ಷಿಸುವ, ಬಾಹ್ಯಾಕಾಶ ಹವಾಮಾನದ ಮೇಲೆ ಅದರ ಪರಿಣಾಮವನ್ನು ವೀಕ್ಷಿಸುವ ಅವಕಾಶ ನೀಡುತ್ತದೆ.
ನಾಸಾ- ಇಸ್ರೋ ಭೂ ವೀಕ್ಷಣಾ ಉಪಗ್ರಹ
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ನಮ್ಮ ಇಸ್ರೋ ಸೇರಿ ಶಕ್ತಿಯುತ ಭೂ ವೀಕ್ಷಣಾ ಉಪಗ್ರಹವನ್ನು ಕಳಿಸಲು ಒಪ್ಪಂದ ಮಾಡಿಕೊಂಡಿವೆ. ಇದು ಮುಂದಿನ ವರ್ಷದ ಆರಂಭದಲ್ಲಿ ಉಡಾವಣೆಯಾಗುವ ಸಾಧ್ಯತೆಯಿದೆ. ನಿಸಾರ್ (NISAR) ಇದರ ಹೆಸರು- ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್- ಇದು ಭೂಮಿಯ ಮಂಜುಗಡ್ಡೆಯ ಮೇಲ್ಮೈಗಳ ಚಲನೆಯನ್ನು ಅತ್ಯಂತ ಸೂಕ್ಷ್ಮವಾಗಿ ವಿವರವಾಗಿ ಟ್ರ್ಯಾಕ್ ಮಾಡುತ್ತದೆ. ಹವಾಮಾನ ಬದಲಾವಣೆ, ಅರಣ್ಯನಾಶ, ಹಿಮನದಿಗಳ ಕರಗುವಿಕೆ, ಜ್ವಾಲಾಮುಖಿಗಳು ಮತ್ತು ಭೂಕಂಪಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲಿದೆ. ನಮ್ಮ ವಿಜ್ಞಾನಿಗಳಿಗೆ ಅರಣ್ಯಗಳು, ಜೌಗು ಪ್ರದೇಶಗಳು ಮತ್ತು ಕೃಷಿ ಭೂಮಿಗಳ ವಿವರಗಳನ್ನೂ ತಿಳಿಸಲಿದೆ.
ಗಗನಯಾನ- ಮಾನವಸಹಿತ ನೌಕೆ
ಗಗನಯಾನ- ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟದ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಇದನ್ನು ಮೊದಲು 2020ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಭೂಮಿಯಿಂದ 400 ಕಿಮೀ ದೂರದ ಕಕ್ಷೆಗೆ 3 ಸದಸ್ಯರಿರುವ ನೌಕೆಯನ್ನು ಉಡಾಯಿಸಿ 3 ದಿನಗಳ ಕಾಲ ಅಲ್ಲಿಟ್ಟು ನಂತರ ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಯೋಜನೆಯಿದು. ಇದಕ್ಕೂ ಮೊದಲು ಎರಡು ಮಾನವರಹಿತ ನೌಕೆಗಳು ಹೋಗಲಿವೆ. ʼʼಮುಂದಿನ ವರ್ಷದ ಆರಂಭದ ವೇಳೆಗೆ ನಾವು ಮಾನವರಹಿತ ಸಿಬ್ಬಂದಿ ಮಾಡ್ಯೂಲ್ ಮಿಷನ್‌ಗೆ ಸಿದ್ಧರಾಗುತ್ತಿದ್ದೇವೆ” ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಕ್ಸ್-ರೇ ಮೂಲಗಳ ಅಧ್ಯಯನ
ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡಲು ಇಸ್ರೋ ದೇಶದ ಮೊದಲ ಪೋಲಾರಿಮೆಟ್ರಿ ಮಿಷನ್ ಅನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯು 2024ರ ಆದಿಯಲ್ಲಿ ಆರಂಭವಾಗುವ ಸಾಧ್ಯತೆಯಿದೆ. “ಬ್ಲಾಕ್‌ಹೋಲ್, ನ್ಯೂಟ್ರಾನ್ ನಕ್ಷತ್ರಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್‌ಗಳು, ಪಲ್ಸರ್ ವಿಂಡ್ ನೀಹಾರಿಕೆಗಳು ಮುಂತಾದ ವಿವಿಧ ಖಗೋಳ ಮೂಲಗಳಿಂದ ಹೊರಸೂಸುವ ಎಕ್ಸ್ ಕಿರಣಗಳು ಸಂಕೀರ್ಣ ಭೌತಿಕ ಪ್ರಕ್ರಿಯೆಗಳಿಂದ ಹುಟ್ಟಿಕೊಂಡಿವೆ ಮತ್ತು ಅರ್ಥಮಾಡಿಕೊಳ್ಳಲು ಸವಾಲಾಗಿವೆ. ಇವುಗಳ ಅಧ್ಯಯನ ನಮ್ಮ ತಿಳುವಳಿಕೆಗೆ ಇನ್ನೂ ಹಲವು ಆಯಾಮಗಳನ್ನು ಸೇರಿಸುತ್ತವೆ” ಎಂದು ಇಸ್ರೋ ಹೇಳಿದೆ.
ಇದನ್ನೂ ಓದಿ: Chandrayaan 3 : ಚಂದ್ರಯಾನ ಯಶಸ್ಸು ಕೋರಿ ಮುಸ್ಲಿಮರಿಂದ ದರ್ಗಾದಲ್ಲಿ ಪ್ರಾರ್ಥನೆ, ಭಾರತ್ ಮಾತಾ ಕಿ ಜೈ ಘೋಷಣೆ